ಬೋಂದೆಲ್ ; ತಡೆಗೋಡೆ ಕುಸಿದು ಮಣ್ಣಿನಡಿ ಸಿಲುಕಿದ ಮಹಿಳೆ ಸಾವು! ಗುತ್ತಿಗೆದಾರನ ಮೇಲೆ ಕೇಸು  

11-12-21 10:19 pm       HK Desk news   ಕರಾವಳಿ

ತಡೆಗೋಡೆ ಕುಸಿದು ಬಿದ್ದು ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಗರ ಹೊರವಲಯದ ಬೋಂದೆಲ್ ಬಳಿಯ ಕೃಷ್ಣನಗರದಲ್ಲಿ ನಡೆದಿದೆ.

Photo credits : Headline Karnataka

ಮಂಗಳೂರು, ಡಿ.11 : ತಡೆಗೋಡೆ ಕುಸಿದು ಬಿದ್ದು ಕೂಲಿ ಕೆಲಸಕ್ಕೆ ಬಂದಿದ್ದ ಮಹಿಳೆ ಸಾವನ್ನಪ್ಪಿದ ಘಟನೆ ನಗರ ಹೊರವಲಯದ ಬೋಂದೆಲ್ ಬಳಿಯ ಕೃಷ್ಣನಗರದಲ್ಲಿ ನಡೆದಿದೆ.

ಆಂಧ್ರಪ್ರದೇಶ ಮೂಲದ ಕೂಲಿ ಕಾರ್ಮಿಕ ಮಹಿಳೆ ತಿಮ್ಮಕ್ಕ(42) ಮೃತರು. ಮಂಗಳೂರು ಮಹಾನಗರ ಪಾಲಿಕೆಯ ಜಲಸಿರಿ ಯೋಜನೆಯಡಿ ಪೈಪ್ ಲೈನ್ ಹಾಕಲು ಗುಂಡಿ ಅಗೆಯುವ ಕಾಮಗಾರಿ ನಡೆಸುತ್ತಿದ್ದಾಗ, ಒಂದು ಭಾಗದಲ್ಲಿ ಕಟ್ಟಿದ್ದ ಕೆಂಪು ಕಲ್ಲಿನ ಗೋಡೆ ಕುಸಿದು ಬಿದ್ದಿದೆ. ಧರೆ ಕುಸಿಯದಂತೆ ಎತ್ತರಕ್ಕೆ ತಡೆಗೋಡೆ ಕಟ್ಟಿದ್ದು, ಕೆಳಭಾಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯ ಮೇಲೆ ಬಿದ್ದಿದೆ. ಅರ್ಧ ಗಂಟೆ ಕಾಲ ಮಹಿಳೆ ಮಣ್ಣಿನಡಿಯಲ್ಲಿ ಸಿಲುಕಿದ್ದು, ಬಳಿಕ ಅವರನ್ನು ಹೊರತೆಗೆದು ಆಸ್ಪತ್ರೆಗೆ ಸಾಗಿಸಲಾಗಿತ್ತು. ಅಲ್ಲಿ ಮಹಿಳೆ ಸಾವನ್ನಪ್ಪಿದ್ದಾರೆ. ಸ್ಥಳೀಯರು, ಇತರ ಕಾರ್ಮಿಕರು ಜೆಸಿಬಿ ಸಹಾಯದಲ್ಲಿ ಮಣ್ಣು ತೆರವು ಮಾಡುವ ಕಾರ್ಯ ಮಾಡಿದರೂ, ವಿಳಂಬವಾಗಿದ್ದು ಮಹಿಳೆ ಸಾವಿಗೆ ಕಾರಣವಾಗಿತ್ತು.

ಮಹಿಳೆಯ 12 ವರ್ಷದ ಪುತ್ರಿ ಪುಷ್ಪಾ ಕೂಡ ಜೊತೆಗಿದ್ದು, ಆಕೆಯೂ ಮಣ್ಣಿನಡಿ ಸಿಲುಕಿದ್ದಳು. ಆದರೆ, ಮಗುವಿಗೆ ಹೆಚ್ಚು ಅಪಾಯ ಆಗಿಲ್ಲ. ಸ್ವಲ್ಪ ಮಣ್ಣು ಬಿದ್ದಿದ್ದರಿಂದ ಅಪಾಯದಿಂದ ಪಾರಾಗಿದ್ದಳು. ಕಾವೂರು ಪೊಲೀಸರು ಮಹಾನಗರ ಪಾಲಿಕೆಯ ಕಾಮಗಾರಿ ನಿರ್ವಹಿಸುತ್ತಿದ್ದ ಗುತ್ತಿಗೆದಾರನ ಮೇಲೆ ಕೇಸು ದಾಖಲಿಸಿದ್ದಾರೆ. ಅಪಾಯ ಇದ್ದರೂ, ಕೂಲಿಯಾಳುಗಳ ಬಗ್ಗೆ ಜಾಗ್ರತೆ ವಹಿಸದೇ ಇದ್ದ ಗುತ್ತಿಗೆದಾರನ ವಿರುದ್ಧ ಆಕ್ರೋಶ ವ್ಯಕ್ತವಾಗಿದೆ.

A retaining wall collapsed at Krishnanagar, Bondel in the outskirts of the city here on Saturday, December 11 in which 42 year old woman died on spot.