ಭಾರತೀಯ ಪೂರ್ವಜರ ಬಗ್ಗೆ ಹೊಸ ಶೋಧನೆ ; ಕೊರಗ ಜನಾಂಗ ಫೋಟೋ ದ್ರಾವಿಡಿಯನ್ ಮೂಲದ್ದು, ಇಲ್ಲಿನ ಮೂಲ ನಿವಾಸಿಗಳಲ್ಲ.. ಅಂತರ್ವಿವಾಹ ಸಂಬಂಧದಿಂದ ನಶಿಸುತ್ತಿದೆ ; ಮಂಗಳೂರು ವಿವಿಯ ಪ್ರಬಂಧಕ್ಕೆ ಮಾನ್ಯತೆ  

05-11-25 10:48 pm       Mangalore Correspondent   ಕರಾವಳಿ

ಭಾರತದ ಪಶ್ಚಿಮ ಕರಾವಳಿಯ ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಅಸ್ತಿತ್ವದಲ್ಲಿರುವ ಕೊರಗ ಜನಾಂಗದ ವಂಶವಾಹಿ ಬಗ್ಗೆ ಅಧ್ಯಯನ ನಡೆಸಿರುವ ಮಂಗಳೂರು ವಿವಿಯ ಸಂಶೋಧಕರ ತಂಡವೊಂದು, ಕೊರಗರದ್ದು 4400 ವರ್ಷಗಳ ಹಿಂದಿನ ವಂಶವಾಹಿಯಾಗಿದ್ದು ಇವರನ್ನು ಫೋಟೋ ದ್ರಾವಿಡಿಯನ್ ಮೂಲದವರೆಂದು ಹೊಸತಾಗಿ ವರ್ಗೀಕರಿಸಿದ್ದಾರೆ.

ಮಂಗಳೂರು, ನ.5 : ಭಾರತದ ಪಶ್ಚಿಮ ಕರಾವಳಿಯ ಕರ್ನಾಟಕ ಮತ್ತು ಕೇರಳ ಭಾಗದಲ್ಲಿ ಅಸ್ತಿತ್ವದಲ್ಲಿರುವ ಕೊರಗ ಜನಾಂಗದ ವಂಶವಾಹಿ ಬಗ್ಗೆ ಅಧ್ಯಯನ ನಡೆಸಿರುವ ಮಂಗಳೂರು ವಿವಿಯ ಸಂಶೋಧಕರ ತಂಡವೊಂದು, ಕೊರಗರದ್ದು 4400 ವರ್ಷಗಳ ಹಿಂದಿನ ವಂಶವಾಹಿಯಾಗಿದ್ದು ಇವರನ್ನು ಫೋಟೋ ದ್ರಾವಿಡಿಯನ್ ಮೂಲದವರೆಂದು ಹೊಸತಾಗಿ ವರ್ಗೀಕರಿಸಿದ್ದಾರೆ.

ಸಿಂಧು ನಾಗರಿಕತೆಯ ಕಾಲದಲ್ಲಿ ಉಗಮವಾಗಿದ್ದು ಭಾರತದಲ್ಲಿ ಅಸ್ತಿತ್ವದಲ್ಲಿರುವ ಬೇರೆ ಬೇರೆ ಜನಾಂಗದ ಮೂಲವರೆಂದು ಹೇಳಲಾಗುತ್ತಿರುವ ಇರಾನ್ ಪರ್ವತ ಪ್ರದೇಶಗಳ ಪ್ರಾಚೀನ ಕೃಷಿಕರು, ಪ್ಯಾಂಟಿಕ್ ಕ್ಯಾಸ್ಪಿಯನ್ ಪ್ರದೇಶದ ಪಶುಪಾಲಕರು ಹಾಗೂ ಅಂಡಮಾನ್ ದ್ವೀಪದ ಬೇಟೆಯಾಡುವ ಬುಡಕಟ್ಟು ಜನಾಂಗಕ್ಕಿಂತ ವಿಭಿನ್ನ ವಂಶವಾಹಿಯನ್ನು ಕೊರಗರು ಹೊಂದಿದ್ದಾರೆ. ಇವರ ಪೂರ್ವಜರು 4400 ವರ್ಷಗಳ ಹಿಂದೆ ಇರಾನ್ ಸಮತಟ್ಟಿನ ಪ್ರದೇಶ ಮತ್ತು ಸಿಂಧೂ ನದಿ ಪ್ರದೇಶದ ಮಧ್ಯೆ ಅಸ್ತಿತ್ವದಲ್ಲಿದ್ದರು ಎಂದು ಭಾವಿಸಲಾಗಿದೆ ಎಂಬುದಾಗಿ ತಮ್ಮ ಸಂಶೋಧನಾ ವರದಿಯಲ್ಲಿ ಉಲ್ಲೇಖಿಸಿದ್ದಾರೆ. ಡಾ.ಎಂ.ಎಸ್ ಮುಸ್ತಾಕ್ ಮತ್ತು ಪಶ್ಚಿಮ ಬಂಗಾಳ ಮೂಲದ ಡಾ.ರಣಜಿತ್ ದಾಸ್ ಅವರ ನೇತೃತ್ವದ ತಂಡವು ಈ ಸಂಶೋಧನಾ ಪ್ರಬಂಧವನ್ನು ರಚಿಸಿದ್ದು ಕೊರಗರ ಬಗ್ಗೆ ಹೊಸ ವಿಷಯವನ್ನು ಪತ್ತೆ ಮಾಡಿರುವುದಾಗಿ ಮಂಗಳೂರು ವಿವಿಯ ಕುಲಪತಿ ಪ್ರೊ.ಪಿ.ಎಲ್ ಧರ್ಮ ಸುದ್ದಿಗೋಷ್ಟಿಯಲ್ಲಿ ತಿಳಿಸಿದ್ದಾರೆ.

ಫೋಟೋ ದ್ರಾವಿಡಿಯನ್ ವಂಶವಾಹಿಯೆಂದು ಗುರುತಿಸಿರುವ ಈ ಜನಾಂಗವು ಪ್ರತ್ಯೇಕವಾಗಿದ್ದು ಇರಾನ್ ಬುಡಕಟ್ಟು ಜನಾಂಗ ಅಥವಾ ಅಂಡಮಾನ್ ಬುಡಕಟ್ಟು ಜನರಿಗಿಂತ ವಿಭಿನ್ನ ವಂಶವಾಹಿಯನ್ನು ಹೊಂದಿದೆ. ಸ್ವಿಜರ್ಲ್ಯಾಂಡಿನ ಯುನಿವರ್ಸಿಟಿ ಆಫ್ ಬರ್ನ್ ಇದರ ಖ್ಯಾತ ಭಾಷಾ ಶಾಸ್ತ್ರಜ್ಞ ಪ್ರೊ.ಜಾರ್ಜ್ ವ್ಯಾನ್ ಡ್ರಿಮ್ ಅವರನ್ನು ಒಳಗೊಂಡು ಭಾರತೀಯ ಪೂರ್ವಜರ ಕುರಿತಾಗಿ ಸಮಗ್ರ ಅಧ್ಯಯನ ಮಾಡಲಾಗಿದ್ದು, ಯುರೋಪಿಯನ್ ಜರ್ನಲ್ ಆಫ್ ಹ್ಯೂಮನ್ ಜೆನೆಟಿಕ್ಸ್ ನಲ್ಲಿ ಈ ಪ್ರಬಂಧವನ್ನು ಪ್ರಕಟಿಸಲಾಗಿದೆ.

ಮಂಗಳೂರು ವಿವಿ ಮತ್ತು ಯೇನಪೋಯ ವಿಶ್ವವಿದ್ಯಾಲಯದ ಸಹಯೋಗದಲ್ಲಿ ಸುದೀರ್ಘ ಹತ್ತು ವರ್ಷಗಳಿಂದ ಈ ಅಧ್ಯಯನ ಕೈಗೊಳ್ಳಲಾಗಿದ್ದು, ವೈಜ್ಞಾನಿಕ ಅಧ್ಯಯನದಿಂದ ಭಾರತೀಯ ಪೂರ್ವಜರ ಕುರಿತ ಹೊಸ ವಂಶವಾಹಿಯನ್ನು ಗುರುತಿಸಲಾಗಿದೆ. ಜಾರ್ಜ್ ವ್ಯಾನ್ ಡ್ರಿಮ್ ಅವರು ಭಾಷೆ ಮತ್ತು ಅನುವಂಶೀಯತೆ ನಡುವಿನ ಸಂಬಂಧ ಕುರಿತಾಗಿ ಪ್ರಬಂಧ ಮಂಡಿಸಿದ್ದು 2024ರಲ್ಲಿ Frontiers in Genetics ಪತ್ರಿಕೆಯಲ್ಲಿ ಪ್ರಕಟವಾಗಿತ್ತು. ಅವರ ಅಧ್ಯಯನದಲ್ಲಿ ಕರಾವಳಿಯ ಕೊರಗ ಸಮುದಾಯಕ್ಕೆ ಉತ್ತರ ಭಾರತದ ದ್ರಾವಿಡ ಭಾಷಾ ಜನಾಂಗದೊಡನೆ ಮಾತೃ ಸಂಬಂಧ ಇದೆಯೆಂದು ಉಲ್ಲೇಖವಾಗಿತ್ತು.

ಕೊರಗ ಜನಾಂಗದ ಕುರಿತಾಗಿ ಡಾ.ಜೈಸನ್ ಸಿಕ್ವೇರಾ ಅವರು ಹೆಚ್ಚುವರಿ ಸಂಶೋಧನೆ ಕೈಗೊಂಡಿದ್ದು ಕೊರಗ, ಒರಾಂವ್, ಕುರುಖ್ ಮತ್ತು ಬ್ರಾಹುಯಿ ಭಾಷೆಗಳ ನಡುವಿನ ಸಂಬಂಧವನ್ನು ಆಧಾರವಾಗಿರಿಸಿ ಅನುವಂಶಿಕ ಮಾದರಿಯನ್ನು ನಿರೂಪಿಸಿದ್ದಾರೆ. ಕುರುಖ್ ಮತ್ತು ಬ್ರಾಹುಯಿ ಪಾಕಿಸ್ತಾನ ಮತ್ತು ಬಲೂಚಿಸ್ತಾನದಲ್ಲಿ ಅಸ್ತಿತ್ವದಲ್ಲಿರುವ ಭಾಷೆಗಳಾಗಿವೆ. ಈ ವಿಶ್ಲೇಷಣೆಯ ಪ್ರಕಾರ ಫೋಟೋ ದ್ರಾವಿಡ ವಂಶವಾಹಿಯು ಬಹುತೇಕ ಭಾರತೀಯರಲ್ಲಿ ಕಂಡುಬರುತ್ತದೆ. ಆದರೆ ಪ್ರಾಚೀನ ದಕ್ಷಿಣ ಭಾರತೀಯ ಮೂಲವಂಶ ಹೊಂದಿರುವ ಕೆಲವು ಬುಡಕಟ್ಟು ಜನಾಂಗಗಳಲ್ಲಿ ಮಾತ್ರ ಕಂಡುಬರುತ್ತಿಲ್ಲ. ಈ ಆವಿಷ್ಕಾರವು ಪ್ರತಿ ಜನ ಸಮುದಾಯದ ವಿಶಿಷ್ಟ ಅನುವಂಶೀಯ ಸಂಬಂಧಗಳ ಕುರಿತಾಗಿ ಅಧ್ಯಯನ ಮಾಡುವ ಅಗತ್ಯವನ್ನು ಒತ್ತಿ ಹೇಳುತ್ತದೆ. ಪೂರ್ವಜರ ಮೂಲಗಳ ಕುರಿತಾಗಿ ತಪ್ಪಾಗಿ ಅರ್ಥ ಮಾಡಿಕೊಳ್ಳುವುದನ್ನು ತಪ್ಪಿಸಲು ಸಮರ್ಪಕ ಮಾದರಿ ಸಂಗ್ರಹಣೆ ಅಗತ್ಯ ಇದೆ ಎಂದು ಪ್ರಬಂಧದಲ್ಲಿ ಉಲ್ಲೇಖಿಸಿದ್ದಾರೆ.

ನಶಿಸುತ್ತಿರುವ ಕೊರಗ ಜನಾಂಗ

ಕೊರಗ ಜನಾಂಗ ಅಸ್ಪಶ್ಯತೆ, ಪ್ರತ್ಯೇಕವಾಗಿ ಗುರುತಿಸಿಕೊಳ್ಳುವಿಕೆಯ ಕಾರಣದಿಂದಾಗಿ ಕರಾವಳಿ ಭಾಗದಲ್ಲಿ ನಶಿಸುತ್ತಿದೆ. 1991ರಲ್ಲಿ 19 ಸಾವಿರದಷ್ಟಿದ್ದ ಕೊರಗ ಜನಸಂಖ್ಯೆ 2015ರ ವೇಳೆಗೆ 15 ಸಾವಿರ, ಈಗ 12 ಸಾವಿರಕ್ಕೆ ತಲುಪಿದೆ. ಇವರೊಳಗಿನ ಅಂತರ್ವಿವಾಹ (ಎಂಡೋಗಮಿ) ಅನುವಂಶೀಯ ಕಾಯಿಲೆಗೆ ಕಾರಣವಾಗುತ್ತಿರುವುದು ಕಂಡುಬಂದಿದೆ. ಇವರ ಮೇಲೆ ನಡೆಸಿದ ಅಧ್ಯಯನದಲ್ಲಿ Loeys Diets Syndrome, Cockayne Syndrome, Epileptic Encephalopthy, COXPD  ಮುಂತಾದ ಅನುವಂಶೀಯ ಕಾಯಿಲೆಗಳಿಗೆ ತುತ್ತಾಗಿ ಜನರು ಅಕಾಲಿಕ ಮರಣವನ್ನಪ್ಪುವುದು ಕಂಡುಬಂದಿದೆ. ಈ ಜನರಲ್ಲಿ ಶಿಶು ಸಾವಿನ ಪ್ರಮಾಣ, ನರಸಂಬಂಧೀ ತೊಂದರೆಗಳು, ಕುರುಡುತನ, ಬಂಜೆತನ ಕಂಡುಬಂದಿದ್ದು, ಒಟ್ಟಾರೆ ಪರಿಣಾಮದಿಂದಾಗಿ ಜೀವಿತಾವಧಿ ಕಡಿಮೆಯಾಗಲು ಕಾರಣವಾಗಿದೆ ಎಂದು ಡಾ.ಜೈಸನ್ ಸಿಕ್ವೇರಾ ಅಭಿಪ್ರಾಯ ಪಟ್ಟಿದ್ದಾರೆ.

ಕೊರಗ ಜನಾಂಗ ಮೂಲ ನಿವಾಸಿಗಳಲ್ಲ

ಇದಲ್ಲದೆ, ಕೊರಗ ಜನಾಂಗವನ್ನು ಮೂಲ ನಿವಾಸಿಗಳು ಎಂದು ಹೇಳುವುದು ಸರಿಯಲ್ಲ. ಕರಾವಳಿ ಭಾಗದಲ್ಲಿರುವ ಬಹುತೇಕ ಜನರ ಪೂರ್ವಜರು 8-10 ಸಾವಿರ ವರ್ಷಗಳ ಹಿಂದೆ ಬೇರೆ ಕಡೆಯಿಂದ ವಲಸೆ ಬಂದವರು. ಹೀಗಾಗಿ ಯಾರನ್ನೂ ಮೂಲ ನಿವಾಸಿಗಳು ಎಂದು ಕರೆಯುವ ಪರಿಕಲ್ಪನೆ ಸರಿಯಾಗುವುದಿಲ್ಲ ಎಂದು ಜೈಸನ್ ಸಿಕ್ವೇರಾ ಹೇಳಿದರು. ಇದಲ್ಲದೆ, ಎಂಡೋಗಮಿ ಎನ್ನುವ ಸಮುದಾಯದ ಒಳಗಿನ ಅಂತರ್ ವಿವಾಹ ಪದ್ಧತಿ ಎಲ್ಲ ಕಡೆಯೂ ಇದೆ. ಆದರೆ ಸಣ್ಣ ಸಮುದಾಯದೊಳಗೆ ಇಂತಹ ಮದುವೆಗಳು ವಂಶವಾಹಿ ಪರಿಣಾಮಗಳಿಗೆ ಕಾರಣವಾಗುತ್ತದೆ. ಹತ್ತಿರದ ಸಂಬಂಧಿಕರ ನಡುವಿನ ಮದುವೆಗಳೂ ವಂಶವಾಹಿ ಕಾಯಿಲೆಗಳಿಗೆ ಹೇತುವಾಗುತ್ತದೆ ಎಂದು ಸಿಕ್ವೇರಾ ಹೇಳಿದರು.

ಸುದ್ದಿಗೋಷ್ಟಿಯಲ್ಲಿ ಸಂಶೋಧಕರಾದ ಡಾ.ಎಂ.ಎಸ್.ಮುಸ್ತಾಕ್, ಡಾ.ರಣಜಿತ್ ದಾಸ್, ಯೇನಪೋಯ ಸಂಶೋಧನಾ ತಂಡದ ನಿರ್ದೇಶಕಿ ಪ್ರೊ.ರೇಖಾ ಡಿ., ಮಂಗಳೂರು ವಿವಿಯ ಅಧಿಕಾರಿಗಳು ಉಪಸ್ಥಿತರಿದ್ದರು.

A decade-long study by Mangalore University and Yenepoya University researchers has revealed that the Koraga tribe of coastal Karnataka and Kerala descends from a 4,400-year-old Proto-Dravidian lineage, distinct from ancient Iranian, Andaman, and pastoral Central Asian populations. The findings, published in the European Journal of Human Genetics, challenge long-held beliefs about India’s indigenous origins.