ಟೀಮ್ ಇಂಡಿಯಾದ ಆಲ್‌ರೌಂಡರ್ ಯೂಸುಫ್ ಪಠಾಣ್ ನಿವೃತ್ತಿ ಘೋಷಣೆ

26-02-21 05:34 pm       Source: MYKHEL   ಕ್ರೀಡೆ

ಭಾರತ ಕ್ರಿಕೆಟ್‌ನ ಸ್ಪೋಟಕ ಬ್ಯಾಟ್ಸ್‌ಮನ್ ಹಾಗೂ ಆಲ್‌ರೌಂಡರ್ ಆಗಿದ್ದ ಯೂಸೂಫ್ ಪಠಾಣ್ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ.

ಭಾರತ ಕ್ರಿಕೆಟ್‌ನ ಸ್ಪೋಟಕ ಬ್ಯಾಟ್ಸ್‌ಮನ್ ಹಾಗೂ ಆಲ್‌ರೌಂಡರ್ ಆಗಿದ್ದ ಯೂಸೂಫ್ ಪಠಾಣ್ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ನಿವೃತ್ತಿಯನ್ನು ಘೋಷಿಸಿದ್ದಾರೆ. ಈ ಮೂಲಕ ಒಂದೇ ದಿನ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸಿದ ಇಬ್ಬರು ಆಟಗಾರರು ನಿವೃತ್ತಿ ಘೋಷಿಸಿದಂತಾಗಿದೆ. ಇದಕ್ಕೂ ಕೆಲವೇ ಕ್ಷಣಗಳ ಮೊದಲ ದಾವಣಗೆರೆ ಎಕ್ಸ್‌ಪ್ರೆಸ್ ಖ್ಯಾತಿಯ ವಿನಯ್ ಕುಮಾರ್ ನಿವೃತ್ತಿ ಘೋಷಿಸಿದ್ದರು.

ಆಲ್‌ರೌಂಡರ್ ಯೂಸುಫ್ ಪಠಾಣ್ ಟ್ವಿಟ್ಟರ್‌ನಲ್ಲಿ ತಮ್ಮ ನಿವೃತ್ತಿಯ ವಿಚಾರವನ್ನು ಬಹಿರಂಗಪಡಿಸಿದ್ದು, ವೃತ್ತಿ ಬದುಕಿನಲ್ಲಿ ಸಹಕರಿಸಿದ ಎಲ್ಲರನ್ನೂ ಸ್ಮರಿಸಿದ್ದಾರೆ. ಜೊತೆಗೆ ಯೂಸೂಫ್ ಪಠಾಣ್ ಸುಧೀರ್ಘ ಪತ್ರವನ್ನು ಹಂಚಿಕೊಂಡಿದ್ದಾರೆ. 'ಎರಡು ವಿಶ್ವಕಪ್ ಗೆದ್ದುಕೊಂಡಿದ್ದು ಹಾಗೂ ಸಚಿನ್ ತೆಂಡೂಲ್ಕರ್ ಅವರನ್ನು ಹೆಗಲಲ್ಲಿ ಹೊತ್ತು ನಡೆದಿದ್ದು ನನ್ನ ವೃತ್ತಿ ಬದುಕಿನ ಕೆಲ ಅತ್ಯಂತ ಸ್ಮರಣೀಯ ಕ್ಷಣಗಳು' ಎಂದು ಯೂಸುಫ್ ಪಠಾಣ್ ಈ ಪತ್ರದಲ್ಲಿ ಬರೆದುಕೊಂಡಿದ್ದಾರೆ ಯೂಸುಫ್ ಪಠಾಣ್ ಟೀಮ್ ಇಂಡಿಯಾ ಪರವಾಗಿ 57 ಏಕದಿನ ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 22 ಅಂತಾರಾಷ್ಟ್ರೀಯ ಟಿ20 ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಸೀಮಿತ ಓವರ್‌ಗಳ ಕ್ರಿಕೆಟ್‌ನಲ್ಲಿ ಪರಿಣಾಮಕಾರಿ ಇನ್ನಿಂಗ್ಸ್‌ಗಳನ್ನು ನೀಡಿರುವ ಯೂಸುಫ್ ಪಠಾಣ್ 2012ರ ಬಳಿಕ ಭಾರತ ರಾಷ್ಟ್ರೀಯ ತಂಡದಿಂದ ದೂರವಾದರು. ಅದಾದ ಬಳಿಕ ಟೀಮ್ ಇಂಡಿಯಾ ಪರವಾಗಿ ಅವಕಾಶವನ್ನು ಗಿಟ್ಟಿಸಿಕೊಳ್ಳುವಲ್ಲಿ ವಿಫಲರಾದರು. ಆದರೆ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಯೂಸುಫ್ ಪಠಾಣ್ ಅಭಿಮಾನಿಗಳನ್ನು ರಂಜಿಸುತ್ತಿದ್ದರು.

ಟೀಮ್ ಇಂಡಿಯಾವನ್ನು ಪ್ರತಿನಿಧಿಸುತ್ತಿದ್ದ ವೇಳೆ ಯೂಸುಫ್ ಪಠಾಣ್ ಪರಿಪೂರ್ಣ ಆಲ್‌ರೌಂಡರ್ ಆಗಿ ಕೊಡುಗೆಯನ್ನು ನೀಡಿದ್ದರು. ಕಠಿಣ ಸಂದರ್ಭಗಳಲ್ಲಿ ಸ್ಪೋಟಕ ಬ್ಯಾಟಿಂಗ್ ಮೂಲಕ ಹಲವು ಬಾರಿ ತಂಡಕ್ಕೆ ನೆರವಾಗಿದ್ದ ಯೂಸುಫ್ ಬೌಲಿಂಗ್‌ನಲ್ಲೂ ಅಗತ್ಯ ಸಂದರ್ಭಗಳಲ್ಲಿ ವಿಕೆಟ್ ಕಬಳಿಸಿ ತಂಡಕ್ಕೆ ಮುನ್ನಡೆ ಒದಗಿಸಿದ್ದರು. ಅದರಲ್ಲೂ ಶ್ರೀಲಂಕಾ ವಿರುದ್ಧ ಟಿ20 ಪಂದ್ಯದಲ್ಲಿ ಸೋದರ ಇರ್ಫಾನ್ ಪಠಾಣ್ ಜೊತೆಗೆ ನೀಡಿದ ಪ್ರದರ್ಶನ ಅಭಿಮಾನಿಗಳು ಇನ್ನೂ ನೆನಪಿಸಿಕೊಳ್ಳುತ್ತಾರೆ.

ಕೆಳ ಕ್ರಮಾಂಕದಲ್ಲಿ ಫಿನಿಷರ್ ಆಗಿ ಬ್ಯಾಟಿಂಗ್ ನಡೆಸಲು ಬರುತ್ತಿದ್ದ ಯೂಸುಫ್ ಪಠಾಣ್ 41 ಏಕದಿನ ಇನ್ನಿಂಗ್ಸ್‌ಗಳಲ್ಲಿ ಬ್ಯಾಟಿಂಗ್ ನಡೆಸಿದ್ದು 810 ರನ್ ಗಳಿಸಿದ್ದಾರೆ. 3 ಅರ್ಧ ಶತಕ ಹಾಗೂ ಎರಡು ಶತಕಗಳು ಯೂಸುಫ್ ಬ್ಯಾಟ್‌ನಿಂದ ಸಿಡಿದಿದೆ. ಜೊತೆಗೆ 33 ವಿಕೆಟ್‌ಗಳನ್ನು ಪಡೆದಿದ್ದಾರೆ. ಇನ್ನು 18 ಟಿ20 ಇನ್ನಿಂಗ್ಸ್‌ಗಳಲ್ಲಿ ಪಠಾಣ್ 236 ರನ್ ಬಾರಿಸಿದ್ದು 13 ವಿಕೆಟ್ ಕಬಳಿಸಿದ್ದಾರೆ.

This News Article is a Copy of MYKHEL