ವಿದ್ಯಾರ್ಥಿನಿ ಸಾವು ; ಹುಚ್ಚು ನಾಯಿಯಿಂದ ರೇಬಿಸ್ ವೈರಸ್ ತಗಲಿದ ಶಂಕೆ ! ಸ್ಥಳೀಯರಲ್ಲಿ ಆತಂಕ

02-10-21 12:10 pm       Mangaluru Correspondent   ಕರಾವಳಿ

ರೇಬಿಸ್ ವೈರಸ್ ಸೋಂಕು ತಗುಲಿದ ಶಂಕೆಗೊಳಗಾಗಿದ್ದ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಕಡಬ ಬಳಿಯ ಆಲಂಕಾರಿನಲ್ಲಿ ನಡೆದಿದೆ.

ಪುತ್ತೂರು, ಅ.2 : ರೇಬಿಸ್ ವೈರಸ್ ಸೋಂಕು ತಗುಲಿದ ಶಂಕೆಗೊಳಗಾಗಿದ್ದ ವಿದ್ಯಾರ್ಥಿನಿಯೊಬ್ಬಳು ಆಸ್ಪತ್ರೆಯಲ್ಲಿ ಸಾವನಪ್ಪಿದ ಘಟನೆ ಕಡಬ ಬಳಿಯ ಆಲಂಕಾರಿನಲ್ಲಿ ನಡೆದಿದೆ. 

ಆಲಂಕಾರು ಗ್ರಾಮದ ಕೆದಿಲ ನಿವಾಸಿ ವರ್ಗಿಸ್ ಎಂಬವರ ಪುತ್ರಿ ವಿನ್ಸಿ ಸಾರಮ್ಮ(17) ಮೃತ ವಿದ್ಯಾರ್ಥಿನಿ. ಕಡಬ ಸರಕಾರಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯು ವಿದ್ಯಾರ್ಥಿನಿಯಾಗಿದ್ದ ಈಕೆಗೆ ಗುರುವಾರ ಬೆಳಗ್ಗೆ ತೀವ್ರ ತಲೆನೋವು ಕಾಣಿಸಿಕೊಂಡಿತ್ತು. ಬಳಿಕ ಸ್ಥಳೀಯ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು. ಸಂಜೆ ವೇಳೆ ತಲೆನೋವು, ಮೈಕೈ ನೋವು ಉಲ್ಬಣಗೊಂಡಿದ್ದು ಪುತ್ತೂರು ಖಾಸಗಿ ಆಸ್ಪತ್ರೆಗೆ ಸೇರಿಸಿ, ಅಲ್ಲಿಂದ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ತಡರಾತ್ರಿ ವಿನ್ನಿ ಮೃತಪಟ್ಟಿರುವುದಾಗಿ ತಿಳಿದುಬಂದಿದೆ.

ಸುಮಾರು 4 ತಿಂಗಳ ಹಿಂದೆ ಆಲಂಕಾರು ಪೇಟೆ ಸೇರಿದಂತೆ ಮೃತಳ ಮನೆಯ ಸುತ್ತಮುತ್ತ ಹುಚ್ಚು ನಾಯಿ ಕಾಣಿಸಿಕೊಂಡಿದ್ದು, ಈ ವೇಳೆ ಅಲಂಕಾರು ಪೇಟೆಯಲ್ಲಿರುವ ಬೀದಿನಾಯಿ ಸೇರಿದಂತೆ ಇಬ್ಬರ ಮೇಲೆ ದಾಳಿ ನಡೆಸಿತ್ತು. ಮೃತಳ ಮನೆಯ ನಾಯಿಯು ಕೆಲವು ದಿನಗಳ ಹಿಂದೆ ರೇಬಿಸ್‌ಗೆ ಒಳಗಾಗಿ ಸಾವನ್ನಪ್ಪಿತ್ತು. ಮನೆ ನಾಯಿಯಿಂದ ವೈರಸ್ ವಿದ್ಯಾರ್ಥಿನಿಗೂ ತಗಲಿರಬಹುದೆಂದು ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಹೆಚ್ಚಿನ ಪರೀಕ್ಷೆ ನಡೆಸುತ್ತಿರುವುದಾಗಿ ಜಿಲ್ಲಾ ಆರೋಗ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ವಿದ್ಯಾರ್ಥಿನಿ ಸಾವಿನ ಹಿನ್ನೆಲೆಯಲ್ಲಿ ಸ್ಥಳೀಯರಲ್ಲಿ ಆತಂಕ ವ್ಯಕ್ತವಾಗಿದೆ.

Puttur 17 year old girl dies after Dog bite rabies suspected. The deceased has been identified as Vincy Saramma. She was a PU student at a private college.