ಸುರತ್ಕಲ್ ಟೋಲ್ ಅಕ್ರಮ ; ವಸೂಲಿಗಾರರ ಕಿರುಕುಳಕ್ಕೆ ಬೇಸತ್ತು ಯುವಕ ಆತ್ಮಹತ್ಯೆ ! ಈ ತಿಂಗಳಿಗೆ ಮುಗಿದೀತೇ ಹಗಲು ದರೋಡೆ ?

12-02-22 11:29 am       Mangalore Correspondent   ಕರಾವಳಿ

ಸುರತ್ಕಲ್ ಬಳಿ ಟೋಲ್ ಗೇಟ್ ಹೆಸರಲ್ಲಿ ಜನರನ್ನು ಲೂಟಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಟೋಲ್ ಗೇಟ್ ಮುಂದೆಯೇ ವಿಭಿನ್ನ ರೀತಿಯ ಪ್ರತಿಭಟನೆ ಆರಂಭಿಸಲಾಗಿದೆ.

ಮಂಗಳೂರು, ಫೆ.11 : ಸುರತ್ಕಲ್ ಬಳಿ ಟೋಲ್ ಗೇಟ್ ಹೆಸರಲ್ಲಿ ಜನರನ್ನು ಲೂಟಿ ಮಾಡುತ್ತಿರುವುದನ್ನು ಕೂಡಲೇ ನಿಲ್ಲಿಸಬೇಕೆಂದು ಆಗ್ರಹಿಸಿ ಟೋಲ್ ಗೇಟ್ ಮುಂದೆಯೇ ವಿಭಿನ್ನ ರೀತಿಯ ಪ್ರತಿಭಟನೆ ಆರಂಭಿಸಲಾಗಿದೆ. ಸ್ಥಳೀಯವಾಗಿ ಆಪತ್ಬಾಂಧವ ಎಂದೇ ಹೆಸರಾಗಿರುವ ಆಸಿಫ್ ಮೂಲ್ಕಿ ನೇತೃತ್ವದಲ್ಲಿ ವಿಭಿನ್ನ ಪ್ರತಿಭಟನೆ ಆರಂಭಗೊಂಡಿದ್ದು, ಲೂಟಿಕೋರರ ಪರ ನಿಂತಿರುವ ಜನಪ್ರತಿನಿಧಿಗಳು ಮತ್ತು ಆಡಳಿತ ವ್ಯವಸ್ಥೆಯನ್ನು ಅಣಕಿಸುವ ರೀತಿ ವಿನೂತನ ಪ್ರತಿಭಟನೆ ನಡೆದಿದೆ.

ಲೂಟಿಕೋರರಿಂದ ತಪ್ಪಿಸಲು ಕೆಸರು ಮಣ್ಣಿನಲ್ಲಿ ಅವಿತುಕೊಂಡು ಕುಳಿತಿರುವ ಗ್ರಾಹಕನ ರೀತಿ ಬಿಂಬಿಸುವ ಯತ್ನದಲ್ಲಿ ಆಸಿಫ್ ಅವರು ಮೈಗೆ ಪೂರ್ತಿ ಮಣ್ಣನ್ನು ಮೆತ್ತಿಕೊಂಡು ಕೆಸರು ನೀರಿನಲ್ಲಿ ಮಲಗಿದ್ದು, ಅದರ ವಿಡಿಯೋ ಭಾರೀ ವೈರಲ್ ಆಗಿದೆ. ಟೋಲ್ ಗೇಟ್ ಕೇಂದ್ರದ ಬಳಿಯಲ್ಲೇ ರಸ್ತೆ ಬದಿ ಮಣ್ಣನ್ನು ತಂದು ಹಾಕಿ, ಅದರಲ್ಲೇ ಕೆಸರು ಸೃಷ್ಟಿಸಿ ಅದರೊಳಗೆ ಕುಳಿತಿರುವ ಆಸಿಫ್ ಅವರು ಇಲ್ಲಿನ ಲೂಟಿ ಕೇಂದ್ರದ ಬಗ್ಗೆ ಫೇಸ್ಬುಕ್ ನಲ್ಲಿಯೇ ಲೈವ್ ಬಂದು ಜನರು ಮತ್ತು ಆಡಳಿತಕ್ಕೆ ಜಾಗೃತಿ ಮೂಡಿಸಿದ್ದಾರೆ.

ಶುಕ್ರವಾರ ಸಂಜೆ ರಸ್ತೆ ಬದಿ ಸ್ವತಃ ಶವದ ರೀತಿ ಮಲಗಿ ವ್ಯವಸ್ಥೆಯನ್ನು ಮತ್ತೊಂದು ರೀತಿಯಲ್ಲಿ ಅಣಕಿಸಿದ್ದಾರೆ. ಟೋಲ್ ಗೇಟ್ ನಲ್ಲಿ ರೌಡಿಗಳಿಂದ ಹಲ್ಲೆಗೆ ಒಳಗಾಗಿ ಪೊಲೀಸ್ ಠಾಣೆ ಮೆಟ್ಟಿಲೇರಿದರೂ, ನ್ಯಾಯ ಸಿಗದೆ ಕೊನೆಗೆ ಸಾವಿಗೆ ಶರಣಾಗಿರುವ ಗ್ರಾಹಕನ ರೀತಿ ಬಿಂಬಿಸಿ, ಶವದ ರೂಪದಲ್ಲಿ ಮಲಗಿರುವುದನ್ನು ತೋರಿಸಲಾಗಿತ್ತು. ಸುರತ್ಕಲ್ ಟೋಲ್ ಗೇಟ್ ನಾಲ್ಕು ವರ್ಷಗಳ ಹಿಂದೆ ತಾತ್ಕಾಲಿಕ ನೆಪದಲ್ಲಿ ಆರಂಭಿಸಲಾಗಿತ್ತು. ಆದರೆ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡ ಬಳಿಕ ಇದನ್ನು ನಿಲ್ಲಿಸಲಾಗುವುದು ಎಂದು ಹೆದ್ದಾರಿ ಅಧಿಕಾರಿಗಳು ಮತ್ತು ಜನಪ್ರತಿನಿಧಿಗಳು ತಿಳಿಸಿದ್ದರು.

ಎರಡು ವರ್ಷಗಳ ಹಿಂದೆ ಹೆಜಮಾಡಿ ಟೋಲ್ ಗೇಟ್ ಆರಂಭಗೊಂಡರೂ, ಸುರತ್ಕಲ್ ಟೋಲ್ ನಿಲ್ಲಿಸಲಿಲ್ಲ. ಟೋಲ್ ಗೇಟ್ ಸ್ಥಗಿತಗೊಳಿಸುವ ಬದಲು ಜನರನ್ನು ಲೂಟಿ ಮಾಡುವುದಕ್ಕಾಗಿಯೇ ಎರಡು ತಿಂಗಳ ಹಿಂದೆ ಮತ್ತೆ ಮೂರು ತಿಂಗಳ ಮಟ್ಟಿಗೆ ಲೈಸನ್ಸ್ ನವೀಕರಣ ಮಾಡಲಾಗಿತ್ತು. 15 ಕಿಮೀ ನಡುವೆ ಎರಡೆರಡು ಕಡೆ ಟೋಲ್ ಕಟ್ಟುವ ಸ್ಥಿತಿ ಗ್ರಾಹಕರದ್ದಾಗಿದ್ದು, ಜನರನ್ನು ಹಗಲು ದರೋಡೆ ಮಾಡಲಾಗುತ್ತಿದೆ. ಶಾಸಕರು, ಸಂಸದರ ಕೃಪೆಯಿಂದಲೇ ಈ ರೀತಿಯ ಲೂಟಿ ನಡೆಯುತ್ತಿದೆ ಅನ್ನುವ ಗಂಭೀರ ಆರೋಪ ಇದ್ದರೂ, ಜನಪ್ರತಿನಿಧಿಗಳು ಮೌನವಾಗಿರುವುದು ಆಕ್ರೋಶಕ್ಕೆ ಕಾರಣವಾಗಿದೆ. ಟೋಲ್ ವಿರೋಧಿಸಿ ವಿಶಿಷ್ಚ ರೀತಿಯ ಪ್ರತಿಭಟನೆ ನಿರಂತರ ಇರಲಿದ್ದು, ಪ್ರತಿದಿನ ವಿಶೇಷ ರೀತಿಯಲ್ಲಿ ಪ್ರತಿಭಟಿಸಲಾಗುವುದು ಎಂದು ಆಸಿಫ್ ತಿಳಿಸಿದ್ದಾರೆ.

Mangalore Surathkal toll illegal social activist Asif Apathbandava commits suicide protests for cancellation of tender. Speaking to Headline Karnataka he urged that the toll tender must be cancelled. He also sought transfer of national highway infrastructure to the respective state governments. Deeming toll plazas on national highways as an affront to federal structure of the country.