ನೋ ಪಾರ್ಕಿಂಗ್ ನೆಪ ; ಒಂದೇ ವರ್ಷದಲ್ಲಿ ಬರೋಬ್ಬರಿ 16 ಕೇಸು ! ದಂಡದ ನೋಟಿಸ್ ಪ್ರದರ್ಶನಕ್ಕಿಟ್ಟ ಮುಡಿಪು ಮೆಡಿಕಲ್ ಸ್ಟೋರ್ ಮಾಲಕಿ ! 

23-01-22 03:26 pm       HK Desk news   ಕರಾವಳಿ

ಮುಡಿಪುವಿನ ಆಯುರ್ವೇದ ಮೆಡಿಕಲ್ ಸ್ಟೋರ್ ಮಾಲಕಿಯೋರ್ವರನ್ನ ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದು ಮಹಿಳೆಯ ಸ್ಕೂಟರ್ ಗೆ ನೋ ಪಾರ್ಕಿಂಗ್ ನೆಪದಲ್ಲಿ ಒಂದು ವರುಷದಲ್ಲೇ ಬರೋಬ್ಬರಿ 16 ಬಾರಿ ಕೇಸ್ ಜಡಿದಿರುವ ಆರೋಪ ಕೇಳಿಬಂದಿದೆ. 

Photo credits : Headline Karnataka

ಉಳ್ಳಾಲ, ಜ.23 : ಮುಡಿಪುವಿನ ಆಯುರ್ವೇದ ಮೆಡಿಕಲ್ ಸ್ಟೋರ್ ಮಾಲಕಿಯೋರ್ವರನ್ನ ಟ್ರಾಫಿಕ್ ಪೊಲೀಸರು ಟಾರ್ಗೆಟ್ ಮಾಡಿದ್ದು ಮಹಿಳೆಯ ಸ್ಕೂಟರ್ ಗೆ ನೋ ಪಾರ್ಕಿಂಗ್ ನೆಪದಲ್ಲಿ ಒಂದು ವರುಷದಲ್ಲೇ ಬರೋಬ್ಬರಿ 16 ಬಾರಿ ಕೇಸ್ ಜಡಿದಿರುವ ಆರೋಪ ಕೇಳಿಬಂದಿದೆ. 

ಮುಡಿಪು ಜಂಕ್ಷನ್ನ ಗಣೇಶ್ ಕಾಂಪ್ಲೆಕ್ಸ್ ಕಟ್ಟಡದಲ್ಲಿರುವ ಸಂಜೀವಿನಿ ಆಯುರ್ವೇದಿಕ್ ಮೆಡಿಕಲ್ ಶಾಪ್ ಮಾಲಕಿ ಶ್ರೀಮತಿ ಎಂಬವರ ಮೇಲೆ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರಿಗೆ ಅದೇನು ಹಗೆನೋ ಗೊತ್ತಿಲ್ಲ. ಶ್ರೀಮತಿ ಅವರ ಸ್ಕೂಟರ್ ವಿರುದ್ಧ ಪೊಲೀಸರು ಒಂದು ವರುಷದಲ್ಲೇ ಸರಾಗವಾಗಿ 16 ಬಾರಿ ಕೇಸು ಜಡಿದು 11,500 ರೂಪಾಯಿ ದಂಡ ವಿಧಿಸಿದ್ದಾರೆ. ಮುಡಿಪು ಜಂಕ್ಷನ್ ನ ರಸ್ತೆ ಬದಿಯಲ್ಲಿರುವ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಸಂಜೀವಿನಿ ಆಯುರ್ವೇದಿಕ್ ಮೆಡಿಕಲ್ ಸೆಂಟರ್ ಕಾರ್ಯಾಚರಿಸುತ್ತಿದೆ. 

ಮೆಡಿಕಲ್ ಸ್ಟೋರ್ ಮಾಲಕಿ ಶ್ರೀಮತಿ ಅವರನ್ನ ಮುಡಿಪುವಿನಲ್ಲಿ ಕಳೆದ ವರ್ಷದ ಆರಂಭದಲ್ಲಿ ತಡೆದ ಟ್ರಾಫಿಕ್ ಪೊಲೀಸರು ನಿಮ್ಮ ಸ್ಕೂಟರ್ ವಿರುದ್ಧ 5,000 ರೂಪಾಯಿ ದಂಡ ಪ್ರಹಾರವಾಗಿದೆ ಎಂದು ಹೇಳಿದ್ದರಂತೆ. ದಂಡ ಪ್ರಯೋಗದ ಮಾಹಿತಿಯೇ ಇಲ್ಲದ ಶ್ರೀಮತಿ ಅವರು ತನಗೇಕೆ ದಂಡ ಎಂದು ಕೇಳಿದಾಗ ನೋ ಪಾರ್ಕಿಂಗ್ ವಿಚಾರವನ್ನ ಟ್ರಾಫಿಕ್ ಪೊಲೀಸರು ಪ್ರಸ್ತಾಪಿಸಿದ್ದಾರೆ. ತನಗೆ ಅದರ ಬಗ್ಗೆ ಗೊತ್ತಿಲ್ಲ. ಕೇಸ್ ಬಗ್ಗೆ ಯಾವುದೇ ನೋಟೀಸ್ ಬಂದಿಲ್ಲ ಎಂದು ಶ್ರೀಮತಿ ಅವರು ಪೊಲೀಸರಲ್ಲಿ ಹೇಳಿದ್ದಾರೆ. ಪೊಲೀಸರು ಮಾತ್ರ ಪಟ್ಟು ಬಿಡದೆ 500 ಕಟ್ಟಿ ಈವಾಗ ಎಂದು ಹಠ ಹಿಡಿದಿದ್ದರಂತೆ. 500 ರೂ. ಕಟ್ಟಿದರೆ ನನ್ನ ಎಲ್ಲಾ ಕೇಸ್ ಮನ್ನಾ ಆಗುತ್ತಾ ಅಂತ ಶ್ರೀಮತಿ ಅವರು ಪೊಲೀಸರಲ್ಲಿ ಕೇಳಿದಕ್ಕೆ, ಇಲ್ಲ ನಿಮ್ಮ ಕೇಸಲ್ಲಿ  500 ಮಾತ್ರ ಕಡಿತ ಆಗುತ್ತೆ. ಹಂತ, ಹಂತವಾಗಿ ನೀವು 500 ರೂ. ಕಟ್ಟಿ ಪೂರ್ತಿ ಕೇಸು ಮುಗಿಸಬೇಕೆಂದು ಉತ್ತರಿಸಿದ್ದರಂತೆ.

ಶ್ರೀಮತಿ ಅವರು ತಾನು ಮಾಡದ ತಪ್ಪಿಗೆ ದಂಡ ಕಟ್ಟೋದಿಲ್ಲವೆಂದು ಸುಮ್ಮನಿದ್ದಾಗ ಅವರಿಗೆ ಸಾಲು ಸಾಲಾಗಿ ದಂಡ ಪ್ರಯೋಗದ ನೋಟೀಸುಗಳು ಬರಲಾರಂಭಿಸಿವೆ. ತಿಂಗಳಿಗೆ 500 ರೂ. ಮತ್ತು 1,000 ರೂಪಾಯಿ ದಂಡ ಪ್ರಯೋಗದ ಎರಡು ನೋಟೀಸುಗಳು ಬರಲಾರಂಭಿಸಿದ್ದು ಈವರೆಗೆ ಬರೋಬ್ಬರಿ 16 ನೋಟೀಸುಗಳು ಬಂದಿದೆ. ಅವೆಲ್ಲವನ್ನ ಶ್ರೀಮತಿ ಅವರು ತನ್ನ ಮೆಡಿಕಲ್ ಶಾಪ್ ಎದುರುಗಡೆ ಸಾರ್ವಜನಿಕ ಪ್ರದರ್ಶನಕ್ಕಿಟ್ಟಿದ್ದಾರೆ. ಈ ನಡುವೆ ಇರಾ ಗ್ರಾಮದ ಮೂಲದ ಈ ಹಿಂದೆ‌ ಮಕರ ಜ್ಯೋತಿ ಟ್ರಾವೆಲ್ಸ್  ಮಾಲಕನಾಗಿದ್ದ ಶ್ರೀಧರ ಎಂಬ ಪುಢಾರಿ ಶ್ರೀಮತಿಯವರನ್ನುದ್ದೇಶಿಸಿ ಟ್ರಾಫಿಕ್ ಪೊಲೀಸರಿಗೆ ನೀವು 9,000 ದಂಡ ಬಾಕಿ ಇದೆ, ಕೂಡಲೇ ಕಟ್ಟುವಂತೆ ಆವಾಜ್ ಹಾಕಿದ್ದು, ಮೆಡಿಕಲ್ ಮಾಲಕಿ ಆತನಿಗೆ ಮಂಗಳಾರತಿ ಮಾಡಿ ಕಳಿಸಿದ್ದಾರಂತೆ.

ಪ್ರಕರಣದ ಅಸಲಿಯತ್ತೇನು ..? 

ಮುಡಿಪುವಿನ ಗಣೇಶ್ ಕಾಂಪ್ಲೆಕ್ಸ್ ನಲ್ಲಿ ಸಂಜೀವಿನಿ ಆಯುರ್ವೇದ ಮೆಡಿಕಲ್ ಸ್ಟೋರ್ ಕಾರ್ಯಾಚರಿಸುತ್ತಿದೆ. ಮೆಡಿಕಲ್ ಮಾಲಕಿ ಶ್ರೀಮತಿ ಅವರು ದಿನನಿತ್ಯವೂ ಬೆಳಗ್ಗೆ ತನ್ನ ಸ್ಕೂಟರನ್ನ ತಂದು ಮೆಡಿಕಲ್ ಮುಂದೆ (ಮುಖ್ಯ ರಸ್ತೆಯ ಸೀಮಾ ರೇಖೆಯ ಹೊರಗೆ) ಸ್ವಲ್ಪ ಹೊತ್ತು ನಿಲ್ಲಿಸಿ ಬಾಗಿಲು ತೆರೆದ ನಂತರ ಮತ್ತೆ ಸ್ಕೂಟರನ್ನ ಹತ್ತಿರದ ತನ್ನ ಸಹೋದರಿಯ ಅಪಾರ್ಟ್ ಮೆಂಟ್ ಒಂದರಲ್ಲಿ ಪಾರ್ಕ್ ಮಾಡುತ್ತಿದ್ದರು. ಮಾನವೀಯತೆ ಇಲ್ಲದ ಪೊಲೀಸರು ಇದನ್ನೇ ಅಸ್ತ್ರವನ್ನಾಗಿ ಬಳಸಿ ತಾನು ಎಲ್ಲಿ ಸ್ಕೂಟರನ್ನ ಪಾರ್ಕ್ ಮಾಡುತ್ತೇನೋ ಅದನ್ನ ಫೋಟೊ ಕ್ಲಿಕಿಸಿ ತನ್ನ ಮೇಲೆ ಹಗೆ ತೀರಿಸುತ್ತಿರೋದಾಗಿ ಮೆಡಿಕಲ್ ಮಾಲಕಿ ಶ್ರೀಮತಿ ಅವರು ಆರೋಪಿಸಿದ್ದಾರೆ. ತಾನು ತಪ್ಪು ಮಾಡಿಲ್ಲ, ನೋ ಪಾರ್ಕಿಂಗ್ ಸ್ಥಳದಲ್ಲಿ ಸ್ಕೂಟರನ್ನ ನಿಲ್ಲಿಸಿಯೇ ಇಲ್ಲ. ಇದರ ಬಗ್ಗೆ ಇಲಾಖೆಯಿಂದ‌ ಬಂದ ನೋಟೀಸಲ್ಲಿ ಇರುವ ಫೋಟೊವನ್ನ ಗಮನಿಸಬಹುದು. ಆ ನಿಟ್ಟಿನಲ್ಲಿ ನಾನು ಯಾವುದೇ ದಂಡ ಕಟ್ಟುವುದಿಲ್ಲ, ಪೊಲೀಸರ  ದೌರ್ಜನ್ಯದ ಬಗ್ಗೆ ನಾನು ನ್ಯಾಯಾಲಯದ ಮೆಟ್ಟಿಲೇರಲು ಸಿದ್ಧವಿದ್ದೇನೆಂದು ಶ್ರೀಮತಿ ಅವರು ಹೆಡ್ ಲೈನ್ ಕರ್ನಾಟಕಕ್ಕೆ ತಿಳಿಸಿದ್ದಾರೆ. 

ವಾಹನಗಳ ವಿರುದ್ಧ ದಾಖಲಾದ ಹಳೆಯ ಕೇಸುಗಳ ದಂಡವನ್ನ ಕಟ್ಟಲು ಯಾವುದೇ ಸಮಯ ಮಿತಿ ಇಲ್ಲ. ಆದರೂ ಕೆಲವು ಟ್ರಾಫಿಕ್ ಪೊಲೀಸರು ವಾಹನ ಸವಾರರನ್ನ ತಡೆದು ಹಳೆಯ ಕೇಸನ್ನ ಕೆದಕಿ 500 ಆದರೂ ಕಟ್ಟಿ ಎಂದು ಒತ್ತಡ ಹೇರೋದು ಮಾಮೂಲಿ ಆಗಿ ಬಿಟ್ಟಿದೆ. ಟ್ರಾಫಿಕ್ ಪೊಲೀಸರು ಮುಂಜಾನೆ ವೇಳೆ ಮರಳು ಮಾಫಿಯಾ ಸೆಂಟರ್ ಗಳಲ್ಲಿ ಸರಕಾರಿ ವಾಹನ ನಿಲ್ಲಿಸಿ ಬಿಟ್ಟಿ ಕಾಸಿಗೆ ಕೈ ಚಾಚೋ ಖಯಾಳಿಯೂ ನಡೆಯುತ್ತಿದೆ. ಸಾರ್ವಜನಿಕರಿಗೆ ವಿನಾಕಾರಣ ಈ ರೀತಿ ತೊಂದರೆ ನೀಡಿ ಸತಾಯಿಸಿದರೆ ಟ್ರಾಫಿಕ್ ಪೊಲೀಸರ ನಡು ರಾತ್ರಿ, ಮುಂಜಾನೆ ಕಲೆಕ್ಷನ್ ವಿರುದ್ಧ ಜನರು ತಿರುಗಿ ಬೀಳೋ ಕಾಲ ದೂರ ಉಳಿದಿಲ್ಲ.

16 No parking cases have been booked on woman who runs a medical shop in Mudipu Junction in Mangalore. These 16 cases are booked just in one year without violating any traffic rules. The woman is now demanding justice as of why she has been fined 11,500 without any violation or notice.