ಮಂಗಳೂರು ದಕ್ಷಿಣ ಎಸಿಪಿ ರಂಜಿತ್ ಬಂಡಾರು, ಎಎಸ್ಪಿ ಶಿವಕುಮಾರ್ ಎಸ್ಪಿ ದರ್ಜೆಗೆ ಭಡ್ತಿ - ವರ್ಗ

02-01-22 06:38 pm       Mangalore Correspondent   ಕರಾವಳಿ

ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ಆಗಿರುವ ರಂಜಿತ್ ಕುಮಾರ್ ಬಂಡಾರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಿಭಾಗದಲ್ಲಿ ಎಎಸ್ಪಿ ಆಗಿದ್ದ ಶಿವಕುಮಾರ್ ಅವರಿಗೆ ಎಸ್ಪಿ ದರ್ಜೆಗೆ ಭಡ್ತಿ ನೀಡಲಾಗಿದ್ದು ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ.

ಮಂಗಳೂರು, ಜ.2 : ಮಂಗಳೂರು ನಗರ ದಕ್ಷಿಣ ಉಪ ವಿಭಾಗದ ಎಸಿಪಿ ಆಗಿರುವ ರಂಜಿತ್ ಕುಮಾರ್ ಬಂಡಾರು ಮತ್ತು ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಿಭಾಗದಲ್ಲಿ ಎಎಸ್ಪಿ ಆಗಿದ್ದ ಶಿವಕುಮಾರ್ ಅವರಿಗೆ ಎಸ್ಪಿ ದರ್ಜೆಗೆ ಭಡ್ತಿ ನೀಡಲಾಗಿದ್ದು ಬೆಂಗಳೂರಿಗೆ ವರ್ಗಾವಣೆ ಆಗಿದ್ದಾರೆ.

2017ನೇ ಸಾಲಿನ ಕರ್ನಾಟಕ ಕೇಡರ್ ಐಪಿಎಸ್ ಅಧಿಕಾರಿಯಾಗಿರುವ ರಂಜಿತ್ ಕುಮಾರ್ ಬಂಡಾರು, ಒಂದು ವರ್ಷದ ಹಿಂದೆ ಜನವರಿಯಲ್ಲಿ ಮಂಗಳೂರಿಗೆ ಎಸಿಪಿ ಆಗಿ ಬಂದಿದ್ದರು. ಇದೀಗ ಅವರನ್ನು ಬೆಂಗಳೂರಿನ ಸೆಂಟರ್ ಫಾರ್ ಕೌಂಟರ್ ಟೆರರಿಸಂ (ಭಯೋತ್ಪಾದನಾ ವಿರೋಧಿ ದಳ) ಎಸ್ಪಿ ಆಗಿ ನೇಮಕ ಮಾಡಲಾಗಿದೆ.

ರಂಜಿತ್ ಕುಮಾರ್ ಬಂಡಾರು ಮಂಗಳೂರಿನಲ್ಲಿದ್ದು ಪ್ರಮುಖ ಕಾರ್ಯಾಚರಣೆಗಳಲ್ಲಿ ನೇತೃತ್ವ ವಹಿಸಿದ್ದಾರೆ. ಕೊಣಾಜೆಯಲ್ಲಿ ಕಾರಿನಲ್ಲಿ ಸಿಕ್ಕಿದ್ದ ಡ್ರಗ್ಸ್ ಹಿಂದೆ ಬಿದ್ದು ಬೆಂಗಳೂರಿನಲ್ಲಿ ಅಡಗಿದ್ದ ಡ್ರಗ್ಸ್ ವಹಿವಾಟುದಾರರನ್ನು ಬಂಧಿಸಿದ್ದರಲ್ಲಿ ರಂಜಿತ್ ಕುಮಾರ್ ಪಾತ್ರ ಇತ್ತು. ಇತ್ತೀಚೆಗೆ ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ನೀಡಿ ತಲೆಮರೆಸಿಕೊಂಡಿದ್ದ ವಕೀಲನ ಪ್ರಕರಣವನ್ನೂ ರಂಜಿತ್ ಕುಮಾರ್ ಅವರಿಗೆ ವಹಿಸಲಾಗಿತ್ತು. ಅದಕ್ಕೂ ಹಿಂದೆ ಉಳಾಯಿಬೆಟ್ಟು ಟೈಲ್ಸ್ ಫ್ಯಾಕ್ಟರಿಯಲ್ಲಿ ಎಂಟು ವರ್ಷದ ಹುಡುಗಿಯನ್ನು ಅತ್ಯಾಚಾರಗೈದು ಕೊಲೆಗೈದ ಪ್ರಕರಣದ ಆರೋಪಿಗಳ ಪತ್ತೆ ಕಾರ್ಯವನ್ನೂ ರಂಜಿತ್ ಕುಮಾರ್ ಕೆಲವೇ ಗಂಟೆಗಳಲ್ಲಿ ಮಾಡಿದ್ದರು.

ಆಂಧ್ರ ಪ್ರದೇಶ ಮೂಲದ ಅಧಿಕಾರಿಯಾಗಿರುವ ರಂಜಿತ್ ಕುಮಾರ್, ತುಂಬ ಸೈಲಂಟಾಗಿ ಕೆಲಸ ನಿರ್ವಹಿಸುವುದರಲ್ಲಿ ನಿಸ್ಸೀಮರಾಗಿದ್ದರು. ಡಿಸಿಪಿ ಹರಿರಾಮ್ ಶಂಕರ್ ಮತ್ತು ಪೊಲೀಸ್ ಕಮಿಷನರ್ ಶಶಿಕುಮಾರ್ ಅವರ ಮಾರ್ಗದರ್ಶನದಲ್ಲಿ ರಂಜಿತ್ ಕುಮಾರ್ ಉತ್ತಮ ಕಾರ್ಯಾಚರಣೆಗಳನ್ನು ಮಾಡಿದ್ದಾರೆ. ಇದೇ ವೇಳೆ, ಎಸಿಪಿ ಹರಿರಾಮ್ ಶಂಕರ್ ಅವರು ಕೂಡ ವರ್ಗಾವಣೆ ಬಯಸಿ ತೆರೆಮರೆಯ ಪ್ರಯತ್ನ ನಡೆಸಿದ್ದಾರೆ ಎನ್ನಲಾಗಿತ್ತು. ಆದರೆ ಅವರ ವರ್ಗಾವಣೆ ಸಾಧ್ಯವಾಗಿಲ್ಲ.

ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ವಿಭಾಗದಲ್ಲಿ ಎಎಸ್ಪಿ ಆಗಿದ್ದ 2019ನೇ ಬ್ಯಾಚ್ ಐಪಿಎಸ್ ಅಧಿಕಾರಿ ಡಾ.ಶಿವಕುಮಾರ್ ಅವರನ್ನು ಎಸ್ಪಿ ದರ್ಜೆಗೆ ಭಡ್ತಿ ನೀಡಲಾಗಿದ್ದು, ಬೆಂಗಳೂರಿನ ಗುಪ್ತಚರ ವಿಭಾಗದ ಎಸ್ಪಿ ಆಗಿ ನೇಮಕ ಮಾಡಲಾಗಿದೆ. ಇದೇ ವೇಳೆ, ರಂಜಿತ್ ಕುಮಾರ್ ಅವರಿಂದ ತೆರವಾಗುವ ಮಂಗಳೂರು ನಗರ ದಕ್ಷಿಣ ಉಪವಿಭಾಗದ ಎಸಿಪಿ ಹುದ್ದೆಗೆ 2019ನೇ ಬ್ಯಾಚ್ ಐಪಿಎಸ್ ಅಧಿಕಾರಿ ದೀಪನ್ ಎಂ.ಎನ್. ಅವರನ್ನು ನೇಮಕ ಮಾಡಲಾಗಿದೆ. ದೀಪನ್, ಕಲಬುರ್ಗಿ ನಗರದಲ್ಲಿ ಎಸಿಪಿ ಆಗಿ ಕಾರ್ಯ ನಿರ್ವಹಿಸುತ್ತಿದ್ದರು.

Ranjith Kumar Bandaru IPS, working assistant commissioner of police (ACP) Mangaluru South Sub-Division, Mangaluru city has been promoted and posted until further order as SP Center for Counter Terrorism, Bengaluru. Dr Shivakumar, IPS, additional superintendent of police (ASP), Dakshina Kannada, is posted with immediate and until further orders as SP of Intelligence, Bengaluru.