ರಾಜ್ಯೋತ್ಸವ ಪ್ರಶಸ್ತಿಗೆ ಇನ್ನು ಅರ್ಜಿ ಹಾಕುವಂತಿಲ್ಲ ; ಸಚಿವ ಸುನಿಲ್ ಕುಮಾರ್ 

05-02-22 10:26 pm       Mangalore Correspondent   ಕರಾವಳಿ

ಮುಂದಿನ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ.

ಮಂಗಳೂರು, ಫೆ.5 : ಮುಂದಿನ ವರ್ಷದಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಜಿಗಳನ್ನು ಪಡೆಯದೆ, ಆಯ್ಕೆ ಸಮಿತಿಯನ್ನು ರಚಿಸಿ ಸಾಧಕರನ್ನು ಗುರುತಿಸಿ ಪ್ರಶಸ್ತಿ ನೀಡಲಾಗುವುದು ಎಂದು ಇಂಧನ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಸುನೀಲ್ ಕುಮಾರ್ ತಿಳಿಸಿದ್ದಾರೆ. 

ಶನಿವಾರ ನಗರದ ಕೊಡಿಯಾಲ್ ಬೈಲ್‍ನ ಶಾರದಾ ವಿದ್ಯಾಲಯದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಿಂದ ಪದ್ಮಶ್ರೀ ಪುರಸ್ಕೃತ ಮಹಾಲಿಂಗ ನಾಯ್ಕ ಅವರನ್ನು ಸನ್ಮಾನಿಸಿ ಮಾತನಾಡಿದರು. 

ಪ್ರಶಸ್ತಿಗಾಗಿ ನಾವು ಎಂದೂ ಹುಡುಕಿಕೊಂಡು ಹೋಗಬಾರದು. ಪ್ರಶಸ್ತಿ ಸಾಧಕರನ್ನು ಗುರುತಿಸಿ ನೀಡುವಂತಾಗಬೇಕು. ಆ ನಿಟ್ಟಿನಲ್ಲಿ ರಾಜ್ಯೋತ್ಸವ ಪ್ರಶಸ್ತಿಗೆ ಅರ್ಹ ಸಾಧಕರ ಆಯ್ಕೆ ನಡೆಯಲಿದೆ ಎಂದು ಅವರು ಹೇಳಿದರು. 

ಮಹಾಲಿಂಗ ನಾಯ್ಕರದ್ದು ಮೌನ ಕ್ರಾಂತಿ. ಅವರು ವಾಸವಿದ್ದ ಗುಡ್ಡದಲ್ಲಿ ಬಾವಿ ತೋಡಿ ನೀರು ಸಿಗದಿದ್ದಾಗ ಅವರು ವಿಚಲಿತರಾಗದೆ ನಿರಂತರ ಶ್ರಮದಿಂದ ಅವರು ಕಲಿಯುಗದಲ್ಲಿ ಸುರಂಗವನ್ನು ಕೊರೆದು ಗಂಗೆಯನ್ನು ಭೂಮಿಗೆ ತರಿಸಿದ ಸಾಧನೆ ಎಲ್ಲರಿಗೂ ಸ್ಪೂರ್ತಿಯ ಸೆಲೆಯಂತಿದೆ ಎಂದರು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಮಹಾಲಿಂಗ ನಾಯ್ಕ, ಇಂದು ನೀರಿಗಾಗಿ ಸಮಸ್ಯೆಗಳು ಹೆಚ್ಚಾಗುತ್ತಿರುವಂತೆಯೇ ಮುಂದಿನ ದಿನಗಳಲ್ಲಿ ನೀರು ಬಂಗಾರಕ್ಕಿಂತಲೂ ಹೆಚ್ಚು ಬೆಲೆ ಬಾಳಲಿದೆ. ಅದಕ್ಕಾಗಿ ನೀರಿನ ಮಹತ್ವವನ್ನು ಅರಿಯಬೇಕು ಎಂದು ತಿಳಿಸಿದರು. ಗುಡ್ಡದಲ್ಲಿ ಮೂರು ಬಾವಿ ಅಗೆದು ನೀರು ಸಿಗದೆ ಸುರಂಗ ತೋಡಲು ಮುಂದಾದಾಗ ಇವನ್ಯಾಕೆ ಗುಡ್ಡದಲ್ಲಿ ಇನ್ನೂ ಇದ್ದಾನೆ, ಅಲ್ಲಿ ನೀರು ಸಿಗದು ಎಂದೇ ಹೆಚ್ಚಿನವರು ಹೇಳಿದ್ದರು.

ಆದರೆ ಅಂದು ನನಗೆ ಅದು ಅನಿವಾರ್ಯವಾಗಿತ್ತು. ನಾನು ಛಲ ಬಿಡದೆ ಯಾಕೆ ನೀರು ಸಿಗುವುದಿಲ್ಲ ಎಂದು ನನ್ನ ಕಾಯಕ ಮಾಡಿದೆ. ಅದಕ್ಕೆ ಫಲ ದೊರಕಿದೆ. ಇಂದು ಬೋಳುಗುಡ್ಡದಲ್ಲಿ ಹಚ್ಚ ಹಸಿರಿನ ಕೃಷಿ ಇದೆ. ಮಳೆ ನೀರನ್ನು ಕೂಡ ನನ್ನ ಜಾಗದಿಂದ ಹೊರ ಹೋಗದಂತೆ ಮಾಡಿ ಅಂತರ್ಜಲವನ್ನು ಕಾಪಾಡಿಕೊಂಡು ಬಂದಿದ್ದೇನೆ ಎಂದವರು ಹೇಳಿದರು. ಸಮಾರಂಭದಲ್ಲಿ ಶಾಸಕ ವೇದವ್ಯಾಸ ಕಾಮತ್, ಶಾರದಾ ವಿದ್ಯಾಲಯದ ಮುಖ್ಯಸ್ಥ ಎಂ.ಬಿ. ಪುರಾಣಿಕ್, ಮೇಯರ್ ಪ್ರೇಮಾನಂದ ಶೆಟ್ಟಿ, ಕಸಾಪ ಮಾಜಿ ಜಿಲ್ಲಾಧ್ಯಕ್ಷ ಪ್ರದೀಪ್ ಕುಮಾರ್ ಕಲ್ಕೂರ, ಸುಧಾಕರ ರಾವ್ ಪೇಜಾವರ ಉಪಸ್ಥಿತರಿದ್ದರು.

No application for Rajyotsava awards says Sunil Kumar during media interaction in Mangalore.