ನಿಧಿ ಆಸೆಯಿಂದ ನಾಗಬನದ ಹುತ್ತವನ್ನೇ ಅಗೆದ ಕಳ್ಳರು! ಇರಾ ಬಳಿಯ ನಾಗಬನದಲ್ಲಿ ದುಷ್ಕೃತ್ಯ

23-10-21 01:45 pm       Mangalore Reporter   ಕರಾವಳಿ

ನಿಧಿ ಆಸೆಯಿಂದ ಕಳ್ಳರು ಪುರಾತನ ಹುತ್ತವೊಂದನ್ನು ಅಗೆದಿರುವ ಘಟನೆ ಕೋಣಾಜೆ ಬಳಿಯ ಇರಾದಲ್ಲಿ ನಡೆದಿದ್ದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. 

ಮಂಗಳೂರು, ಅ.23 : ನಿಧಿ ಆಸೆಯಿಂದ ಕಳ್ಳರು ಪುರಾತನ ಹುತ್ತವೊಂದನ್ನು ಅಗೆದಿರುವ ಘಟನೆ ಕೋಣಾಜೆ ಬಳಿಯ ಇರಾದಲ್ಲಿ ನಡೆದಿದ್ದು ಶನಿವಾರ ಬೆಳಗ್ಗೆ ಬೆಳಕಿಗೆ ಬಂದಿದೆ. 

ಬಂಟ್ವಾಳ ತಾಲೂಕಿನ ಇರಾ ಶ್ರೀ ಕುಂಡಾವು ಸೋಮನಾಥೇಶ್ವರ ದೇವಸ್ಥಾನಕ್ಕೆ ಸಂಬಂಧಪಟ್ಟ ಬಪ್ಪರ ಕಂಬಳದ ನಾಗಬನದ ಪಕ್ಕದ ಹುತ್ತವೊಂದರಲ್ಲಿ ಕಳ್ಳರು ನಿಧಿಯ ಆಸೆಯಿಂದ ಭೂಮಿಯನ್ನು ಸುಮಾರು ಹತ್ತು ಅಡಿ ಆಗೆದಿದ್ದಾರೆ. 

ದೇವಸ್ಥಾನಕ್ಕೆ ಸಂಬಂಧಪಟ್ಟ ನಾಗಬನಕ್ಕೆ ನಾಗನಕಟ್ಟೆಯನ್ನು ಕಟ್ಟಲಾಗಿದೆ. ಕಳ್ಳರು ನಾಗನಕಟ್ಟೆಗೆ ಯಾವುದೇ ಹಾನಿಯನ್ನುಂಟು ಮಾಡಿಲ್ಲ. ಪ್ರಚಲಿತದಲ್ಲಿರುವಂತೆ ಈ ಭಾಗದಲ್ಲಿ ನಿಧಿ ಇದೆ ಎಂಬುದನ್ನು ಹಿಂದಿನ ಕಾಲದ ಜನರು ಆಡಿಕೊಳ್ಳುವುದನ್ನು ಕೇಳಿ ಅದು ಜನರ ಬಾಯಿಂದ ಕಿವಿಗೆ ಹರಡಿ ದುರಾಸೆಯಿಂದ ಕಳ್ಳರು ನಿಧಿ ಶೋಧ ನಡೆಸಿದ್ದಾರೆ ಎಂದು ಜನರಾಡಿಕೊಳ್ಳುತ್ತಿದ್ದಾರೆ. ಈ ಬಗ್ಗೆ ದೇವಸ್ಥಾನ ಸಮಿತಿ ಸಭೆ ಕರೆದು ಮುಂದಿನ ತೀರ್ಮಾನ ಕೈಗೊಳ್ಳಲಿದೆ ಎನ್ನಲಾಗಿದೆ. 

ಇವೆಲ್ಲದರ ಜೊತೆಯಲ್ಲಿ ಇರಾ ಸಾಮರಸ್ಯದ ಗ್ರಾಮವಾಗಿದ್ದು ಈ  ಘಟನೆಯನ್ನು ಯಾವುದೇ ಕಾರಣಕ್ಕೂ ಕೋಮು ಭಾವನೆಗೆ ಧಕ್ಕೆ ಬಾರದ ರೀತಿಯಲ್ಲಿ ಮುಂದುವರಿಸಬೇಕೆಂದು ಕ್ಷೇತ್ರದ ಸಮಿತಿ ಸದಸ್ಯರೊಬ್ಬರು ವಿನಂತಿಸಿಕೊಂಡಿದ್ದಾರೆ.

ನಾಗಬನದ ಆಸುಪಾಸಿನಲ್ಲಿ ಕಂಬಳ ಗದ್ದೆ ಇದ್ದು ಧಾರ್ಮಿಕ ನೆಲೆಗಟ್ಟಿನಲ್ಲಿ ಕಾರಣಿಕ ಬೀರುತ್ತಿರುವುದರಿಂದ ಅಲ್ಲೆಲ್ಲ ನಿಧಿ ಇರುತ್ತದೆ, ನಾಗ ಕಾವಲು ಕಾಯುತ್ತಾನೆ ಎಂಬ ಪ್ರತೀತಿ ಇದ್ದು ನಿಧಿ ಆಶೆಯಿಂದ ಕಳ್ಳರು ಭೂಮಿ ಅಗೆಯುವ ಪ್ರಕರಣ ಆಗಾಗ್ಗೆ ಕೇಳಿಬರುತ್ತಿದೆ. ನಿಧಿ ಸಿಗದೆ ನಿರಾಶರಾದರೂ ಭೂಮಿ ಅಗೆಯುವುದು ನಿಂತಿಲ್ಲ.

Mangalore Treasure hunt at Bantwal Ira Nagabana temple premises found.