ಭಾರತ ತಂಡದ ನಾಯಕತ್ವಕ್ಕೆ ಸೂಕ್ತ ಅಭ್ಯರ್ಥಿಯನ್ನು ಆರಿಸಿದ ಮೊಯೀನ್‌ ಅಲಿ!

02-12-22 01:12 pm       Source: Vijayakarnataka   ಕ್ರೀಡೆ

ರೋಹಿತ್‌ ಶರ್ಮಾ ನಾಯಕತ್ವದಲ್ಲಿಯೂ ಐಸಿಸಿ ಟೂರ್ನಿಯಲ್ಲಿ ಪ್ರಶಸ್ತಿ ಗೆಲ್ಲುವಲ್ಲಿ ಭಾರತ ತಂಡ ವಿಫಲವಾಗಿದೆ.

ಭಾರತ ಟಿ20 ತಂಡದ ನಾಯಕತ್ವಕ್ಕೆ ಹಾರ್ದಿಕ್‌ ಪಾಂಡ್ಯ ಸೂಕ್ತ ಅಭ್ಯರ್ಥಿ ಎಂದು ಇಂಗ್ಲೆಂಡ್‌ ಆಲ್‌ರೌಂಡರ್ ಮೊಯೀನ್‌ ಅಲಿ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇತ್ತೀಚೆಗೆ ಮುಕ್ತಾಯವಾಗಿದ್ದ 2022ರ ಐಸಿಸಿ ಟಿ20 ವಿಶ್ವಕಪ್‌ ಕ್ರಿಕೆಟ್‌ ಟೂರ್ನಿಯಲ್ಲಿ ರೋಹಿತ್‌ ಶರ್ಮಾ ನಾಯಕತ್ವದ ಭಾರತ ತಂಡ ಸೆಮಿಫೈನಲ್‌ ಪಂದ್ಯದಲ್ಲಿ ಸೋಲುವ ಮೂಲಕ ತನ್ನ ಅಭಿಯಾನವನ್ನು ಮುಗಿಸಿತ್ತು.

ವಿರಾಟ್‌ ಕೊಹ್ಲಿ ನಾಯಕತ್ವದಲ್ಲಿ ಭಾರತ ತಂಡ 2021ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗುಂಪು ಹಂತದಿಂದ ಹೊರಬಿದ್ದಿತ್ತು. ಇದೀಗ ರೋಹಿತ್‌ ಶರ್ಮಾ ನಾಯಕತ್ವದಲ್ಲಿಯೂ ಟೀಮ್‌ ಇಂಡಿಯಾ 2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ವೈಫಲ್ಯ ಅನುಭವಿಸಿದೆ. ಈ ಹಿನ್ನೆಲೆಯಲ್ಲಿ 2024ರ ಟಿ20 ವಿಶ್ವಕಪ್‌ ನಿಮಿತ್ತ ಭಾರತ ಟಿ20 ತಂಡದ ನಾಯಕತ್ವವನ್ನು ಹಾರ್ದಿಕ್‌ ಪಾಂಡ್ಯ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎನ್ನಲಾಗಿದೆ.

Rohit Sharma at 100: The Hitman's top records

ಯುಎಇಯಲ್ಲಿ ನಡೆಯುತ್ತಿರುವ ಟಿ10 ಲೀಗ್‌ ಟೂರ್ನಿಯಲ್ಲಿ ಮೊರಿಸ್‌ವಿಲ್ಲೆ ಸ್ಯಾಂಪ್‌ ಆರ್ಮಿ ತಂಡವನ್ನು ಮುನ್ನಡೆಸುತ್ತಿರುವ ಮೊಯೀನ್ ಅಲಿ ಇತ್ತೀಚೆಗೆ ಎಎನ್‌ಐ ಜೊತೆ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಈ ವೇಳೆ ಭಾರತ ಟಿ20 ತಂಡದ ನಾಯಕತ್ವಕ್ಕೆ ಹಾರ್ದಿಕ್‌ ಪಾಂಡ್ಯ ಸೂಕ್ತ ಅಭ್ಯರ್ಥಿ ಎಂಬ ವಿಷಯವನ್ನು ಒತ್ತಿ ಹೇಳಿದ್ದಾರೆ.

"ಭಾರತ ತಂಡಕ್ಕೆ ಹಾರ್ದಿಕ್‌ ಪಾಂಡ್ಯ ಅವರನ್ನು ನಾಯಕನನ್ನಾಗಿ ನೇಮಿಸಿ. ಪ್ರಸ್ತುತ ಭಾರತ ತಂಡವನ್ನು ಮುನ್ನಡೆಸಲು ಹಾರ್ದಿಕ್‌ ಪಾಂಡ್ಯ ಸೂಕ್ತ ಅಭ್ಯರ್ಥಿಯಾಗಿದ್ದಾರೆ," ಎಂದು ಮೊಯೀನ್ ಅಲಿ ತಿಳಿಸಿದ್ದಾರೆ. ಇಂಗ್ಲಿಷ್‌ ಆಲ್‌ರೌಂಡರ್‌ ಹೇಳಿದಂತೆ ಹಾರ್ದಿಕ್‌ ಟಿ20 ನಾಯಕತ್ವ ನೀಡಲು ಬಿಸಿಸಿಐ ಚಿಂತನೆ ನಡೆಸಿದೆ ಎಂದು ಕೆಲ ದಿನಗಳ ಹಿಂದೆ ವರದಿಯಾಗಿತ್ತು.

CSK and England all-rounder Moeen Ali announces retirement from Test  cricket | Cricket News | Zee News

2022ರ ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಇಂಗ್ಲೆಂಡ್‌ ವಿರುದ್ಧ ಭಾರತ ತಂಡ ಸೋಲು ಅನುಭವಿಸಿದ ಬಗ್ಗೆ ಮಾತನಾಡಿದ ಮೊಯೀನ್‌ ಅಲಿ, "ಸೆಮಿಫೈನಲ್‌ ಪಂದ್ಯದಲ್ಲಿ ಲೆಗ್‌ ಸ್ಪಿನ್ನರ್‌ ಅನ್ನು ಆಡಿಸದ ಕಾರಣ ಭಾರತ ಸೋಲು ಅನುಭವಿಸಿತ್ತು. ಈ ಪಂದ್ಯದಲ್ಲಿ ಲೆಗ್ ಸ್ಪಿನ್ನರ್‌ ಆಡಿದ್ದರೆ, ಸನ್ನಿವೇಶ ವಿಭಿನ್ನವಾಗಿರುತ್ತಿತ್ತು," ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

"ಈ ಪಂದ್ಯದಲ್ಲಿ ಭಾರತ ತಂಡ ಇನ್ನಷ್ಟು ರನ್‌ಗಳನ್ನು ಗಳಿಸಬಹುದಿತ್ತು. ಟೀಮ್‌ ಇಂಡಿಯಾ ಅಂದಿನ ಪಂದ್ಯದಲ್ಲಿ 200 ಅಥವಾ ಅದಕ್ಕಿಂತ ಜಾಸ್ತಿ ರನ್‌ ಗಳಿಸಬಹುದೆಂದು ನಾವು ಭಾವಿಸಿದ್ದೆವು. ಆದರೆ, ಭಾರತ ಗಳಿಸಿದ್ದು 160 ರನ್‌ ಮಾತ್ರ. ಹಾಗಾಗಿ ಭಾರತೀಯ ಬೌಲರ್‌ಗಳ ವಿರುದ್ಧ ನಮ್ಮ ಬ್ಯಾಟ್ಸ್‌ಮನ್‌ಗಳಿಗೆ ವಿಶ್ವಾಸವಿತ್ತು. ಅದರಂತೆ ಪಂದ್ಯವನ್ನು ಮುಗಿಸಿದ್ದರು," ಎಂದು ಮೊಯೀನ್‌ ಅಲಿ ಹೇಳಿದರು.

World's top former, current cricketers go berserk at Virat Kohli's 71st  century | Cricket - Hindustan Times

ಟಿ20 ವಿಶ್ವಕಪ್‌ ಟೂರ್ನಿಯಲ್ಲಿ ಗಮನಾರ್ಹ ಬ್ಯಾಟಿಂಗ್‌ ಪ್ರದರ್ಶನ ತೋರಿದ್ದ ವಿರಾಟ್‌ ಕೊಹ್ಲಿಯನ್ನು ಇದೇ ವೇಳೆ ಇಂಗ್ಲೆಂಡ್‌ ಆಲ್‌ರೌಂಡರ್‌ ಮುಕ್ತಕಂಠದಿಂದ ಗುಣಗಾನ ಮಾಡಿದರು. "ವಿರಾಟ್‌ ಕೊಹ್ಲಿ ಫಾರ್ಮ್‌ಗೆ ಮರಳಿರುವುದು ತಂಡದ ಪಾಲಿಗೆ ಶುಭ ಸಂಕೇತ. ಪ್ರತಿಯೊಬ್ಬ ಆಟಗಾರರು ವೃತ್ತಿ ಜೀವನದಲ್ಲಿ ಒಮ್ಮೆ ಕಠಿಣ ಅವಧಿಯನ್ನು ಅನುಭವಿಸುತ್ತಾರೆ. ಇದರಿಂದ ಕೆಲ ಆಟಗಾರರು ಮಾತ್ರ ಹೊರಬರುತ್ತಾರೆ. ಅದರಂತೆ ವಿರಾಟ್‌ ಕೊಹ್ಲಿ ಕಠಿಣ ದಿನಗಳಿಂದ ಹೊರ ಬಂದಿದ್ದಾರೆ," ಎಂದು ಚೆನ್ನೈ ಸೂಪರ್‌ ಕಿಂಗ್ಸ್‌ ಆಲ್‌ರೌಂಡರ್‌ ಗುಣಗಾನ ಮಾಡಿದರು.

Star All-Rounder Hardik Pandya Best Option To Lead Team India ,Says English All-Rounder Moeen Ali.