ಆನ್ಲೈನ್ ಲೋನ್ ಏಪ್ಸ್ ಬಗ್ಗೆ ಎಚ್ಚರ ! ನಿಮ್ಮದೇ ಮೊಬೈಲಿನಲ್ಲಿ ಕುಳಿತು ಜುಟ್ಟು ಹಿಡಿಯುತ್ತಾರೆ ! ಬೆತ್ತಲೆ ಫೋಟೋ ಕೇಳಿ ಸಾಲ ನೀಡುವ ಹರಾಮಿಗಳು !

12-01-22 04:03 pm       Mangalore Correspondent   ಕರಾವಳಿ

ಲೋನ್ ಏಪ್ಸ್ ನಲ್ಲಿ ಸಾಲ ಪಡೆದು ಹಿಂತಿರುಗಿಸಲು ಸಾಧ್ಯವಾಗದೆ ತೀವ್ರ ಕಿರುಕುಳಕ್ಕೆ ಒಳಗಾದ ಯುವಕ ಸಾವಿಗೆ ಶರಣಾದ ಘಟನೆ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿ ಲೋನ್ ಏಪ್ಸ್ ವಿರುದ್ಧ ಹೆಚ್ಚುವರಿ ಪ್ರಕರಣ ದಾಖಲಾಗಿದೆ.

ಮಂಗಳೂರು, ಜ.12 : ಲೋನ್ ಏಪ್ಸ್ ನಲ್ಲಿ ಸಾಲ ಪಡೆದು ಹಿಂತಿರುಗಿಸಲು ಸಾಧ್ಯವಾಗದೆ ತೀವ್ರ ಕಿರುಕುಳಕ್ಕೆ ಒಳಗಾದ ಯುವಕ ಸಾವಿಗೆ ಶರಣಾದ ಘಟನೆ ಹಿನ್ನೆಲೆಯಲ್ಲಿ ಸುರತ್ಕಲ್ ಠಾಣೆಯಲ್ಲಿ ಐಟಿ ಆಕ್ಟ್ ಅಡಿ ಲೋನ್ ಏಪ್ಸ್ ವಿರುದ್ಧ ಹೆಚ್ಚುವರಿ ಪ್ರಕರಣ ದಾಖಲಾಗಿದೆ. ಯುವಕ ಲೋನ್ ಏಪ್ಸ್ ಕಿರುಕುಳದ ಬಗ್ಗೆ ಡೆತ್ ನೋಟ್ ನಲ್ಲಿ ಬರೆದಿಟ್ಟಿದ್ದು, ಅದರಂತೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಮೃತಪಟ್ಟ ಪಕ್ಷಿಕೆರೆ ನಿವಾಸಿ ಸುಶಾಂತ್ ಮೊಬೈಲನ್ನು ಪೊಲೀಸರು ತನಿಖೆಗೆ ಒಳಪಡಿಸಿದ್ದು ನಾಲ್ಕು ಲೋನ್ ಏಪ್ಸ್ ಡೌನ್ಲೋಡ್ ಮಾಡಿಕೊಂಡಿದ್ದು ಕಂಡುಬಂದಿದೆ. ಆದರೆ 5 ಸಾವಿರ, ಹತ್ತು ಸಾವಿರ ಅಷ್ಟೇ ಹಣ ಪಡೆದಿರುವುದು ತಿಳಿದುಬಂದಿದೆ. ಈ ಹಣವನ್ನು ಹಿಂತಿರುಗಿಸದೇ ಇದ್ದುದಕ್ಕೆ ಕಿರುಕುಳಕ್ಕೆ ಒಳಗಾಗಿದ್ದ ಅನ್ನುವುದು ತನಿಖೆಯಲ್ಲಿ ತಿಳಿದುಬಂದಿದೆ. ಇದಕ್ಕಾಗಿ ಮಂಗಳೂರು ಪೊಲೀಸರು ಈ ರೀತಿಯ ಲೋನ್ ಏಪ್ಸ್ ಬಗ್ಗೆ ಜನರು ಜಾಗೃತಿಯಿಂದ ಇರುವಂತೆ ಮನವಿ ಮಾಡಿದ್ದಾರೆ.

ದೇಶದಲ್ಲಿ 600ಕ್ಕೂ ಹೆಚ್ಚು ಈ ರೀತಿಯ ಲೋನ್ ಏಪ್ಸ್ ಆನ್ಲೈನಲ್ಲಿ ಕಾರ್ಯಾಚರಿಸುತ್ತಿದ್ದು, ಯಾವುದೇ ಅಡಮಾನ ಇಲ್ಲದೆ ಲೋನ್ ನೀಡುವುದಾಗಿ ಹೇಳಿ ಜನರನ್ನು ಯಾಮಾರಿಸುತ್ತವೆ. ಅದರಲ್ಲಿ ನ್ಯೂಡ್ ಲೋನ್ ಏಪ್ಸ್ ಅನ್ನುವುದು ಕೂಡ ಒಂದು. ನ್ಯೂಡ್ ಏಪ್ಸ್ ನಲ್ಲಿ ಮೊದಲಿಗೆ ನಗ್ನ ಚಿತ್ರವನ್ನು ಕಳುಹಿಸುವಂತೆ ಸೂಚಿಸುತ್ತದೆ. ಹಣಕ್ಕಾಗಿ ನಗ್ನ ಚಿತ್ರವನ್ನು ಕಳಿಸಿದರೆ, ಅದನ್ನೇ ಬಂಡವಾಳ ಮಾಡಿಕೊಂಡು ನಮ್ಮ ಜುಟ್ಟು ಹಿಡಿಯುತ್ತಾರೆ. ಈ ಏಪ್ಸ್ ಗಳನ್ನು ಮೊಬೈಲಿನಲ್ಲಿ ಡೌನ್ಲೋಡ್ ಮಾಡಿಕೊಳ್ಳುವಾಗಲೇ yes/No ಆಪ್ಶನ್ ಕೇಳುತ್ತದೆ. ಪ್ರತೀ ಬಾರಿ ಈ ಪ್ರಶ್ನೆ ಮಾಡುವಾಗ, ಹೆಚ್ಚಿನವರು ಅಲ್ಲಿರುವ ಕಂಡೀಶನ್ಸ್ ಓದದೇ ಓಕೆ ಕೊಡುತ್ತಾರೆ.

ಈ ಕಂಡೀಶನ್ ಗಳಲ್ಲಿ ನಿಮ್ಮ ಮೊಬೈಲಿನಲ್ಲಿರುವ ಫೋಟೋ ಗ್ಯಾಲರಿಯಿಂದ ಹಿಡಿದು ನಿಮ್ಮ ಸಂಪರ್ಕ ಸಂಖ್ಯೆಗಳು, ವಾಟ್ಸಪ್ ಗ್ರೂಪ್ ಗಳ ಮಾಹಿತಿಗಳನ್ನು ಪಡೆಯಲು ಅವಕಾಶ ಕೇಳುತ್ತದೆ. ಅಲ್ಲದೆ, ಫೋಟೋ, ವಿಡಿಯೋಗಳು, ಆಧಾರ್ ಐಡಿ, ಬ್ಯಾಂಕ್ ಖಾತೆಗಳ ವಿವರ ಹೀಗೆ ಎಲ್ಲವನ್ನೂ ಕೇಳಿಕೊಂಡು ಪಡೆಯುತ್ತವೆ. ಲೋನ್ ಕಟ್ಟದೇ ಇದ್ದಾಗ, ಮೊಬೈಲ್ ಗ್ಯಾಲರಿಯ ಫೋಟೋಗಳನ್ನು, ನೀವು ಬೆತ್ತಲೆ ಫೋಟೋಗಳನ್ನು ಕಳಿಸಿದ್ದರೆ ಅದನ್ನು ನಿಮ್ಮ ಸಂಪರ್ಕದಲ್ಲಿರುವ ಎಲ್ಲರಿಗೂ ಕಳಿಸಿಕೊಡುವುದಾಗಿ ಬೆದರಿಕೆ ಒಡ್ಡುತ್ತಾರೆ. ಆರಂಭದಲ್ಲಿ 3 ಸಾವಿರ, 5 ಸಾವಿರ ಸಾಲ ಕೊಟ್ಟು 30ರಿಂದ 60 ಶೇ. ಬಡ್ಡಿ ವಿಧಿಸಿ ಚುಕ್ತಾ ಮಾಡಲು ಹೇಳುತ್ತಾರೆ.

ಅಲ್ಲದೆ, ಹಣ ಕಟ್ಟದೇ ಇದ್ದಲ್ಲಿ ನಿಮ್ಮ ಮೇಲೆ 420, ಚೀಟಿಂಗ್ ಕೇಸ್ ಹಾಕುವುದಾಗಿ ಹೆದರಿಸುತ್ತಾರೆ. ಕೆಲವೊಮ್ಮೆ ನಿಮ್ಮ ಮೇಲೆ ಕೇಸ್ ಹಾಕಿದ್ದೇವೆ ಎಂದು ಹೇಳಿ ನಕಲಿ ಎಫ್ಐಆರ್ ಕಾಪಿಯನ್ನು ಕಳುಹಿಸುತ್ತಾರೆ. ನಗ್ನ ಫೋಟೋಗಳನ್ನು ಕಳಿಸಿದ್ದರೆ, ತಮ್ಮ ಫೋಟೋವನ್ನು ಎಲ್ಲರಿಗೂ ಕಳುಹಿಸಿ ಮಾನ ಮರ್ಯಾದೆ ತೆಗೆಯುವುದಾಗಿ ಬೆದರಿಸುತ್ತಾರೆ. ಯುವಕ - ಯುವತಿಯರಾಗಿದ್ದರೆ, ಈ ರೀತಿಯ ಬ್ಲಾಕ್ಮೇಲ್ ಗೆ ಹೆದರಿ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ಹೈದರಾಬಾದ್, ಚೆನ್ನೈನಲ್ಲಿ ಯುವತಿಯರು ಇದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದ ಬಗ್ಗೆ ಪ್ರಕರಣ ದಾಖಲಾಗಿದೆ.

ಹೀಗಾಗಿ ಯಾವುದೇ ಕಾರಣಕ್ಕೂ ಈ ರೀತಿಯ ಲೋನ್ ಏಪ್ಸ್ ಗಳನ್ನು ಡೌನ್ಲೋಡ್ ಮಾಡಿಕೊಳ್ಳಬಾರದು. ಮಾಡಿಕೊಂಡರೂ, ಅವರು ಕೇಳುವ ಆಪ್ಶನ್ ಗಳಿಗೆಲ್ಲ ಕಣ್ಣು ಮುಚ್ಚಿ ಓಕೆ ಕೊಡಬಾರದು. ಆಮೂಲಕ ಬ್ಲಾಕ್ಮೇಲ್ ಆಗುವುದಕ್ಕೆ ಆಸ್ಪದ ಕೊಡಬಾರದು ಎಂದು ಮಂಗಳೂರು ನಗರ ಡಿಸಿಪಿ ಹರಿರಾಮ್ ಶಂಕರ್ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಅತ್ಯಂತ ಕಡಿಮೆ ಹಣ ಕೊಟ್ಟು ಅತಿ ಹೆಚ್ಚು ಬಡ್ಡಿ ಪೀಕಿಸುವ ಈ ರೀತಿಯ ಲೋನ್ ಏಪ್ಸ್ ಬಗ್ಗೆ ಜನರು ಜಾಗ್ರತೆಯಿಂದ ಇರಬೇಕು. ಇಂಥ ಲೋನ್ ಏಪ್ಸ್ ಗಳಲ್ಲಿ ಚೀನಾ ಮೂಲದ್ದು ಇರುತ್ತವೆ. ಭಾರತದ್ದೂ ಇರುತ್ತವೆ. ಆದರೆ ಯಾವುದೇ ಏಪ್ಸ್ ಕೂಡ ಆರ್ ಬಿಐ ಅಧೀನದಲ್ಲಿ ಇರುವುದಿಲ್ಲ. ಆರ್ ಬಿಐ ನೀತಿಗಳಿಗೆ ಒಳಪಡುವುದಿಲ್ಲ. ಏಪ್ಸ್ ಬಗ್ಗೆ ಪೂರ್ವಾಪರ ಗೊತ್ತಿಲ್ಲದೆ ಡೌನ್ಲೋನ್ ಮಾಡಿಕೊಂಡು, ಅವರು ಕೇಳಿದ್ದಕ್ಕೆಲ್ಲ ಓಕೆ ಅಂದರೆ ಸಿಕ್ಕಿಬೀಳುವ ಸ್ಥಿತಿ ಬರುತ್ತದೆ ಎಂದು ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಆನ್ಲೈನ್ ಸಾಲದ ಕಿರುಕುಳ ; ಕಿನ್ನಿಗೋಳಿಯ ಯುವಕ ನೇಣಿಗೆ ಶರಣು 

Through a press release, the police department has pointed out that Sushant Kumar, who committed suicide on January 10 this year within the limits of Surathkal police station, mentioned in the suicide note that he had availed loan through online loan app and that he was harassed by the creditors. A case in this connection has been registered in Surathkal police station.