ಗುಲ್ಬರ್ಗ, ಮಂಗಳೂರು ಸೇರಿ ದೇಶದಲ್ಲಿ 400ಕ್ಕೂ ಹೆಚ್ಚು ದೂರದರ್ಶನ ಪ್ರಸಾರ ಕೇಂದ್ರ ಸ್ಥಗಿತ ! ಎಡವಟ್ಟು ಪ್ರಸಾರ ಭಾರತಿ, ಅಧಿಕಾರಿ ಶಾಹಿಗೆ ಮಣಿದ ಮೋದಿ ಸರಕಾರ

11-10-21 12:01 pm       Mangalore Reporter   ಕರಾವಳಿ

ದೂರದರ್ಶನ ಪ್ರಸಾರ ಕೇಂದ್ರ ಸ್ಥಗಿತ ಆದೇಶವನ್ನು ಮತ್ತೆ ಜಾರಿಗೆ ತರಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮುಂದಾಗಿದೆ.

ಮಂಗಳೂರು, ಅ.10: ಅದು 2020ರ ಮಾರ್ಚ್ 24. ಕೊರೊನಾ ಸೋಂಕಿನ ಭೀತಿಗೆ ಒಳಗಾದ ಪ್ರಧಾನಿ ಮೋದಿ ಆಕಾಶವಾಣಿ ಮತ್ತು ದೂರದರ್ಶನದಲ್ಲಿ ಲೈವ್ ಬಂದು ದಿಢೀರ್ ಆಗಿ ದೇಶಾದ್ಯಂತ ಜನತಾ ಕರ್ಫ್ಯೂ ಹೇರಿದರು. ದೇಶಾದ್ಯಂತ ಎಲ್ಲವನ್ನೂ ಬಂದ್ ಮಾಡುವ ಬಗ್ಗೆ ಘೋಷಣೆ ಮಾಡಿದ್ದಲ್ಲದೆ, ದೇಶದ ಜನರು ಇದಕ್ಕೆ ಸಹಕಾರ ನೀಡಬೇಕೆಂದು ಕೇಳಿಕೊಂಡರು. ಇದರ ಬೆನ್ನಲ್ಲೇ ಈ ಮಾಹಿತಿಯನ್ನು ದೇಶದಲ್ಲಿರುವ ಎಲ್ಲ ಪ್ರಸಾರ ಕೇಂದ್ರಗಳಿಂದ ಮರು ಪ್ರಸಾರಿಸಿ, ಸಾಧ್ಯವಾದಷ್ಟು ಜನರಿಗೆ ತಲುಪಿಸುವಂತೆ ಸೂಚನೆ ನೀಡಲಾಯಿತು. ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರಗಳಲ್ಲಿ ಈ ಮಾಹಿತಿಯನ್ನು ಬಿತ್ತರಿಸಿ, ದೇಶದ ಹಳ್ಳಿ ಹಳ್ಳಿಗೆ ತಲುಪಿಸಲು ಸೂಚನೆ ನೀಡಲಾಗಿತ್ತು.

ಮಾಹಿತಿ ಮತ್ತು ಪ್ರಸಾರ ಭಾರತಿ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ಈ ಬಗ್ಗೆ ದೆಹಲಿಯಲ್ಲಿ ಕುಳಿತು ಹೊರಡಿಸಿದ್ದ ಆದೇಶ ಎಷ್ಟರ ಮಟ್ಟಿಗೆ ಬಿಸಿ ಮುಟ್ಟಿಸಿತ್ತೆಂದರೆ, ದೆಹಲಿಯಲ್ಲಿ ಬೀಗ ಜಡಿಯಲಾಗಿದ್ದ ದೂರದರ್ಶನ ಮತ್ತು ಆಕಾಶವಾಣಿ ಕೇಂದ್ರವನ್ನೂ ತೆರೆದು ಆಪರೇಟ್ ಮಾಡುವಂತಾಗಿತ್ತು. ಅಷ್ಟೇ ಅಲ್ಲ, ಅದೇ ಮಾರ್ಚ್ ಅಂತ್ಯಕ್ಕೆ 480 ದೂರದರ್ಶನ ಕೇಂದ್ರಗಳನ್ನು ಬಂದ್ ಮಾಡಲು ನೀಡಿದ್ದ ಆದೇಶವನ್ನೇ ರದ್ದು ಪಡಿಸಲಾಗಿತ್ತು. ಅಘೋಷಿತ ತುರ್ತು ಪರಿಸ್ಥಿತಿಯನ್ನು ಪ್ರಧಾನಿ ಘೋಷಣೆ ಮಾಡಿದ್ದರಿಂದ ಸರಕಾರದ ಕಡೆಯಿಂದ ಮಾಹಿತಿ ರವಾನಿಸಲು ದೂರದರ್ಶನ ಮತ್ತು ಆಕಾಶವಾಣಿ ಅನಿವಾರ್ಯ ಎನ್ನುವ ರೀತಿ ಜಾವ್ಡೇಕರ್ ದೆಹಲಿಯಲ್ಲಿ ದೊಡ್ಡ ಮಟ್ಟಿನ ಸ್ವರ ಎಬ್ಬಿಸಿದ್ದರಿಂದ ತತ್ಕಾಲಕ್ಕೆ ದೂರದರ್ಶನದ ಉಸಿರು ಉಳಿದಿತ್ತು. ದೂರದರ್ಶನ ಬಂದ್ ಮಾಡುವ ಅಧಿಕಾರಸ್ಥರ ಲಾಬಿಗೆ ತಾತ್ಕಾಲಿಕ ಬ್ರೇಕ್ ಬಿದ್ದಿತ್ತು.

ವರ್ಷದ ಹಿಂದೆ ಅನಿವಾರ್ಯ ಆಗಿದ್ದ ಸರಕಾರಿ ಸೇವೆ

ಅದಾಗಿ, ಒಂದೂವರೆ ವರ್ಷ ಕಳೆಯುತ್ತಿದ್ದಂತೆ ಈ ಹಿಂದೆ ಹೊರಡಿಸಿದ್ದ ದೂರದರ್ಶನ ಪ್ರಸಾರ ಕೇಂದ್ರ ಸ್ಥಗಿತ ಆದೇಶವನ್ನು ಮತ್ತೆ ಜಾರಿಗೆ ತರಲು ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವಾಲಯ ಮುಂದಾಗಿದೆ. ಈ ಬಗ್ಗೆ ಕಳೆದ ಸೆಪ್ಟಂಬರ್ 20ರಂದು ಅಧಿಕೃತ ಆದೇಶ ಮಾಡಲಾಗಿದ್ದು, 400ಕ್ಕೂ ಕೇಂದ್ರಗಳ ಸ್ಥಗಿತಕ್ಕೆ ಸೂಚಿಸಲಾಗಿದೆ. ಕರ್ನಾಟಕ ಸೇರಿದಂತೆ ಕೇರಳ, ತಮಿಳುನಾಡು, ಮಹಾರಾಷ್ಟ್ರ, ಆಂಧ್ರಪ್ರದೇಶ ಸೇರಿದಂತೆ ದೇಶದ ಎಲ್ಲ ರಾಜ್ಯಗಳಲ್ಲಿರುವ ಮರು ಪ್ರಸಾರ ಕೇಂದ್ರಗಳನ್ನು ಒಂದರ ನಂತರ ಒಂದರಂತೆ ಬಂದ್ ಮಾಡಲು ಪ್ರಸಾರ ಭಾರತಿಯಿಂದ ಆದೇಶ ಮಾಡಲಾಗಿದೆ.

ಕರ್ನಾಟಕದ ಪಾಲಿಗೆ ಮೊದಲ ಪ್ರಾದೇಶಿಕ ದೂರದರ್ಶನ ಕೇಂದ್ರ ಎನಿಸಿಕೊಂಡಿದ್ದ ಗುಲ್ಬರ್ಗ (ಸ್ಥಾಪನೆ- 1977), ಬೆಂಗಳೂರು, ಧಾರವಾಡ, ಮಂಗಳೂರು, ಮೈಸೂರು, ಶಿವಮೊಗ್ಗ ಸೇರಿ 14 ಪ್ರಸಾರ ಕೇಂದ್ರಗಳನ್ನು ಇದೇ ಮಾರ್ಚ್ ಅಂತ್ಯಕ್ಕೆ ನಿಲ್ಲಿಸಲು ಆದೇಶ ಹೊರಡಿಸಿದೆ. ವಿಚಿತ್ರ ಏನಂದ್ರೆ, ಈ ರೀತಿ ಪ್ರಸಾರ ಕೇಂದ್ರಗಳ ನಿಲುಗಡೆ ಬಗ್ಗೆ ಪ್ರಸಾರ ಭಾರತಿ ಅಧಿಕಾರಿಗಳು ಮಾತ್ರ ಜನಪ್ರತಿನಿಧಿಗಳು ಮತ್ತು ಜನಸಾಮಾನ್ಯರನ್ನು ಮಿಸ್ ಗೈಡ್ ಮಾಡುತ್ತಿದ್ದಾರೆ. ಗುಲ್ಬರ್ಗ ಕೇಂದ್ರವನ್ನು ಬಂದ್ ಮಾಡಲಾಗುತ್ತೆ ಎಂದು ಸುದ್ದಿ ಹಬ್ಬಿದಾಗ ಅಲ್ಲಿನ ಸಂಸದ ಉಮೇಶ್ ಜಾಧವ್ ಸ್ವರ ಎಬ್ಬಿಸಿದ್ದರು. ಅಲ್ಲದೆ, ಮಾಹಿತಿ ಮತ್ತು ಪ್ರಸಾರ ಭಾರತಿ ಸಚಿವಾಲಯಕ್ಕೆ ಪತ್ರ ಬರೆದು ಯಾವುದೇ ಕಾರಣಕ್ಕೂ ಗುಲ್ಬರ್ಗ ಕೇಂದ್ರವನ್ನು ಬಂದ್ ಮಾಡಲು ಬಿಡೋದಿಲ್ಲ ಎಂದು ಹೇಳಿದ್ದರು. ಈ ಬಗ್ಗೆ ಟ್ವೀಟ್ ಕೂಡ ಮಾಡಿದ್ದರು. ಇಂಡಿಯನ್ ಎಕ್ಸ್ ಪ್ರೆಸ್ ಪತ್ರಿಕೆಯ ಗುಲ್ಬರ್ಗ ಎಡಿಶನ್ನಲ್ಲಿ ಬಂದಿದ್ದ ಆ ಕುರಿತ ಸುದ್ದಿಯ ತುಣುಕನ್ನೂ ಹಂಚಿಕೊಂಡಿದ್ದರು.

ಇಷ್ಟಾಗುತ್ತಿದ್ದಂತೆ, ಬುಡಕ್ಕೆ ಬಿಸಿ ಎಣ್ಣೆ ಬಿದ್ದಂತೆ ವರ್ತಿಸಿರುವ ಪ್ರಸಾರ ಭಾರತಿ ಸಿಇಓ ಶಶಿಶೇಖರ್ ವೆಂಪಾಟಿ, ಆ ರೀತಿಯ ಯಾವುದೇ ಪ್ರಸ್ತಾಪ ಪ್ರಸಾರ ಭಾರತಿ ಮುಂದೆ ಇಲ್ಲ. ಗುಲ್ಬರ್ಗ ಕೇಂದ್ರದಲ್ಲಿ ನಾವು ಅನಲಾಗ್ ಇರುವುದನ್ನು ಡಿಜಿಟಲ್ ಮಾಡುತ್ತಿದ್ದೇವೆ. ಪತ್ರಿಕೆಯವರು ಸರಿಯಾಗಿ ತಿಳಿದುಕೊಳ್ಳದೆ ತಪ್ಪು ಸುದ್ದಿ ನೀಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ. ಕರ್ನಾಟಕ ಪ್ರಾದೇಶಿಕ ವಿಭಾಗದ ಅಧಿಕಾರಿ ರಮಾಕಾಂತ್ ಎಂಬವರು ಕೂಡ ಇದೇ ಧಾಟಿಯಲ್ಲಿ ಟ್ವೀಟ್ ಮಾಡಿ, ಗುಲ್ಬರ್ಗ ಕೇಂದ್ರವನ್ನು ಬಂದ್ ಮಾಡುವುದಿಲ್ಲ ಎಂದಿದ್ದಾರೆ. ಆದರೆ, ಅಧಿಕಾರಿಗಳು ಜನರನ್ನು ಮಿಸ್ ಗೈಡ್ ಮಾಡುತ್ತಿದ್ದರೂ, ಈ ಬಗ್ಗೆ ಆಯಾ ಕೇಂದ್ರಗಳಿಗೆ ಬಂದಿರುವ, ಕರ್ನಾಟಕ ಸೇರಿದಂತೆ ದೇಶಾದ್ಯಂತ 400ಕ್ಕೂ ಹೆಚ್ಚು ಪ್ರಾದೇಶಿಕ ಕೇಂದ್ರಗಳನ್ನು ಸ್ಥಗಿತಗೊಳಿಸಲು ಪ್ರಸಾರ ಭಾರತಿ ಹೊರಡಿಸಿರುವ ಆದೇಶ ಪತ್ರ ಹೆಡ್ ಲೈನ್ ಕರ್ನಾಟಕಕ್ಕೆ ಸಿಕ್ಕಿದೆ.

ಅದರಲ್ಲಿ ಸ್ಪಷ್ಟವಾಗಿ ಪ್ರಾದೇಶಿಕ ಕೇಂದ್ರಗಳನ್ನು ಸ್ಥಗಿತಗೊಳಿಸುವ ಬಗ್ಗೆ ಉಲ್ಲೇಖಿಸಿದ್ದು ಇದೇ 2021ರ ಮಾರ್ಚ್ 31ಕ್ಕೆ ಕೆಲವು ಕೇಂದ್ರಗಳಿಗೆ ಕೊನೆಯ ದಿನವೆಂದು ನಮೂದಿಸಲಾಗಿದೆ. ಇನ್ನು ಕೆಲವು ಕೇಂದ್ರಗಳಲ್ಲಿ ಇದೇ ಡಿಸೆಂಬರ್ ಅಂತ್ಯಕ್ಕೆ ಪ್ರಸಾರ ಅಂತ್ಯಗೊಳ್ಳಲಿದೆ. ಈ ಪೈಕಿ 108 ಪ್ರಸಾರ ಕೇಂದ್ರಗಳನ್ನು ತಕ್ಷಣದಿಂದ ಒಂದು ಶಿಫ್ಟ್ ಗೆ ಸೀಮಿತಗೊಳಿಸಿ, 2022ರ ಮಾರ್ಚ್ ಅಂತ್ಯಕ್ಕೆ ಸ್ಥಗಿತಗೊಳಿಸಲು ಸೂಚಿಸಲಾಗಿದೆ. ಇದಲ್ಲದೆ, ಅಲ್ಲಿನ ಸೊತ್ತುಗಳ ನಿರ್ವಹಣೆ, ಬಾಡಿಗೆ ಕಟ್ಟಡಗಳಾಗಿದ್ದರೆ ಅವುಗಳ ಬಿಡುಗಡೆ ಬಗ್ಗೆಯೂ ಉಲ್ಲೇಖ ಮಾಡಲಾಗಿದೆ. ಇತ್ತ ಮಂಗಳೂರಿನ ವಾಮಂಜೂರಿನಲ್ಲಿದ್ದ ಕರಾವಳಿ ಜಿಲ್ಲೆಗಳ ಪಾಲಿಗಿದ್ದ ಏಕೈಕ ದೂರದರ್ಶನ ಮರು ಪ್ರಸಾರ ಕೇಂದ್ರವನ್ನು ಇದೇ ಮಾರ್ಚ್ 31ಕ್ಕೆ ಸ್ಥಗಿತಗೊಳಿಸಲು ಆದೇಶ ಬಂದಿದೆ. ಮಂಗಳೂರು ಮರು ಪ್ರಸಾರ ಕೇಂದ್ರ ಬಂದ್ ಮಾಡುವ ಬಗ್ಗೆ ಈಗಾಗ್ಲೇ ಪತ್ರಿಕೆಯಲ್ಲಿ ಜಾಹೀರಾತನ್ನೂ ನೀಡಲಾಗಿದೆ. ಗುಲ್ಬರ್ಗ ಕೇಂದ್ರವನ್ನೂ ಇದೇ ಮಾರ್ಚ್ ಅಂತ್ಯಕ್ಕೆ ಸ್ಥಗಿತಗೊಳಿಸುವ ಬಗ್ಗೆ ಆದೇಶ ಮಾಡಲಾಗಿದ್ದೂ ಅದರ ಬಗ್ಗೆ ಪ್ರಾದೇಶಿಕ ಕೇಂದ್ರಕ್ಕೆ ಬಂದಿರುವ ಆದೇಶ ಪತ್ರವೂ ಸಿಕ್ಕಿದೆ. ಹಾಗಿದ್ದರೂ, ಪ್ರಸಾರ ಭಾರತಿಯ ಉನ್ನತ ಮಟ್ಟದಲ್ಲಿ ಕುಳಿತಿರುವ ಅಧಿಕಾರಿಗಳು ಯಾಕೆ ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ ಎನ್ನುವುದು ಗೊತ್ತಾಗಿಲ್ಲ.  

ಬಂದ್ ಮಾಡಿದರೆ ಸರಕಾರಕ್ಕೇನು ಲಾಭ ?

ಡಿಜಿಟಲ್ ಯುಗದಲ್ಲಿ ದೂರದರ್ಶನದ ಅನಿವಾರ್ಯತೆ ಏನಿದೆ, ಅದನ್ನು ನಿಲ್ಲಿಸಿದರೆ ತೊಂದರೆ ಏನು ಎಂದು ಕೆಲವರು ಕೇಳಬಹುದು. ಹೌದು.. ಆಕಾಶವಾಣಿ ಈಗ ಯೂಟ್ಯೂಬಲ್ಲೂ ಸಿಗುತ್ತದೆ. ದೆಹಲಿ, ಬೆಂಗಳೂರಿನ ದೂರದರ್ಶನ ಡಿಟಿಎಚ್, ಕೇಬಲ್ ನಲ್ಲಿ ಸಿಗುತ್ತದೆ. ಪ್ರಾದೇಶಿಕ ಮರು ಪ್ರಸಾರ ಕೇಂದ್ರಗಳ ಅಗತ್ಯ ಏನಿದೆ ಎಂದು ಕೇಳಬಹುದು. ಆದರೆ, ದೂರದರ್ಶನ ಮರು ಪ್ರಸಾರ ಕೇಂದ್ರಗಳಿಂದ ಏಂಟೆನಾಗಳಲ್ಲಿ ಫ್ರೀಯಾಗಿ ಸಿಗ್ನಲ್ ಜನರಿಗೆ ತಲುಪುತ್ತದೆ. ಯಾವುದೇ ಹಳ್ಳಿಗೂ ಇದರ ಸಿಗ್ನಲ್ ಪಡೆದು ಯಾವುದೇ ವ್ಯಕ್ತಿ ಯಾರ ತಂಟೆಯೂ ಇಲ್ಲದೆ ಟೀವಿ ನೋಡಬಹುದು. ಅದಕ್ಕೆ ಯಾವುದೇ ಶುಲ್ಕವನ್ನು ಯಾರಿಗೂ ಕೊಡಬೇಕಿಲ್ಲ. ನಕ್ಸಲ್ ಪೀಡಿತ ಹಳ್ಳಿಗಳಲ್ಲಿ ಕೇಬಲ್, ಮೊಬೈಲ್ ಸಿಗ್ನಲ್ ಸಿಗದೇ ಇರುವ ಪ್ರದೇಶದಲ್ಲೂ ದೂರದರ್ಶನ, ರೇಡಿಯೋ ಸಿಗ್ನಲ್ ತಲುಪುತ್ತದೆ. ಅಲ್ಲಿನ ಜನರಿಗೆ ಸರಕಾರದ ಮಾಹಿತಿ, ಸುದ್ದಿಗಳನ್ನು ತಲುಪಿಸುವುದು ಸರಕಾರದ ಸೇವೆ. 20 ವರ್ಷಗಳ ಹಿಂದೆ, ಕೇಬಲ್, ಡಿಟಿಎಚ್ ಬರೋ ಮೊದಲು ಇದೇ ನಮ್ಮ ಜೀವನಾಡಿಯಾಗಿತ್ತು. ಅಷ್ಟೇ ಅಲ್ಲ, ಸ್ಥಳೀಯ ಕಲೆಗಳಿಗೆ, ಜನಪದ ಕಲಾವಿದರಿಗೆ ದೂರದರ್ಶನ ಅನ್ನೋದು ವೇದಿಕೆಯಾಗಿತ್ತು. ಈಗ ಖಾಸಗಿ ಟಿವಿಗಳ ಭರಾಟೆಯಲ್ಲಿ ದೂರದರ್ಶನ ಅಸ್ತಿತ್ವ ಕಳಕೊಂಡಿರಬಹುದು. ಹಾಗಂತ ಸರಕಾರಿ ಸೇವೆಯನ್ನು ನಿಲ್ಲಿಸೋದಂದ್ರೆ, ಖಾಸಗಿಯವರಿಗೆ ಮಣೆ ಹಾಕಿದಂತೆ ಸರಿ.

2015ರಲ್ಲಿ ಡಿಜಿಟಲ್ ಮಾಡುವ ಯೋಜನೆ ಇತ್ತು

2015ರಲ್ಲಿ ದೂರದರ್ಶನ ಮರು ಪ್ರಸಾರ ಕೇಂದ್ರಗಳನ್ನು ಡಿಜಿಟಲ್ ರೂಪಕ್ಕೆ ಅಪ್ ಗ್ರೇಡ್ ಮಾಡಿ, ಏಂಟೆನಾಗಳಲ್ಲೇ 28 ಉಚಿತ ಚಾನೆಲ್ ಗಳನ್ನು ಪ್ರಸಾರಿಸಲು ಯೋಜನೆ ಹಾಕಲಾಗಿತ್ತು. ಆದರೆ, ಅದು ಕಾರ್ಯ ರೂಪಕ್ಕೆ ಬರಲೇ ಇಲ್ಲ. ಅಧಿಕಾರಸ್ಥರ ಲಾಬಿ ಅದನ್ನು ಕಾರ್ಯರೂಪಕ್ಕೆ ಬರಲು ಬಿಡಲಿಲ್ಲ. ಆಮೂಲಕ ಖಾಸಗಿ ಡಿಟಿಎಚ್ ಕಂಪನಿಗಳಿಗೆ ಪ್ರಯೋಜನ ಮಾಡಲಾಗಿತ್ತು. ಅದು ಕೋಟ್ಯಂತರ ವಹಿವಾಟಿನ ಲಾಬಿ. ಸರಕಾರದ ಅಧಿಕಾರಿಗಳೇ ದೂರದರ್ಶನ ಕೇಂದ್ರಗಳನ್ನು ಮೂಲೆಗೆ ತಳ್ಳಲು ಸಹಕಾರ ನೀಡಿದಂತಾಗಿತ್ತು. ಈಗ ಪೂರ್ತಿಯಾಗಿ ದೂರದರ್ಶನ ಮರುಪ್ರಸಾರ ಕೇಂದ್ರಗಳನ್ನು ಸ್ಥಗಿತಗೊಳಿಸಿ, ಸರಕಾರಿ ಸೇವೆಯನ್ನೇ ಸ್ಥಗಿತಗೊಳಿಸುವ ಹುನ್ನಾರ ಇದರ ಹಿಂದಿದೆ. ಬಾಯಿ ತೆಗೆದ ಜನಪ್ರತಿನಿಧಿಗಳನ್ನು ಬಾಯಿ ಮುಚ್ಚಿಸುವ ವ್ಯವಸ್ಥೆ ಮುನ್ನೆಲೆಗೆ ಬಂದಿದೆ.

ಇಷ್ಟಕ್ಕೂ ವರ್ಷದ ಹಿಂದೆ ಕೊರೊನಾ ತುರ್ತು ಸ್ಥಿತಿ ಹೇರಿದಾಗ, ಪ್ರಧಾನಿ ಮತ್ತು ಕೇಂದ್ರ ಸಚಿವರಿಗೆ ದೂರದರ್ಶನ, ಆಕಾಶವಾಣಿ ಸೇವೆ ಅಗತ್ಯವಾಗಿತ್ತು. ಒಂದು ವರ್ಷ ಕಳೆಯುತ್ತಿದ್ದಂತೆ ಅವುಗಳಿಂದ ಲಾಭ ಇಲ್ಲವೆಂದು ಕೇಂದ್ರ ಪ್ರಣೀತ ಅಧಿಕಾರಿಗಳು ಪ್ರಸಾರ ಕೇಂದ್ರಗಳನ್ನೇ ಸ್ಥಗಿತಗೊಳಿಸಲು ಮುಂದಾಗಿದ್ದಾರೆ. ಒಂದೆಡೆ ಇದನ್ನು ನಂಬಿಕೊಂಡಿರುವ ಸಾವಿರಾರು ಮಂದಿಯ ಹೊಟ್ಟೆಗೆ ಹೊಡೆತ, ಇನ್ನೊಂದೆಡೆ ಸರಕಾರಿ ಮಾಧ್ಯಮ ಸೇವೆಯನ್ನು ಕತ್ತು ಹಿಸುಕುವ ಪ್ರಯತ್ನ ಎನ್ನುವುದಕ್ಕೆ ಯಾವುದೇ ಸಾಕ್ಷ್ಯ ಬೇಕಿಲ್ಲ. ಪ್ರಸಾರ ಕೇಂದ್ರಗಳಿಲ್ಲದ ದೂರದರ್ಶನಕ್ಕೆ ಅಸ್ತಿತ್ವ ಇರುವುದೇ ಎಂಬ ಪ್ರಶ್ನೆಗೆ ಅವರೇ ಉತ್ತರಿಸಬೇಕು. ದೇಶಾದ್ಯಂತ ಪ್ರಸಾರ ಕೇಂದ್ರಗಳಿರುವ ಕಟ್ಟಡ ಇನ್ನಿತರ ಸೊತ್ತು, ಸ್ಥಿರಾಸ್ತಿಗಳನ್ನು ಮಾರುವುದು, ಲ್ಯಾಂಡ್ ಮಾಫಿಯಾ ಕೂಡ ಇದರ ಹಿಂದಿರುವ ಇನ್ನೊಂದು ಮಜಲು.

Prasar Bharti will cease the transmission of its programmes from the Kalaburagi Regional Centre in Karnataka from October 31 onwards.