ಕುಂಬ್ಳೆ ಇರೋದ್ರಿಂದ ನಮ್ಮ ಕೆಲಸ ಸುಲಭವಾಗಿದೆ: ಕೆಎಲ್ ರಾಹುಲ್

27-08-20 10:58 pm       Headline Karnataka News Network   ಕ್ರೀಡೆ

ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ಇರುವುದು ನಮ್ಮ ಅದೃಷ್ಟ ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

ದುಬೈ: ಕಿಂಗ್ಸ್ ಇಲೆವೆನ್ ಪಂಜಾಬ್ ತಂಡದ ಕೋಚ್ ಆಗಿ ಅನಿಲ್ ಕುಂಬ್ಳೆ ಇರುವುದು ನಮ್ಮ ಅದೃಷ್ಟ ಎಂದು ನಾಯಕ ಕೆಎಲ್ ರಾಹುಲ್ ಹೇಳಿದ್ದಾರೆ.

ಐಪಿಎಲ್ ಟೂರ್ನಿಗಾಗಿ ಯುಎಇಗೆ ತೆರಳಿರುವ ಆಟಗಾರರು ಕ್ವಾರಂಟೈನ್‍ನಲ್ಲಿದ್ದು, ಈ ಹಿನ್ನೆಲೆಯಲ್ಲಿ ಕೆಎಲ್ ರಾಹುಲ್ ಸಂದರ್ಶನವೊಂದರಲ್ಲಿ ಭಾಗಿಯಾಗಿದ್ದರು. ಈ ವೇಳೆ ಕೋಚ್ ಅನಿಲ್ ಕುಂಬ್ಳೆ ಅವರ ಬಗ್ಗೆ ಮಾತನಾಡಿದ್ದು, ಈ ಆವೃತ್ತಿಯಲ್ಲಿ ಅನಿಲ್ ಭಾಯ್ ನಮ್ಮೊಂದಿಗೆ ಇರುವುದು ಅದೃಷ್ಟ. ಒಂದೇ ನಗರದಿಂದ ಬಂದಿರುವುದರಿಂದ ಕ್ರೀಡಾಂಗಣದಲ್ಲಿ ಹಾಗೂ ಹೊರಗೂ ನನಗೆ ಉತ್ತಮ ಬಾಂಧವ್ಯವಿದೆ. ಅವರು ಕೋಚ್ ಆಗಿರುವುದರಿಂದ ನಾಯಕನಾಗಿ ನನ್ನ ಕೆಲಸ ಸುಲಭವಾಗಿದೆ. ತಂಡದ ಎಲ್ಲಾ ಯೋಜನೆಗಳನ್ನು ಅವರೇ ಮಾಡುತ್ತಾರೆ. ಅದನ್ನು ಜಾರಿ ಮಾಡುವುದಷ್ಟೇ ನನ್ನ ಕರ್ತವ್ಯ ಎಂದು ರಾಹುಲ್ ಹೇಳಿದ್ದಾರೆ.

ಪಂಜಾಬ್ ತಂಡದಲ್ಲಿ ಗೇಲ್, ಮ್ಯಾಕ್ಸ್‌ವೆಲ್ ರೂಪದಲ್ಲಿ ಇಬ್ಬರು ಸ್ಫೋಟಕ ಆಟಗಾರರಿದ್ದು, ಇಬ್ಬರ ಕಾಂಬಿನೇಷನ್‍ನಲ್ಲಿ ಕಿಂಗ್ಸ್ ಇಲೆವೆನ್ ಉತ್ತಮ ಪ್ರದರ್ಶನ ನೀಡಲಿದೆ ಎಂದು ರಾಹುಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಪಂಜಾಬ್ ಪರ ಮ್ಯಾಕ್ಸ್‌ವೆಲ್ ಉತ್ತಮ ಪ್ರದರ್ಶನ ನೀಡಿದ್ದು, ಅವರು ತಂಡಕ್ಕೆ ಬೇಕು ಎಂದು ಹರಾಜಿನಲ್ಲಿ ಬೇಡಿಕೆ ಇಟ್ಟಿದೆ. ಕಳೆದ 2 ವರ್ಷಗಳಿಂದ ಅಂತಹ ಆಟಗಾರ ನಮ್ಮ ತಂಡದ ಮಧ್ಯಮ ಕ್ರಮಾಂಕದಲ್ಲಿ ಇಲ್ಲದ ಕೊರತೆ ಕಾಣಿಸಿತ್ತು. ಗೇಲ್ ಅವರೊಂದಿಗೂ ಹಲವು ವರ್ಷಗಳಿಂದ ಆಡುತ್ತಿದ್ದು, ಅವರ ಅನುಭವ ತಂಡಕ್ಕೆ ಸಹಕಾರಿಯಾಗಲಿದೆ. ಟೂರ್ನಿಯ ಆರಂಭಕ್ಕಾಗಿ ಎದುರು ನೋಡುತ್ತಿದ್ದೇನೆ ಎಂದು ರಾಹುಲ್ ಹೇಳಿದ್ದಾರೆ.