ನಿರಂತರ ಮಳೆಗೆ ರಸ್ತೆಗೆ ಬಿದ್ದ ವಿದ್ಯುತ್ ಕಂಬ, ಮೆಸ್ಕಾಂ ನಿರ್ಲಕ್ಷ್ಯದ ನಡುವೆ ತಪ್ಪಿದ ಭಾರೀ ಅನಾಹುತ !

13-10-21 11:32 am       Mangalore Reporter   ಕರಾವಳಿ

ಸುರಿಯುತ್ತಿರುವ ಮಳೆಗೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾನಗರ ಲೇ ಔಟ್ ನಲ್ಲಿ ನಿನ್ನೆ ರಾತ್ರಿ ವಿದ್ಯುತ್ ಕಂಬವೊಂದು‌ ರಸ್ತೆಗುರುಳಿದ್ದು ಮೆಸ್ಕಾಂ ನಿರ್ಲಕ್ಷ್ಯದ ನಡುವೆಯೂ ಭಾರೀ ಅನಾಹುತ ತಪ್ಪಿದೆ. 

ಉಳ್ಳಾಲ, ಅ.13 : ಎಡೆ ಬಿಡದೆ ಸುರಿಯುತ್ತಿರುವ ಮಳೆಗೆ ಸೋಮೇಶ್ವರ ಪುರಸಭಾ ವ್ಯಾಪ್ತಿಯ ಅಂಬಿಕಾನಗರ ಲೇ ಔಟ್ ನಲ್ಲಿ ನಿನ್ನೆ ರಾತ್ರಿ ವಿದ್ಯುತ್ ಕಂಬವೊಂದು‌ ರಸ್ತೆಗುರುಳಿದ್ದು ಮೆಸ್ಕಾಂ ನಿರ್ಲಕ್ಷ್ಯದ ನಡುವೆಯೂ ಭಾರೀ ಅನಾಹುತ ತಪ್ಪಿದೆ. 

ಅಂಬಿಕಾ ನಗರದ ಲೇ ಔಟ್ ನ ಬೃಹತ್ ಮೋರಿಯ ಬದಿಯಲ್ಲಿ ಇದ್ದ ವಿದ್ಯುತ್ ಕಂಬವು ನಿನ್ನೆ ರಾತ್ರಿ 11.30 ವೇಳೆಗೆ ರಸ್ತೆಗುರುಳಿ ಬಿದ್ದಿದೆ. ನಿರಂತರ ಮಳೆಯಿಂದಾಗಿ ಮಣ್ಣು ಸಡಿಲಗೊಂಡು ವಿದ್ಯುತ್ ಕಂಬವು ರಸ್ತೆಗುರುಳಿ ಬಿದ್ದಿದೆ. ರಸ್ತೆಯಲ್ಲಿ ವಿದ್ಯುತ್ ಹೈಟೆನ್ಷನ್ ತಂತಿಗಳು ಬಿದ್ದಿದ್ದರೂ ವಿದ್ಯುತ್ ಕಡಿತ ಆಗಿರಲಿಲ್ಲ. ಈ ವೇಳೆ ಸಮಯ ಪ್ರಜ್ಞೆ ಮೆರೆದ ಸ್ಥಳೀಯರು ಮೆಸ್ಕಾಂನವರನ್ನ ಕಾಯದೆ ಪಕ್ಕದ ನಿವಾಸಿ ಲೈನ್ ಮ್ಯಾನ್ ಓರ್ವರನ್ನು ಕರೆಸಿ ವಿದ್ಯುತ್ ಕಡಿತಗೊಳಿಸಿದ್ದಾರೆ. ಘಟನೆಯಿಂದ ಸ್ಥಳೀಯರಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು ರಸ್ತೆಗೆ ಬಿದ್ದಿರುವ ವಿದ್ಯುತ್ ಕಂಬವನ್ನ ಸರಿಪಡಿಸುವ ಕಾರ್ಯ ನಡೆಯುತ್ತಿದೆ. ಫೋನ್ ಕರೆ ಸ್ವೀಕರಿಸದ ಮೆಸ್ಕಾಂ ಸಿಬಂದಿ 

ವಿದ್ಯುತ್ ಕಂಬ ರಸ್ತೆಗೆ ಬಿದ್ದ ಸಂದರ್ಭದಲ್ಲಿ ಅದೇ ದಾರಿಯಲ್ಲಿ ಬೈಕ್ ಸವಾರ ಬಂದಿದ್ದು ಸ್ಥಳೀಯ ಮಹಿಳೆಯೊಬ್ಬರು ಬೊಬ್ಬೆ ಹೊಡೆದು ತಡೆದಿದ್ದಾರೆ. ಪವರ್ ಸಪ್ಲೈ ನಿಲ್ಲಿಸಲು ಲೇ ಔಟ್ ನಿವಾಸಿ ಚರಣ್ ಪೂಜಾರಿಯವರು ಚೆಂಬುಗುಡ್ಡೆ ಮೆಸ್ಕಾಂನ ಸ್ಥಿರ ದೂರವಾಣಿಗೆ ಕರೆ ಮಾಡಿದರೂ ಯಾರೂ ಕರೆಯನ್ನ ಸ್ವೀಕರಿಸದ ಕಾರಣ ಮೆಸ್ಕಾಂನ ಟೋಲ್ ಫ್ರೀ ಸಂಖ್ಯೆಗೆ ಕರೆ ಮಾಡಿ ದೂರು ನೀಡಿದ್ದಾರೆ. ಸ್ಥಳೀಯರು ಬಳಿಕ ಮೆಸ್ಕಾಂ ಸಿಬ್ಬಂದಿಗಳು ಬರುವವರೆಗೂ ಕಾಯದೆ ಪಕ್ಕದ ನಿವಾಸಿ ಮೆಸ್ಕಾಂನ ಸಿಬ್ಬಂದಿಯೋರ್ವನನ್ನ ಕರೆಸಿ ಪವರ್ ಸಪ್ಲೈ ಸ್ಥಗಿತಗೊಳಿಸಿದ್ದಾರೆ. ಸಂದಿಗ್ಧ ಪರಿಸ್ಥಿತಿಯಲ್ಲಿ ಫೋನ್‌ ಕರೆಯನ್ನು ಸ್ವೀಕರಿಸದ ಚೆಂಬುಗುಡ್ಡೆ ಮೆಸ್ಕಾಂ ನ ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಜನಸಂಚಾರದ ಲೇ‌ ಔಟ್ ರಸ್ತೆಯಲ್ಲಿ ಹಗಲು ಹೊತ್ತಲ್ಲಿ ಈ ಅವಘಡ ನಡೆದಲ್ಲಿ ಭಾರೀ ಅನಾಹುತವಾಗುವ ಸಂಭವವಿತ್ತು.

Heavy rains in Mangalore electric poles tumble in Someshwara huge danger averted. Residents allege negligence of Mescom.