ಮೂಗು ಇರುವವರಿಗೆ ನೆಗಡಿ ತಪ್ಪಲ್ಲ , ಓಮಿಕ್ರಾನ್ ಬಗ್ಗೆ ಭಯ ಬೇಕಿಲ್ಲ.. ಅನಗತ್ಯ ಭಯ ಹುಟ್ಟಿಸಬೇಡಿ ! 

27-12-21 10:05 pm       Mangalore Correspondent   ಕರಾವಳಿ

ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಪರ - ವಿರೋಧ ಕೇಳಿ ಬಂದಿರುವಾಗಲೇ ಬಿಜೆಪಿ ಮುಖಂಡ ಸಿ.ಟಿ.ರವಿ, ಸರಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌

ಚಿಕ್ಕಮಗಳೂರು, ಡಿ.27 : ರಾಜ್ಯ ಸರ್ಕಾರದ ನೈಟ್ ಕರ್ಫ್ಯೂ ಆದೇಶಕ್ಕೆ ಪರ - ವಿರೋಧ ಕೇಳಿ ಬಂದಿರುವಾಗಲೇ ಬಿಜೆಪಿ ಮುಖಂಡ ಸಿ.ಟಿ.ರವಿ, ಸರಕಾರದ ನಿರ್ಧಾರಕ್ಕೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‌

ನಮ್ಮದೇ ಸರ್ಕಾರದ ಆದೇಶವನ್ನು ಸರಿ-ತಪ್ಪು ಎಂದು ವ್ಯಾಖ್ಯಾನ ಮಾಡೋಕಾಗಲ್ಲ.‌ ಆದರೆ ಓಮಿಕ್ರಾನ್ ಬಗ್ಗೆ ಭಯಪಡಬೇಕಿಲ್ಲ ಎಂದು ವಿಜ್ಞಾನಿಗಳೇ ಹೇಳಿದ್ದಾರೆ.‌ ಮೂಗು ಇರುವವರಿಗೆ ನೆಗಡಿ ತಪ್ಪಲ್ಲ, ನೆಗಡಿ ಬಂದರೆ ಆತಂಕ ಪಡಬೇಕಾದ ಅವಶ್ಯಕತೆ ಇಲ್ಲ.‌

ಸರ್ಕಾರ ಕೂಡ ಜನರನ್ನ ಅನಗತ್ಯ ಭಯಕ್ಕೆ  ಒಳಪಡಿಸಬಾರದು.‌ ಸದ್ಯ ಜನಜೀವನ ಸಹಜ ಸ್ಥಿತಿಯಲ್ಲಿದೆ, ಆದ್ರೆ ಎಚ್ಚರ ವಹಿಸಬೇಕು. ಅನಗತ್ಯ ಭಯ ಹುಟ್ಟಿಸುವ ಕೆಲಸವನ್ನು ಯಾರೂ ಮಾಡಬಾರದು ಎಂದು ಸರ್ಕಾರದ ನಿರ್ಣಯದ ವಿರುದ್ಧ ಸಿ.ಟಿ ರವಿ ಪರೋಕ್ಷವಾಗಿ ಟೀಕೆ ಮಾಡಿದ್ದಾರೆ. ‌

ಈಶ್ವರ, ಅಲ್ಲಾ, ಜೀಸಸ್ ಮೂವರನ್ನೂ ಒಪ್ಪಿದರೆ ಸಂಘರ್ಷ ಇರಲ್ಲ ! 

ಅಲ್ಲಾ, ಈಶ್ವರ, ಜೀಸಸ್ ಮೂವರನ್ನೂ ದೇವರೆಂದು ಒಪ್ಪಿಕೊಂಡರೆ ಜಗತ್ತಿನಲ್ಲಿ ಸಂಘರ್ಷ ಇರೋದಿಲ್ಲ ಎಂದು ಸಿ ಟಿ ರವಿ, ಇದೇ ವೇಳೆ ಸರ್ವಧರ್ಮ ಸಮನ್ವಯದ ಅಗತ್ಯದ ಬಗ್ಗೆ ಪಾಠ ಮಾಡಿದ್ದಾರೆ. ‌ಒಬ್ಬ ಹಿಂದೂವಾಗಿ ಜೀಸಸ್, ಅಲ್ಲಾನನ್ನ ದೇವರು ಎಂದು ಒಪ್ಪಿಕೊಳ್ಳಬಹುದು.‌ ಹಿಂದೂವಾಗಿ ಚರ್ಚ್, ಮಸೀದಿಗೂ ಕೂಡ ಹೋಗಬಹುದು. ನಮ್ಮಲ್ಲಿ ದೇವನೊಬ್ಬ ನಾಮ ಹಲವು ಎಂಬ ತತ್ವವಿದೆ.‌ ಆದರೆ ಇಸ್ಲಾಂ ಆದ ತಕ್ಷಣ ಮಸೀದಿ ಹೊರತುಪಡಿಸಿ ದೇವಸ್ಥಾನದ ಬಾಗಿಲು ಬಂದ್ ಆಗುತ್ತೆ.‌

ಇಸ್ಲಾಂ, ಕ್ರಿಶ್ಚಿಯನ್ ಧರ್ಮಗಳಲ್ಲಿ ಉಳಿದ ದೇವರುಗಳ ಅಸ್ತಿತ್ವದ ಬಗ್ಗೆ ನಿರಾಕರಣೆ ಇದೆ.‌ ಈ ವಿಚಾರದಲ್ಲಿ ಎರಡು ಧರ್ಮಗಳು ಆಲೋಚನೆ ಮಾಡಿದರೆ ಉತ್ತಮ. ಆಗ ಮಾತ್ರ, ಎಷ್ಟು ಮತ ಇದೆಯೋ ಅಷ್ಟು ಮತ ಅನ್ನೋ ಮುಕ್ತ ಭಾವಕ್ಕೆ ಅವಕಾಶ ಸಿಗುತ್ತೆ. ಜಗತ್ತಿನಲ್ಲಿ ಶಾಂತಿ ನೆಲೆಸಲು ಇರುವ ಅಡೆತಡೆಗಳನ್ನು ನಿವಾರಿಸೋಕೆ ಸಾಧ್ಯವಿದೆ. ಈ ನಿಟ್ಟಿನಲ್ಲಿ ಎಲ್ಲರೂ ಆಲೋಚನೆ ಮಾಡಿದರೆ ಜಗತ್ತು ಸುಖವಾಗಿರುತ್ತೆ ಎಂದು ಬಿಜೆಪಿ ನಾಯಕ ಸಿ.ಟಿ ರವಿ ಪ್ರತಿಕ್ರಿಯಿಸಿದರು.

CT Ravi who spoke in Chikmagalur to the media persons stated that he's not happy with Night Curfew in Karnataka, says dont create panic among people.