ಮೆಹಂದಿ ಪಾರ್ಟಿಯಲ್ಲಿ ಲಾಠಿಚಾರ್ಜ್ ; ಪೊಲೀಸರ ಪ್ರತಿದೂರಿಗೆ ಸಿದ್ದರಾಮಯ್ಯ ಆಕ್ರೋಶ, ಸಚಿವ ಕೋಟಾಗೆ ತಿಳಿಯದೆ ಪ್ರಕರಣ ದಾಖಲಿಸಿದ್ದಾರೆಯೇ ?

31-12-21 10:29 pm       HK Desk news   ಕರಾವಳಿ

ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ವಿವಾದಕ್ಕೆ ತಿರುಗುತ್ತಲೇ ದೂರು- ಪ್ರತಿ ದೂರು ದಾಖಲಾಗಿದೆ. ಕೊರಗ ಕಾಲನಿಯ ನಿವಾಸಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಈಗ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.

ಉಡುಪಿ, ಡಿ.31 : ಕೊರಗ ಸಮುದಾಯದ ಮೆಹಂದಿ ಕಾರ್ಯಕ್ರಮದಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ ಘಟನೆ ವಿವಾದಕ್ಕೆ ತಿರುಗುತ್ತಲೇ ದೂರು- ಪ್ರತಿ ದೂರು ದಾಖಲಾಗಿದೆ. ಪೊಲೀಸರ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ, ಪೊಲೀಸರು ಕೂಡ ತಮ್ಮ ಮೇಲೆ ಅಲ್ಲಿನ ಯುವಕರು ಹಲ್ಲೆಗೆ ಯತ್ನಿಸಿದ್ದಾರೆ ಎಂದು ಪ್ರತಿ ದೂರು ದಾಖಲಿಸಿದ್ದಾರೆ. ಕೊರಗ ಕಾಲನಿಯ ನಿವಾಸಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದು ಈಗ ರಾಜ್ಯದ ಗಮನ ಸೆಳೆಯುವಂತೆ ಮಾಡಿದೆ.

ಘಟನೆ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಆಕ್ರೋಶ ವ್ಯಕ್ತಪಡಿಸಿದ್ದು, ಟ್ವೀಟ್ ನಲ್ಲಿ ಸಮಾಜ ಕಲ್ಯಾಣ ಇಲಾಖೆಯ ಸಚಿವ ಕೋಟ ಶ್ರೀನಿವಾಸ ಪೂಜಾರಿ ವಿರುದ್ಧ ಹರಿಹಾಯ್ದಿದ್ದಾರೆ. ಪೊಲೀಸರ ಈ ಕೃತ್ಯ ನಾಚಿಕೆಗೇಡು, ಅಮಾನವೀಯ. ಪೊಲೀಸರು ದಾಖಲಿಸಿದ ಪ್ರಕರಣವನ್ನು ತಕ್ಷಣ ವಾಪಸ್ ಪಡೆಯಬೇಕು. ತಪ್ಪಿತಸ್ಥ ಪೊಲೀಸರ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿರುವ ಸಿದ್ದರಾಮಯ್ಯ, ಕೋಟ ಶ್ರೀನಿವಾಸ ಪೂಜಾರಿ ಗಮನಕ್ಕೆ ಬರದೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆಯೇ ? ಹಾಗೆ ನಡೆದಿದ್ದರೆ ಕೋಟ ಒಬ್ಬ ಅಸಮರ್ಥ ಸಚಿವ. ಹಿಂದುಗಳೆಲ್ಲ ಒಂದು ಎನ್ನುವ ಬಿಜೆಪಿಯವರೇ ನಿಮ್ಮೊಳಗೆ ಕೊರಗರು ಸೇರಿಲ್ಲವೇ ಎಂದು ಪ್ರಶ್ನೆ ಮಾಡಿದ್ದಾರೆ.

ಸಿದ್ದರಾಮಯ್ಯ ಟ್ವೀಟ್ ಮೂಲಕ ಖಡಕ್ ಪ್ರಶ್ನೆ ಮುಂದಿಟ್ಟಿರುವುದು ಈಗ ವೈರಲ್ ಆಗಿದೆ. ಅಲ್ಲದೆ, ಸಚಿವ ಕೋಟ ಅವರ ಊರಿನಲ್ಲೇ ಈ ಘಟನೆ ನಡೆದಿರುವ ಹಿನ್ನೆಲೆಯಲ್ಲಿ ಸಚಿವರಿಗೆ ಇರಿಸು ಮುರಿಸು ತಂದಿದೆ. ಮೆಹಂದಿ ಪಾರ್ಟಿಯಲ್ಲಿ ಪೊಲೀಸರು ಲಾಠಿಚಾರ್ಜ್ ನಡೆಸಿದ್ದು ವಿವಾದ ಆಗುತ್ತಲೇ ಸಚಿವ ಕೋಟ ಶ್ರೀನಿವಾಸ ಪೂಜಾರಿ ಸ್ಥಳಕ್ಕೆ ಭೇಟಿ ನೀಡಿ ಕೊರಗ ಸಮುದಾಯಕ್ಕೆ ಬೆಂಬಲ ವ್ಯಕ್ತಪಡಿಸಿದ್ದರು. ಪೊಲೀಸರ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೂಡ ಸ್ಥಳಕ್ಕೆ ಭೇಟಿ ಇತ್ತು ಮಾಹಿತಿ ಪಡೆದುಕೊಂಡು ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳುವ ಆಶ್ವಾಸನೆ ನೀಡಿದ್ದರು.

ಆದರೆ ಇದರ ಬೆನ್ನಲ್ಲೇ ಲಾಠಿಚಾರ್ಜ್ ನಲ್ಲಿ ಭಾಗಿಯಾಗಿದ್ದ ಕೋಟ ಠಾಣೆಯ ಕಾನ್ ಸ್ಟೇಬಲ್ ಜಯರಾಮ್, ಕಾಲನಿ ನಿವಾಸಿಗಳಿಂದಲೇ ತಮ್ಮ ಮೇಲೆ ಹಲ್ಲೆಯಾಗಿದೆ ಎಂದು ಪ್ರತಿ ದೂರು ನೀಡಿದ್ದು ಕೋಟ ಠಾಣೆಯಲ್ಲಿ ದಾಖಲಾಗಿದೆ. ಈ ವಿಚಾರ ಈಗ ರಾಜಕೀಯ ಬಣ್ಣಕ್ಕೆ ತಿರುಗಿದ್ದು, ಕಾಂಗ್ರೆಸ್ ನಾಯಕರು ಹಿಂದುಳಿದ ವರ್ಗದ ಮೇಲಾದ ಅನ್ಯಾಯದಲ್ಲಿ ಬಿಜೆಪಿ ಸರಕಾರ ಪೊಲೀಸರ ಪರ ವಹಿಸುತ್ತಿದೆಯೇ ಎಂದು ಪ್ರಶ್ನೆ ಮಾಡಿದೆ.

Kundapur Police Assault Guests at Koraga community Mehandi Function, Congress leader Siddaramaiah slams BJP leaders for atrocity.