ಒಂದು ವರ್ಷದಲ್ಲಿ 2.90 ಕೋಟಿ ಮೌಲ್ಯದ ಸೊತ್ತು ವಶಕ್ಕೆ ; 105 ದ್ವಿಚಕ್ರ ವಾಹನ, 20 ಕಾರು, 135 ಮೊಬೈಲ್, 20 ಕೇಜಿ ಬೆಳ್ಳಿ, 3 ಕೇಜಿ ಚಿನ್ನ ಮರಳಿ ಹಸ್ತಾಂತರ, ತಮ್ಮ ಕಣ್ಣನ್ನೇ ನಂಬದಾದರು ಕಳಕೊಂಡವರು !

25-11-21 10:21 pm       HK news Desk   ಕರಾವಳಿ

ಒಟ್ಟು 2.90 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಾರೀಸುದಾರರಿಗೆ ಮರಳಿ ಒಪ್ಪಿಸಲು ಮುಂದಾಗಿದ್ದಾರೆ.

ಮಂಗಳೂರು, ನ.25: ಅದೊಂದು ಅಪೂರ್ವ ಕಾರ್ಯಕ್ರಮ. ಕಳೆದೊಂದು ವರ್ಷದಲ್ಲಿ ಮಂಗಳೂರು ನಗರ ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಕಳವಾಗಿದ್ದ ವಸ್ತುಗಳು, ಮನೆಗಳ್ಳತನ, ಸರಗಳ್ಳತನ, ದರೋಡೆಗೆ ಒಳಗಾಗಿದ್ದ ಚಿನ್ನಾಭರಣ, ದ್ವಿಚಕ್ರ ವಾಹನ, ಕಾರು, ಮೊಬೈಲ್ ಫೋನ್ ಇನ್ನಿತರ ಬೆಲೆಬಾಳುವ ವಸ್ತು ಸೇರಿದಂತೆ ಒಟ್ಟು 2.90 ಕೋಟಿ ಮೌಲ್ಯದ ಸಾಮಗ್ರಿಗಳನ್ನು ಪೊಲೀಸರು ವಾರೀಸುದಾರರಿಗೆ ಮರಳಿ ಒಪ್ಪಿಸಲು ಮುಂದಾಗಿದ್ದಾರೆ.

ನಗರದ ಪುರಭವನದಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹಲವರು ತಮ್ಮ ಕಳವಾದ ಚಿನ್ನಾಭರಣಗಳನ್ನು ಮರಳಿ ಪಡೆಯುವಾಗ ತಮ್ಮ ಕಣ್ಣುಗಳನ್ನೇ ನಂಬದಾಗಿದ್ದರು. ಪೊಲೀಸ್ ಕಮಿಷನರ್ ಶಶಿಕುಮಾರ್ ನೇತೃತ್ವದಲ್ಲಿ ನಡೆದ ಕಾರ್ಯಕ್ರಮದಲ್ಲಿ 2020-21ನೇ ಸಾಲಿನಲ್ಲಿ ಪೊಲೀಸರು ವಿವಿಧ ಪ್ರಕರಣಗಳಲ್ಲಿ ವಶಕ್ಕೆ ಪಡೆದ ಚಿನ್ನಾಭರಣ ಮತ್ತಿತರ ವಸ್ತುಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಒಂದು ವರ್ಷದಲ್ಲಿ ಮಂಗಳೂರು ವ್ಯಾಪ್ತಿಯ 12 ಠಾಣೆಗಳಲ್ಲಿ 105 ದ್ವಿಚಕ್ರ ವಾಹನಗಳು, 20 ನಾಲ್ಕು ಚಕ್ರದ ವಾಹನಗಳು, ಒಂದು ಲಾರಿ, 135 ಮೊಬೈಲ್ ಫೋನ್, 20.490 ಕೇಜಿ ಬೆಳ್ಳಿ ಆಭರಣ ಇನ್ನಿತರ ವಸ್ತುಗಳು, 3 ಕೇಜಿ 598 ಗ್ರಾಮ್ ಚಿನ್ನಾಭರಣ, 38,67,791 ರೂಪಾಯಿ ನಗದು ವಶಕ್ಕೆ ಪಡೆದಿದ್ದು, ಸದ್ರಿ ಪ್ರಕರಣಗಳಲ್ಲಿ ಭಾಗಿಯಾದ 726 ಮಂದಿ ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಪೊಲೀಸ್ ಕಮಿಷನರ್ ಮಾಹಿತಿ ನೀಡಿದ್ದಾರೆ.

ಕಾರ್ಯಕ್ರಮಕ್ಕೆ ಬಂದಿದ್ದ ಕೆಲವರು ಸ್ಥಳದಲ್ಲೇ ತಮ್ಮ ಕಳವಾದ ವಸ್ತುಗಳನ್ನು ಮರಳಿ ಪಡೆದರು. ಹೆಚ್ಚಿನ ಮಂದಿಗೆ ತಮ್ಮ ಚಿನ್ನಾಭರಣ ಕೈಗೆ ಸಿಗುತ್ತಿದ್ದಂತೆ ಕಣ್ಣಲ್ಲಿ ನೀರು ಬಂದಿತ್ತು. ನಡೆದುಕೊಂಡು ಹೋಗುವಾಗ ಸರಗಳ್ಳತನ ಆಗಿದ್ದ ಪ್ರಕರಣಗಳಲ್ಲಿ ತಮ್ಮ ಚಿನ್ನದ ಸರ ಮರಳಿ ಸಿಗಬಹುದೆಂಬ ನಿರೀಕ್ಷೆ ಯಾರಿಗೂ ಇರುವುದಿಲ್ಲ. ಅಂಥದರಲ್ಲಿ ಈಗ ಚಿನ್ನ ಸಿಕ್ಕವರು ತಮ್ಮ ಬಂಗಾರವನ್ನು ನೋಡಿಯೇ ಕಣ್ತುಂಬಿಕೊಂಡರು. ಸಾಮಾನ್ಯವಾಗಿ ದರೋಡೆ, ಕಳವು ಇನ್ನಿತರ ಪ್ರಕರಣಗಳಲ್ಲಿ ಅದರ ವಾರೀಸುದಾರರು ತಮ್ಮ ಚಿನ್ನಾಭರಣಗಳನ್ನು ಮರಳಿ ಪಡೆಯಬೇಕಿದ್ದರೆ ಕೋರ್ಟಿನಲ್ಲಿ ಕಾನೂನು ಪ್ರಕ್ರಿಯೆ ಮುಗಿಸಬೇಕಿತ್ತು. ಆದರೆ, ಇಲ್ಲಿ ಮಂಗಳೂರು ಪೊಲೀಸ್ ಕಮಿಷನರ್ ಕೋರ್ಟ್ ಅನುಮತಿ ಪಡೆದು ನೇರವಾಗಿ ವಾರೀಸುದಾರರಿಗೆ ಹಿಂದಿರುಗಿಸುವ ಪ್ರಕ್ರಿಯೆ ನಡೆಸಿದ್ದಾರೆ.  

ಈ ಸಂದರ್ಭದಲ್ಲಿ ಮಾತನಾಡಿದ ಪೊಲೀಸ್ ಕಮಿಷನರ್ ಶಶಿಕುಮಾರ್, ಒಂದು ವರ್ಷದಲ್ಲಿ ವಶಕ್ಕೆ ಪಡೆದ ವಸ್ತುಗಳನ್ನು ಅವುಗಳ ವಾರೀಸುದಾರರಿಗೆ ಹಿಂತಿರುಗಿಸುತ್ತಿದ್ದೇವೆ. 2.90 ಕೋಟಿ ಮೌಲ್ಯದ ವಸ್ತುಗಳ ಪೈಕಿ ಒಂದಷ್ಟನ್ನು ಇಂದು ಹಸ್ತಾಂತರ ಮಾಡುತ್ತಿದ್ದೇವೆ. ಜನರು ಕಷ್ಟಪಟ್ಟು ದುಡಿದ ಹಣದಲ್ಲಿ ಚಿನ್ನಾಭರಣ, ಮತ್ತಿತರ ವಸ್ತುಗಳನ್ನು ಖರೀದಿ ಮಾಡಿರುತ್ತಾರೆ. ಕಳವಾದ ಚಿನ್ನ ಮರಳಿ ಸಿಗುತ್ತಿದೆ ಅನ್ನುವಾಗ ಕಳಕೊಂಡವರು ತುಂಬ ಖುಷಿ ಪಡುತ್ತಾರೆ. ಕಷ್ಟದಲ್ಲಿ ದುಡಿದ ಹಣದಲ್ಲಿ ತೆಗೆದಿಟ್ಟ ಚಿನ್ನ ಆಪ್ತರ ಮದುವೆ ದಿವಸವೇ ಕಳವಾದಾಗ ಎಷ್ಟು ನೋವಾಗೋದಿಲ್ಲ. ಕೆಲವರಿಗೆ ಚಿನ್ನ, ಮೊಬೈಲ್, ಬೈಕ್ ಮೇಲೆ ಅದರ ಮೌಲ್ಯಕ್ಕಿಂತ ಸೆಂಟಿಮೆಂಟು ಹೆಚ್ಚಿರುತ್ತದೆ. ಆದರೆ ನಮ್ಮ ಪೊಲೀಸ್ ಸಿಬಂದಿಯ ಅವಿರತ ಶ್ರಮ ಮತ್ತು ತಾಂತ್ರಿಕ ನೈಪುಣ್ಯದಿಂದ ಕಳವಾದ ವಸ್ತುಗಳನ್ನು ಮರಳಿ ವಶಕ್ಕೆ ಪಡೆಯಲಾಗಿದೆ. ಸೊತ್ತುಗಳನ್ನು ಮರಳಿ ಪಡೆಯುವಲ್ಲಿ ಸಿಬಂದಿ ತೋರುವ ಪಾರದರ್ಶಕ ಕಾರ್ಯವೂ ಇದರಲ್ಲಿ ಪ್ರಮುಖವಾಗಿರುತ್ತದೆ. ಅದನ್ನು ನಾವು ಶ್ಲಾಘಿಸಬೇಕಾಗುತ್ತದೆ ಎಂದು ಹೇಳಿದರು.

ಜನಸ್ನೇಹಿ ವ್ಯವಸ್ಥೆ ನಮ್ಮ ಗುರಿ

ಜನಸ್ನೇಹಿ ಪೊಲೀಸ್ ವ್ಯವಸ್ಥೆಯನ್ನು ಜಾರಿಗೆ ತರಬೇಕು ಅನ್ನುವುದು ನಮ್ಮ ಪ್ರಯತ್ನ. ಅದರಿಂದ ಪೊಲೀಸರು ಮತ್ತು ನಾಗರಿಕರ ನಡುವಿನ ಸಂಬಂಧ ಚೆನ್ನಾಗಿರುತ್ತದೆ ಎಂದು ಹೇಳಿದ ಶಶಿಕುಮಾರ್, ಡ್ರಗ್ ಪೆಡ್ಲರ್, ಗಾಂಜಾ ವಹಿವಾಟು ಮಾಡುತ್ತಿರುವ ನೂರಾರು ಮಂದಿಯನ್ನು ಬಂಧಿಸಿದ್ದೇವೆ. ಅವರು ಮತ್ತೆ ಡ್ರಗ್ಸ್ ಚಟುವಟಿಕೆಯಲ್ಲಿ ತೊಡಗಿಸದಂತೆ ಪ್ರೇರಣೆ ನೀಡುವುದನ್ನೂ ಮಾಡುತ್ತಿದ್ದೇವೆ. ಆಮೂಲಕ ಅವರಿಗೆ ಹೊಸ ಬದುಕನ್ನು ನೀಡಲು ಪ್ರಯತ್ನ ಪಡುತ್ತೇವೆ. ಇದಕ್ಕೆಲ್ಲ ಸಾರ್ವಜನಿಕರ ಸಹಕಾರವೂ ಅಗತ್ಯವಾಗಿರುತ್ತದೆ. ಆರೋಪಿಗಳ ಪತ್ತೆ ಕಾರ್ಯಾಚರಣೆ, ವಿವಿಧ ಕಡೆಗಳಲ್ಲಿ ಕ್ರೈಮ್ ಆದಾಗ ಆರೋಪಿಗಳನ್ನು ಬಂಧಿಸುವಾಗ ಸಾರ್ವಜನಿಕರ ಮಾಹಿತಿಯೂ ಅಗತ್ಯವಾಗಿರುತ್ತದೆ. ಎಲ್ಲ ಸಂದರ್ಭದಲ್ಲಿಯೂ ಪೊಲೀಸರು ತಮ್ಮ ನೈಪುಣ್ಯ ಬಳಸಿಕೊಂಡು ಉತ್ತಮ ಕೆಲಸ ಮಾಡಿದ್ದಾರೆ. ಒಂದು ವರ್ಷದಲ್ಲಿ ವಿವಿಧ ಪ್ರಕರಣ ಭೇದಿಸಿದ ಪೊಲೀಸ್ ಸಿಬಂದಿಗೆ ಸರ್ಟಿಫಿಕೇಟ್ ಮತ್ತು ಗೌರವ ನೀಡಲಾಗುವುದು ಎಂದು ಹೇಳಿದರು.

ಮುಖ್ಯ ಅತಿಥಿಯಾಗಿದ್ದ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ., ಇದೊಂದು ವಿಭಿನ್ನ ರೀತಿಯ ಕಾರ್ಯಕ್ರಮವಾಗಿದ್ದು, ಇದನ್ನು ರೂಪಿಸಿದ ಪೊಲೀಸ್ ಕಮಿಷನರ್ ಅವರನ್ನು ಅಭಿನಂದಿಸುತ್ತೇನೆ. ವಶಕ್ಕೆ ಪಡೆದ ಸೊತ್ತುಗಳನ್ನು ಪ್ರದರ್ಶನಕ್ಕಿಟ್ಟು ಸಾರ್ವಜನಿಕರು ಮತ್ತು ವಿದ್ಯಾರ್ಥಿಗಳಿಗೆ ಕಳವಿನ ಬಗ್ಗೆ ಮುಂಜಾಗ್ರತೆ ಕ್ರಮಗಳನ್ನೂ ತಿಳಿಹೇಳಿದ್ದಾರೆ. ಸಾಕಷ್ಟು ಸಂದರ್ಭದಲ್ಲಿ ಸಿಸಿಟಿವಿಗಳು ಕಳವು ಪ್ರಕರಣಗಳನ್ನು ಭೇದಿಸಲು ನೆರವಾಗುತ್ತವೆ. ಅದರ ಜೊತೆಗೆ, ಸಾರ್ವಜನಿಕರು, ಅಲ್ಲಿನ ಮನೆಮಂದಿ ನೀಡುವ ಮಾಹಿತಿಗಳು ಆರೋಪಿಗಳ ಪತ್ತೆಗೆ ಸಹಕಾರ ನೀಡುತ್ತದೆ ಎಂದು ಹೇಳಿದರು.

ಒಂದಷ್ಟು ಮಂದಿಗೆ ಚಿನ್ನಾಭರಣ, ಇನ್ನೊಂದಷ್ಟು ಮಂದಿಗೆ ತಮ್ಮ ದ್ವಿಚಕ್ರ ವಾಹನಗಳ ಕೀಗಳನ್ನು ನೇರವಾಗಿ ಪೊಲೀಸ್ ಕಮಿಷನರ್ ಮತ್ತು ಜಿಲ್ಲಾಧಿಕಾರಿ ಹಸ್ತಾಂತರ ಮಾಡಿದರು. ಇಂತಹ ಪ್ರಕರಣಗಳಲ್ಲಿ ಆರೋಪಿಗಳಿಂದ ಸೊತ್ತುಗಳನ್ನು ವಶಕ್ಕೆ ಪಡೆದ ಬಳಿಕ ಕೋರ್ಟಿಗೆ ಹಾಜರುಪಡಿಸಿ, ಮತ್ತೆ ಅವುಗಳನ್ನು ವಾರೀಸುದಾರರಿಗೆ ಒಪ್ಪಿಸುವುದರಿಂದ ಪೊಲೀಸರ ಮೇಲಿನ ನಂಬಿಕೆ, ವಿಶ್ವಾಸ ಹೆಚ್ಚುತ್ತದೆ. ಇದಕ್ಕಾಗಿ ಈ ರೀತಿಯ ಕಾರ್ಯಕ್ರಮ ಏರ್ಪಡಿಸಿದ್ದೇವೆ ಎಂದು ಡಿಸಿಪಿ ಹರಿರಾಮ್ ಶಂಕರ್ ಹೇಳಿದರು.

ಕಳೆದ ಜೂನ್ ತಿಂಗಳಲ್ಲಿ ಮನೆಗಳ್ಳತನದಿಂದ 11 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳೆದುಕೊಂಡಿದ್ದ ಅನ್ಸಾರ್ ಜೋಕಟ್ಟೆ ಪೂರ್ತಿಯಾಗಿ ಚಿನ್ನಾಭರಣಗಳನ್ನು ಮರಳಿ ಪಡೆದಿರುವುದು ತುಂಬ ಖುಷಿಯಲ್ಲಿದ್ದರು. ಇದೊಂದು ನನಗೆ ದೊಡ್ಡ ಪಾಠವನ್ನೂ ಕಲಿಸಿತು. ನನ್ನ ಚಿನ್ನಾಭರಣಗಳನ್ನು ಈಗ ಪೂರ್ತಿಯಾಗಿ ಬ್ಯಾಂಕ್ ಲಾಕರ್ ನಲ್ಲಿಯೇ ಇಡುತ್ತಿದ್ದೇನೆ. ಬೆಲೆಬಾಳುವ ವಸ್ತುಗಳನ್ನು ಹೇಗೆ ಬಳಸಬೇಕು, ಹೇಗೆ ತೆಗೆದಿಡಬೇಕು ಎನ್ನುವ ಬಗ್ಗೆಯೂ ನಮ್ಮನ್ನು ಈ ಪ್ರಕರಣ ಅಲರ್ಟ್ ಮಾಡಿದೆ ಎಂದು

ಆಕರ್ಷಿಸಿದ ಲ್ಯಾಬ್ರಡಾರ್ ಶ್ವಾನ !

ಪ್ರದರ್ಶನದ ನಡುವೆ ಡಾಗ್ ಸ್ಕ್ವಾಡ್ ತಂಡದ ಲ್ಯಾಬ್ರಡಾರ್ ಶ್ವಾನ ಗೀತಾ ಎಲ್ಲರ ಆಕರ್ಷಣೆಯಾಗಿತ್ತು. ವಿದ್ಯಾರ್ಥಿಗಳು ಸೇರಿದಂತೆ ಹಲವರು ಶ್ವಾನದ ಜೊತೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಂಡರು. ಕಾರ್ಯಕ್ರಮದಲ್ಲಿ ಸಿಸಿಬಿ ವಿಭಾಗದ ಎಎಸ್ಐ ವಿಜಯ್ ಕಾಂಚನ್ ಅವರನ್ನು ವೇಟ್ ಲಿಫ್ಟಿಂಗ್ ಕ್ಷೇತ್ರದಲ್ಲಿ ರಾಷ್ಟ್ರ ಮಟ್ಟದಲ್ಲಿ ಪದಕ ಪಡೆದಿದ್ದಕ್ಕಾಗಿ ಸನ್ಮಾನಿಸಲಾಯಿತು. ಈಜು ಕ್ಷೇತ್ರದಲ್ಲಿ ಸಾಧನೆ ಮಾಡಿರುವ ಕದ್ರಿ ಠಾಣೆಯ ಎಎಸ್ಐ ಎಸ್.ಶೆಟ್ಟಿ ಅವರ ಮಗ ಚಿಂತನ್ ಅವರನ್ನೂ ಸನ್ಮಾನಿಸಲಾಯಿತು. ಕದ್ರಿ ಠಾಣೆಯ ಹೆಡ್ ಕಾನ್ಸ್ ಟೇಬಲ್ ಜಯಾನಂದ್ ಪ್ರಾರ್ಥನೆ ಹಾಡಿದರು. ಅಪರಾಧ ವಿಭಾಗದ ಡಿಸಿಪಿ ದಿನೇಶ್ ಕುಮಾರ್ ಸ್ವಾಗತಿಸಿ, ಬರ್ಕೆ ಠಾಣೆಯ ಇನ್ ಸ್ಪೆಕ್ಟರ್ ಜ್ಯೋತಿರ್ಲಿಂಗ ನಿರೂಪಿಸಿದರು. ರೋಶನಿ ನಿಲಯ ಸಾಮಾಜಿಕ ಕಾರ್ಯ ವಿಭಾಗದಲ್ಲಿ ಅಪರಾಧ ಶಾಸ್ತ್ರದ ಬಗ್ಗೆ ಅಧ್ಯಯನ ನಡೆಸುತ್ತಿರುವ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಪೊಲೀಸರ ಕಾರ್ಯಶೈಲಿ ಬಗ್ಗೆ ಮಾಹಿತಿಗಳನ್ನು ಪಡೆದುಕೊಂಡರು.

2020ರ ಸಾಲಿನಲ್ಲಿ ಅಪರಾಧ ದಾಖಲಾತಿ ಹೀಗಿದೆ – ಡಕಾಯಿತಿ–3 (ಮೂರೂ ಪತ್ತೆ), ರಾಬರಿ – 13 (12 ಪತ್ತೆ), ಸರ ಕಳ್ಳತನ -15(ಪತ್ತೆ 5), ಮನೆಗಳ್ಳತನ ಹಗಲಿನಲ್ಲಿ 12- (ಪತ್ತೆ ಕಾರ್ಯ5), ರಾತ್ರಿ ವೇಳೆಯ ಮನೆಗಳ್ಳತನ- 77- (ಪತ್ತೆ 39), ಮನೆಗಳವು- 15(ಪತ್ತೆ 3), ಸಾಧಾರಣ ಕಳವು – 185(ಪತ್ತೆ 117), ದನ ಕಳ್ಳತನ- 16(ಪತ್ತೆ 12), ಒಟ್ಟು 353 ಪ್ರಕರಣಗಳಲ್ಲಿ 212 ಪತ್ತೆ ಆಗಿದೆ.

2021ರ ಸಾಲಿನ ಅಪರಾಧ ಪ್ರಕರಣಗಳು- ಡಕಾಯಿತಿ – 13(ಪತ್ತೆ 12), ರಾಬರಿ -24(ಪತ್ತೆ 14), ಸರ ಕಳ್ಳತನ- 14 (ಪತ್ತೆ 9), ಮನೆ ಕಳ್ಳತನ ಹಗಲಿನಲ್ಲಿ – 8 (ಪತ್ತೆ 1), ರಾತ್ರಿ ವೇಳೆ ಮನೆ ಕಳವು – 51(ಪತ್ತೆ ಕಾರ್ಯ 15), ಮನೆಗಳವು- 11(ಪತ್ತೆ 4), ಸಾಧಾರಣ ಕಳವು- 135(ಪತ್ತೆ 64), ದನ ಕಳವು- 99 (ಪತ್ತೆ 7), ಒಟ್ಟು 277 ಪ್ರಕರಣಗಳಲ್ಲಿ 137 ಪತ್ತೆ ಕಾರ್ಯ ಆಗಿದೆ.

The police returned Rs 2.9 crore worth of valuables which were stolen within the jurisdiction of the city police commissionerate which were found during the course of investigation, to their genuine owners. This was done on Thursday November 25 after obtaining court permission.