ಉಡುಪಿ, ಕುಂದಾಪುರದ ಬಳಿಕ ಬೈಂದೂರಿನಲ್ಲೂ ಹಿಜಾಬ್ ಕಿಡಿ ; ಹಿಂದು ಸಂಘಟನೆಗಳ ಕಿರಿಕ್, ವಿದ್ಯಾರ್ಥಿಗಳಿಗೆ ಕೇಸರಿ ತೊಡಿಸಿ ಹಿಜಾಬ್ ತೆರವಿಗೆ ಆಗ್ರಹ

04-02-22 03:25 pm       HK Desk news   ಕರಾವಳಿ

ಉಡುಪಿ, ಕುಂದಾಪುರದ ಬಳಿಕ ಜಿಲ್ಲೆಯ ಗಡಿಭಾಗ ಬೈಂದೂರಿನಲ್ಲೂ ಹಿಜಾಬ್ ವಿವಾದದ ಹೆಸರಲ್ಲಿ ಕಿಡಿ ಎಬ್ಬಿಸುವ ಪ್ರಯತ್ನ ನಡೆದಿದೆ.

ಕುಂದಾಪುರ, ಫೆ.4 : ಉಡುಪಿ, ಕುಂದಾಪುರದ ಬಳಿಕ ಜಿಲ್ಲೆಯ ಗಡಿಭಾಗ ಬೈಂದೂರಿನಲ್ಲೂ ಹಿಜಾಬ್ ವಿವಾದದ ಹೆಸರಲ್ಲಿ ಕಿಡಿ ಎಬ್ಬಿಸುವ ಪ್ರಯತ್ನ ನಡೆದಿದೆ. ರಾಜ್ಯ ಸರಕಾರ ಆದೇಶ ಮಾಡಿದೆ ಎಂಬ ನೆಪದಲ್ಲಿ ಹಿಂದು ಸಂಘಟನೆಗಳ ಕಾರ್ಯಕರ್ತರು ಕಾಲೇಜು ಆವರಣಕ್ಕೆ ನುಗ್ಗಿ ಕಿರಿಕ್ ಎಬ್ಬಿಸಿದ್ದು, ಮುಸ್ಲಿಂ ವಿದ್ಯಾರ್ಥಿನಿಯರಿಗೆ ಹಿಜಾಬ್ ಧರಿಸಿ ಪ್ರವೇಶ ನೀಡಬಾರದು ಎಂದು ಆಗ್ರಹ ಮಾಡಿದ್ದಾರೆ.

ಬೆಳ್ಳಂಬೆಳಗ್ಗೆ ಬೈಂದೂರಿನ ಸರಕಾರಿ ಪದವಿಪೂರ್ವ ಕಾಲೇಜು ಆವರಣಕ್ಕೆ ಬಂದಿದ್ದ ಹಿಂದು ಸಂಘಟನೆ ಕಾರ್ಯಕರ್ತರು ಹಿಂದು ವಿದ್ಯಾರ್ಥಿಗಳಿಗೆ ಕೇಸರಿ ಶಾಲು ತೊಡಿಸಿದ್ದಾರೆ. ಈ ವೇಳೆ, ಕಾಲೇಜಿನ ಪ್ರಾಂಶುಪಾಲರು ಬಂದು ಸಂಘಟನೆಯ ಕಾರ್ಯಕರ್ತರನ್ನು ಪ್ರಶ್ನೆ ಮಾಡಿದ್ದು, ಕಾಲೇಜು ಒಳಗೆ ಬಂದು ಹೀಗೆ ಮಾಡುತ್ತಿರುವುದು ಸರಿಯಲ್ಲ. ಇದರಿಂದ ಗೊಂದಲ ನಿರ್ಮಾಣ ಆಗುತ್ತದೆ ಎಂದು ತಿಳಿಹೇಳಿದ್ದಾರೆ.

ಆದರೆ ಸಂಘಟನೆಯ ಕಾರ್ಯಕರ್ತರು ಪಟ್ಟು ಹಿಡಿದಿದ್ದು, ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಕಾಲೇಜಿಗೆ ಬರುತ್ತಾರೆ. ಹಿಜಾಬ್, ಸ್ಕಾರ್ಫ್ ತೊಟ್ಟು ತರಗತಿಗೆ ಬರುತ್ತಾರೆ. ಕಾಲೇಜಿನಲ್ಲಿ ಸಮವಸ್ತ್ರ ಇದ್ದ ಬಳಿಕ ಎಲ್ಲರಿಗೂ ಒಂದೇ ರೀತಿಯ ಅವಕಾಶ ಕೊಡಬೇಕು. ನಿಯಮ ಎಲ್ಲರಿಗೂ ಒಂದೇ ರೀತಿ ಅನ್ವಯ ಮಾಡಿ. ಸರಕಾರದ ಆದೇಶವನ್ನು ಪಾಲನೆ ಮಾಡಿ ಎಂದು ಒತ್ತಾಯಿಸಿದ್ದಾರೆ. ನಾವು ಈ ಬಗ್ಗೆ ನಿರ್ಧಾರಕ್ಕೆ ಬರಲು ಸಾಧ್ಯವಾಗುವುದಿಲ್ಲ. ಹಾಗೆಂದು ನೀವು ಮನವಿ ಕೊಟ್ಟರೆ ಕಾಲೇಜಿನ ಆಡಳಿತದ ಗಮನಕ್ಕೆ ತರುತ್ತೇವೆ ಎಂದು ಪ್ರಾಂಶುಪಾಲರು ತಿಳಿಸಿದ್ದಾರೆ. ಆದರೆ ನೀವು ಏಕಾಏಕಿ ಕಾಲೇಜಿನ ಯುವಕರಿಗೆ ಕೇಸರಿ ಶಾಲು ತೊಡಿಸಿದ್ದು ತಪ್ಪು ಎಂದು ಹೇಳಿದ್ದಾರೆ.

ಕಾಲೇಜು ಹುಡುಗರೆಲ್ಲ ಕೇಸರಿ ಶಾಲು ಹಾಕ್ಕೊಂಡು ತರಗತಿಗೆ ಬಂದಿದ್ದು, ಉಡುಪಿ, ಕುಂದಾಪುರದ ಬಳಿಕ ಬೈಂದೂರಿನಲ್ಲಿಯೂ ಹೊಸ ವಿವಾದ ಭುಗಿಲೇಳುವಂತೆ ಮಾಡಿದೆ. ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಬುರ್ಖಾ ಧರಿಸಿ ಬಂದು, ಕ್ಯಾಂಪಸ್ ಒಳಗಡೆ ಬುರ್ಖಾ ತೆಗೆದು ತರಗತಿ ಪ್ರವೇಶ ಮಾಡುತ್ತಾರೆ. ಆದರೆ ತಲೆ ಮತ್ತು ಕುತ್ತಿಗೆ ಮುಚ್ಚುವ ಸ್ಕಾರ್ಫ್ ಮತ್ತು ಹಿಜಾಬ್ ಧರಿಸುತ್ತಾರೆ. ಆದರೆ ಉಡುಪಿ, ಕುಂದಾಪುರದಲ್ಲಿ ವಿವಾದ ಏಳುತ್ತಿದ್ದಂತೆ ಹಿಂದು ಸಂಘಟನೆಗಳು ಬೈಂದೂರಿನಲ್ಲೂ ಕಿರಿಕ್ ಆರಂಭಿಸಿದ್ದು ವಿವಾದದ ಕಿಡಿ ಎಬ್ಬಿಸಿದೆ.

It looks like the controversy over girl students wearing hijab to a college in Karnataka’s Udupi has now become a hijab versus saffron shawl standoff in some coastal towns of the district. In a fresh incident on Friday, Hindutva outfits allegedly forced Hindu boys to wear saffron shawl to the Government Pre-University College in Byndoor.