ಜಯದೊಂದಿಗೆ ಋತು ಮುಗಿಸುವ ಹಂಬಲದಲ್ಲಿ ಬೆಂಗಳೂರು, ಜೆಮ್ಷೆಡ್ಪುರ

25-02-21 11:22 am       Source: MYKHEL   ಕ್ರೀಡೆ

ಕಾರ್ಲಸ್ ಕ್ಬಾಡ್ರಾಟ್ ಅವರು ಲೀಗ್ ನ ಮಧ್ಯದಲ್ಲೇ ತಂಡವನ್ನು ತೊರೆದಾಗಿನಿಂದ ಬೆಂಗಳೂರು ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿತ್ತು.

ಗೋವಾ: ಹೀರೋ ಇಂಡಿಯನ್ ಸೂಪರ್ ಲೀಗ್ ನಲ್ಲಿ ಈಗಾಗಲೇ ಪ್ಲೇ ಆಫ್ ತಲಪುವಲ್ಲಿ ವಿಫಲವಾಗಿರುವ ಜೆಮ್ಷೆಡ್ಪುರ ಮತ್ತು ಬೆಂಗಳೂರು ಎಫ್ ಸಿ ತಂಡಗಳು ಗುರುವಾರ ನಡೆಯಲಿರುವ ತಮ್ಮ ಕೊನೆಯ ಪಂದ್ಯದಲ್ಲಿ ಗೆದ್ದು ನಿರ್ಗಮಿಸುವ ಗುರಿಹೊಂದಿವೆ. ಋತುವಿನುದ್ದಕ್ಕೂ ಸ್ಥಿರ ಪ್ರದರ್ಶನ ತೋರುವಲ್ಲಿ ವಿಫಲವಾದ ಕಾರಣ ಇತ್ತಂಡಗಳು ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾದವು. ಓವೆನ್ ಕೊಯ್ಲ್ ಅವರ ಪಡೆ ಈಗ ಅಂಕಪಟ್ಟಿಯಲ್ಲಿ ಆರನೇ ಸ್ಥಾನದಲ್ಲಿದ್ದು ಬೆಂಗಳೂರಿಗಿಂತ ಎರಡು ಅಂಕ ಮೇಲುಗೈ ಸಾಧಿಸಿದೆ.

ನಾಳೆ ಪಂದ್ಯದಲ್ಲಿ ಕನಿಷ್ಠ ಡ್ರಾ ಕಂಡರೂ ಆರನೇ ಸ್ಥಾನ ಉಳಿದುಕೊಳ್ಳಲಿದೆ. ಸೋಲನುಭವಿಸಿದರೆ ಆ ಸ್ಥಾನ ಬೆಂಗಳೂರಿನ ಪಾಲಾಗಲಿದೆ. ಮುಂಬೈ ಸಿಟಿ ಎಫ್ ಸಿ ತಂಡದ ವಿರುದ್ಧ ತೋರಿದ ಪ್ರದರ್ಶನವನ್ನೇ ಮುಂದುವರಿಸುವ ಗುರಿಯೊಂದಿಗೆ ತಂಡ ಅಂಗಣಕ್ಕಿಳಿಯಲಿದೆ.

ಉತ್ತಮ ಪ್ರದರ್ಶನ ನೀಡಲಿದ್ದೇವೆ

"ನಾವು ಮುಂಬೈ ವಿರುದ್ಧ ತೋರಿದ ಪ್ರದರ್ಶನವನ್ನೇ ಪುನರಾವರ್ತನೆ ಮಾಡಲಿದ್ದೇವೆ," ಎಂದು ಕೊಯ್ಲ್ ಹೇಳಿದ್ದಾರೆ. " ನಾವು ಪ್ಲೇ ಆಫ್ ಸ್ಥಾನದ ಹತ್ತಿರ ಬಂದಿದ್ದೇವೆ, ಈ ಉತ್ತಮ ಪ್ರದರ್ಶನ ನೀಡಲಿದ್ದೇವೆ,ಬೆಂಗಳೂರಿಗೆ ಈಗಲೂ ಎಎಫ್ ಸಿ ಕಪ್ ಆಡುವ ಅವಕಾಶವಿದೆ. ಇದರಿಂದಾಗಿ ಅವರು ಉತ್ತಮ ಪ್ರದರ್ಶನ ತೋರುವ ನಿರೀಕ್ಷೆ ಇದ್ದೇ ಇರುತ್ತದೆ. ಆದ್ದರಿಂದ ನಾವು ಸವಾಲಿಗೆ ಸಜ್ಜಾಗಿರಬೇಕು," ಎಂದು ಹೇಳಿದರು.

ಬೆಂಗಳೂರು ವಿಫಲ ಪ್ರದರ್ಶನ

ಬೆಂಗಳೂರು ತಂಡ ಇದೇ ಮೊದಲ ಬಾರಿಗೆ ಪ್ಲೇ ಆಫ್ ಹಂತ ತಲಪುವಲ್ಲಿ ವಿಫಲವಾಗಿತ್ತು. ಕಾರ್ಲಸ್ ಕ್ಬಾಡ್ರಾಟ್ ಅವರು ಲೀಗ್ ನ ಮಧ್ಯದಲ್ಲೇ ತಂಡವನ್ನು ತೊರೆದಾಗಿನಿಂದ ಬೆಂಗಳೂರು ತಂಡ ತನ್ನ ನೈಜ ಸಾಮರ್ಥ್ಯವನ್ನು ತೋರುವಲ್ಲಿ ವಿಫಲವಾಗಿತ್ತು. ಜಯದ ಕೊರತೆಯ ನಡುವೆಯೂ ಮಧಯಂತರ ಕೋಚ್ ನೌಶಾದ್ ಮೂಸಾ ತಂಡದ ಘನತೆಯನ್ನು ಕಾಪಾಡುವಲ್ಲಿ ಯಶಸ್ವಿಯಾದರು.

ಪ್ಲೇಆಫ್‌ಗೆ ಹೋರಾಡಿದ್ದೆವು

""ತಂಡದ ಪ್ರದರ್ಶನದಲ್ಲಿ ಸ್ಥಿರತೆ ಇರಲಿಲ್ಲ. ಆದರೆ ಯಾವಾಗಲೂ ಧನಾತ್ಮಕ ಅಂಶ ಇರುತ್ತಿತ್ತು, ನಮ್ಮಲ್ಲಿರುವ ಶಕ್ತಿಯಲ್ಲೇ ನಾವು ಪ್ಲೇ ಆಫ್ ಹಂತ ತಲುಪಲು ಹೋರಾಡಿದೆವು. ನಾವು ಯಾವಾಗಲೂ ಜಯಕ್ಕಾಗಿ ಹೋರಾಡುತ್ತಿದ್ದೇವು, ಪ್ರತಿಯೊಂದು ತಂಡವು ನಮ್ಮದು ಉತ್ತಮ ತಂಡವೆಂದು ಹೇಳುತ್ತಿತ್ತು. ನಾವು ಯಾವಾಗಲೂ ನಮ್ಮಿಂದ ಉತ್ತಮವಾದುದನ್ನೇ ನೀಡಲು ಯತ್ನಿಸುತ್ತಿದ್ದೆವು," ಎಂದರು. ಗಾಯಗೊಂಡಿರುವ ಬಿಸ್ವಾಸ್ ದಾರ್ಜೀ ಮತ್ತು ಅಮಾನತುಗೊಂಡಿರುವ ಆಶಿಕ್ ಕರುನಿಯಾನ್ ನಾಳೆಪ ಪಂದ್ಯದಲ್ಲಿ ಆಡುತ್ತಿಲ್ಲ. ಜೆಮ್ಷೆಡ್ಪುರ ತಂಡದಲ್ಲಿ ನೆರಿಜಸ್ ವಾಸ್ಕಿಸ್ ನಾಳೆಯ ಪಂದ್ಯದಲ್ಲಿ ಆಡುತ್ತಿಲ್ಲ.

This News Article is a Copy of MYKHEL