ಯಕ್ಷಲೋಕದ ನಾಗವರ್ಮ ಡಾ. ಶಿಮಂತೂರು ನಾರಾಯಣ ಶೆಟ್ಟಿ ವಿಧಿವಶ

26-08-20 07:16 pm       Mangalore Reporter   ಕರಾವಳಿ

ಯಕ್ಷಗಾನ ನಾಗವರ್ಮ ಎಂಬ ಖ್ಯಾತಿ ಪಡೆದಿರುವ ಡಾ. ಶಿಮಂತೂರು ನಾರಾಯಣ ಶೆಟ್ಟಿ (86) ಅವರು ಇಂದು ವಿಧಿವಶರಾಗಿದ್ದಾರೆ.

ಮಂಗಳೂರು, ಆಗಸ್ಟ್ 26: ಯಕ್ಷಗಾನ ಪ್ರಸಂಗಕರ್ತ ಹಾಗೂ ಯಕ್ಷ ಛಂದೋಂಬುಧಿ ಯ ಗ್ರಂಥಕರ್ತ , ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ರಚಿಸಿರುವ, ಯಕ್ಷಗಾನ ನಾಗವರ್ಮ ಎಂಬ ಖ್ಯಾತಿ ಪಡೆದಿರುವ ಡಾ. ಶಿಮಂತೂರು ನಾರಾಯಣ (86) ಅವರು ಇಂದು ವಿಧಿವಶರಾಗಿದ್ದಾರೆ.

ಯಕ್ಷಗಾನ ಛಂದೋಂಬುಧಿ, ಕನ್ನಡದ ಅನರ್ಘ್ಯ ಛಂದೋ ರತ್ನಗಳು, ವಿ-ಚಿತ್ರಾ ತ್ರಿಪದಿ, ದೇಸೀ ಛಂದೋಬಂಧಗಳ ಪುದುವಟ್ಟು ಎಂಬ ಯಕ್ಷಗಾನದಲ್ಲಿ ಛಂದಸ್ಸಿಗೆ ಸಂಬಂಧಿಸಿದಂತೆ ನಾಲ್ಕು ಕೃತಿಗಳನ್ನು ರಚಿಸಿದ್ದು, ಈ ಪೈಕಿ ಅವರ ‘ಯಕ್ಷಗಾನ ಛಂದೋಂಬುಧಿ’ ಮಹಾಗ್ರಂಥಕ್ಕೆ ಹಂಪಿ ವಿಶ್ವವಿದ್ಯಾನಿಲಯವು ಗೌರವ ಡಾಕ್ಟರೇಟ್ ಪ್ರಧಾನ ಮಾಡಿತ್ತು.

ಇವರು ತಮ್ಮ 13ನೇ ವರ್ಷ ಪ್ರಾಯದಲ್ಲೇ ದಿವಂಗತ ಲಕ್ಷ್ಮೀನಾರಾಯಣ ಅಸ್ರಣ್ಣರ ಪ್ರೇರಣೆಯಿಂದ ‘ಶ್ರೀ ಕಟೀಲು ಕ್ಷೇತ್ರ ಮಹಾತ್ಮೆ’ ಎಂಬ ಪ್ರಸಂಗವನ್ನು ರಚಿಸಿದ್ದು ಇದೇ ಪ್ರಸಂಗ ಕಟೀಲು ಮೇಳದಲ್ಲಿ ಇಂದು ಕೂಡಾ ಯಶಸ್ವಿಯಾಗಿ ಪ್ರದರ್ಶನಗೊಳ್ಳುತ್ತಿರುವುದು ವಿಶೇಷ.

ಅಲ್ಪ ಕಾಲದ ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತಾದ್ದರೂ, ಚಿಕಿತ್ಸೆ ಫಲಿಸಿದೆ ಅವರು ಮೃತಪಟ್ಟಿದ್ದಾರೆ. ಇವರು ಪತ್ನಿ, ಇಬ್ಬರು ಪುತ್ರರು ಹಾಗೂ ಮೂವರು ಪುತ್ರಿಯರನ್ನು ಅಗಲಿದ್ದಾರೆ.