ಇಂಜಿನಿಯರಿಂಗ್ ವಿದ್ಯಾರ್ಥಿಯ ಮನವಿಗೆ ಪ್ರಧಾನಿ ಕಚೇರಿ ಸ್ಪಂದನೆ ; ಕೆಟ್ಟು ಹೋಗಿದ್ದ ಕೊಲ್ಯ ಪರಿಯತ್ತೂರು ರಸ್ತೆಗೆ ಕಾಂಕ್ರೀಟ್ !

28-09-21 02:53 pm       Mangaluru Correspondent   ಕರಾವಳಿ

ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಊರಿನ ರಸ್ತೆ ಹದಗೆಟ್ಟಿರುವುದರ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ ಪರಿಣಾಮ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಊರಿನ ಜನ ಹರ್ಷಗೊಂಡಿದ್ದಾರೆ. 

ಉಳ್ಳಾಲ, ಸೆ.28: ಇಂಜಿನಿಯರಿಂಗ್ ವಿದ್ಯಾರ್ಥಿಯೊಬ್ಬ ತನ್ನ ಊರಿನ ರಸ್ತೆ ಹದಗೆಟ್ಟಿರುವುದರ ಬಗ್ಗೆ ಪ್ರಧಾನಿ ಕಾರ್ಯಾಲಯಕ್ಕೆ ಮನವಿ ಸಲ್ಲಿಸಿದ ಪರಿಣಾಮ ಇದೀಗ ಕೆಟ್ಟು ಕೆರ ಹಿಡಿದಿದ್ದ ರಸ್ತೆ ಕಾಂಕ್ರಿಟೀಕರಣಗೊಂಡಿದ್ದು ಊರಿನ ಜನ ಹರ್ಷಗೊಂಡಿದ್ದಾರೆ. 

ಮಂಗಳೂರಿನ ಸಹ್ಯಾದ್ರಿ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕಾನಿಕಲ್ ಇಂಜಿನಿಯರಿಂಗ್ ವ್ಯಾಸಂಗ ಮಾಡುತ್ತಿರುವ ವರುಣ್ ಎಂ. ಕೊಲ್ಯ ರಸ್ತೆ ಕಾಂಕ್ರಿಟೀಕರಣಕ್ಕೆ ಪ್ರಧಾನಿ ಕಾರ್ಯಾಲಯದ ಕದ ತಟ್ಟಿದ ವಿದ್ಯಾರ್ಥಿ. 

ವರುಣ್ ನಿವಾಸವಿರುವ ಕೊಲ್ಯ ಮೂರನೇ ಅಡ್ಡ ರಸ್ತೆಯ(ಮಳಯಾಳ ಚಾಮುಂಡಿ ದೈವಸ್ಥಾನ ರಸ್ತೆ) ಪರಿಯತ್ತೂರು ರಸ್ತೆಯು ಕಳೆದ ಇಪ್ಪತ್ತು ವರುಷಗಳಿಂದ ಡಾಮರನ್ನೂ ಕಾಣದೆ ನಾದುರಸ್ಥಿಯಲ್ಲಿತ್ತು. ಈ ಬಗ್ಗೆ ಸ್ಥಳೀಯ ಸೋಮೇಶ್ವರ ಪುರಸಭಾ ಆಡಳಿತ ಮತ್ತು ಜನಪ್ರತಿನಿಧಿಗಳಿಗೆ ಹಲವು ಬಾರಿ ಮನವಿ ಮಾಡಿದರೂ ಯಾವುದೇ ಫಲ ಕಂಡಿರಲಿಲ್ಲ.

ಕಳೆದ 2020 ನೇ ಇಸವಿಯ ಸೆಪ್ಟೆಂಬರ್ 17ರಂದು ವರುಣ್ ಅವರು ಪ್ರಧಾನಿ ನರೇಂದ್ರ ಮೋದಿಯವರಿಗೆ ತಮ್ಮೂರಿನ ಹದಗೆಟ್ಟ ರಸ್ತೆಯ ಬಗ್ಗೆ ವಿವರವಾಗಿ ಉಲ್ಲೇಖಿಸಿ ಕಾಯಕಲ್ಪ ಒದಗಿಸುವಂತೆ ಕೋರಿ ಪತ್ರ ಬರೆದು ಸ್ಪೀಡ್ ಪೋಸ್ಟ್ ಮುಖಾಂತರ ರವಾನಿಸಿದ್ದರು. 

ವರುಣ್ ಮನವಿಗೆ ಪ್ರಧಾನಿ ಕಾರ್ಯಾಲಯವು ಸ್ಪಂದನೆ ನೀಡಿದೆ. ಪರಿಣಾಮ ಸೋಮೇಶ್ವರ ಪುರಸಭೆಯ ಮುಖಾಂತರ ಸುಮಾರು ನಾಲ್ಕು ಲಕ್ಷ ರೂಪಾಯಿ ಅನುದಾನದಲ್ಲಿ ಇದೀಗ ಪರಿಯತ್ತೂರು ರಸ್ತೆಯು ಕಾಂಕ್ರಿಟೀಕರಣಗೊಂಡಿದೆ. ರಸ್ತೆಯ ಮುಂದಿನ ಕಾಂಕ್ರಿಟೀಕರಣಕ್ಕೂ ಸೋಮೇಶ್ವರ ಪುರಸಭೆಯಿಂದ ಅನುದಾನ ಮೀಸಲಿಡಲಾಗಿದೆ.

ವರುಣ್ ಅವರ ಮನವಿಗೆ ಸ್ಪಂದಿಸಿದ ಪ್ರಧಾನಿ ಕಾರ್ಯಾಲಯದ ಕಾರ್ಯ ವೈಖರಿಗೆ ಕೋಟೆಕಾರು ಪಂಚಾಯತ್ ಮಾಜಿ ಅಧ್ಯಕ್ಷರಾದ ಶೇಖರ್ ಕಣೀರುತೋಟ ಅವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪರಿಯತ್ತೂರು ನಿವಾಸಿಗಳಾದ ಮೋಹನ್ ದಾಸ್ ಗಟ್ಟಿ , ಸುಜಾತ ದಂಪತಿಗಳ ಮೂವರು ಪುತ್ರರಲ್ಲಿ ಸುಹಾನ್ ಹಿರಿಯವನಾದರೆ, ವರುಣ್ ಮತ್ತು ವೈಶಾಕ್ ಅವಳಿ ಸಹೋದರರಾಗಿದ್ದಾರೆ. ಪ್ರಧಾನಿಗೆ ಪತ್ರ ಬರೆದು ತನ್ನೂರಿನ ಹದಗೆಟ್ಟ ರಸ್ತೆಗೆ ಕಾಯಕಲ್ಪ ಒದಗಿಸಿದ ಯುವಕ ವರುಣ್ ಅವರ ಕಾರ್ಯವನ್ನು ಗ್ರಾಮಸ್ಥರು ಶ್ಲಾಘಿಸಿದ್ದಾರೆ.

Prime Minister Modi replies to letter of Engineering student of Kolya Mangalore over bad roads now gets concentrate road. Varun a student of Shayadri college had posted letter to PM on Sep 2020 regarding bad roads for which the PMO office ordered for concentrate road and now re sidents are happy.