ತನ್ನದಲ್ಲದ ತಪ್ಪಿಗೆ ಕಾರಿಂಜದ ಯುವಕ ಮಲೇಷ್ಯಾದಲ್ಲಿ ಜೈಲುಪಾಲು ! ಇಲೆಕ್ಟ್ರಾನಿಕ್ ವಸ್ತು ಹೆಸರಲ್ಲಿ ಡ್ರಗ್ಸ್ ಕೊಟ್ಟಿದ್ದ ಇಬ್ಬರ ವಿರುದ್ಧ ತಾಯಿ ದೂರು

02-10-21 05:28 pm       Mangaluru Correspondent   ಕರಾವಳಿ

ಮಲೇಷ್ಯಾದಲ್ಲಿ ಜೈಲುಪಾಲಾಗಿರುವ ತಮ್ಮ ಮಗನನ್ನು ರಕ್ಷಿಸಿ ಭಾರತಕ್ಕೆ ಕರೆತರಬೇಕೆಂದು ತಾಯಿ ಉಪ್ಪಿನಂಗಡಿ ಪೊಲೀಸರ ಮೊರೆ ಹೋಗಿದ್ದಾರೆ.

ಬೆಳ್ತಂಗಡಿ, ಅ.2 : ತನ್ನದಲ್ಲದ ತಪ್ಪಿಗೆ ಮಲೇಷ್ಯಾದಲ್ಲಿ ಜೈಲುಪಾಲಾಗಿರುವ ತಮ್ಮ ಮಗನನ್ನು ರಕ್ಷಿಸಿ ಭಾರತಕ್ಕೆ ಕರೆತರಬೇಕೆಂದು ತಾಯಿ ಉಪ್ಪಿನಂಗಡಿ ಪೊಲೀಸರ ಮೊರೆ ಹೋಗಿದ್ದಾರೆ.

ಬೆಳ್ತಂಗಡಿ ತಾಲೂಕಿನ ಉರುವಾಲು ಗ್ರಾಮದ ಕಾರಿಂಜ ಕಾಂತಪ್ಪ ಪೂಜಾರಿ - ಮೀನಾಕ್ಷಿ ದಂಪತಿಯ ಪುತ್ರ ಅಮಿತ್ ಮಲೇಷ್ಯಾದಲ್ಲಿ ಜೈಲು ಪಾಲಾಗಿದ್ದಾನೆ. ಈ ಬಗ್ಗೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ದೂರು ನೀಡಿರುವ ತಾಯಿ ಮೀನಾಕ್ಷಿ , ಅಮಿತ್ ಜೈಲು ಪಾಲಾಗಲು ಕಾರಣವಾದ ಅಂಶವನ್ನು ವಿವರಿಸಿದ್ದಾರೆ. 

ತನ್ನ ಮಗ ಅಮಿತ್ ನನ್ನು ಪ್ರದೀಪ್ ರೈ ಹಾಗೂ ಪ್ರಖ್ಯಾತ್ ರೈ ಎಂಬಿಬ್ಬರು ಎಲೆಕ್ಟ್ರಾನಿಕ್ಸ್ ವಸ್ತುಗಳನ್ನು ಮಲೇಷ್ಯಾಕ್ಕೆ ಒಯ್ಯುವ ಕರ್ತವ್ಯಕ್ಕೆ ನಿಯುಕ್ತಿಗೊಳಿಸಿದ್ದರು. 2013ರ ಮಾರ್ಚ್ 2 ರಂದು ಅಮಿತ್ ಕೊಂಡೊಯ್ಯುತ್ತಿದ್ದ ಎಲೆಕ್ಟ್ರಾನಿಕ್ಸ್ ವಸ್ತುಗಳಲ್ಲಿ ಮಾದಕ ದ್ರವ್ಯವನ್ನು ಇರಿಸಲಾಗಿತ್ತು. ಮಲೇಷ್ಯಾದಲ್ಲಿ ತಪಾಸಣೆ ವೇಳೆ ಅಮಿತ್ ಸಿಕ್ಕಿಬಿದ್ದು ಪೊಲೀಸರ ವಶವಾಗಿದ್ದ. ಇದೀಗ ಮಗನ ಜೀವಕ್ಕೆ ಸಂಚಕಾರ ಬಂದಿದೆ ಎಂದು ಮೀನಾಕ್ಷಿ ದೂರಿದ್ದಾರೆ.

ಘಟನೆ ನಡೆದ ಬಳಿಕ ಆರೋಪಿಗಳು, ನಿಮ್ಮ ಮಗನನ್ನು ಸುರಕ್ಷಿತವಾಗಿ ಬಿಡಿಸಿಕೊಂಡು ಬರುವ ಹೊಣೆ ತಮ್ಮದೆಂದು ಹೇಳಿದ್ದರು. ಅಲ್ಲದೆ, ಘಟನೆ ಬಗ್ಗೆ ಯಾರಿಗೂ ತಿಳಿಸಬಾರದೆಂದು ತಾಕೀತು ಮಾಡಿದ್ದರು. ಹಾಗಾಗಿ, ಇಷ್ಟು ವರ್ಷ ಕಳೆದರೂ ದೂರು ನೀಡಲಾಗದೆ ಅಸಹಾಯಕರಾಗಿದ್ದೆವು. ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅಮಿತ್ ಗೆ ಶಿಕ್ಷೆಯ ತೀರ್ಪು ಪ್ರಕಟವಾಗಿದ್ದು ತಿಳಿದುಬಂದಿದೆ. ಆದರೂ ಆರೋಪಿತರು ಪ್ರಕರಣದ ಬಗ್ಗೆ ಯಾರಿಗಾದರೂ ತಿಳಿಸಿದರೆ ಮಗ ಮತ್ತು ನಿಮ್ಮ ಜೀವ ಉಳಿಯದು ಎಂದು ಜೀವ ಬೆದರಿಕೆಯೊಡ್ಡಿರುವುದಲ್ಲದೆ, ನಂತರದಲ್ಲಿ ಮೊಬೈಲ್ ಸ್ವಿಚ್ ಆಫ್ ಮಾಡಿ ತಲೆಮರೆಸಿಕೊಂಡಿದ್ದಾರೆ. 

ಕೆಲಸದ ಹುಡುಕಾಟದಲ್ಲಿದ್ದ ನನ್ನ ಮಗನ ಮುಗ್ಧತೆಯನ್ನು ದುರುಪಯೋಗಪಡಿಸಿ ಆತನಿಗೆ ಉತ್ತಮ ಕೆಲಸ ಕೊಡಿಸುತ್ತೇನೆಂದು ನಂಬಿಸಿ, ಆತನಿಗೆ ಅರಿವಿಲ್ಲದೆ ಮಾದಕ ವಸ್ತುಗಳನ್ನಿರಿಸಿ ವಂಚಿಸಿದ್ದಾರೆ. ಮಲೇಷ್ಯಾದಲ್ಲಿ ಅಪರಾಧಿಯನ್ನಾಗಿಸಿ ಇದೀಗ ಕಠಿಣ ಶಿಕ್ಷೆಗೆ ಗುರಿಯಾಗಿಸಿದ ಆರೋಪಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಆಗ್ರಹಿಸಿದ್ದಾರೆ. 

ನಮ್ಮ ಮಗನ ಬಗ್ಗೆ ನಿರ್ದೋಷಿಯೆಂದು ಮಲೇಷ್ಯಾ ಸರ್ಕಾರಕ್ಕೆ ತಿಳಿಸಿ, ಆತನ ಬಿಡುಗಡೆಗೆ ಕ್ರಮ ಕೈಗೊಳ್ಳಬೇಕೆಂದು ಉಪ್ಪಿನಂಗಡಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಅಮಿತ್​ ತಾಯಿ ಮೀನಾಕ್ಷಿ ವಿನಂತಿಸಿದ್ದಾರೆ.

The mother of a young man from here who has been jailed in Malaysia for drug trafficking has pleaded with the police to rescue her son and bring him back to India. She has claimed that her son was a victim of betrayal. Meenakshi, wife of Kantappa Poojary from Karinja House in Uruvalu village, Beltangady taluk, has filed this complaint at Uppinangady police station.