ಚಿನ್ನ ಪರಿವೀಕ್ಷಕನಿಂದಲೇ ವಂಚನೆ ; ಬರೋಬ್ಬರಿ 52 ಮಂದಿ ಹೆಸರಲ್ಲಿ ನಕಲಿ ಚಿನ್ನ ಇಟ್ಟು ಮೋಸ ! ಅರಸಿನಮಕ್ಕಿ ಗ್ರಾಮೀಣ ವಿಕಾಸ ಬ್ಯಾಂಕಿಗೆ 38 ಲಕ್ಷ ದೋಖಾ! ಬ್ಯಾಂಕ್ ಸಿಬಂದಿಯೇ ಶಾಮೀಲು ! 

29-11-21 04:24 pm       HK Desk news   ಕರಾವಳಿ

ಚಿನ್ನ ಪರೀಕ್ಷೆ ನಡೆಸುವಾತನೇ ಕಳ್ಳನಾದರೆ ಹೇಗೆ ? ಬೆಳ್ತಂಗಡಿ ತಾಲೂಕಿನ ಕಟ್ಟಕಡೆಯ ಗ್ರಾಮ ಅರಸಿನಮಕ್ಕಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಚಿನ್ನ ಪರಿವೀಕ್ಷಕನೇ ಸರದಿಯಂತೆ ಗ್ರಾಹಕರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದಾನೆ..

ಮಂಗಳೂರು, ನ.29: ಬ್ಯಾಂಕಿನಲ್ಲಿ ಚಿನ್ನ ಅಡವಿಟ್ಟು ಸಾಲ ಪಡೆಯಲು ಬರುವ ಗ್ರಾಹಕರ ಚಿನ್ನವನ್ನು ಅಸಲಿಯೋ, ನಕಲಿಯೋ ಎಂದು ತಪಾಸಣೆ ಮಾಡಲು ಅಲ್ಲೊಬ್ಬ ಚಿನ್ನದ ಪರಿವೀಕ್ಷಕ ಇರುತ್ತಾನೆ. ಆತನನ್ನು ಬ್ಯಾಂಕ್, ಇಂತಿಷ್ಟು ಸಂಬಳ ಕೊಟ್ಟು ತನ್ನ ಸಿಬಂದಿಯ ರೀತಿಯಲ್ಲೇ ನೋಡಿಕೊಳ್ಳುತ್ತದೆ. ಆದರೆ, ಚಿನ್ನ ಪರೀಕ್ಷೆ ನಡೆಸುವಾತನೇ ಕಳ್ಳನಾದರೆ ಹೇಗೆ ? ಬೆಳ್ತಂಗಡಿ ತಾಲೂಕಿನ ಕಟ್ಟಕಡೆಯ ಗ್ರಾಮ ಅರಸಿನಮಕ್ಕಿಯಲ್ಲಿ ಇಂಥದ್ದೊಂದು ಪ್ರಕರಣ ಬೆಳಕಿಗೆ ಬಂದಿದ್ದು, ಚಿನ್ನ ಪರಿವೀಕ್ಷಕನೇ ಸರದಿಯಂತೆ ಗ್ರಾಹಕರ ಹೆಸರಲ್ಲಿ ನಕಲಿ ಚಿನ್ನ ಅಡವಿಟ್ಟು ಲಕ್ಷಾಂತರ ರೂಪಾಯಿ ಹಣವನ್ನು ಪಡೆದು ವಂಚಿಸಿದ್ದಾನೆ.

ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕಿನ ಅರಸಿನಮಕ್ಕಿ ಶಾಖೆಯಲ್ಲಿ ವಂಚನೆ ಪ್ರಕರಣ ನಡೆದಿದೆ. ಬ್ಯಾಂಕ್ ಶಾಖೆಯಲ್ಲಿ ಚಿನ್ನ ಪರಿವೀಕ್ಷಕನಾಗಿರುವ ಮನ್ಮಥ ಆಚಾರಿ ಎಂಬಾತ 2010ರಿಂದ 2019ರ ವರೆಗೂ ತನ್ನ ಮನ್ಮಥ ವಿದ್ಯೆಯನ್ನು ತೋರಿಸಿದ್ದು, ಅರಸಿನಮಕ್ಕಿ, ಶಿಬಾಜೆ, ಹತ್ಯಡ್ಕ ಗ್ರಾಮಸ್ಥರಿಗೆ ಟೋಪಿ ಹಾಕಿದ್ದಾನೆ. ಬರೋಬ್ಬರಿ 52 ಮಂದಿ ಮನ್ಮಥ ರಾಯನ ವಂಚನೆಗೆ ಒಳಗಾಗಿದ್ದು, ಈಗ ಬ್ಯಾಂಕಿನಿಂದ ಪೊಲೀಸ್ ಕೇಸು ಎದುರಿಸುತ್ತಿದ್ದಾರೆ. ಈ ಬಗ್ಗೆ ಮಂಗಳೂರಿನಲ್ಲಿ ಸುದ್ದಿಗೋಷ್ಟಿ ಕರೆದು ಪ್ರಕರಣದಲ್ಲಿ ವಂಚನೆಗೊಳಗಾದವರೇ ಸ್ವತಃ ಮಾಧ್ಯಮಕ್ಕೆ ಮಾಹಿತಿ ನೀಡಿದ್ದಾರೆ. ಅಲ್ಲದೆ, ಈ ವಂಚನೆಯಲ್ಲಿ ಬ್ಯಾಂಕ್ ಸಿಬಂದಿ ಮತ್ತು ಮ್ಯಾನೇಜರುಗಳೇ ಶಾಮೀಲಾಗಿದ್ದಾರೆ. ಈ ಬಗ್ಗೆ ಧರ್ಮಸ್ಥಳ ಪೊಲೀಸರಿಗೆ ದೂರು ನೀಡಿದರೆ, ಅವರು ದೂರು ಸ್ವೀಕರಿಸುತ್ತಿಲ್ಲ ಎಂದು ಅಲವತ್ತುಕೊಂಡಿದ್ದಾರೆ.

2010ರಿಂದ 19ರ ನಡುವೆ ದಾಮೋದರ ನಾಯಕ್, ಜಯ ಎಸ್., ಎ.ಎನ್.ಗಿರಿಧರ ಮತ್ತು ದಿನೇಶ್ ಎಂಬವರು ಬ್ಯಾಂಕಿನ ಮ್ಯಾನೇಜರ್ ಆಗಿ ಕೆಲಸ ಮಾಡಿದ್ದು, ಇದೇ ಅವಧಿಯಲ್ಲಿ 52 ಮಂದಿ ಸರಣಿಯಂತೆ ಚಿನ್ನ ಪರಿವೀಕ್ಷಕನ ಹೆಸರಲ್ಲಿ ಸಾಲ ಪಡೆದಿದ್ದಾರೆ. ಚಿನ್ನ ಪರೀಕ್ಷೆ ಮಾಡುವ ಮನ್ಮಥ ಆಚಾರಿ, ತನ್ನ ಪರಿಚಯದ ಬ್ಯಾಂಕಿನ ಗ್ರಾಹಕರಲ್ಲಿ ತನಗೆ ಹಣದ ಅಗತ್ಯವಿದೆ, ನನಗೆ ನೇರವಾಗಿ ಬ್ಯಾಂಕಿನಲ್ಲಿ ಸಾಲ ಪಡೆಯಲು ಆಗುವುದಿಲ್ಲ. ಪತ್ನಿಗೆ ಹುಷಾರಿಲ್ಲವೆಂದು ಹೇಳಿ ನನ್ನ ಚಿನ್ನವನ್ನು ಅಡವಿಟ್ಟು ನಿಮ್ಮ ಹೆಸರಲ್ಲಿ ಸಾಲ ತೆಗೆದುಕೊಡುವಂತೆ ನಂಬಿಸುತ್ತಿದ್ದ. ಇದೇ ರೀತಿ ಬಡ ಮಹಿಳೆಯರು ಸೇರಿದಂತೆ ಅರಸಿಮಕ್ಕಿ, ಶಿಬಾಜೆ, ಹತ್ಯಡ್ಕ, ಶಿಶಿಲ ಗ್ರಾಮದ 52 ಜನರ ಹೆಸರಲ್ಲಿ ಹಣ ಸಾಲ ಪಡೆದಿದ್ದಾನೆ. ಹೀಗೆ ಒಟ್ಟು 38.50 ಲಕ್ಷ ರೂಪಾಯಿ ಸಾಲ ಪಡೆದು ವಂಚನೆ ಎಸಗಿದ್ದಾನೆ.

2019ರಲ್ಲಿ ರವೀಂದ್ರ ಪೈ ಎಂಬವರು ಬ್ಯಾಂಕಿಗೆ ಮ್ಯಾನೇಜರ್ ಆಗಿ ಬಂದಾಗ, ವಂಚನೆ ಪ್ರಕರಣ ಬೆಳಕಿಗೆ ಬಂದಿದೆ. ಬ್ಯಾಂಕ್ ಶಾಖೆ ಇರುವ ಕಟ್ಟಡದ ಮಾಲಕ ಧರ್ಣಪ್ಪ ಗೌಡರ ಹೆಸರಿನಲ್ಲಿಯೂ ಮನ್ಮಥ ಆಚಾರಿ ಚಿನ್ನ ಇಟ್ಟು ಸಾಲ ಪಡೆದಿದ್ದ. ಸಾಲದ ಮರುಪಾವತಿ ಬಗ್ಗೆ ಕಟ್ಟಡದ ಮಾಲಕರಲ್ಲಿ ಬ್ಯಾಂಕ್ ಮ್ಯಾನೇಜರ್ ಕೇಳಿದಾಗ, ಅದು ತನ್ನ ಚಿನ್ನವಲ್ಲ. ಆಚಾರಿ ನನ್ನ ಹೆಸರಲ್ಲಿ ಇಟ್ಟಿದ್ದ ಚಿನ್ನ ಎಂದು ನಿಜ ವಿಷಯ ತಿಳಿಸಿದ್ದಾರೆ. ಈ ಬಗ್ಗೆ ಸಂಶಯ ಬಂದು ಪರಿಶೀಲನೆ ನಡೆಸಿದಾಗ, ಒಂದೇ ಬ್ಯಾಂಕಿನಲ್ಲಿ 52 ಮಂದಿ ಗ್ರಾಹಕರ ಹೆಸರಲ್ಲಿ ಮನ್ಮಥ ಆಚಾರಿ ನಕಲಿ ಚಿನ್ನ ಇಟ್ಟಿದ್ದು ಪತ್ತೆಯಾಗಿದೆ.

ಪ್ರತಿ ಬಾರಿಯೂ ಚಿನ್ನದ ಸಾಲದ ಬಡ್ಡಿ ಕಟ್ಟಿ ನವೀಕರಣ ಮಾಡಲಾಗುತ್ತಿತ್ತು. ಹೀಗಾಗಿ ಚಿನ್ನ ತಮ್ಮ ಹೆಸರಲ್ಲಿ ಇಟ್ಟಿದ್ದರೂ, ಗ್ರಾಹಕರಿಗೆ ಮನ್ಮಥ ರಾಯನ ನಕಲಿತನ ಅರಿವಿಗೆ ಬಂದಿರಲಿಲ್ಲ. ಚಿನ್ನ ಇಟ್ಟು ಇವರ ಖಾತೆಗೆ ಬರುತ್ತಿದ್ದ ಹಣವನ್ನು ಬ್ಯಾಂಕ್ ಕಚೇರಿಯಲ್ಲೇ ಡ್ರಾ ಮಾಡಿಸಿ, ಮನ್ಮಥ ಆಚಾರಿ ಪಡೆಯುತ್ತಿದ್ದ. ಹೀಗಾಗಿ ಬ್ಯಾಂಕ್ ಸಿಬಂದಿಗೆ ಈ ಬಗ್ಗೆ ತಿಳಿದಿರುವ ಸಾಧ್ಯತೆಯೇ ಹೆಚ್ಚು. ಅಲ್ಲದೆ, ಬ್ಯಾಂಕಿನಲ್ಲಿ ಮ್ಯಾನೇಜರ್ ಬದಲಾದ ಸಂದರ್ಭದಲ್ಲಿ ಚಿನ್ನದ ತಪಾಸಣೆಯನ್ನೂ ಮಾಡಬೇಕಾಗುತ್ತದೆ. ಅದನ್ನು ಅಲ್ಲಿನ ಮ್ಯಾನೇಜರ್ ಮಾಡಿರಲಿಲ್ಲ ಯಾಕೆ..? ಈ ಪೈಕಿ ಎ.ಎನ್.ಗಿರಿಧರ ಎಂಬವರು ಹೆಚ್ಚು ಕಾಲ ಬ್ಯಾಂಕಿನ ಮ್ಯಾನೇಜರ್ ಆಗಿದ್ದರು. ಈಗ ವಂಚನೆ ಆಗಿರುವುದರಲ್ಲಿ ಅವರ ಪಾಲೂ ಇದೆ. ಅವರಿಂದಲೇ ವಸೂಲಿ ಮಾಡಬೇಕೆಂದು ಸುದ್ದಿಗೋಷ್ಠಿ ನಡೆಸಿದ ಅರಸಿನಮಕ್ಕಿ ಗ್ರಾಮ ಪಂಚಾಯತ್ ಅಧ್ಯಕ್ಷ ನವೀನ್ ರೆಖ್ಯ ಆಗ್ರಹಿಸಿದ್ದಾರೆ.

ಬ್ಯಾಂಕ್ ಕಿರುಕುಳದಿಂದ ಒಬ್ಬನ ಆತ್ಮಹತ್ಯೆ

ಕಳೆದ ಬಾರಿ ಮನ್ಮಥ ಆಚಾರಿಯ ಚಿನ್ನ ಅಡವಿಟ್ಟು ವಂಚನೆಗೆ ಒಳಗಾಗಿದ್ದ ಶಿಬಾಜೆಯ ಅಶ್ವಥ್ ಎಂಬವರು, ಬ್ಯಾಂಕಿನ ಕಿರುಕುಳಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿತ್ತು. ಅಶ್ವಥ್ ಹೆಸರಲ್ಲಿ 75 ಸಾವಿರ ರೂ. ಸಾಲ ಪಡೆದಿದ್ದು, 2019ರಲ್ಲಿ ವಂಚನೆ ತಿಳಿದ ಬಳಿಕ ಹಣವನ್ನು ಮರಳಿಸುವಂತೆ ಬ್ಯಾಂಕ್ ಸಿಬಂದಿ ಒತ್ತಾಯಿಸಿದ್ದಾರೆ. ಇದರಿಂದ ತೀವ್ರ ನೊಂದ ಬಡ ಯುವಕ ಅಶ್ವಥ್ ಸಾವಿಗೆ ಶರಣಾಗಿದ್ದರು. ಇವರು ಸಾವನ್ನಪ್ಪಿದ ಬಳಿಕ ಬ್ಯಾಂಕ್ ಸಿಬಂದಿ, ಅಶ್ವಥ್ ಪತ್ನಿಗೆ ಹಣ ಕಟ್ಟುವಂತೆ ನೋಟೀಸ್ ಕಳಿಸಿದ್ದಾರೆ ಎಂದು ವಂಚನೆಗೊಳಗಾದ ಕರುಣಾಕರ ಶಿಶಿಲ ಹೇಳಿದರು.

ವಂಚನೆಯಲ್ಲಿ ಬ್ಯಾಂಕ್ ಸಿಬಂದಿ ಶಾಮೀಲು

ಬ್ಯಾಂಕ್ ಮ್ಯಾನೇಜರ್, ನಮ್ಮ 52 ಮಂದಿಯ ವಿರುದ್ಧ ಧರ್ಮಸ್ಥಳ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಆರೋಪಿ ಮನ್ಮಥ ಆಚಾರಿಯನ್ನು ಬಂಧಿಸಿ ವಿಚಾರಣೆ ನಡೆಸಿದ್ದಾರೆ. ಈ ವೇಳೆ, ತಾನೇ 52 ಮಂದಿಯ ಹೆಸರಲ್ಲಿ ನಕಲಿ ಚಿನ್ನವಿಟ್ಟು ವಂಚನೆ ಎಸಗಿದ್ದಾಗಿ ಲಿಖಿತ ಹೇಳಿಕೆ ನೀಡಿದ್ದಾನೆ. ಆಮೂಲಕ ತನ್ನ ವಂಚನೆಯನ್ನು ಒಪ್ಪಿಕೊಂಡಿದ್ದಾನೆ. ಹೀಗಿದ್ದರೂ, ಬ್ಯಾಂಕ್ ಸಿಬಂದಿ ನಮ್ಮಲ್ಲಿ ಹಣ ಮರಳಿಸುವಂತೆ ಹೇಳುತ್ತಿದ್ದಾರೆ. ಅಲ್ಲದೆ, ನಮ್ಮ ಖಾತೆಗಳನ್ನು ಸೀಜ್ ಮಾಡಿದ್ದಾರೆ. ನಮ್ಮ ಕುಟುಂಬಸ್ಥರಾಗಲೀ, ಮಕ್ಕಳಾಗಲೀ ಶಿಕ್ಷಣ ಸಾಲ ಪಡೆಯುವುದಕ್ಕೂ ನಿರಾಕರಿಸುತ್ತಿದ್ದಾರೆ. ಪೊಲೀಸರು ಈ ಹಿಂದಿನ ಬ್ಯಾಂಕ್ ಸಿಬಂದಿಯನ್ನಾಗಲೀ, ಮ್ಯಾನೇಜರನ್ನಾಗಲೀ ವಿಚಾರಣೆ ನಡೆಸಿಲ್ಲ ಎಂದು ಕರುಣಾಕರ ಅಲವತ್ತುಕೊಂಡಿದ್ದಾರೆ.

ತಪ್ಪೊಪ್ಪಿಗೆ ಪತ್ರ ನೀಡಿರುವ ಆರೋಪಿ

ಬ್ಯಾಂಕಿನಲ್ಲಿ ಮರು ಪಾವತಿಗೆ ಒತ್ತಡ ಹೆಚ್ಚಿದಾಗ ಉಪ್ಪಿನಂಗಡಿ, ಪುತ್ತೂರಿನ ಸಂತೆಯಿಂದ ರೋಲ್ಡ್ ಗೋಲ್ಡ್ ಸರಗಳನ್ನು ತಂದು ಬಡ ಮಹಿಳೆಯರ ಹೆಸರಲ್ಲಿ ಅದೇ ಬ್ಯಾಂಕಿನಲ್ಲಿ ಅಡವಿಟ್ಟು ಹಣ ಪಡೆದಿದ್ದನ್ನೂ ತಪ್ಪೊಪ್ಪಿಗೆ ಪತ್ರದಲ್ಲಿ ತಿಳಿಸಿದ್ದಾನೆ. ಹಾಗಿದ್ದರೂ, ಆತನಿಂದ ಬ್ಯಾಂಕ್ ಆಗಲೀ, ಪೊಲೀಸರಾಗಲೀ ಆಸ್ತಿಯನ್ನು ಸೀಜ್ ಮಾಡಿಸಿಲ್ಲ. ನಮ್ಮ ಹೆಸರಲ್ಲಿ ಸಾಲ ಪಡೆದು ಮನೆ ಕಟ್ಟಿಸಿದ್ದಾನೆ. ಜುವೆಲ್ಲರಿ ಮಾಡಿದ್ದಾನೆ. ಈಗ ಪ್ರಕರಣ ಕೋರ್ಟಿನಲ್ಲಿದೆ, ಜಾಮೀನಲ್ಲಿ ಹೊರಬಂದಿರುವ ಆರೋಪಿ ಅರಸಿನಮಕ್ಕಿ ಬಿಟ್ಟು ಬೆಳ್ತಂಗಡಿಗೆ ಹೋಗಿ ನೆಲೆಸಿದ್ದಾನೆ ಎಂದು ಸುಧೀರ್ ಕುಮಾರ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಶಿಶಿಲ ಪಂಚಾಯತ್ ಅಧ್ಯಕ್ಷ ಸಂದೀಪ್ ಶಿಶಿಲ, ಶಶೀಂದ್ರ ಆಚಾರ್ಯ, ಗಣೇಶ್ ಕೆ. ಹೊಸ್ತೋಟ, ಕರುಣಾಕರ ಶಿಶಿಲ ಉಪಸ್ಥಿತರಿದ್ದರು. ಸುದ್ದಿಗೋಷ್ಠಿ ಬಳಿಕ ಈ ಬಗ್ಗೆ ಸಮಗ್ರ ತನಿಖೆ ನಡೆಸಿ, ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್ಪಿ ಋಷಿಕುಮಾರ್ ಸೋನವಾಣೆಗೆ ಮನವಿ ನೀಡಿದ್ದಾರೆ.

Mangalore Goldsmith cheats bank by pledging fake gold to bank, cheats 52 customers, 32 lakhs fraud. Also a customer has committed suicide after knowing that he has been cheated.