ಅಲೋಶಿಯಸ್ ಕಾಲೇಜಿನ ಪಾರ್ಕ್ ಗೆ ಸ್ಟಾನ್ ಸ್ವಾಮಿ ಹೆಸರು ; ಹಿಂದು ಸಂಘಟನೆಗಳಿಂದ ಪ್ರತಿಭಟನೆ ಎಚ್ಚರಿಕೆ

06-10-21 07:17 pm       Mangaluru Correspondent   ಕರಾವಳಿ

ನಗರದ ಅಲೋಶಿಯಸ್ ಕಾಲೇಜು ಕ್ಯಾಂಪಸಿನ ಪಾರ್ಕ್ ಒಂದಕ್ಕೆ ಎಡಪಂಥೀಯ ಚಿಂತಕ, ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ಹೆಸರನ್ನು ಇಡುವುದಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಎಬಿವಿಪಿ ವಿರೋಧ ವ್ಯಕ್ತಪಡಿಸಿದೆ.

ಮಂಗಳೂರು, ಅ.6: ನಗರದ ಅಲೋಶಿಯಸ್ ಕಾಲೇಜು ಕ್ಯಾಂಪಸಿನ ಪಾರ್ಕ್ ಒಂದಕ್ಕೆ ಎಡಪಂಥೀಯ ಚಿಂತಕ, ಭೀಮಾ ಕೋರೆಗಾಂವ್ ಹಿಂಸಾಚಾರ ಪ್ರಕರಣದ ಆರೋಪಿ ಸ್ಟಾನ್ ಸ್ವಾಮಿ ಹೆಸರನ್ನು ಇಡುವುದಕ್ಕೆ ವಿಶ್ವ ಹಿಂದು ಪರಿಷತ್ ಮತ್ತು ಎಬಿವಿಪಿ ವಿರೋಧ ವ್ಯಕ್ತಪಡಿಸಿದೆ. ಈ ಬಗ್ಗೆ ಉಭಯ ಸಂಘಟನೆಗಳ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದ್ದು, ಯಾವುದೇ ಕಾರಣಕ್ಕೂ ಸ್ಟಾನ್ ಸ್ವಾಮಿ ಹೆಸರನ್ನು ಕಾಲೇಜಿನ ಪಾರ್ಕ್ ಗೆ ಇಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದ್ದಾರೆ.

ಕಾಲೇಜಿನಲ್ಲಿ ಪಾರ್ಕ್ ಒಂದಕ್ಕೆ ಹೆಸರಿಡಲು ಕಾಲೇಜು ಆಡಳಿತ ಮುಂದಾಗಿದೆ. ನಾಳೆ ಹತ್ತು ಗಂಟೆಗೆ ಪಾರ್ಕ್ ಉದ್ಘಾಟನೆ ಕಾರ್ಯಕ್ರಮ ಆಯೋಜಿಸಲಾಗಿದೆ. ಆದರೆ, ಪಾರ್ಕಿಗೆ ಬೇರೆ ಯಾವುದೇ ಸಾಧಕ ವ್ಯಕ್ತಿಗಳ ಹೆಸರು ಇಡುವುದಕ್ಕೆ ನಮ್ಮ ಆಕ್ಷೇಪ ಇರುವುದಿಲ್ಲ. ಮಾಜಿ ಸಚಿವರಾದ ಆಸ್ಕರ್ ಫೆರ್ನಾಂಡಿಸ್ ಅಥವಾ ಜಾರ್ಜ್ ಫೆರ್ನಾಂಡಿಸ್ ಅವರ ಹೆಸರನ್ನು ಇಡಲಿ. ಆದರೆ, ದೇಶದ್ರೋಹಿ ಚಟುವಟಿಕೆ, ನಕ್ಸಲರ ಜೊತೆ ನಂಟು ಹೊಂದಿದ್ದ ಮತ್ತು ದೇಶದ ಪ್ರಧಾನಿಯನ್ನು ಕೊಲ್ಲಲು ಸಂಚು ನಡೆಸಿದ್ದಾರೆಂಬ ಆರೋಪ ಹೊತ್ತಿರುವ ವ್ಯಕ್ತಿಯ ಹೆಸರನ್ನು ಇಡುವುದಕ್ಕೆ ನಮ್ಮ ಪ್ರಬಲ ವಿರೋಧ ಇದೆ.

ಸ್ಟಾನ್ ಸ್ವಾಮಿ ಒಬ್ಬ ಭಯೋತ್ಪಾದಕ. ನಗರ ನಕ್ಸಲ್ ಆಗಿದ್ದ ವ್ಯಕ್ತಿ. ಭೀಮಾ ಕೋರೆಗಾಂವ್ ಪ್ರಕರಣದಲ್ಲಿ ಆರೋಪ ಹೊತ್ತು ಜೈಲು ಸೇರಿದ್ದ ಸಂದರ್ಭದಲ್ಲಿಯೇ ಸಾವನ್ನಪ್ಪಿದ್ದ. ಇಂಥ ವ್ಯಕ್ತಿಯ ಹೆಸರನ್ನು ಶಿಕ್ಷಣ ಕ್ಷೇತ್ರದಲ್ಲಿ ಬಹಳಷ್ಟು ಕೊಡುಗೆ ನೀಡಿರುವ ಅಲೋಶಿಯಸ್ ಕಾಲೇಜು ಕ್ಯಾಂಪಸ್ ನಲ್ಲಿ ಇಡಬಾರದು. ಹತ್ತಾರು ವರ್ಷಗಳಿಂದ ಅಲೋಶಿಯಸ್ ಕಾಲೇಜು ರಾಜ್ಯ ಮತ್ತು ಕೇಂದ್ರ ಸರಕಾರದಿಂದ ಸವಲತ್ತನ್ನು ಪಡೆದಿದ್ದು, ಈಗ ದೇಶದ್ರೋಹಿಯ ಹೆಸರನ್ನು ತನ್ನ ಪಾರ್ಕ್ ಒಂದಕ್ಕೆ ನಾಮಕರಣ ಮಾಡುವುದು ಎಷ್ಟು ಸರಿ. ಕಾಲೇಜು ಆಡಳಿತ ದೇಶದ್ರೋಹಿ ವ್ಯಕ್ತಿಯ ಹೆಸರಿಡುವುದನ್ನು ತಕ್ಷಣವೇ ಕೈಬಿಡಬೇಕು. ಇಲ್ಲದೇ ಇದ್ದಲ್ಲಿ ನಾಳೆಯೇ ನಾವು ಕಾಲೇಜು ಮುಂದೆ ಪ್ರತಿಭಟನೆ ನಡೆಸಲಿದ್ದೇವೆ ಎಂದು ವಿಹಿಂಪ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಹೇಳಿದ್ದಾರೆ.

ನಮ್ಮ ಎಚ್ಚರಿಕೆ ಮಧ್ಯೆಯೂ ಈ ಕಾರ್ಯಕ್ರಮ ಮಾಡಲು ಹೊರಟಲ್ಲಿ ಅದರಿಂದಾಗುವ ಅನಾಹುತಗಳಿಗೆ ಕಾಲೇಜು ಹೊಣೆಯಾಗಬೇಕು. ಉದ್ಘಾಟನಾ ಕಾರ್ಯಕ್ರಮ ನಡೆಸಲು ಹಿಂದು ಸಂಘಟನೆಯ ಕಾರ್ಯಕರ್ತರು ಬಿಡಲ್ಲ ಎನ್ನುವುದನ್ನು ನಿಮ್ಮ ಗಮನಕ್ಕೆ ತರುತ್ತೇನೆ. ಕಾರ್ಯಕ್ರಮವನ್ನು ತಡೆದು ಪ್ರತಿಭಟನೆ ನಡೆಸಲು ನಾವು ಸಜ್ಜಾಗಿದ್ದೇವೆ. ಈ ಬಗ್ಗೆ ಸ್ಥಳೀಯ ಪೊಲೀಸರಿಗೂ ಮಾಹಿತಿ ನೀಡಿದ್ದೇವೆ. ಕಾಲೇಜು ಆಡಳಿತಕ್ಕೂ ಮಾಹಿತಿ ನೀಡಿದ್ದೇವೆ ಎಂದು ಶರಣ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಎಬಿವಿಪಿ ರಾಜ್ಯ ಸಹ ಕಾರ್ಯದರ್ಶಿ ಮಣಿಕಂಠ, ಪುನೀತ್ ಪಂಪ್ವೆಲ್ ಮತ್ತಿತರರು ಇದ್ದರು. 

Mangalore Aloysius College Park to be named after late Stan Swamy for which VHP has opposed it and has threatened massive protest. Speaking to the Media Persons Sharan Pumpwell stated that Stan Swamy was a terrorist and a naxal and selecting such persons name for the park is not tolerable he added.