ಮೂಡಾ ಆದೇಶ ಉಲ್ಲಂಘನೆ, ಕಾನೂನನ್ನೇ ಗಾಳಿಗೆ ತೂರಿ ಅಕ್ರಮ ಕಟ್ಟಡ ; ಅತ್ತಿಗೆ ಹೆಸರಲ್ಲಿ ಸ್ಥಳೀಯರನ್ನೇ ಕಣ್ಣೀರು ಹಾಕಿಸಿದ ಕಣೀರುತೋಟದ ಬಿಜೆಪಿ ಶೇಖ್ !!

27-10-21 01:29 pm       Mangaluru Correspondent   ಕರಾವಳಿ

ಕಾನೂನು, ನಿಯಮಗಳನ್ನ ಗಾಳಿಗೆ ತೂರಿ ಬಿಜೆಪಿ ಪುಢಾರಿಯೋರ್ವರು ಕಟ್ಟುತ್ತಿರುವ ಅಕ್ರಮ ಮನೆ ಕಟ್ಟಡವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ತೆರವಿಗೆ ಆದೇಶಿಸಿದರೂ, ಬಿಜೆಪಿ ಪುಢಾರಿ ತನ್ನ ಪ್ರಭಾವ ಬಳಸಿ ಸಕ್ರಮ ಮಾಡಲು ಹೊರಟಿದ್ದಾರೆ. 

ಉಳ್ಳಾಲ, ಅ.27 : ಕಾನೂನು, ನಿಯಮಗಳನ್ನ ಗಾಳಿಗೆ ತೂರಿ ಬಿಜೆಪಿ ಪುಢಾರಿಯೋರ್ವರು ಕಟ್ಟುತ್ತಿರುವ ಅಕ್ರಮ ಮನೆ ಕಟ್ಟಡವನ್ನು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರ ತೆರವಿಗೆ ಆದೇಶಿಸಿದರೂ, ಬಿಜೆಪಿ ಪುಢಾರಿ ತನ್ನ ಪ್ರಭಾವ ಬಳಸಿ ಸಕ್ರಮ ಮಾಡಲು ಹೊರಟಿದ್ದಾರೆ. 

ಕೊಲ್ಯ ಕಣೀರು ತೋಟ ಸರ್ವೆ ನಂಬ್ರ 13/13 ರ 2 ಸೆಂಟ್ಸ್ ಜಾಗದಲ್ಲಿ ಕೋಟೆಕಾರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಶೇಖರ್ ಕಣೀರ್ತೋಟ ಎಂಬವರ ಅತ್ತಿಗೆ (ಅಣ್ಣನ ಪತ್ನಿ) ಮೂಡಾದ ನಿಯಮಗಳನ್ನ ಗಾಳಿಗೆ ತೂರಿ, ರಸ್ತೆಯನ್ನು ಅತಿಕ್ರಮಿಸಿ ಮನೆ ಕಟ್ಟುತ್ತಿದ್ದು, ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರವು ಕಟ್ಟಡದ ತೆರವಿಗೆ ಆದೇಶಿಸಿದರೂ ಮಾಜಿ ಅಧ್ಯಕ್ಷ ತನ್ನ ಎಲ್ಲಾ ಶಕ್ತಿ ಬಳಸಿ ಅಕ್ರಮ ಕಟ್ಟಡ ಕಟ್ಟಿಯೇ ತೀರುವುದಾಗಿ ಮುಂದುವರಿದಿದ್ದಾರೆ. 

ಕೊಲ್ಯ ಕಣೀರುತೋಟದ ಸರ್ವೆ ನಂಬರ್ 13/13 ರಲ್ಲಿರುವ ಫರ್ನೀಚರ್ ಅಂಗಡಿಯನ್ನೊಳಗೊಂಡ 2 ಸೆಂಟ್ಸ್ ಜಾಗವನ್ನ ದಿನೇಶ್ ಎಂಬವರಿಂದ ಶೇಖರ ಕಣೀರ್ ತೋಟ ಅವರ ಅತ್ತಿಗೆ ಕುಮುದಾ ಅವರು ಖರೀದಿಸಿದ್ದರು. ಪಂಚಾಯತ್ ಮಾಜಿ ಅಧ್ಯಕ್ಷರೂ ಆಗಿರುವ ಬಿಜೆಪಿ ಪುಢಾರಿಯು ಅತ್ತಿಗೆ ಖರೀದಿಸಿದ ಜಾಗದಲ್ಲಿ ಅಂಗಡಿಯಿದ್ದರೂ ಮೂಡಾಕ್ಕೆ ಖಾಲಿ ಜಾಗವೆಂದು ಬಿಂಬಿಸಿ, ಇಕ್ಕಟ್ಟಾದ ಜಾಗದಲ್ಲಿ ಹಾಸಿಗೆಯಿಂದ ಕಾಲು ಹೊರಚಾಚಿದ ರೀತಿ ಮನೆ ನಿರ್ಮಾಣ ಮಾಡುತ್ತಿದ್ದಾರೆ. ಒಂದಿಂಚೂ ಸೆಟ್ ಬ್ಯಾಕ್ ಇಲ್ಲದೆ ಪಕ್ಕದಲ್ಲಿರುವ ಅಂಗಡಿಗೆ ತಾಗಿಕೊಂಡೇ ಮನೆ ಗೋಡೆ ನಿರ್ಮಿಸಿದ್ದೂ ಅಲ್ಲದೆ ಶೌಚಾಲಯದ ಇಂಗು ಗುಂಡಿಯನ್ನ ಸಾರ್ವಜನಿಕರು ಓಡಾಡುವ ರಸ್ತೆ ಬದಿಯಲ್ಲೇ ನಿರ್ಮಿಸಿ ಉದ್ಧಟತನ ಮೆರೆದಿದ್ದಾರೆ. 

ಮನೆಯ ತಾರಸಿ ಪೂರ್ಣಗೊಂಡರೆ ಹಿಂದಿನ ಮನೆಯವರಿಗೂ ಇದರಿಂದ ಸಮಸ್ಯೆ ಎದುರಾಗಲಿದೆ. ಇದಕ್ಕಾಗಿ ಹಿಂಬದಿ ಮನೆ ನಿವಾಸಿ ಮುಖೇಶ್ ಕುಮಾರ್ ಎಂಬವರು ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರಕ್ಕೆ ಲಿಖಿತ ದೂರು ನೀಡಿದ್ದರು. ದೂರು ಸ್ವೀಕರಿಸಿದ ಮೂಡಾ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಅಲ್ಲಿ 2 ಸೆಂಟ್ಸ್ ಜಾಗ ಭರ್ತಿ‌ ಇಲ್ಲದಿರುವುದು ಗಮನಕ್ಕೆ ಬಂದಿದೆ. ಅಧಿಕಾರಿಗಳು ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ ಮೂಲಕ ಮನೆ ನಿರ್ಮಾಣ ಕಾಮಗಾರಿಯನ್ನ ತಡೆ ಹಿಡಿದಿದ್ದು ಅಕ್ರಮ ಕಟ್ಟಡವನ್ನ ತೆರವಿಗೆ ಆದೇಶಿಸಿದ್ದಾರೆ. 

ಅಕ್ರಮ ಕಟ್ಟಡ ಕಾಮಗಾರಿಯನ್ನ ಕಳೆದ ಅಕ್ಟೋಬರ್ 13 ನೇ ತಾರೀಖಿನಂದು ಅಧಿಕಾರಿಗಳು ನಿಲ್ಲಿಸಿದ್ದರೂ ಮರುದಿನವೇ ಶೇಖರ್ ಕಣೀರ್ ತೋಟ ಮತ್ತೆ ಕಾಮಗಾರಿ ನಡೆಸಿರುವುದಾಗಿ ಹಿಂಬಂದಿ ಮನೆ ನಿವಾಸಿ ಸಂತೋಷ್ ತುಪ್ಪೇಕಲ್ ಅವರು ಉಳ್ಳಾಲ ಪೊಲೀಸರಿಗೆ ದೂರು ನೀಡಿದ್ದಾರೆ. ಬಿಜೆಪಿ ಪುಢಾರಿ ಶೇಖರ್ ಕಣೀರುತೋಟ ಸರಕಾರದ ನಿಯಮಗಳನ್ನ ಗಾಳಿಗೆ ತೂರಿ ದರ್ಪ ತೋರಿಸುತ್ತಿದ್ದಾಗಿ ಸಂತೋಷ್ ಆರೋಪಿಸಿದ್ದಾರೆ. ‌

ಪಂಚಾಯತ್ ಮುಖ್ಯಾಧಿಕಾರಿ ಅಕ್ರಮದಲ್ಲಿ ಶಾಮೀಲು ! 

ಕೋಟೆಕಾರು ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಪ್ರಭಾಕರ ಪಾಟೀಲ, ಕಣೀರು ತೋಟದ ಅಕ್ರಮ ಮನೆ ನಿರ್ಮಾಣದಲ್ಲಿ ಶಾಮೀಲಾಗಿರುವ ಆರೋಪ ಕೇಳಿಬಂದಿದೆ. ಕುಮುದಾ ಅವರು ಖರೀದಿಸಿದ ಜಾಗದಲ್ಲಿ 2 ಸೆಂಟ್ಸ್ ಜಾಗ ಇಲ್ಲದಿದ್ದರೂ ಕನ್ವರ್ಷನ್ ಗೋಸ್ಕರ 2 ಸೆಂಟ್ಸ್ ಭರ್ತಿ ಇದೆಯೆಂದು ಬಿಂಬಿಸಲಾಗಿದೆ. ಜಾಗದಲ್ಲಿ ಮೊದಲೇ ಅಂಗಡಿ ಇದ್ದರೂ ಖಾಲಿ ಪ್ರದೇಶವೆಂದು ಹೇಳಿ ಮುಖ್ಯಾಧಿಕಾರಿ ಪಾಟೀಲ ಮನೆ ಅಡಿಪಾಯ ಹಾಕಲು ಮೂಡಾದಿಂದ ಆನ್ ಲೈನ್ ಪರವಾನಿಗೆ ಮಾಡಿಸಿದ ಆರೋಪ ಕೇಳಿ ಬಂದಿದೆ. ಕೋಟೆಕಾರು ಪಂಚಾಯತ್ ಮುಖ್ಯಾಧಿಕಾರಿ ಪಾಟೀಲನ ಕರಾಮತ್ತಿನ ಬಗ್ಗೆ ಹಿಂಬದಿ ಮನೆಯವರು ಜಿಲ್ಲಾಧಿಕಾರಿ ರಾಜೇಂದ್ರ ಅವರಿಗೆ ದೂರು ನೀಡಿದ್ದು ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮುಖ್ಯಾಧಿಕಾರಿ ಪಾಟೀಲನಿಗೆ ಮಂಗಳಾರತಿ ಮಾಡಿದ್ದರು.

Mangalore Illegal construction at Kaneer Thota by BJP former Kotekar panchayat president Shekar. Though the Muda has given orders not to construct through the influence of political leaders he's building house illegally in the name of his Sister in law at ullal.