ಕರಾವಳಿ ಜಿಲ್ಲೆಗಳ ಪಡಿತರದಲ್ಲಿ ಕುಚಲಕ್ಕಿ ಪೂರೈಕೆ ; ಸ್ಥಳೀಯ ಕಜೆ ಅಕ್ಕಿ ಖರೀದಿಸಿ ವಿತರಣೆಗೆ ಕೇಂದ್ರ ಸರಕಾರ ಒಪ್ಪಿಗೆ, ಬಹುಕಾಲದ ಬೇಡಿಕೆ ಅನುಷ್ಠಾನ ಹಂತಕ್ಕೆ 

08-01-22 04:29 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಕುಚ್ಚಲಕ್ಕಿ ಪ್ರಭೇದಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.‌ ಈ ಬಗ್ಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

ಉಡುಪಿ, ಜ.8 : ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ಸ್ಥಳೀಯವಾಗಿ ಲಭ್ಯವಾಗುವ ಕುಚ್ಚಲಕ್ಕಿ ಪ್ರಭೇದಗಳನ್ನು ಪಡಿತರ ವ್ಯವಸ್ಥೆಯಲ್ಲಿ ವಿತರಿಸಲು ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.‌ ಈ ಬಗ್ಗೆ ಕೇಂದ್ರ ಕೃಷಿ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಟ್ವೀಟ್ ಮೂಲಕ ತಿಳಿಸಿದ್ದಾರೆ.

ದಕ್ಷಿಣ ಕನ್ನಡ, ಉಡುಪಿ ಹಾಗೂ ಉತ್ತರ ಕನ್ನಡ ಜಿಲ್ಲೆಗಳಲ್ಲಿ ರೈತರು ಬೆಳೆಯುವ ಕಜೆ, ಜಯ, ಜ್ಯೋತಿ, ಪಂಚಮುಖಿ, ಸಹ್ಯಾದ್ರಿ ಹಾಗೂ ಉಮಾ ತಳಿಗಳ ಅಕ್ಕಿಯನ್ನು ಕೇಂದ್ರ ಸರಕಾರದ ಕನಿಷ್ಠ ಮಾರಾಟ ಬೆಲೆಯಡಿ (msp) ಖರೀದಿಸಿ ಸ್ಥಳೀಯ ಪಡಿತರ ಅಂಗಡಿಗಳಲ್ಲಿ ವಿತರಿಸಲಾಗುವುದು. ಈ ಬಗ್ಗೆ ರಾಜ್ಯ ಸರಕಾರದ ಪ್ರಸ್ತಾವನೆಗೆ ಕೇಂದ್ರ ಸರಕಾರ ಒಪ್ಪಿಗೆ ನೀಡಿದೆ ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ಸಚಿವೆ ಶೋಭಾ ಕರಂದ್ಲಾಜೆ ತಿಳಿಸಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲಿ ಕುಚ್ಚಲಕ್ಕಿ ವಿತರಿಸಬೇಕು ಎನ್ನುವುದು ಬಹುಕಾಲದ ಬೇಡಿಕೆ. ಈ ಬಗ್ಗೆ ಹಲವಾರು ಪ್ರಯತ್ನ ನಡೆದಿದ್ದರೂ ಸಾಧ್ಯವಾಗಿಲ್ಲ. ಕಳೆದ ಬಾರಿ ದ.ಕ. ಉಸ್ತುವಾರಿ ಆಗಿದ್ದ ಸಚಿವ ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸರಕಾರದ ಮೂಲಕ ಸ್ಥಳೀಯ ಅಕ್ಕಿ ಖರೀದಿಸಿ ವಿತರಣೆಗೆ ವಿಶೇಷ ಪ್ರಯತ್ನ ಮಾಡಿದ್ದರು. ಇದಕ್ಕಾಗಿ ಮಂಡ್ಯ ಜಿಲ್ಲೆಯ ಭಾಗದಲ್ಲಿ ಈ ಮಾದರಿಯ ಅಕ್ಕಿ ಬೆಳೆಸಲು ಅಗತ್ಯ ಕ್ರಮ ಕೈಗೊಂಡಿದ್ದರು. ಆದರೆ ಕರಾವಳಿಯಲ್ಲಿ ಅಕ್ಕಿಯ ಪೂರೈಕೆ ಬೇಡಿಕೆಯಷ್ಟು ಇರದೇ ಇದ್ದುದರಿಂದ ಇದು ಸಾಧ್ಯವಿಲ್ಲ ಎನ್ನುವ ಮಾತನ್ನು ಅಧಿಕಾರಿಗಳು ಹೇಳಿ ಈ ಪ್ರಸ್ತಾವಕ್ಕೆ ಹಿನ್ನಡೆ ಆಗುವಂತೆ ಮಾಡಿದ್ದರು.‌

ಆದರೆ ಈ ಬಗ್ಗೆ ರಾಜ್ಯ ಸರಕಾರದಿಂದ ಕೇಂದ್ರ ಸರಕಾರದ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವಾಲಯಕ್ಕೆ ಅನುಮತಿ ಕೇಳಿ ಬರೆಯಲಾಗಿತ್ತು. ಪಡಿತರ ಅಕ್ಕಿ ಕೇಂದ್ರ ಸರಕಾರದಿಂದ ಪೂರೈಕೆ ಆಗುವುದರಿಂದ ಕುಚ್ಚಲಕ್ಕಿಯನ್ನು ಸ್ಥಳೀಯ ಅಕ್ಕಿ ಮಿಲ್ ಗಳಿಂದ ವಿತರಿಸಲು ಕೇಂದ್ರದ ಅನುಮತಿ ಅಗತ್ಯವಿತ್ತು. ಈ ಬಗ್ಗೆ ರಾಜ್ಯ ಸರಕಾರದಿಂದ ಪತ್ರ ಹೋಗಿದ್ದರೂ, ಅದರ ಬಗ್ಗೆ ಹೆಚ್ಚುವರಿಯಾಗಿ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಕೇಂದ್ರ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಪಿಯೂಷ್ ಗೋಯಲ್ ಅವರಿಗೆ ಪತ್ರ ಬರೆದು ಗಮನ ಸೆಳೆದಿದ್ದರು. ಶೋಭಾ ಪತ್ರಕ್ಕೆ ಸ್ಪಂದಿಸಿದ ಸಚಿವರು, ಸ್ಥಳೀಯ ಅಕ್ಕಿಯನ್ನು ಕನಿಷ್ಡ ಮಾರಾಟ ದರಕ್ಕೆ ಖರೀದಿಸಿ ಪಡಿತರದಲ್ಲಿ ವಿತರಿಸಲು ಅನುಮತಿ ನೀಡಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಅವಳಿ ಜಿಲ್ಲೆಗಳಿಗೆ ಒಂದು ಲಕ್ಷ ಕ್ವಿಂಟಾಲ್ ಅಕ್ಕಿ ಪೂರೈಕೆ ಆಗಲಿದೆ. ಈ ಬಗ್ಗೆ ಖರೀದಿ ಪ್ರಕ್ರಿಯೆ ಆರಂಭಗೊಂಡಿದೆ. ಬಹುಕಾಲದ ಬೇಡಿಕೆ ಈಡೇರುತ್ತಿರುವ ಬಗ್ಗೆ ಮೆಚ್ಚುಗೆ, ತೃಪ್ತಿ ಇದೆ. ಇದಕ್ಕಾಗಿ ಈ ಭಾಗದ ಶಾಸಕರು, ಸಂಸದರು, ರಾಜ್ಯದ ಮುಖ್ಯಮಂತ್ರಿ, ಆಹಾರ ಸಚಿವ ಉಮೇಶ್ ಕತ್ತಿ , ಆಹಾರ ನಿಗಮದ ಅಧ್ಯಕ್ಷ ಕೊಡ್ಗಿ ಅವರನ್ನು ಅಭಿನಂದಿಸುತ್ತೇನೆ ಎಂದು ಹೇಳಿದ್ದಾರೆ.

Boiled Rice Under PDS to be Available in Dakshina Kannada states Shoba. Most of the people does not prefer the white rice given under PDS. Therefore, the district administration will likely provide boiled rice (red) which is in demand under the Public Distribution System (PDS) in DK.