ತೊಕ್ಕೊಟ್ಟು ; ರಸ್ತೆ ಅಗಲೀಕರಣ, ಅಸಮರ್ಪಕ ತಡೆಗೋಡೆ ಕಾಮಗಾರಿ, ಕಾಲುವೆ ಬಿಟ್ಟು ಅಂಗಡಿ, ಮನೆಗಳಿಗೆ ಮಳೆ ನೀರು ನುಗ್ಗಿ ಅವಾಂತರ 

07-11-21 02:01 pm       Mangaluru Correspondent   ಕರಾವಳಿ

ತೊಕ್ಕೊಟ್ಟಿನಿಂದ ಕುತ್ತಾರು ತನಕದ ಮಂಗಳೂರು ವಿ.ವಿ ರಸ್ತೆಯು ಅಗಲೀಕರಣಗೊಳ್ಳುತ್ತಿದ್ದು , ಬಬ್ಬುಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಸಮರ್ಪಕ ತಡೆಗೋಡೆ ಕಾಮಗಾರಿಯಿಂದಾಗಿ ಮಳೆ ನೀರು ಆಸುಪಾಸಿನ ಅಂಗಡಿ, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. 

ಉಳ್ಳಾಲ, ನ.7: ತೊಕ್ಕೊಟ್ಟಿನಿಂದ ಕುತ್ತಾರು ತನಕದ ಮಂಗಳೂರು ವಿ.ವಿ ರಸ್ತೆಯು ಅಗಲೀಕರಣಗೊಳ್ಳುತ್ತಿದ್ದು , ಬಬ್ಬುಕಟ್ಟೆಯಲ್ಲಿ ನಿರ್ಮಾಣಗೊಳ್ಳುತ್ತಿರುವ ಅಸಮರ್ಪಕ ತಡೆಗೋಡೆ ಕಾಮಗಾರಿಯಿಂದಾಗಿ ಮಳೆ ನೀರು ಆಸುಪಾಸಿನ ಅಂಗಡಿ, ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. 

ತೊಕ್ಕೊಟ್ಟು- ಕುತ್ತಾರು ವಿವಿ ರಸ್ತೆ ಅಗಲೀಕರಣ ಆಗುತ್ತಿರುವುದರಿಂದ ಬಬ್ಬುಕಟ್ಟೆಯಲ್ಲಿ ರಸ್ತೆ ಅಂಚಿಗೆ ತಡೆಗೋಡೆ ನಿರ್ಮಾಣ ಕಾರ್ಯ ನಡೆಯುತ್ತಿದೆ. ಆದರೆ ಮುನ್ನೆಚ್ಚರಿಕೆ ವಹಿಸದೆ ತಡೆಗೋಡೆ ನಿರ್ಮಾಣ ಕೆಲಸ ನಡೆಸುತ್ತಿರುವ ಪರಿಣಾಮ ನಿನ್ನೆ ರಾತ್ರಿ ಸುರಿದ ಮಳೆ ನೀರು ಪರಿಸರದ ಅನೇಕ ಮನೆಗಳಿಗೆ ನುಗ್ಗಿ ಅವಾಂತರ ಸೃಷ್ಟಿಸಿದೆ. ನಿನ್ನೆ ರಾತ್ರಿ ಸುರಿದ ಭಾರೀ ಮಳೆಗೆ ಬಬ್ಬುಕಟ್ಟೆ ರಸ್ತೆಯ ಪಕ್ಕದ ಪಿಲಾರು ಹೊಸಗದ್ದೆ ಪರಿಸರದ ಇಪ್ಪತ್ತಕ್ಕೂ ಹೆಚ್ಚು ಮನೆಗಳು, ಅಂಗಡಿಗಳಿಗೆ ಮಳೆ ನೀರು ನುಗ್ಗಿದೆ. 

ಪಿಲಾರು ಹೊಸಗದ್ದೆ ನಿವಾಸಿ ಎವರೆಸ್ಟ್ ಡಿ ಸೋಜಾ ಅವರ ವಾಣಿಜ್ಯ ಸಂಕೀರ್ಣ, ಮನೆಗಳಿಗೆ ಮಳೆ ನೀರು ನುಗ್ಗಿದ್ದಲ್ಲದೆ , ಮನೆ ಅಂಗಳದ ಬಾವಿಗೂ ಮಳೆಯ ಕೊಳಚೆ ನೀರು ಸೇರಿ ಕಲುಷಿತಗೊಂಡಿದೆ. ಪಿಲಾರು ಹೊಸಗದ್ದೆ ಪರಿಸರದಲ್ಲಿ ಉಳ್ಳಾಲ ನಗರಸಭೆ ನಿರ್ಮಿಸಿರುವ ಚರಂಡಿ ಕಾಮಗಾರಿಯೂ ಅವೈಜ್ಞಾನಿಕವಾಗಿದ್ದು ಕಳೆದ ವರ್ಷವೂ ಇದೇ ರೀತಿ ಮಳೆ ನೀರು ರಸ್ತೆಯಲ್ಲೇ ಉಕ್ಕಿ ಹರಿದು ಮನೆಗಳಿಗೆ ನುಗ್ಗಿದೆಯೆಂದು ಸ್ಥಳೀಯರು ಆರೋಪಿಸಿದ್ದಾರೆ. 

ಸ್ಥಳಕ್ಕೆ ರಸ್ತೆ ಅಗಲೀಕರಣ ಕಾಮಗಾರಿಯ ಗುತ್ತಿಗೆ ಕಂಪನಿಯ ಮುಖ್ಯಸ್ಥ ಭೇಟಿ ನೀಡಿದ್ದು ಸ್ಥಳೀಯರು ಆತನನ್ನ ತರಾಟೆಗೆ ತೆಗೆದಿದ್ದಾರೆ. ತಡೆಗೋಡೆ ಕಾಮಗಾರಿ ನಡೆಸುವಾಗ ಮುನ್ನೆಚ್ಚರಿಕೆ ವಹಿಸದೆ ನಿರ್ಲಕ್ಷ್ಯ ವಹಿಸಿದ ಫಲವಾಗಿ ಮಳೆನೀರು ರಾಜಕಾಲುವೆ ಬಿಟ್ಟು ಮನೆಗಳಿಗೆ ನುಗ್ಗಿರುವುದಾಗಿ ಸ್ಥಳೀಯರು ಆರೋಪಿಸಿದ್ದಾರೆ. ಸಂಜೆಯೊಳಗೆ ಸಮಸ್ಯೆಯನ್ನ ಬಗೆಹರಿಸಿ ಕೊಡುವುದಾಗಿ ಗುತ್ತಿಗೆ ಕಂಪನಿ ಮುಖ್ಯಸ್ಥರು ಸ್ಥಳೀಯರಿಗೆ ಭರವಸೆ ಕೊಟ್ಟಿದ್ದಾರೆ.

Road Widening creates havoc after heavy rains, Houses lashed with rainwater in Thokottu.