ಆಡಿನ ಮರಿಗಾಗಿ ಜೀವವನ್ನೇ ತೆತ್ತ ಯುವಕ ! ಕಾಲು ಕಳಕೊಂಡಿದ್ದ ಯುವಕ ಆಸ್ಪತ್ರೆಯಲ್ಲಿ ಮೃತ್ಯು!

02-01-22 10:59 pm       Mangalore Correspondent   ಕರಾವಳಿ

ಆಡಿನ ಮರಿಯನ್ನು ರಕ್ಷಿಸಲು ಹೋಗಿ ಎರಡೂ ಕಾಲುಗಳನ್ನು ಕಳಕೊಂಡಿದ್ದ 21ರ ಹರೆಯದ ಯುವಕ ಕೊನೆಗೂ ಬದುಕಿ ಬರಲಿಲ್ಲ. ಕಾಲು ಕಳಕೊಂಡ ಬಳಿಕ ಮಾನಸಿಕವಾಗಿ ತೀವ್ರ ಆಘಾತ ಅನುಭವಿಸಿದ್ದ ಚೇತನ್ ಇಂದು ಕೊನೆಯುಸಿರು ಎಳೆದಿದ್ದಾರೆ.

ಮಂಗಳೂರು, ಜ.2 : ಆಡಿನ ಮರಿಯನ್ನು ರಕ್ಷಿಸಲು ಹೋಗಿ ಎರಡೂ ಕಾಲುಗಳನ್ನು ಕಳಕೊಂಡಿದ್ದ 21ರ ಹರೆಯದ ಯುವಕ ಕೊನೆಗೂ ಬದುಕಿ ಬರಲಿಲ್ಲ. ಕಾಲು ಕಳಕೊಂಡ ಬಳಿಕ ಮಾನಸಿಕವಾಗಿ ತೀವ್ರ ಆಘಾತ ಅನುಭವಿಸಿದ್ದ ಚೇತನ್ ಇಂದು ಕೊನೆಯುಸಿರು ಎಳೆದಿದ್ದಾರೆ.

ಕಳೆದ ಆಗಸ್ಟ್ ತಿಂಗಳ ಕೊನೆಯಲ್ಲಿ ಜೋಕಟ್ಟೆ ಬಳಿಯ ಅಂಗರಗುಂಡಿ ಎಂಬಲ್ಲಿ ದುರಂತ ನಡೆದಿತ್ತು. ತನ್ನ ಮನೆಯಿಂದ ಜೋಕಟ್ಟೆಯ ರೈಲ್ವೇ ಗೇಟನ್ನು ದಾಟಿಕೊಂಡು ಬಸ್ಸಿನ ನಿರ್ವಾಹಕನ ಕೆಲಸಕ್ಕೆ ಓಡುತ್ತಿದ್ದ ಚೇತನ್, ರೈಲು ಬರುತ್ತಿದ್ದ ಹಳಿಯಲ್ಲಿ ಆಡಿನ ಮರಿ ಇದ್ದುದನ್ನು ನೋಡಿ ಅದರ ರಕ್ಷಣೆಗೆ ಧಾವಿಸಿದ್ದರು. ಆಡಿನ ಮರಿಯನ್ನು ಹೊರಗೆಸೆದು ಹಳಿಯಿಂದ ಹೊರಬೀಳುವಷ್ಟರಲ್ಲಿ ರೈಲು ಆತನ ಎರಡೂ ಕಾಲುಗಳ ಮೇಲಿನಿಂದ ಸಾಗಿತ್ತು. ಕೂಡಲೇ ಕಾಲಿನ ಜೊತೆಯೇ ಮಂಗಳೂರಿನ ಎಜೆ ಆಸ್ಪತ್ರೆಗೆ ಚೇತನ್ ಅವರನ್ನು ದಾಖಲು ಮಾಡಲಾಗಿತ್ತು. ಆದರೆ ಕಾಲು ಜೋಡಣೆ ಸಾಧ್ಯವಾಗಿರಲಿಲ್ಲ.

ನಾಲ್ಕು ತಿಂಗಳಿಂದ ಆಸ್ಪತ್ರೆಯಲ್ಲಿ ಚಿಕಿತ್ಸೆ ನಡೆದಿತ್ತು. ಬಸ್ಸಿನ ಸಿಬಂದಿ, ಜೋಕಟ್ಟೆಯ ಯುವಕರು ಭಿಕ್ಷೆ ಎತ್ತಿ ಚೇತನ್ ಚಿಕಿತ್ಸೆಗಾಗಿ ಹಣ ಒಟ್ಟು ಮಾಡಿದ್ದರು. ನಡುವೆ ಸ್ವಲ್ಪ ಚೇತರಿಸಿಕೊಂಡಿದ್ದ ಚೇತನ್ ಒಮ್ಮೆ ಮನೆಗೂ ಬಂದಿದ್ದ. ಆನಂತರ ಮಾನಸಿಕವಾಗಿ ಕುಗ್ಗಿದ ಚೇತನ್ ಅವರನ್ನು ಮತ್ತೆ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಜ.2ರಂದು ಆಸ್ಪತ್ರೆಯಲ್ಲೇ ಕೊನೆಯುಸಿರು ಎಳೆದಿದ್ದಾರೆ. ಇಬ್ಬರು ತಂಗಿಯರನ್ನು ಹೊಂದಿದ್ದ ಕುಟುಂಬಕ್ಕೆ ಏಕೈಕ ಆಧಾರವಾಗಿದ್ದ ಚುರುಕಿನ ಹುಡುಗ ಚೇತನ್ ಅಗಲಿಕೆ ಸ್ಥಳೀಯ ಯುವಕರಲ್ಲಿ ಶೋಕ ಸಾಗರ ಸೃಷ್ಟಿಸಿದೆ.

ಜೋಕಟ್ಟೆ ; ರೈಲಿನಡಿಗೆ ಬೀಳುತ್ತಿದ್ದ ಆಡಿನ ಮರಿ ರಕ್ಷಿಸಲು ಹೋಗಿದ್ದ ಯುವಕ ತಂದುಕೊಂಡ ದುರಂತ !

Mangalore 21 year old bus conductor who saved goat from train accident dies at hospital after six months of suffering. Cheatan had lost both his legs in train accident after he went to save the goats on the track at Jokatte.