ಅಮಾಯಕನ ಹೆಸರಲ್ಲಿ 28 ಲಕ್ಷ ರೂ. ಸಾಲ ; ದಾಖಲೆ ಪತ್ರಗಳನ್ನೇ ಎಗರಿಸಿ ಮಹಾನ್ ಮೋಸ ! ಹರಾಮಿ ಬ್ಯಾಂಕ್ ಮ್ಯಾನೇಜರ್ ಕಡೆಗೂ ಪೊಲೀಸ್ ಬಲೆಗೆ, ಭಾರೀ ವಂಚನಾ ಜಾಲ ಬಯಲಿಗೆ !

09-12-21 09:41 pm       Mangaluru Correspondent   ಕರಾವಳಿ

ಈಗೆಲ್ಲಾ ಹೆಚ್ಚಿನ ಹಣಕಾಸು ವಹಿವಾಟು ಬ್ಯಾಂಕ್ ಮೂಲಕವೇ ನಡೆಯುತ್ತದೆ. ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇಡುವುದು, ಸಾಲ ಪಡೆದು ವ್ಯಾಪಾರ -ವಹಿವಾಟು ನಡೆಸೋದನ್ನೂ ಮಾಡುತ್ತಾರೆ. ಆದರೆ, ಹೀಗೆ ಹಣಕಾಸು ನಿರ್ವಹಣೆ ಮಾಡುವ ಬ್ಯಾಕಿನ ಅಧಿಕಾರಿಗಳೇ ಕಳ್ಳರಾದರೆ, ನಮ್ಮ ಹಣಕ್ಕೆ ಗ್ಯಾರಂಟಿ ಏನಿರುತ್ತದೆ.

ಮಂಗಳೂರು, ಡಿ.9: ಈಗೆಲ್ಲಾ ಹೆಚ್ಚಿನ ಹಣಕಾಸು ವಹಿವಾಟು ಬ್ಯಾಂಕ್ ಮೂಲಕವೇ ನಡೆಯುತ್ತದೆ. ಬ್ಯಾಂಕಿನಲ್ಲಿ ಲಕ್ಷಾಂತರ ರೂಪಾಯಿ ಠೇವಣಿ ಇಡುವುದು, ಸಾಲ ಪಡೆದು ವ್ಯಾಪಾರ -ವಹಿವಾಟು ನಡೆಸೋದನ್ನೂ ಮಾಡುತ್ತಾರೆ. ಆದರೆ, ಹೀಗೆ ಹಣಕಾಸು ನಿರ್ವಹಣೆ ಮಾಡುವ ಬ್ಯಾಕಿನ ಅಧಿಕಾರಿಗಳೇ ಕಳ್ಳರಾದರೆ, ನಮ್ಮ ಹಣಕ್ಕೆ ಗ್ಯಾರಂಟಿ ಏನಿರುತ್ತದೆ. ಹೌದು.. ಇಲ್ಲೊಬ್ಬ ಖದೀಮ ಬ್ಯಾಂಕ್ ಮ್ಯಾನೇಜರ್ ಒಬ್ಬ ಬಡಪಾಯಿ ಅಮಾಯಕ ವ್ಯಕ್ತಿಯನ್ನೇ ವಂಚಿಸಿ, ಆತನ ಹೆಸರಲ್ಲಿ ಲಕ್ಷಾಂತರ ಸಾಲ ಪಡೆದು ನಾಲ್ಕೈದು ವರ್ಷಗಳಿಂದ ಗೋಳಾಡಿಸುತ್ತಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಬಂಟ್ವಾಳ ತಾಲೂಕಿನ ಮಂಚಿ ಗ್ರಾಮದ ನಿವಾಸಿ ಎಸ್.ಜಿ. ಮಹಮ್ಮದ್ ಎಂಬವರು 2015ರಲ್ಲಿ ಮಂಗಳೂರಿನ ರಾಮಭವನ ಕಾಂಪ್ಲೆಕ್ಸ್ ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ ಸಾಲ ಕೇಳಿಕೊಂಡು ಬಂದಿದ್ದರು. ಯಾರೋ ಅಲ್ಲಿ ಸುಲಭದಲ್ಲಿ ಸಾಲ ಸಿಗುತ್ತದೆ ಎಂದು ಹೇಳಿದ್ದಕ್ಕೆ, ಅಲ್ಲಿನ ಬ್ಯಾಂಕ್ ಮ್ಯಾನೇಜರ್ ಆಗಿದ್ದ ಕೆ.ಸಿ.ಮುಕೇಶ್ ಎಂಬವರನ್ನು ಮಹಮ್ಮದ್ ಸಂಪರ್ಕಿಸಿದ್ದರು. ತನ್ನ ಹತ್ತು ಸೆಂಟ್ಸ್ ಜಾಗ ಇದೆ, ಮೋರ್ಟ್ ಗೇಜ್ ಮಾಡಿ ಮನೆ ಕಟ್ಟಲು ಸಾಲ ಕೊಡುವಂತೆ ಹೇಳಿದ್ದರು. ನಿಮ್ಮ ದಾಖಲೆ ಪತ್ರಗಳನ್ನು ತಗೊಂಡು ಬನ್ನಿ ಎಂದು ಹೇಳಿ ಬ್ಯಾಂಕ್ ಮ್ಯಾನೇಜರ್ ಕಳಿಸಿಕೊಟ್ಟಿದ್ದರು.

ಮರುದಿನ ಹತ್ತು ಸೆಂಟ್ಸ್ ಜಾಗದ ಒರಿಜಿನಲ್ ದಾಖಲೆ ಪ್ರತಿಗಳನ್ನು ಮಹಮ್ಮದ್ ಬ್ಯಾಂಕ್ ಮ್ಯಾನೇಜರಿಗೆ ತಂದುಕೊಟ್ಟಿದ್ದರು. ಮ್ಯಾನೇಜರ್, ದಾಖಲೆ ಪ್ರತಿಗಳ ಬಗ್ಗೆ ಕಾನೂನು ಮಾಹಿತಿ ಪಡೆದು ಸಾಲ ಮಂಜೂರು ಮಾಡುವುದಾಗಿ ಹೇಳಿದ್ದರು. ಒಂದು ವಾರದ ನಂತರ, ದಾಖಲೆ ಪ್ರತಿಗಳನ್ನು ಬ್ಯಾಂಕ್ ಕಚೇರಿಯ ಬದಲಿಗೆ ಹಂಪನಕಟ್ಟೆಗೆ ಸ್ವತಃ ಬ್ಯಾಂಕ್ ಮ್ಯಾನೇಜರ್ ತಂದುಕೊಟ್ಟಿದ್ದಲ್ಲದೆ, ನಿಮ್ಮ ದಾಖಲೆ ಪ್ರತಿಗಳು ಇಷ್ಟೇ ಸಾಲದು. ಕನ್ವರ್ಷನ್ ಆಗಿರುವ ಬಗ್ಗೆ ಪಂಚಾಯತ್ ನಿಂದ ದೃಢೀಕರಣ ಅಗತ್ಯವಿದೆ ಎಂದು ಹೇಳಿ ದಾಖಲೆ ಪ್ರತಿಗಳನ್ನು ಮರಳಿಸಿದ್ದರು. ಹಣದ ಅಗತ್ಯವಿದ್ದ ಮಹಮ್ಮದ್, ಸಾಲ ಸಿಗಲಿಲ್ಲವೆಂದು ಬಳಿಕ ನೇರವಾಗಿ ಮನೆಗೆ ತೆರಳಿದ್ದರು. ಬಳಿಕ ಬೇರೆ ಸ್ನೇಹಿತರೊಬ್ಬರ ಸೂಚನೆಯಂತೆ, ಬಿಸಿ ರೋಡಿನ ಗ್ರಾಮೀಣ ಬ್ಯಾಂಕಿನಲ್ಲಿ ಸಾಲದ ಬಗ್ಗೆ ವಿಚಾರಿಸಿದ್ದರು.

ಅಲ್ಲಿ ತನ್ನ ಜಾಗದ ದಾಖಲೆ ಪತ್ರಗಳನ್ನು ಕೊಟ್ಟು ಸಾಲ ಕೇಳಿದ್ದು, ಬ್ಯಾಂಕ್ ಅಧಿಕಾರಿಗಳು ಲೀಗಲ್ ಮಾಹಿತಿ ಕೇಳಲು ವಕೀಲರ ಬಳಿ ಕಳಿಸಿದ್ದರು. ದಾಖಲೆ ಪತ್ರಗಳನ್ನು ಪರಿಶೀಲಿಸಿದ ವಕೀಲರು, ಅವು ಕಲರ್ ಝೆರಾಕ್ಸ್ ಪ್ರತಿಗಳೆಂದು ತಿಳಿಸಿದ್ದರು. ಗಾಬರಿಗೊಂಡ ಮಹಮ್ಮದ್, ಇದು ನನ್ನದೇ ದಾಖಲೆ ಪ್ರತಿಗಳು. ಜೆರಾಕ್ಸ್ ಮಾಡಿಲ್ಲ ಎಂದು ವಾದಿಸಿದ್ದರು. ಹಾಗಾದರೆ, ಏನೋ ಎಡವಟ್ಟು ಆಗಿರಬೇಕೆಂದು ವಕೀಲರ ಸೂಚನೆಯಂತೆ ದಾಖಲೆ ಪ್ರತಿಗಳು ಕಳವಾಗಿದ್ದಾಗಿ ಪೊಲೀಸ್ ದೂರು ದಾಖಲಿಸಿ, ರಿಜಿಸ್ಟರ್ ಕಚೇರಿಯಿಂದ ಹೊಸತಾಗಿ ದಾಖಲೆ ಪತ್ರಗಳನ್ನು ಪಡೆದಿದ್ದರು. ಆಬಳಿಕ ಗ್ರಾಮೀಣ ಬ್ಯಾಂಕಿನಿಂದ ಅದೇ ಜಾಗದ ಅಡವಿಟ್ಟು ಹತ್ತು ಲಕ್ಷ ಸಾಲ ಮಂಜೂರು ಕೂಡ ಆಗಿತ್ತು.

ಆದರೆ, ಇದೆಲ್ಲ ನಡೆದು ಒಂದು ವರ್ಷ ಆಗುತ್ತಿದ್ದಂತೆ, 2016ರಲ್ಲಿ ಮಂಗಳೂರಿನ ಕೆನರಾ ಬ್ಯಾಂಕಿನಿಂದ ಸಾಲ ಮರು ಪಾವತಿ ಮಾಡದ ಕಾರಣ ಜಪ್ತಿ ನೋಟೀಸ್ ಬಂದಿತ್ತು. ಇದರಿಂದ ಗಾಬರಿಗೊಂಡ ಎಸ್.ಜಿ.ಮಹಮ್ಮದ್ ಬ್ಯಾಂಕಿಗೆ ಬಂದು ವಿಚಾರಿಸಿದಾಗ, ಅಲ್ಲಿ ಬ್ಯಾಂಕ್ ಮ್ಯಾನೇಜರ್ ಬದಲಾಗಿದ್ದರು. ಸಾಲದ ಬಾಬ್ತು ನೋಡಿದಾಗ, ಮಹಮ್ಮದ್ ಹೆಸರಲ್ಲೇ 28 ಲಕ್ಷ ರೂಪಾಯಿ ಸಾಲ ಪಡೆದಿರುವುದು ಕಂಡುಬಂದಿದೆ. ಕೇರಳದ ಕಣ್ಣೂರು ಮೂಲದ ನಿವಾಸಿಯಾಗಿದ್ದ ಕೆ.ಸಿ.ಮುಕೇಶ್, ಅಮಾಯಕನ ಹೆಸರಲ್ಲಿ ಸಾಲ ಪಡೆದು ಭಾರೀ ಮೋಸ ಮಾಡಿದ್ದೂ ಮಹಮ್ಮದ್ ಅವರಿಗೆ ತಿಳಿದುಬಂದಿತ್ತು.

ನಕಲಿ ಹೆಸರಲ್ಲಿ ಬಿಸಿನೆಸ್ ಅಕೌಂಟ್ ಸೃಷ್ಟಿಸಿದ್ದ

ಇಷ್ಟಕ್ಕೂ ಬ್ಯಾಂಕ್ ಮ್ಯಾನೇಜರ್ ಈ ರೀತಿ ಸಾಲ ಪಡೆದಿದ್ದೇ ರೋಚಕ. ಮಹಮ್ಮದ್ ಅವರ ಜಾಗದ ಒರಿಜಿನಲ್ ದಾಖಲೆ ಪ್ರತಿಗಳನ್ನು ಪಡೆದು, ಪಾಂಡೇಶ್ವರದಲ್ಲಿ ಕೇಟೀ ಎಂಟರ್ ಪ್ರೈಸಸ್ ಎನ್ನುವ ಹೆಸರಲ್ಲಿ ಬೋಗಸ್ ಕಚೇರಿಯನ್ನು ತೆರೆದಿದ್ದ. ಈವೆಂಟ್ ಮ್ಯಾನೇಜ್ಮೆಂಟ್ ಮತ್ತು ಲೈಟ್ಸ್ ಸಿಸ್ಟಮ್ ಎಂಬ ಬಿಸಿನೆಸ್ ಹೆಸರಲ್ಲಿ ಸಂಸ್ಥೆಯ ಸೀಲ್, ನಕಲಿ ಜಿಎಸ್ ಟಿ, ಬಾಡಿಗೆ ಕಚೇರಿ ಬಗ್ಗೆ ನಕಲಿ ಎಡ್ರಸ್ ತಯಾರಿಸಿ ಅದನ್ನು ಮಹಾನಗರ ಪಾಲಿಕೆಗೆ ಸಲ್ಲಿಸಿ, ಅಲ್ಲಿ ಟ್ರೇಡ್ ಲೈಸನ್ಸನ್ನೂ ಪಡೆದಿದ್ದ. ಕೇಟೀ ಎಂಟರ್ ಪ್ರೈಸಸ್ ಗೆ ಎಸ್.ಜಿ. ಮಹಮ್ಮದ್ ಅವರನ್ನೇ ಪಾಲುದಾರನಾಗಿ ತೋರಿಸಲಾಗಿತ್ತು. ಇನ್ನೊಬ್ಬ ಪಾಲುದಾರನ ಹೆಸರು ತೋರಿಸಿರಲಿಲ್ಲ. ಮಹಮ್ಮದ್ ಬ್ಯಾಂಕಿಗೆ ಆರಂಭದಲ್ಲಿ ಹೋಗಿದ್ದ ವೇಳೆ, ಕೆಲವು ಕಾಗದ ಪತ್ರಗಳಿಗೆ ಸಹಿ ಹಾಕಿಸಿ, ಫೋಟೋ ಪಡೆದು ಹೊಸ ಖಾತೆ ಆರಂಭಿಸುವುದಾಗಿ ಹೇಳಿದ್ದನ್ನೇ ಬಂಡವಾಳ ಮಾಡಿದ್ದ ಬ್ಯಾಂಕ್ ಮ್ಯಾನೇಜರ್, ಅದೇ ಕಾಗದ ಪತ್ರಗಳನ್ನು ಮುಂದಿಟ್ಟು ಉದ್ಯಮದ ಹೆಸರಲ್ಲಿ ಚಾಲ್ತಿ ಖಾತೆಯನ್ನು ತೆರೆದಿದ್ದಲ್ಲದೆ, ಸಂಸ್ಥೆಯ ಹೆಸರಲ್ಲಿ ಜಾಗ ಅಡವಿಟ್ಟು 28 ಲಕ್ಷ ರೂ. ಸಾಲ ಮಂಜೂರು ಮಾಡಿಸಲಾಗಿತ್ತು. ಮಹಮ್ಮದ್ ಅವರಿಗೇ ತಿಳಿಯದಂತೆ, 28 ಲಕ್ಷ ಸಾಲ ಪಡೆದು ಆ ಹಣವನ್ನು ನೇರವಾಗಿ ಬ್ಯಾಂಕ್ ಮ್ಯಾನೇಜರ್ ಕೆ.ಸಿ.ಮುಕೇಶ್ ತನ್ನ ಖಾತೆಗೆ ಹಾಕಿಸಿಕೊಂಡಿದ್ದ.

ತಪ್ಪೊಪ್ಪಿಗೆ ನೀಡಿಯೇ ಸಿಕ್ಕಿಬಿದ್ದ ಮ್ಯಾನೇಜರ್

ಕೆ.ಸಿ.ಮುಕೇಶ್ ಅನುಪಸ್ಥಿತಿಯಲ್ಲಿ ಬ್ಯಾಂಕಿನಲ್ಲಾದ ಮೋಸ ತಿಳಿದುಬರುತ್ತಿದ್ದಂತೆ, ಆತನನ್ನು ಬರಹೇಳಿ ಅಧಿಕಾರಿಗಳು ಮಾತುಕತೆ  ನಡೆಸಿದ್ದರು. ಮುಕೇಶ್, ಬ್ಯಾಂಕ್ ಅಧಿಕಾರಿಗಳ ಸಮ್ಮುಖದಲ್ಲಿ ತನ್ನ ತಪ್ಪನ್ನು ಒಪ್ಪಿಕೊಂಡಿದ್ದಲ್ಲದೆ, ನಾನು ನಿಮ್ಮಿಂದ ಸಾಲ ಪಡೆದಿರುವುದಾಗಿ ಅಗ್ರೀಮೆಂಟ್ ಮಾಡೋಣ ಎಂದು ಬಿಂಬಿಸಿ, ನಿಮ್ಮ ಹಣವನ್ನು ಎರಡು- ಮೂರು ತಿಂಗಳಲ್ಲಿ ತೀರಿಸುವುದಾಗಿ ಹೇಳಿ, ಮಹಮ್ಮದ್ ಅವರನ್ನು ಮನವೊಲಿಸಿದ್ದರು. ಅದರಂತೆ, ಬ್ಯಾಂಕ್ ಮ್ಯಾನೇಜರ್ ತಪ್ಪೊಪ್ಪಿಗೆ ಮಾಡಿ, ಅಗ್ರೀಮೆಂಟ್ ಮಾಡಿಸಿದ್ದ. ಆದರೆ, ಮೂರು ದಿನದ ಬಳಿಕ ಸ್ವತಃ ಬ್ಯಾಂಕ್ ಮ್ಯಾನೇಜರ್ ಪಾಂಡೇಶ್ವರ ಠಾಣೆಗೆ ಹೋಗಿ ನನ್ನನ್ನು ಕಿಡ್ನಾಪ್ ಮಾಡಿ, ಸಾಲ ಪಡೆದಿರುವುದಾಗಿ ಮಹಮ್ಮದ್ ಬಲವಂತದಿಂದ ಸಹಿ ಹಾಕಿಸಿದ್ದಾಗಿ ಪೊಲೀಸ್ ದೂರು ಕೊಡುತ್ತಾರೆ. ಪೊಲೀಸರು, ಮಹಮ್ಮದ್ ನನ್ನು ಕರೆಸಿ ಮಾತುಕತೆ ನಡೆಸಿದಾಗ, ಪ್ರಕರಣ ಉಲ್ಟಾ ಆಗಿದ್ದು ಗಮನಕ್ಕೆ ಬಂದಿತ್ತು. ಇತ್ತ ಬ್ಯಾಂಕ್ ಮ್ಯಾನೇಜರ್ ಠಾಣೆಯಿಂದಲೇ ಕಾಲ್ಕಿತ್ತಿದ್ದ. ಆದರೆ, ಈ ಬಗ್ಗೆ ಮಹಮ್ಮದ್ ದೂರು ನೀಡಿದರೆ, ಅದನ್ನು ಪಡೆಯದೇ ಪೊಲೀಸರು ಸತಾಯಿಸಿದ್ದರು.

ಹೈಕೋರ್ಟ್ ಮೆಟ್ಟಿಲೇರಿ ಬ್ಯಾಂಕ್ ಜಪ್ತಿಗೆ ತಡೆ

ಈ ನಡುವೆ, ತನ್ನ ಅರಿವಿಲ್ಲದೆ ಜಾಗದ ದಾಖಲೆ ಪತ್ರಗಳನ್ನಿಟ್ಟು ಸಾಲ ಪಡೆದಿದ್ದ ಬಗ್ಗೆ ಬ್ಯಾಂಕ್ ಮ್ಯಾನೇಜರ್ ನೀಡಿದ್ದ ತಪ್ಪೊಪ್ಪಿಗೆ ಹೇಳಿಕೆಯನ್ನು ಆಧರಿಸಿ, ಎಸ್.ಜಿ.ಮಹಮ್ಮದ್ ಹೈಕೋರ್ಟಿನಲ್ಲಿ ಅರ್ಜಿ ಸಲ್ಲಿಸಿದ್ದರು. ತನ್ನ ಮನೆಯನ್ನು ಜಪ್ತಿ ಮಾಡದಂತೆ ತಡೆ ನೀಡಬೇಕೆಂದು ಕೋರಿದ್ದರು. ಬ್ಯಾಂಕ್ ಮ್ಯಾನೇಜರ್ ಮಾಡಿದ್ದ ಮೋಸದ ಬಗ್ಗೆ ಆತನ ಸಹಿಯಿದ್ದ ಪತ್ರ ಮತ್ತು ಮಹಮ್ಮದ್ ತನ್ನ ದಾಖಲೆ ಪತ್ರಗಳು ಕಳವಾದ ಬಗ್ಗೆ ನೀಡಿದ್ದ ಪೊಲೀಸ್ ದೂರು ಆಧರಿಸಿ ಕೋರ್ಟ್ ಬ್ಯಾಂಕ್ ಜಪ್ತಿಗೆ ತಡೆಯಾಜ್ಞೆ ನೀಡಿತ್ತು. ಆದರೆ, ಮಹಮ್ಮದ್ ಹೈಕೋರ್ಟ್ ಸ್ಟೇ ತಂದಿದ್ದ ವಿಚಾರ ತಿಳಿಯದೇ ಕೆನರಾ ಬ್ಯಾಂಕಿನ ವೃತ್ತ ಕಚೇರಿಯ ಅಧಿಕಾರಿಗಳು 2017ರಲ್ಲಿ ನೇರವಾಗಿ ಮಂಚಿ ಗ್ರಾಮಕ್ಕೆ ಜಪ್ತಿಗೆ ಬಂದಿದ್ದರು. ಮಹಮ್ಮದ್ ತಾನು ಹೈಕೋರ್ಟಿನಿಂದ ಸ್ಟೇ ತಂದಿರುವ ಬಗ್ಗೆ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದ್ದರಿಂದ ಬಚಾವಾಗಿದ್ದರು.

ಈ ನಡುವೆ, ಕೆನರಾ ಬ್ಯಾಂಕಿನ ವೃತ್ತ ಕಚೇರಿಯಿಂದ ಸುಸ್ತಿದಾರರ ಸಾಲ ಮರು ಪಾವತಿಗಾಗಿ ಸ್ಥಿರಾಸ್ತಿ ಜಪ್ತಿ ಮಾಡಲು ಅನುಮತಿ ನೀಡುವಂತೆ ದ.ಕ. ಜಿಲ್ಲಾಧಿಕಾರಿ ನ್ಯಾಯಾಲಯಕ್ಕೆ ಕೇಳಲಾಗಿತ್ತು. ಜಿಲ್ಲಾಧಿಕಾರಿ ಕೋರ್ಟಿನಲ್ಲಿ ಈ ಬಗ್ಗೆ ಎರಡೂ ಕಡೆಯ ವಾದ ಆಲಿಸಬೇಕಿದ್ದರೂ, ಕಲಾಪಕ್ಕೆ ಹಾಜರಾಗದೇ ಇದ್ದಲ್ಲಿ ಸುಸ್ತಿದಾರರ ಆಸ್ತಿ ಜಪ್ತಿ ಮಾಡಲು ಬ್ಯಾಂಕಿಗೆ ಅವಕಾಶ ನೀಡುವುದಾಗಿ ಹೇಳಲಾಗಿತ್ತು. ಮಹಮ್ಮದ್ ಅವರಿಗೆ ಈ ಬಗ್ಗೆಯೂ ನೋಟೀಸ್ ಲಭಿಸಿರಲಿಲ್ಲ. ಬ್ಯಾಂಕಿನ ಅಧಿಕಾರಿಗಳ ಪಿತೂರಿಯಿಂದಲೇ ಈ ರೀತಿ ನಡೆದಿತ್ತೋ ಗೊತ್ತಿಲ್ಲ. ಈ ರೀತಿಯ ಪ್ರಕರಣಗಳಲ್ಲಿ ಬ್ಯಾಂಕ್ ಅಧಿಕಾರಿಗಳು ಪಾರ್ಟಿಗೆ ತಿಳಿಸದೇ ಜಪ್ತಿ ಆದೇಶ ತರಿಸುವುದು ನಡೆದುಬಂದಿದೆ ಎನ್ನುವ ಮಾತುಗಳೂ ಇವೆ.

ರಮಾನಾಥ ರೈ ಸಹಾಯದಿಂದ ಕೇಸು ದಾಖಲು

ಆದರೆ, ಒಂದು ಕಡೆ ಗ್ರಾಮೀಣ ಬ್ಯಾಂಕಿನಿಂದ ತೆಗೆದಿದ್ದ ಹತ್ತು ಲಕ್ಷ ಸಾಲ, ಇನ್ನೊಂದೆಡೆ ತನ್ನ ಹೆಸರಲ್ಲಿ ಬ್ಯಾಂಕ್ ಮ್ಯಾನೇಜರ್ ಮಾಡಿದ್ದ ಮೋಸದ 28 ಲಕ್ಷ ಸಾಲ.. ಇದರಿಂದಾಗಿ ತೀವ್ರ ನೊಂದಿದ್ದ ಕೂಲಿ ಮಾಡಿ ಬದುಕುತ್ತಿದ್ದ ಎಸ್.ಜಿ.ಮಹಮ್ಮದ್, ತನಗಾದ ಮೋಸದ ಬಗ್ಗೆ ಮಾನವ ಹಕ್ಕು ಕಾರ್ಯಕರ್ತರ ಮೂಲಕ ಜಿಲ್ಲಾಧಿಕಾರಿಗೂ ದೂರು ನೀಡಿದ್ದರು. ಅಲ್ಲದೆ, ಬಂದರು ಠಾಣೆಯಲ್ಲೂ ದೂರು ದಾಖಲಿಸಲು ಹೋಗಿದ್ದರು. ಆದರೆ, ಅಂದಿನ ಜಿಲ್ಲಾಧಿಕಾರಿಯಾಗಲೀ, ಬಂದರು ಠಾಣಾಧಿಕಾರಿಯಾಗಲೀ ಇವರ ನೆರವಿಗೆ ಬಂದಿರಲಿಲ್ಲ. ಸತತ ಅಲೆದಾಟದ ನಂತರ, 2021ರ ಮಾರ್ಚ್ ತಿಂಗಳಲ್ಲಿ ಮಾಜಿ ಸಚಿವ ರಮಾನಾಥ ರೈ ಸಹಾಯ ಯಾಚಿಸಿದ್ದರು. ತನಗಾದ ಅನ್ಯಾಯದ ಬಗ್ಗೆ ಹೇಳಿಕೊಂಡಿದ್ದರಿಂದ ರೈಗಳು, ನೇರವಾಗಿ ಬಂದರು ಠಾಣೆಗೆ ಮತ್ತು ಜಿಲ್ಲಾಧಿಕಾರಿ ಕಚೇರಿಗೆ ಮಹಮ್ಮದ್ ಜೊತೆಗೆ ಬಂದು ದೂರು ದಾಖಲಿಸಿ ತನಿಖೆ ನಡೆಸುವಂತೆ ಹೇಳಿದ್ದಾರೆ. ಹಾಗಿದ್ದರೂ, ಅಧಿಕಾರಿಗಳು ಭರವಸೆ ನೀಡಿದ್ದು ಬಿಟ್ಟರೆ, ಬೇರೇನೂ ಆಗಿರಲಿಲ್ಲ.

ಕೊನೆಗೆ, ಕಳೆದ ಮೇ ತಿಂಗಳಲ್ಲಿ ಮತ್ತೆ ರಮಾನಾಥ ರೈ ಮೂಲಕ ವಿಷಯವನ್ನು ಪೊಲೀಸ್ ಕಮಿಷನರ್ ಗಮನಕ್ಕೆ ತರಲಾಗಿತ್ತು. ಅದರಂತೆ, ಕಳೆದ ಜೂನ್ 18ರಂದು ಬ್ಯಾಂಕ್ ಮ್ಯಾನೇಜರ್ ಕೆ.ಸಿ.ಮುಕೇಶ್ ವಿರುದ್ಧ ಬಂದರು ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಇದೇ ವೇಳೆ, ರಾಜ್ಯ ಮಾನವ ಹಕ್ಕು ಆಯೋಗಕ್ಕೂ ಈ ಬಗ್ಗೆ ದೂರು ಹೋಗಿತ್ತು. ತನಿಖೆ ಆರಂಭಿಸಿದ ಪೊಲೀಸರು ಆರೋಪಿ ಬ್ಯಾಂಕ್ ಮ್ಯಾನೇಜರ್ ಕೆ.ಸಿ.ಮುಕೇಶ್ ನನ್ನು ಕೇರಳದ ಕಣ್ಣೂರಿನಿಂದ ವಶಕ್ಕೆ ಪಡೆದು ಮಂಗಳೂರಿಗೆ ಕರೆತಂದಿದ್ದಾರೆ. ವಿಚಾರಣೆ ನಡೆಸುತ್ತಿದ್ದಂತೆ, ಆತ ಮಂಗಳೂರು ಸೇರಿ ಹಲವೆಡೆ ಅಮಾಯಕರಿಗೆ ಇದೇ ರೀತಿ ಮೋಸ ಮಾಡಿ, ಲಕ್ಷಾಂತರ ರೂಪಾಯಿ ಪಂಗನಾಮ ಹಾಕಿರುವ ವಿಚಾರ ಬೆಳಕಿಗೆ ಬಂದಿದೆ.

ಕೆನರಾ ಬ್ಯಾಂಕಿನಿಂದಲೇ ಡಿಸ್ಮಿಸ್ ಆಗಿದ್ದ !

ಬ್ಯಾಂಕ್ ಮ್ಯಾನೇಜರ್ ಕೆ.ಸಿ.ಮುಕೇಶ್ ನಾಲ್ಕು ವರ್ಷಗಳ ಹಿಂದೆ ಮಂಗಳೂರಿನ ರಾಮಭವನ ಕಾಂಪ್ಲೆಕ್ಸ್ ಕೆನರಾ ಬ್ಯಾಂಕ್ ಶಾಖೆಯಿಂದ ಟ್ರಾನ್ಸ್ ಫರ್ ಆಗಿದ್ದರೂ, ಮೂರು ವರ್ಷಗಳ ಕಾಲ ಮಂಗಳೂರಿನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಹಲವರಿಗೆ ಮೋಸ ಮಾಡಿದ್ದು ಬ್ಯಾಂಕಿನ ಆಂತರಿಕ ತನಿಖೆಯಲ್ಲಿ ಬಯಲಾಗಿತ್ತು. ಅದರಂತೆ, ಮೂರು ವರ್ಷಗಳ ಹಿಂದೆಯೇ ಕೆ.ಸಿ.ಮುಕೇಶನನ್ನು ಕೆನರಾ ಬ್ಯಾಂಕಿನ ಅಧಿಕಾರಿ ಹುದ್ದೆಯಿಂದಲೇ ವಜಾ ಮಾಡಲಾಗಿತ್ತು ಅನ್ನೋದು ತಿಳಿದುಬಂದಿದೆ. ಬ್ಯಾಂಕಿನಲ್ಲಿದ್ದುಕೊಂಡು ಅಮಾಯಕ ಗ್ರಾಹಕರನ್ನೇ ಮೋಸಗೈದು ವಂಚಿಸುವ ಇಂಥ ಹರಾಮಿ ಅಧಿಕಾರಿಗಳು ಎಷ್ಟಿದ್ದಾರೋ.. ಈತನ ಬಣ್ಣ ಬಯಲಾಗಿದೆ, ನುಂಗಿದ ಹಣವನ್ನು ಪೊಲೀಸರು ಕಕ್ಕಿಸುತ್ತಾರೋ, ಅಲ್ಲಿಗೇ ಬಿಟ್ಟುಬಿಡುತ್ತಾರೆಯೇ ಕಾದು ನೋಡಬೇಕು. 

Bank Fraud Exposed by Headline Karnataka in Mangalore. Canara Bank Manager of Kodialbail Cheats Customer of Rs 28 Lakhs by creating fake documents. The Manager has been dismissed by Canara Bank is under Police Custody after FIR was filed by the Complainant. The Manager has been identified as Mukesh from Kannur, Kerala.