ಹಿಜಾಬ್ ಗಲಾಟೆ ; ಕೋರ್ಟ್ ಮೆಟ್ಟಿಲೇರಿದ್ದ ಆರು ವಿದ್ಯಾರ್ಥಿನಿಯರು ಗೈರು, ಎಂಜಿಎಂ ಪಿಯು ಕಾಲೇಜಿಗೆ ಅನಿರ್ದಿಷ್ಟ ರಜೆ ಘೋಷಣೆ !

16-02-22 02:22 pm       HK Desk news   ಕರಾವಳಿ

ಹಿಜಾಬ್ ವಿಚಾರದಲ್ಲಿ ಮೊದಲ ಬಾರಿಗೆ ರಾಜ್ಯದ ಗಮನ ಸೆಳೆದು ಕೋರ್ಟ್ ಮೆಟ್ಟಿಲೇರಿದ್ದ ಉಡುಪಿಯ ಸರಕಾರಿ ಹೆಮ್ಮಕ್ಕಳ ಕಾಲೇಜಿನಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ತರಗತಿಗೆ ಗೈರಾಗಿದ್ದಾರೆ. ಕಾಲೇಜಿನತ್ತ ಸುಳಿಯದೇ ಹಿಜಾಬ್ ಗಲಾಟೆಯೇ ಬೇಡವೆಂದು ದೂರ ಉಳಿದಿದ್ದಾರೆ. 

ಉಡುಪಿ, ಫೆ.16 : ಹಿಜಾಬ್ ವಿಚಾರದಲ್ಲಿ ಮೊದಲ ಬಾರಿಗೆ ರಾಜ್ಯದ ಗಮನ ಸೆಳೆದು ಕೋರ್ಟ್ ಮೆಟ್ಟಿಲೇರಿದ್ದ ಉಡುಪಿಯ ಸರಕಾರಿ ಹೆಮ್ಮಕ್ಕಳ ಕಾಲೇಜಿನಲ್ಲಿ ಆರು ಮಂದಿ ವಿದ್ಯಾರ್ಥಿನಿಯರು ತರಗತಿಗೆ ಗೈರಾಗಿದ್ದಾರೆ. ಕಾಲೇಜಿನತ್ತ ಸುಳಿಯದೇ ಹಿಜಾಬ್ ಗಲಾಟೆಯೇ ಬೇಡವೆಂದು ದೂರ ಉಳಿದಿದ್ದಾರೆ. 

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಕಾಲೇಜಿನ ಪ್ರಾಂಶುಪಾಲ ರುದ್ರೇಗೌಡ, ವಿವಾದ ಎಬ್ಬಿಸಿದ್ದ ಆರು ಜನ ಕಾಲೇಜಿಗೆ ಬಂದಿಲ್ಲ. ಇತರ 80ಕ್ಕೂ ಹೆಚ್ಚು ಮುಸ್ಲಿಂ ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿದ್ದು ಹಿಂದಿನ ರೀತಿಯಲ್ಲೇ ತರಗತಿಗೆ ಹಿಜಾಬ್ ತೆಗೆದು ಹಾಜರಾಗಿದ್ದಾರೆ. ಎಂದಿನಂತೆ ಕ್ಲಾಸ್ ಆರಂಭಗೊಂಡಿದ್ದು ಯಾವುದೇ ಗಲಾಟೆ ನಡೆದಿಲ್ಲ ಎಂದಿದ್ದಾರೆ. ‌

ಉಡುಪಿ ಬಳಿಕ ಹಿಜಾಬ್ ವಿವಾದ ಕಾಣಿಸಿಕೊಂಡಿದ್ದ ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಗೇಟ್ ಬಳಿ ನಿಂತು ಪ್ರತಿಭಟನೆ ನಡೆಸಿದ್ದ 23 ವಿದ್ಯಾರ್ಥಿನಿಯರು ಕಾಲೇಜಿಗೆ ಬಂದಿಲ್ಲ. ಕಳೆದ ಬಾರಿ ಅವರನ್ನು ಪ್ರತ್ಯೇಕ ಕೊಠಡಿಯಲ್ಲಿ ಕೂರಿಸಿ ವ್ಯವಸ್ಥೆ ಮಾಡಲಾಗಿತ್ತು. ಈಗ ಆ 23 ಮಂದಿ ಕಾಲೇಜಿಗೇ ಬರದೆ ದೂರ ಉಳಿದಿದ್ದಾರೆ. ಇತರ ಮುಸ್ಲಿಂ ವಿದ್ಯಾರ್ಥಿನಿಯರು ಎಂದಿನಂತೆ ಕಾಲೇಜಿಗೆ ಬಂದಿದ್ದು ಬುರ್ಖಾ, ಹಿಜಾಬ್ ತೆಗೆದು ತರಗತಿಗೆ ಹಾಜರಾಗಿದ್ದಾರೆ. 

ಉಡುಪಿಯ ಸರಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿಯೂ ಗೊಂದಲ ಉಂಟಾಗಿದೆ. ಈ ಹಿಂದೆ ಹಿಜಾಬ್ ಧರಿಸಿಯೇ ವಿದ್ಯಾರ್ಥಿನಿಯರು ಕಾಲೇಜಿಗೆ ಬರುತ್ತಿದ್ದರು ಎನ್ನಲಾಗಿದೆ. ಈಗ ಉಪನ್ಯಾಸಕರು ಹಿಜಾಬ್ ತೆಗೆಯಲು ಸೂಚಿಸಿದ್ದಕ್ಕೆ 15 ಮಂದಿ ಆಕ್ಷೇಪಿಸಿದ್ದಾರೆ. ಬಳಿಕ ಪ್ರಾಂಶುಪಾಲರ ಕೊಠಡಿಯಲ್ಲಿ ಅವರನ್ನು ಮನವೊಲಿಸುವ ಯತ್ನ ನಡೆದಿದೆ.

ಎಂಜಿಎಂ ಕಾಲೇಜಿನಲ್ಲಿ ಪಿಯುಗೆ ಅನಿರ್ದಿಷ್ಟ ರಜೆ ! 

ಕಳೆದ ವಾರ ಹಿಜಾಬ್ ವಿಚಾರದಲ್ಲಿ ತೀವ್ರ ಗಲಾಟೆಗೆ ಕಾರಣವಾಗಿದ್ದ ಉಡುಪಿಯ ಎಂಜಿಎಂ ಪಿಯು ಕಾಲೇಜಿಗೆ ರಜೆ ನೀಡಲಾಗಿದೆ. ಪಿಯು ಕಾಲೇಜನ್ನು ಹೈಕೋರ್ಟ್ ಆದೇಶ ಬರೋ ವರೆಗೂ ಮುಚ್ಚಲು ಆಡಳಿತ ಮಂಡಳಿ ನಿರ್ಧರಿಸಿದೆ. 

ವಿದ್ಯಾರ್ಥಿಗಳಿಗೆ ಆನ್ಲೈನ್ ಮೂಲಕ ತರಗತಿ ಮುಂದುವರಿಸಲಾಗಿದೆ. ನಿಗದಿತ ಪರೀಕ್ಷೆಗಳನ್ನು ಬರೆಯಲು ವಿದ್ಯಾರ್ಥಿಗಳಿಗೆ ಅವಕಾಶ ನೀಡಲಾಗಿದೆ. ಗೊಂದಲ,  ಜಟಾಪಟಿಗೆ ಅವಕಾಶ ಕೊಡದಿರಲು ಎಂಜಿಎಂ ಕಾಲೇಜಿನ ಆಡಳಿತ ಮಂಡಳಿ ಈ ನಿರ್ಧಾರಕ್ಕೆ ಬಂದಿದೆ ಎನ್ನಲಾಗುತ್ತಿದೆ.‌ ಫೆಬ್ರವರಿ 7ರಂದು ಕಾಲೇಜಿನಲ್ಲಿ ಬುರ್ಖಾ, ಹಿಜಾಬ್ ಮತ್ತು ಕೇಸರಿ ಶಾಲು ಹಾಕಿದ ವಿದ್ಯಾರ್ಥಿಗಳ ನಡುವೆ ತೀವ್ರ ಜಟಾಪಟಿ ನಡೆದಿತ್ತು. ಹೀಗಾಗಿ ಪಿಯು ಕಾಲೇಜಿಗೆ ಅನಿರ್ದಿಷ್ಟಾವಧಿ ರಜೆಯನ್ನು ಘೋಷಿಸಲಾಗಿದೆ. ಇದೇ ವೇಳೆ, ಕಾಲೇಜಿವ ಪದವಿ ವಿಭಾಗಕ್ಕೂ ಎರಡು ದಿನ ರಜೆ ನೀಡಿದ್ದು ಶುಕ್ರವಾರದಿಂದ ಕಾಲೇಜು ಆರಂಭಗೊಳ್ಳುವ ಸಾಧ್ಯತೆಯಿದೆ.

Hijab Row, Udupi Kundapur Hijab students absent as college starts today. As the verdict is yet to come form the high court the Hijab students weren't present at the college.