ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನವೋ, ಅಕಾಡೆಮಿ ಕಚೇರಿಯೋ ? ಕಚೇರಿ ಕಟ್ಟಡಕ್ಕೆ ತರಾತುರಿ ಶಿಲಾನ್ಯಾಸ ; ಸಚಿವ, ಶಾಸಕ, ಜಿಲ್ಲಾಧಿಕಾರಿಗಿಲ್ಲ ಆಹ್ವಾನ ! ಅಕಾಡೆಮಿ ಅಧ್ಯಕ್ಷರ ಏಕಪಕ್ಷೀಯ ನಿರ್ಧಾರ 

03-01-22 09:54 pm       Mangalore Correspondent   ಕರಾವಳಿ

ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆಂದು ನಿಗದಿಪಡಿಸಿದ್ದ ಜಾಗದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿ ಕಟ್ಟಡಕ್ಕೆ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ತರಾತುರಿಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಶಿಲಾನ್ಯಾಸ ನೆರೆವೇರಿಸಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆದಿದ್ದು ಸ್ಥಳೀಯರಿಂದ ವ್ಯಾಪಕ ಟೀಕೆ ಕೇಳಿಬಂದಿದೆ. 

Photo credits : Headline Karnataka

ಉಳ್ಳಾಲ, ಜ.3 : ತೊಕ್ಕೊಟ್ಟಿನಲ್ಲಿ ಬ್ಯಾರಿ ಭವನಕ್ಕೆಂದು ನಿಗದಿಪಡಿಸಿದ್ದ ಜಾಗದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿಯ ಕಚೇರಿ ಕಟ್ಟಡಕ್ಕೆ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ತರಾತುರಿಯಲ್ಲಿ ಶಿಷ್ಟಾಚಾರ ಉಲ್ಲಂಘಿಸಿ ಶಿಲಾನ್ಯಾಸ ನೆರೆವೇರಿಸಿದ್ದಾರೆ. ಜಿಲ್ಲೆಯ ಸಚಿವರು, ಶಾಸಕರು, ಜಿಲ್ಲಾಧಿಕಾರಿಗಳ ಅನುಪಸ್ಥಿತಿಯಲ್ಲಿ ಶಿಲಾನ್ಯಾಸ ನಡೆದಿದ್ದು ಸ್ಥಳೀಯರಿಂದ ವ್ಯಾಪಕ ಟೀಕೆ ಕೇಳಿಬಂದಿದೆ. 

ತೊಕ್ಕೊಟ್ಟಿನಲ್ಲಿ 6 ಕೋಟಿ ವೆಚ್ಚದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕಾಗಿ ಇತ್ತೀಚೆಗೆ ಜಾಗ ನಿಗದಿ ಮಾಡಲಾಗಿತ್ತು. ಆದರೆ ಬ್ಯಾರಿ ಭವನ ನಿರ್ಮಾಣದ ಪ್ರಸ್ತಾಪಕ್ಕೆ ಹಿಂದು ಮಹಾಸಭಾ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಪದಾಧಿಕಾರಿಗಳು ತೀವ್ರ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ ಹಿನ್ನೆಲೆಯಲ್ಲಿ ಬ್ಯಾರಿ ಭವನ ಶಿಲಾನ್ಯಾಸ ಕಾರ್ಯಕ್ರಮ ರದ್ದು ಪಡಿಸಲಾಗಿತ್ತು. ಆದರೆ ಇಂದು ಬೆಳಗ್ಗೆ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್, ಯಾರ ಗಮನಕ್ಕೂ ತಾರದೆ ತೊಕ್ಕೊಟ್ಟಿನ ಕೇಂದ್ರ ಬಸ್ ನಿಲ್ದಾಣ ಬಳಿಯ 25 ಸೆಂಟ್ಸ್ ಜಾಗದಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ವಿವಾದ ಎಬ್ಬಿಸಿದ್ದಾರೆ. 

ಸರಕಾರದ ಮೂರು ಕೋಟಿ ಅನುದಾನದಲ್ಲಿ ನಿರ್ಮಾಣಗೊಳ್ಳಲಿರುವ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿ ಕಟ್ಟಡಕ್ಕೆ ಶಿಲಾನ್ಯಾಸ ನಡೆಸಿದ್ದಾಗಿ ರಹೀಂ ಉಚ್ಚಿಲ್ ಹೇಳಿಕೊಂಡಿದ್ದಾರೆ. ವಿಶೇಷವೆಂದರೆ ಇಂದು ನಡೆದ ಸರಕಾರಿ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮಕ್ಕೆ ಕನಿಷ್ಠ ಉಳ್ಳಾಲ ನಗರ ಪೌರಾಯುಕ್ತರನ್ನೂ ಆಹ್ವಾನಿಸಿರಲಿಲ್ಲ. ಆಮಂತ್ರಣ ಪತ್ರಿಕೆಯನ್ನೂ ಮುದ್ರಿಸಿಲ್ಲ, ಮಾಧ್ಯಮದ ಮಂದಿಯನ್ನೂ ಆಹ್ವಾನಿಸಿಲ್ಲ. ಶಿಷ್ಟಾಚಾರದ ಪ್ರಕಾರ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರು, ಸಂಸದರು, ಸ್ಥಳೀಯ ಶಾಸಕರು, ಜಿಲ್ಲಾಧಿಕಾರಿಗಳನ್ನ ಶಿಲಾನ್ಯಾಸ ಆಹ್ವಾನಿಸಿ ಕಾರ್ಯಕ್ರಮ ಮಾಡಬೇಕಿತ್ತು. ಆದರೆ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ಶಾಸಕರು, ಅಧಿಕಾರಿಗಳನ್ನು ಕರೆಯದೆ ತಮ್ಮ ಇಲಾಖೆಯ ರಿಜಿಸ್ಟ್ರಾರ್ ಪೂರ್ಣಿಮಾ ಮತ್ತು ಸಿಬ್ಬಂದಿಗಳ ಜೊತೆ ಇಂದು ಬೆಳಗ್ಗೆ ದಿಢೀರನೆ ಬಂದು ಪೊಲೀಸ್ ರಕ್ಷಣೆಯೊಂದಿಗೆ ಶಿಲಾನ್ಯಾಸ ನೆರವೇರಿಸಿದ್ದಾರೆ. ತೊಕ್ಕೊಟ್ಟು ಕೇಂದ್ರ ಬಸ್ಸು ನಿಲ್ದಾಣದ ಟ್ಯಾಕ್ಸಿ ಚಾಲಕರು ನೋಡ, ನೋಡುತ್ತಿದ್ದಂತೆಯೇ ಇಂದು ಬೆಳಗ್ಗೆ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಸ್ಥಳಕ್ಕಾಮಿಸಿ ತರಾತುರಿಯಲ್ಲಿ ಶಾಮಿಯಾನ ಹಾಕಿಸಿ ಅರ್ಚಕರಿಂದ ಶಿಲಾನ್ಯಾಸ ನೆರೆವೇರಿಸಿದ್ದಾರೆ. 

ಈ ಬಗ್ಗೆ ರಹೀಂ ಉಚ್ಚಿಲ್ ಪ್ರತಿಕ್ರಿಯಿಸಿದ್ದು ತೊಕ್ಕೊಟ್ಟಿನಲ್ಲಿ ‌ಈ ಹಿಂದೆ 6 ಕೋಟಿ ಅನುದಾನದಲ್ಲಿ ಬ್ಯಾರಿ ಭವನ ನಿರ್ಮಾಣಕ್ಕೆ ಹಿಂದು ಮತ್ತು ಇತರ ಸಂಘಟನೆಗಳ ವಿರೋಧ ವ್ಯಕ್ತವಾಗಿತ್ತು. ವಿರೋಧ ವ್ಯಕ್ತ ಪಡಿಸಿದ ಅಖಿಲ ಭಾರತ ಹಿಂದು ಮಹಾಸಭಾ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಮುಖಂಡರೊಂದಿಗೆ ತಾನು ಮಾತುಕತೆ ನಡೆಸಿದ್ದೇನೆ. ಅವರು ಬ್ಯಾರಿ ಭವನ ನಿರ್ಮಾಣಕ್ಕೆ ತಮ್ಮ ವಿರೋಧ, ಸರಕಾರಿ ಅಕಾಡೆಮಿ ಕಚೇರಿ ನಿರ್ಮಾಣಕ್ಕೆ ತಮ್ಮ ವಿರೋಧ ಇಲ್ಲ ಎಂದು ಹೇಳಿದ್ದಾರೆ. ಆ ನಿಟ್ಟಿನಲ್ಲಿ ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣ ಬಳಿಯ 25 ಸೆಂಟ್ಸ್ ಜಾಗದಲ್ಲಿ ಸರಕಾರದ 3 ಕೋಟಿ ಅನುದಾನದಲ್ಲಿ ಒಂದು ಅಂತಸ್ತಿನ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಯನ್ನು ನಿರ್ಮಿಸಲು ಉದ್ದೇಶಿಸಿರುವುದಾಗಿ ಹೇಳಿದ್ದಾರೆ. ಕಚೇರಿಯು ರಿಜಿಸ್ಟ್ರಾರ್ ಕಚೇರಿ, ಗ್ರಂಥಾಲಯವನ್ನು ಒಳಗೊಂಡಿರಲಿದೆ ಎಂದಿದ್ದಾರೆ. ಯಾವುದೇ ಘರ್ಷಣೆಗೆ ಅವಕಾಶ ನೀಡದಂತೆ ಶಿಲಾನ್ಯಾಸ ನಡೆಸಿದ್ದು ಮೂರು ತಿಂಗಳ ಬಳಿಕ ಮುಖ್ಯಮಂತ್ರಿ ಸೇರಿ ಎಲ್ಲರನ್ನೂ ಆಹ್ವಾನಿಸಿ ಕಾರ್ಯಕ್ರಮ ನಡೆಸಲಾಗುವುದೆಂದಿದ್ದಾರೆ.  ಅಲ್ಲದೆ ಅಕಾಡೆಮಿ ಕಟ್ಟಡದಲ್ಲಿ ಜಿಲ್ಲಾ ಸರ್ವೇಯರ್ ಕಚೇರಿಗೆ 2,000 ಚದರ ಅಡಿ ಸ್ಥಳವನ್ನು ಮೀಸಲಿರಿಸುವುದಾಗಿ ಹೇಳಿದ್ದಾರೆ. 

ಈ ಬಗ್ಗೆ ಅಖಿಲ ಭಾರತ ಹಿಂದೂ ಮಹಾಸಭಾದ ರಾಜ್ಯಾಧ್ಯಕ್ಷ ಎಲ್.ಕೆ ಸುವರ್ಣ ಅವರು ಪ್ರತಿಕ್ರಿಯಿಸಿದ್ದು ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ರಹೀಂ ಉಚ್ಚಿಲ್ ಅವರು ದೂರವಾಣಿ ಮುಖಾಂತರ ಸಂಪರ್ಕಿಸಿ ವಿಚಾರ ಪ್ರಸ್ತಾಪಿಸಿದ್ದಾರೆ. ಅದು ಬಿಟ್ಟು ಜಿಲ್ಲಾಧಿಕಾರಿಗಳ ಸಮಕ್ಷಮದಲ್ಲಿ ಸಭೆಯನ್ನ ನಡೆಸಿಲ್ಲ. ಇಂದು ದಿಢೀರ್ ಆಗಿ ನಡೆದ ಶಿಲಾನ್ಯಾಸದ ಬಗ್ಗೆನೂ ಮಾಹಿತಿ ನೀಡಿಲ್ಲ ಎಂದಿದ್ದಾರೆ. 

ಈ ನಡುವೆ, ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿಯ ಗಮನಕ್ಕೂ ತಾರದೆ ಅಕಾಡೆಮಿ ಕಚೇರಿಗೆ ಶಿಲಾನ್ಯಾಸ ನಡೆಸಲಾಗಿದೆ ಎಂದು ಸಮಿತಿ ಅಧ್ಯಕ್ಷ ದಿನಕರ್ ಉಳ್ಳಾಲ್ ತಿಳಿಸಿದ್ದಾರೆ. ತೊಕ್ಕೊಟ್ಟು ಕೇಂದ್ರ ಬಸ್ ನಿಲ್ದಾಣದ ಬಳಿ ಅಬ್ಬಕ್ಕ ಭವನ ನಿರ್ಮಾಣಕ್ಕೆ ಶಿಲಾನ್ಯಾಸ ನಡೆದಿದ್ದು ಭವನ ಇನ್ನೂ ನಿರ್ಮಾಣವಾಗಿಲ್ಲ. ಆದರೆ ಅದೇ ಜಾಗದ ಪಕ್ಕದಲ್ಲಿ ತರಾತುರಿಯಲ್ಲಿ ಬ್ಯಾರಿ ಸಾಹಿತ್ಯ ಅಕಾಡೆಮಿ ಕಚೇರಿಗೆ ಶಿಲಾನ್ಯಾಸ ನೆರವೇರಿಸಿದ್ದರ ಹಿಂದೆ ಏನೋ ಷಡ್ಯಂತ್ರ ಅಡಗಿದೆ ಎಂದು ದಿನಕರ್ ಆರೋಪಿಸಿದ್ದಾರೆ.

Mangalore Construction of Beary academy office in Thokottu, foundation stone laid without calling any leaders by president Rahim Uchil. The foundation stone laying programme for the construction of Karnataka Beary Sahitya Academy office building on a 25-cent land at Thokottu was scheduled on January 1, 2021.