ಪ್ರಧಾನಿ ಮೋದಿ ಆಯುಷ್ಯ, ಆರೋಗ್ಯ ವೃದ್ಧಿಗಾಗಿ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ

15-01-22 10:16 pm       Mangalore Correspondent   ಕರಾವಳಿ

ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ಮತ್ತು ಆರೋಗ್ಯ ವೃದ್ಧಿಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಎನಿಸಿರುವ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಯಲಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಯಾಗ ಕಾರ್ಯ ನಡೆಸಲಾಗುತ್ತಿದೆ.

ಮಂಗಳೂರು, ಜ.15 : ಪ್ರಧಾನಿ ನರೇಂದ್ರ ಮೋದಿ ಆಯುಷ್ಯ ಮತ್ತು ಆರೋಗ್ಯ ವೃದ್ಧಿಗಾಗಿ ದಕ್ಷಿಣ ಭಾರತದ ಪ್ರಸಿದ್ಧ ಪುಣ್ಯಕ್ಷೇತ್ರ ಎನಿಸಿರುವ ಧರ್ಮಸ್ಥಳದಲ್ಲಿ ಮಹಾ ಮೃತ್ಯುಂಜಯ ಯಾಗ ನಡೆಯಲಿದೆ. ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾ ನೇತೃತ್ವದಲ್ಲಿ ಯಾಗ ಕಾರ್ಯ ನಡೆಸಲಾಗುತ್ತಿದೆ.

ಇದರಂತೆ, ಭಾನುವಾರ ಸಂಜೆ ನಾಲ್ಕು ಗಂಟೆಗೆ ಮೊದಲ್ಗೊಂಡು ರಾತ್ರಿಯಿಡೀ ಏಳು ಹೋಮ ಕುಂಡಗಳಲ್ಲಿ ಯಾಗ ನಡೆಯಲಿದೆ. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧೆಡೆಯ 200ರಷ್ಟು ಅರ್ಚಕರು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಧರ್ಮಸ್ಥಳ ದೇಗುಲದ ಆವರಣದಲ್ಲಿ ಯಾಗ ನಡೆಯಲಿದ್ದು, ಸೋಮವಾರ ಬೆಳಗ್ಗೆ 11 ಗಂಟೆಗೆ ಪೂರ್ಣಾಹುತಿ ಆಗಲಿದೆ.

ಇತ್ತೀಚೆಗೆ ಪಂಜಾಬ್ ನಲ್ಲಿ ಪ್ರಧಾನಿ ಮೋದಿ ಪ್ರಯಾಣಿಸುತ್ತಿದ್ದ ಕಾರನ್ನು ಅಡ್ಡಗಟ್ಟಿದ ಘಟನೆ ನಡೆದಿತ್ತು. ಪಂಜಾಬ್ ಸರಕಾರದ ಪೊಲೀಸರು ಭದ್ರತಾ ಲೋಪ ಎಸಗಿದ್ದರಿಂದ ಭಾರೀ ಆಕ್ಷೇಪ, ವಿರೋಧವೂ ಕೇಳಿಬಂದಿತ್ತು. ಹೀಗಾಗಿ ಮೋದಿಗೆ ಜೀವಕ್ಕೆ ಅಪಾಯ ಎದುರಾಗಿದೆ ಎನ್ನುವ ಆರೋಪವನ್ನು ಬಿಜೆಪಿ ನಾಯಕರು ಮಾಡಿದ್ದರು. ಇದರಂತೆ, ಬೆಳ್ತಂಗಡಿ ಶಾಸಕ ಹರೀಶ ಪೂಂಜ ನೇತೃತ್ವದಲ್ಲಿ ಬೆಳ್ತಂಗಡಿ ತಾಲೂಕಿನ 25 ಕ್ಷೇತ್ರಗಳಲ್ಲಿ ಮಹಾ ಮೃತ್ಯುಂಜಯ ಹೋಮ ನಡೆಸಲು ನಿರ್ಧರಿಸಲಾಗಿತ್ತು. ಈಗಾಗ್ಲೇ 25 ಕ್ಷೇತ್ರಗಳಲ್ಲಿ ಮೃತ್ಯುಂಜಯ ಹೋಮ ನಡೆಸಲಾಗಿದ್ದು ಇದರ ಪೂರ್ಣಾಹುತಿ ನೆಲೆಯಲ್ಲಿ ಧರ್ಮಸ್ಥಳದಲ್ಲಿ ಮೃತ್ಯುಂಜಯ ಮಹಾಯಾಗ ನಡೆಸಲಾಗುತ್ತಿದೆ.

ಪ್ರಧಾನಿ ಮೋದಿ ಹೆಸರಲ್ಲಿ ಮೃತ್ಯುಂಜಯ ಯಾಗ ನಡೆಸಬೇಕೆಂಬ ಶಾಸಕರ ಪ್ರಸ್ತಾಪಕ್ಕೆ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆಯವರೂ ಬೆಂಬಲಿಸಿದ್ದು, ಪ್ರಧಾನಿಯ ಆರೋಗ್ಯ ವೃದ್ಧಿಗಾಗಿ ಯಾಗ ನಡೆಸುವುದು ಒಳ್ಳೆಯ ಕಾರ್ಯ ಎಂದು ಹುರಿದುಂಬಿಸಿದ್ದರು. ಧರ್ಮಸ್ಥಳಕ್ಕೆ ಕಳೆದ ಬಾರಿ ಪ್ರಧಾನಿ ಮೋದಿ ಆಗಮಿಸಿ, ವಿಶೇಷ ಪೂಜೆಯನ್ನು ಕೈಗೊಂಡಿದ್ದರು. ಇದೀಗ ಮೋದಿ ಹೆಸರಿನಲ್ಲಿ ಅವರ ಆಯುಷ್ಯ ವೃದ್ಧಿಗಾಗಿ ಮೃತ್ಯುಂಜಯ ಯಾಗ ನಡೆಸುತ್ತಿರುವುದು ದೇಶದ ಗಮನ ಸೆಳೆದಿದೆ. ಯಾಗ ಕಾರ್ಯದಲ್ಲಿ ಸಿಎಂ ಬಸವರಾಜ ಬೊಮ್ಮಾಯಿ ಕೂಡ ಪಾಲ್ಗೊಳ್ಳುವವರಿದ್ದರು. ಆದರೆ, ಎರಡು ದಿನಗಳ ಹಿಂದೆ ಅವರಿಗೆ ಕೊರೊನಾ ಸೋಂಕು ಆಗಿದ್ದರಿಂದ ಸಿಎಂ ಭಾಗವಹಿಸುತ್ತಿಲ್ಲ. ಉಳಿದಂತೆ, ರಾಜ್ಯದ ಕೆಲವು ಸಚಿವರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಸೋಮವಾರ ಧರ್ಮಸ್ಥಳಕ್ಕೆ ಬರಲಿದ್ದಾರೆ ಎನ್ನುವ ಮಾಹಿತಿಗಳಿವೆ.

Good life span for PM Modi special Yaga to be held in Dharmasthala Temple by Belthanagady MLA Harish Poonja.