ನಕಲಿ ಫೇಸ್ಬುಕ್ ಖಾತೆ ಸೃಷ್ಟಿಸಿ ಇಸ್ಲಾಂ ಬಗ್ಗೆ ಅವಹೇಳನ ; ಯಾರದೋ ತಪ್ಪಿಗೆ ಸೌದಿಯಲ್ಲಿ ಜೈಲು ಸೇರಿದ ಮಂಗಳೂರಿನ ಯುವಕ !

12-11-21 11:30 am       Mangaluru correspondent   ಕರಾವಳಿ

ಸೌದಿ ಅರೇಬಿಯಾದ ದೊರೆ ಮತ್ತು ಇಸ್ಲಾಂ ಬಗ್ಗೆ ಫೇಸ್ ಬುಕ್‌ನಲ್ಲಿ ಅವಹೇಳನ ಪೋಸ್ಟ್‌ ಹಾಕಿದ್ದಾರೆ ಎಂದು ಆರೋಪಿಸಿ ಅಲ್ಲಿ ನೌಕರಿಯಲ್ಲಿದ್ದ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಶೈಲೇಶ್‌ ಕುಮಾರ್‌ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ.

ಮಂಗಳೂರು, ನ.12: ಸೌದಿ ಅರೇಬಿಯಾದ ದೊರೆ ಮತ್ತು ಇಸ್ಲಾಂ ಬಗ್ಗೆ ಫೇಸ್ ಬುಕ್‌ನಲ್ಲಿ ಅವಹೇಳನ ಪೋಸ್ಟ್‌ ಹಾಕಿದ್ದಾರೆ ಎಂದು ಆರೋಪಿಸಿ ಅಲ್ಲಿ ನೌಕರಿಯಲ್ಲಿದ್ದ ಮಂಗಳೂರಿನ ಬಿಕರ್ನಕಟ್ಟೆ ನಿವಾಸಿ ಶೈಲೇಶ್‌ ಕುಮಾರ್‌ ಅವರನ್ನು ಜೈಲಿನಲ್ಲಿ ಇರಿಸಲಾಗಿದೆ. ಶೈಲೇಶ್ ಹೆಸರಲ್ಲಿ ಯಾರೋ ನಕಲಿ ಖಾತೆ ತೆರೆದು, ಇಸ್ಲಾಂ ಬಗ್ಗೆ ಪೋಸ್ಟ್ ಮಾಡಿದ್ದು ಈಗ ಜೈಲು ಸೇರುವಂತಾಗಿದೆ. 

ಈ ಬಗ್ಗೆ ಬಿಜೆಪಿ ಮುಖಂಡ ಜಿತೇಂದ್ರ ಕೊಟ್ಟಾರಿ ಸುದ್ದಿಗೋಷ್ಟಿ ನಡೆಸಿದ್ದು ನಕಲಿ ಫೇಸ್‌ಬುಕ್‌ ಜಾಲದಿಂದಾಗಿ ತಪ್ಪು ಮಾಡದ ವ್ಯಕ್ತಿ ಶಿಕ್ಷೆ ಅನುಭವಿಸುವಂತಾಗಿದೆ ಎಂದು ಹೇಳಿದ್ದಾರೆ. ಶೈಲೇಶ್‌ ಅವರನ್ನು ಬಿಡುಗಡೆಗೊಳಿಸಲು ಪ್ರಧಾನಮಂತ್ರಿ, ಕೇಂದ್ರ ವಿದೇಶಾಂಗ ಇಲಾಖೆ ಮತ್ತು ರಾಜ್ಯ ಸರಕಾರ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದರು. 

ದೂರು ನೀಡಲು ಹೋಗಿದ್ದಾಗಲೇ ಪೊಲೀಸರಿಂದ ಬಂಧನ 

25 ವರ್ಷಗಳಿಂದ ಸೌದಿಯ ಕಂಪೆನಿ ಒಂದರಲ್ಲಿ ಉದ್ಯೋಗದಲ್ಲಿದ್ದ ಶೈಲೇಶ್‌ ಹೆಸರಿನಲ್ಲಿ ನಕಲಿ ಫೇಸ್‌ಬುಕ್‌ ಖಾತೆ ಸೃಷ್ಟಿಸಿ ಅದರಲ್ಲಿ ಇಸ್ಲಾಂಗೆ ವಿರುದ್ಧವಾಗಿ ಮತ್ತು ಸೌದಿ ದೊರೆಗೆ ಅವಹೇಳನ ಮಾಡುವ ಪೋಸ್ಟ್‌ಗಳನ್ನು ಯಾರೋ ಹಾಕಿದ್ದರು. ಫೇಸ್‌ಬುಕ್‌ನಲ್ಲಿ ನಕಲಿ ಐಡಿ ಸೃಷ್ಟಿಸುವ ಕೆಲವು ದಿನಗಳ ಮೊದಲು ಅನಾಮಿಕ ವ್ಯಕ್ತಿಯೋರ್ವ ಕರೆ ಮಾಡಿ ನಿನ್ನ ಫೇಸ್‌ಬುಕ್‌ ಖಾತೆಯನ್ನು ಕೂಡಲೇ ಅಳಿಸಿ ಹಾಕಬೇಕು. ಇಲ್ಲವಾದಲ್ಲಿ ನಿನ್ನನ್ನು ಸೌದಿಯಲ್ಲಿ ಉಳಿಯಲು ಬಿಡುವುದಿಲ್ಲ. ಅಲ್ಲೇ ಮುಗಿಸುತ್ತೇನೆ ಎಂದು ಜೀವ ಬೆದರಿಕೆ ಹಾಕಿದ್ದ. ಇದರಿಂದ ಬೆದರಿದ ಶೈಲೇಶ್‌ ಕೂಡಲೇ ತನ್ನ ಫೇಸ್‌ಬುಕ್‌ ಖಾತೆಯನ್ನು ಅಳಿಸಿ ಹಾಕಿದ್ದರು. ಅದಾದ ಬಳಿಕ ಕೆಲವೇ ದಿನಗಳಲ್ಲಿ ನಕಲಿ ಖಾತೆ ಸೃಷ್ಟಿಯಾಗಿದ್ದು ಅದರಲ್ಲಿ ಉದ್ದೇಶಪೂರ್ವಕವಾಗಿ ಈ ರೀತಿ ಬರೆಯಲಾಗಿತ್ತು. 

ಈ ಬಗ್ಗೆ ಶೈಲೇಶ್ ತಾನು ಕೆಲಸ ಮಾಡುತ್ತಿದ್ದ ಸಂಸ್ಥೆಯ ಎಚ್‌ಆರ್‌ ಮ್ಯಾನೇಜರ್‌ಗೆ ಮಾಹಿತಿ ನೀಡಿದ್ದಾರೆ. ಮ್ಯಾನೇಜರ್‌ ಸೂಚನೆಯಂತೆ ಸ್ಥಳೀಯ ಪೊಲೀಸರಿಗೆ ದೂರು ನೀಡಲು ತೆರಳಿದ ಶೈಲೇಶ್‌ ಅವರನ್ನೇ ಸೌದಿ ಪೊಲೀಸರು ಬಂಧಿಸಿದ್ದರು. ಈ ಬಗ್ಗೆ ಸಂಬಂಧಿಕರು ಅಂತರ್ಜಾಲದ ಮೂಲಕ ಸೌದಿ ಅರೇಬಿಯಾದಲ್ಲಿರುವ ಇಂಡಿಯನ್‌ ಕಾನ್ಸುಲೇಟ್‌ಗೆ ದೂರು ನೀಡಿದ್ದರು. ಆದರೆ ಈ ದೂರು ಪಡೆದ ರಾಯಭಾರ ಕಚೇರಿ ಯಾವುದೇ ಕಾನೂನು ಕ್ರಮ ಜರಗಿಸಿಲ್ಲ ಎಂದು ಜಿತೇಂದ್ರ ಕೊಟ್ಟಾರಿ ಆರೋಪಿಸಿದರು. 

ಭಾರತ ಸರಕಾರದ ವಿದೇಶಾಂಗ ಇಲಾಖೆ ಈ ಬಗ್ಗೆ ಗಮನ ಹರಿಸಿ ಶೈಲೇಶ್‌ ಅವರನ್ನು ಶೀಘ್ರ ಜೈಲಿನಿಂದ ಬಂಧಮುಕ್ತ ಗೊಳಿಸಲು ಕ್ರಮ ಕೈಗೊಳ್ಳಬೇಕು. ನಕಲಿ ಫೇಸ್‌ಬುಕ್‌ ಖಾತೆಯನ್ನು ಪತ್ತೆಹಚ್ಚಿ ಆರೋಪಿಯನ್ನು ಬಂಧಿಸುವ ನಿಟ್ಟಿನಲ್ಲಿ ಮಂಗಳೂರು ಪೊಲೀಸ್‌ ಆಯುಕ್ತರು ವಿಶೇಷವಾಗಿ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಶೈಲೇಶ್‌ ಅವರ ಪತ್ನಿ ಕವಿತಾ, ಸಂಬಂಧಿ ಅನುಷ್ಕಾ ಕೊಟ್ಟಾರಿ, ಶ್ರೇಯಸ್‌ ಪತ್ರಿಕಾಗೋಷ್ಠಿಯಲ್ಲಿದ್ದರು.

Miscreants create fake facebook ID Deformation post against Islam youth arrested in Saudi for reason