ಉಳ್ಳಾಲ ಫಿಶ್ ಮೀಲ್ ಫ್ಯಾಕ್ಟರಿ ಮಾಲಕರ ಜೊತೆ ಹಣಕಾಸಿನ ಡೀಲ್ ; ಯುವಕನ ಕಿಡ್ನಾಪ್ ಮಾಡಿ ಚಾರ್ಮಾಡಿ ಘಾಟಲ್ಲಿ ಕೊಲೆಗೆ ಯತ್ನ 

26-05-22 08:29 pm       Mangalore Correspondent   ಕ್ರೈಂ

ಉಳ್ಳಾಲ ಕೋಟೆಪುರದಲ್ಲಿ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗೆ ತಡೆಯೊಡ್ಡಿದ ಸ್ಥಳೀಯರಲ್ಲಿ ಐವರು ಫ್ಯಾಕ್ಟರಿ ಮಾಲಕರೊಂದಿಗೆ ಹಣಕಾಸಿನ ಡೀಲ್ ನಡೆಸಿದ್ದು ,ಇದನ್ನ ವಿರೋಧಿಸಿದ ಯುವಕನನ್ನ ಅಪಹರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. 

ಉಳ್ಳಾಲ, ಮೇ 26 : ಉಳ್ಳಾಲ ಕೋಟೆಪುರದಲ್ಲಿ ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗೆ ತಡೆಯೊಡ್ಡಿದ ಸ್ಥಳೀಯರಲ್ಲಿ ಐವರು ಫ್ಯಾಕ್ಟರಿ ಮಾಲಕರೊಂದಿಗೆ ಹಣಕಾಸಿನ ಡೀಲ್ ನಡೆಸಿದ್ದು ,ಇದನ್ನ ವಿರೋಧಿಸಿದ ಯುವಕನನ್ನ ಅಪಹರಿಸಿ ಕೊಲೆಗೆ ಯತ್ನಿಸಿದ ಘಟನೆ ನಡೆದಿದೆ. 

ಉಳ್ಳಾಲ ಕೋಟೆಪುರ ನಿವಾಸಿ ಮುಹಮ್ಮದ್ ಕಬೀರ್ (24)ನನ್ನು ಐವರ ತಂಡ ಅಪಹರಿಸಿ ಚಾರ್ಮಾಡಿ ಘಾಟಲ್ಲಿ ಕೊಲೆಗೆ ಯತ್ನಿಸಿದೆ. ಕೋಟೆಪುರದಲ್ಲಿರುವ ಸಿಆರ್ ಝಡ್ ಪ್ರದೇಶದಲ್ಲಿ ಹಣಬಲದಿಂದ ಈಗಾಗಲೇ ಅನೇಕ ಫಿಶ್ ಮೀಲ್(ಮೀನಿನ ಉತ್ಪನ್ನದ) ಫ್ಯಾಕ್ಟರಿಗಳು ನಾಯಿ ಕೊಡೆಗಳಂತೆ ತಲೆಎತ್ತಿವೆ. ಇತ್ತೀಚೆಗೆ ಕೋಟೆಪುರದ ಒಂದು ಅನಧಿಕೃತ ಫಿಶ್ ಮೀಲ್ ಫ್ಯಾಕ್ಟರಿಗೆ ತಡೆ ಆದೇಶ ತರಲು ಸ್ಥಳೀಯರು ನಿರ್ಧರಿಸಿದ್ದು ಜಿಲ್ಲಾಧಿಕಾರಿಗಳಿಗೆ ಲಿಖಿತ ದೂರು ಕೂಡ ನೀಡಿದ್ದರು. ಸಾಮೂಹಿಕವಾಗಿ ಫ್ಯಾಕ್ಟರಿ ವಿರುದ್ಧ ಹೋರಾಟಕ್ಕೆ ವೇದಿಕೆ ಸಜ್ಜಾಗಿದ್ದು ಹೋರಾಟಗಾರರಲ್ಲಿ ಐವರಾದ ಸದಕತುಲ್ಲಾ ಯಾನೆ ಪೊಪ್ಪ, ಬಿನ್ನಿ, ಉಗ್ರಾಣಿ ಮುನ್ನ, ರಮೀಝ್, ರಾಕೀಬ್ ಜತೆಯಾಗಿ ಫ್ಯಾಕ್ಟರಿ ಮಾಲಕರಿಂದ 48 ಲಕ್ಷ ರೂಪಾಯಿ ಡೀಲ್ ಕುದುರಿಸಿ ಹೋರಾಟದಿಂದ ಹಿಂದೆ ಸರಿದಿದ್ದಲ್ಲದೆ ತಡೆಯಾಜ್ನೆ ಹಿಂಪಡೆಯುವಂತೆ ಮಾಡಿದ್ದರೆಂದು ಆರೋಪ ಕೇಳಿಬಂದಿದೆ. ಐವರು ಹಣದ ಡೀಲ್ ನಡೆಸಿದ ವಿಚಾರವು ಕಬೀರ್ ಗೆ ತಿಳಿದು ಅವರಲ್ಲಿ ಈ ಬಗ್ಗೆ ತಗಾದೆ ಎತ್ತಿದ್ದಲ್ಲದೆ ಸ್ಥಳೀಯರಿಗೂ ಈ ಬಗ್ಗೆ ಮಾಹಿತಿ ನೀಡಿದ್ದರಂತೆ.

ಮೇ 25ರ ರಾತ್ರಿ 9ರ ಸುಮಾರಿಗೆ ಕಬೀರ್ ಕೋಟೆಪುರ ಸಮೀಪ ಸಹೋದರನನ್ನು ಬಿಟ್ಟು, ಉಳ್ಳಾಲ ಅಬ್ಬಕ್ಕ ವೃತ್ತದ ಬಳಿ ತನ್ನ ಬೈಕಲ್ಲಿ ತೆರಳುತ್ತಿದ್ದ ವೇಳೆ ಕಾರೊಂದು ಢಿಕ್ಕಿ ಹೊಡೆದಿದೆ. ನೆಲಕ್ಕುರುಳಿದ ಕಬೀರ್ ನನ್ನು ಕಾರಿನಿಂದ ಇಳಿದ ತಂಡ ಹಿಡಿಯಲು ಯತ್ನಿಸಿದಾಗ, ಕಬೀರ್ ಓಡಲು ಯತ್ನಿಸಿದ್ದಾರೆ. ಕಬೀರ್ ಕಾಲಿಗೆ ರಾಡ್ ಎಸೆದು, ತಲವಾರಿನ ಹಿಂಭಾಗದಿಂದ ತಲೆಗೆ ಬಡಿದು, ಬಳಿಕ ಕಾರೊಳಗಡೆ ಹಾಕಿ ಅಪಹರಿಸಿ ನಿರಂತರ ಹಲ್ಲೆ ನಡೆಸಿ ಡ್ಯಾಗರಲ್ಲಿ ಚುಚ್ಚಿದ್ದಾರೆ. ಚಾರ್ಮಾಡಿ ಘಾಟ್ ಸಮೀಪ ಕಾರು ನಿಲ್ಲಿಸಿದ ತಂಡ ಡ್ರಾಗರ್ ಮೂಲಕ ಕುತ್ತಿಗೆಗೆ ಇರಿಯಲು ಯತ್ನಿಸುತ್ತಿದ್ದಂತೆ, ದುಷ್ಕರ್ಮಿಯ ಕುತ್ತಿಗೆ ಹಿಡಿದ ಕಬೀರ್ ಕಾರಿನಿಂದ ಹೊರಗಿಳಿದು ತಪ್ಪಿಸಿಕೊಂಡಿದ್ದಾರೆ. ತಪ್ಪಿಸುವ ಧಾವಂತದಲ್ಲಿ ನೆಲಕ್ಕೆ ಬಿದ್ದು ಕಬೀರ್ ಗೆ ಗಾಯವಾಗಿದೆ. ಬಳಿಕ ದೂರದಲ್ಲಿ ಮನೆಯೊಂದು ಗೋಚರಿಸಿ ಅಲ್ಲಿ ತೆರಳಿ ವಿಚಾರ ತಿಳಿಸಿದ್ದು, ಮನೆಮಂದಿ ಟೀಶರ್ಟ್, ಚಪ್ಪಲಿಯನ್ನು ಒದಗಿಸಿ ಬಳಿಕ ರಿಕ್ಷಾವೊಂದಕ್ಕೆ ಕರೆ ಮಾಡಿ ಮಂಗಳೂರಿಗೆ ಬಿಡುವಂತೆ ತಿಳಿಸಿದ್ದಾರೆ. 

ಗಾಯಗೊಂಡ ಕಬೀರ್ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದು ಉಳ್ಳಾಲ ಪೊಲೀಸ್ ಠಾಣೆಯಲ್ಲಿ ಘಟನೆಯ ಬಗ್ಗೆ ಪ್ರಕರಣ ದಾಖಲಾಗಿದೆ. ಅಪಹರಣ ನಡೆಸಿದ ತಂಡದಲ್ಲಿ ಉಗ್ರಾಣಿ ಮುನ್ನ, ತಾಯಿಫ್, ಅಶ್ರಫ್, ಅಸ್ಗರ್, ಇಬ್ಬಿ ಎಂಬವರು ಇದ್ದರೆಂದು ಕಬೀರ್ ಆರೋಪಿಸಿದ್ದಾರೆ.

Mangalore 24 year old youth kidnapped and planned to murder him at Charmadi Ghat over fish mill finance deal at Ullal. A case has been registered at Ullal Police Station.