ಮಂಗಳೂರು ನಗರಕ್ಕೂ ಬಂತು ಹಿಜಾಬ್ ಕಿಚ್ಚು ; ಪೊಲೀಸ್ ಠಾಣೆಯೇರಿದ ವಿದ್ಯಾರ್ಥಿನಿಯರು- ವಿದ್ಯಾರ್ಥಿಗಳ ನಡುವಿನ ಮಾತಿನ ಚಕಮಕಿ, ಈವರೆಗಿಲ್ಲದ ವಿವಾದ ಈಗ ಬಂದಿದ್ದು ಹೇಗೆ ?

04-03-22 08:24 pm       Mangalore Correspondent   ಕರಾವಳಿ

ಮಂಗಳೂರು ನಗರದ ರಥಬೀದಿಯ ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಸಣ್ಣ ಮಟ್ಟಿನ ಕಿಚ್ಚು ಹೊತ್ತಿಕೊಂಡಿದೆ.

ಮಂಗಳೂರು, ಮಾ.4:ಮಂಗಳೂರು ನಗರದ ರಥಬೀದಿಯ ದಯಾನಂದ ಪೈ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಹಿಜಾಬ್ ವಿಚಾರದಲ್ಲಿ ಸಣ್ಣ ಮಟ್ಟಿನ ಕಿಚ್ಚು ಹೊತ್ತಿಕೊಂಡಿದೆ. ಇದರ ಪರಿಣಾಮ ಮುಸ್ಲಿಮ್ ವಿದ್ಯಾರ್ಥಿನಿಯರು ಮತ್ತು ಇತರ ಹಿಂದು ಹುಡುಗರ ಮಧ್ಯೆ ಮಾತಿನ ಚಕಮಕಿ ನಡೆದಿದ್ದು, ಇದರ ವಿಡಿಯೋ ವೈರಲ್ ಆಗಿದೆ.

ಹೈಕೋರ್ಟ್ ಮಧ್ಯಂತರ ಆದೇಶದ ಹಿನ್ನೆಲೆಯಲ್ಲಿ ಕಾಲೇಜಿನಲ್ಲಿ ಹಿಜಾಬ್ ಧರಿಸುವುದಕ್ಕೆ ಅವಕಾಶ ಇರಲಿಲ್ಲ. ಹೀಗಾಗಿ ಕೆಲವು ವಿದ್ಯಾರ್ಥಿನಿಯರು ತರಗತಿಗೆ ಹಾಜರಾಗದೆ ಕಾಲೇಜಿಗೆ ಬಂದು ಲೈಬ್ರರಿ ಕೊಠಡಿಯಲ್ಲಿ ಇರುತ್ತಿದ್ದರು. ಒಂದು ತಿಂಗಳಿನಿಂದಲೂ ಇದೇ ರೀತಿ ನಡೆಯುತ್ತಿದ್ದರೂ, ಯಾವುದೇ ಸಮಸ್ಯೆ ಇದ್ದಿರಲಿಲ್ಲ.

ಗುರುವಾರದಿಂದ ಪದವಿ ಮತ್ತು ಪಿಯುಸಿ ವಿಭಾಗದಲ್ಲಿ ಆಂತರಿಕ ಪರೀಕ್ಷೆ ಆರಂಭಗೊಂಡಿತ್ತು. ಇದರಿಂದಾಗಿ ಮುಸ್ಲಿಮ್ ವಿದ್ಯಾರ್ಥಿನಿಯರು ತಮಗೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಪ್ರಾಂಶುಪಾಲರಿಗೆ ಮನವಿ ಮಾಡಿದ್ದರು. ಹಿಜಾಬ್ ಧರಿಸದೆ, ಪರೀಕ್ಷೆ ಬರೆಯುವಂತೆ ಪ್ರಾಂಶುಪಾಲರು ತಿಳಿಸಿದ್ದರು. ಆದರೆ, ಹಿಜಾಬ್ ಹಾಕದೇ ಇರಲು ಒಪ್ಪದ ವಿದ್ಯಾರ್ಥಿನಿಯರು ಲೈಬ್ರರಿ ಹಾಲ್ ನಲ್ಲಿ ಕುಳಿತು ಪರೀಕ್ಷೆ ಬರೆಯುತ್ತಿದ್ದರು. ಗುರುವಾರ ಲೈಬ್ರರಿ ಹಾಲ್ ನಲ್ಲಿ ಪರೀಕ್ಷೆ ಬರೆಯುತ್ತಿದ್ದ ಮುಸ್ಲಿಮ್ ವಿದ್ಯಾರ್ಥಿನಿಯರ ಬಗ್ಗೆ ಕೆಲವು ಹಿಂದು ವಿದ್ಯಾರ್ಥಿಗಳು ಆಕ್ಷೇಪಿಸಿದ್ದು, ಹಿಜಾಬ್ ಧರಿಸಲು ಯಾಕೆ ಅವಕಾಶ ಕೊಟ್ಟಿದ್ದೀರೆಂದು ಪ್ರಾಂಶುಪಾಲರಿಗೆ ದೂರು ನೀಡಿದ್ದರು.

ಆನಂತರ, ಶುಕ್ರವಾರವೂ ಇದೇ ಗಲಾಟೆ ಮುಂದುವರಿದಿದ್ದು, ಲೈಬ್ರರಿ ಹಾಲ್ ನಲ್ಲಿ ಪರೀಕ್ಷೆ ಬರೆಯುತ್ತಿದ್ದಾಗ ಕೆಲವು ಹುಡುಗರು ಬಂದು ಆಕ್ಷೇಪಿಸಿದ್ದಾರೆ. ಹಿಜಾಬ್ ಧರಿಸಲು ಅವಕಾಶ ಇಲ್ಲವೆಂದು ಹೇಳಿ ಹಾಲ್ ಒಳಗಡೆಯೇ ಗಲಾಟೆ ಮಾಡಿದ್ದಾರೆ. ಆನಂತರ, ಪ್ರಾಂಶುಪಾಲರು ಬಂದು ವಿದ್ಯಾರ್ಥಿನಿಯರನ್ನು ಮನವೊಲಿಸಿ ಹೊರಕ್ಕೆ ಕಳಿಸಿದ್ದಾರೆ. ಆದರೆ ಹೊರಗೆ ಬಂದ ವಿದ್ಯಾರ್ಥಿನಿಯರು, ವಿರೋಧ ವ್ಯಕ್ತಪಡಿಸಿದ ಹಿಂದು ಹುಡುಗರ ಜೊತೆಗೆ ವಾಗ್ವಾದ ಮಾಡಿದ್ದಾರೆ. ಹುಡುಗರು ಮತ್ತು ಹುಡುಗಿಯರು ಪರಸ್ಪರ ಮಾತಾಡಿಕೊಂಡಿದ್ದು, ಹುಡುಗಿ ಈ ಕಾಲೇಜು ನಿನ್ನ ಅಪ್ಪನದ್ದಾ ಎಂದು ಹುಡುಗನಲ್ಲಿ ಪ್ರಶ್ನೆ ಮಾಡಿದ್ದು ಭಾರೀ ಸುದ್ದಿಗೆ ಗ್ರಾಸವಾಗಿದೆ. ಅಲ್ಲದೆ, ಈ ಬಗ್ಗೆ ಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿದ್ದ ಹುಡುಗಿ, ಕಾಲೇಜಿನಲ್ಲಿ ಹೊರ ಹೋಗು ಅಂತ ಹೇಳಲು ಅವನ್ಯಾರು. ನಾವು ಕೂಡ ಫೀಸು ಕಟ್ಟಿ ಬಂದಿದ್ದೇವೆ. ಪ್ರಾಂಶುಪಾಲರು ಹೇಳಿದರೆ ಓಕೆ.. ನಾವು ಕೇಳುತ್ತೇವೆ. ಅದು ಬಿಟ್ಟು ಯಾರೋ ಒಬ್ಬ ನಮ್ಮನ್ನು ಹೊರಗೆ ಹೋಗುವಂತೆ ಹೇಳಿ ನಮಗೆ ಹರ್ಟ್ ಮಾಡಿದ್ದಾನೆ. ಈ ಬಗ್ಗೆ ಪೊಲೀಸ್ ದೂರು ನೀಡುತ್ತೇನೆ ಎಂದು ಹೇಳಿದ್ದಾರೆ.

ಆನಂತರ, ಕಾಲೇಜಿನ ಪ್ರಾಂಶುಪಾಲ ರಾಜಶೇಖರ ಹೆಬ್ಬಾರ್ ವಿದ್ಯಾರ್ಥಿನಿಯರು ಮತ್ತು ಆಕ್ಷೇಪಿಸಿದ ಹುಡುಗರನ್ನು ಕಾಲೇಜಿನಿಂದ ಹೊರಕ್ಕೆ ಕಳಿಸಿದ್ದಾರೆ. ಕಾಲೇಜು ಅಭಿವೃದ್ಧಿ ಸಮಿತಿ ಏನು ಹೇಳುತ್ತದೋ ಅದರಂತೆ ನಡೆದುಕೊಳ್ಳುತ್ತೇನೆ ಎಂದು ಹೇಳಿದ್ದಾರೆ. ಘಟನೆಯ ಬಳಿಕ ವಿವಾದ ಸ್ವರೂಪ ಪಡೆದಿದ್ದು, ಎರಡೂ ಗುಂಪುಗಳು ಪರಸ್ಪರ ಪೊಲೀಸ್ ಠಾಣೆ ಮೆಟ್ಟಿಲೇರಿದೆ. ವಿದ್ಯಾರ್ಥಿನಿ ತಮಗೆ ಹರ್ಟ್ ಮಾಡಿದ್ದಾನೆ, ಹುಡುಗನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಬಂದರು ಠಾಣೆಗೆ ದೂರು ನೀಡಿದ್ದಾಳೆ. ಇದೇ ವೇಳೆ, ಎಬಿವಿಪಿ ಸಂಘಟನೆಗೆ ಸೇರಿದ ಸದ್ರಿ ಹುಡುಗನ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಅವಾಚ್ಯವಾಗಿ ಬರೆದು, ಜೀವ ಬೆದರಿಕೆ ಹಾಕಲಾಗಿದೆ ಎಂದು ಸೈಬರ್ ಠಾಣೆಯಲ್ಲಿ ದೂರು ನೀಡಲಾಗಿದೆ.

ಸಂಜೆ ಹೊತ್ತಿಗೆ ನಗರ ಪೊಲೀಸ್ ಕಮಿಷನರ್ ಶಶಿಕುಮಾರ್, ರಥಬೀದಿಯ ಕಾಲೇಜಿಗೆ ತೆರಳಿದ್ದು ಪರಿಶೀಲನೆ ನಡೆಸಿದ್ದಾರೆ. ಎರಡೂ ಕಡೆಯಿಂದ ದೂರು ಲಭ್ಯವಾಗಿದ್ದು, ಅದರ ಬಗ್ಗೆ ಪರಿಶೀಲನೆ ನಡೆಸುತ್ತೇವೆ. ಸಾಮಾಜಿಕ ಜಾಲತಾಣಗಳಲ್ಲಿ ಈ ರೀತಿ ಪ್ರಚೋದನಾತ್ಮಕ ಬರೆಯುವುದು, ಜೀವ ಬೆದರಿಕೆ ಹಾಕುವುದು ಅಕ್ಷಮ್ಯವಾಗಿದ್ದು, ಅವರ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಹೇಳಿದ್ದಾರೆ.

The controversy over wearing a hijab resurfaced in the city on Friday, March 4. This time, two groups of students from P Dayananda Pai and the P Satish Pai Government First Grade College in Mangaluru confronted each other over the hijab issue. However, the police restored normalcy in the college campus.