ಪಿಕ್ ಅಪ್ ವಾಹನದಲ್ಲಿ ಅಮಾನುಷ ಗೋಸಾಗಣೆ ; 9 ಗೋವುಗಳ ರಕ್ಷಣೆ

01-10-20 10:39 am       Mangalore Correspondent   ಕ್ರೈಂ

ಅಮಾನುಷವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಬೊಲೆರೊ ಪಿಕ್ ಅಪ್ ವಾಹನವನ್ನು ಕೊಣಾಜೆ ಪೊಲೀಸರು ವಶಪಡೆಸಿಕೊಂಡಿದ್ದು, ಆರೋಪಿಗಳು ಪರಾರಿಯಾಗಿದ್ದಾರೆ.

ಮಂಗಳೂರು, ಅಕ್ಟೋಬರ್ 1: ತಡರಾತ್ರಿ ವೇಳೆ ಅಮಾನುಷವಾಗಿ ಗೋವುಗಳನ್ನು ಸಾಗಿಸುತ್ತಿದ್ದ ಬೊಲೆರೊ ಪಿಕ್ ಅಪ್ ವಾಹನವನ್ನು ಕೊಣಾಜೆ ಪೊಲೀಸರು ಬೆನ್ನಟ್ಟಿ ತಡೆದು 9 ಗೋವುಗಳನ್ನು ರಕ್ಷಿಸಿದ್ದು , ಆರೋಪಿಗಳು ಪರಾರಿಯಾಗಿದ್ದಾರೆ.

ಬುಧವಾರ ರಾತ್ರಿ 11.30 ರ ವೇಳೆಗೆ ಕೊಣಾಜೆ ಪೊಲೀಸ್ ಠಾಣೆಯ ಮುಂಭಾಗದಿಂದ‌ ತೊಕ್ಕೊಟ್ಟಿನ‌ ಕಡೆಗೆ ಅತಿ ವೇಗ, ಅಜಾಗರೂಕತೆಯಿಂದ ಚಲಿಸುತ್ತಿದ್ದ ಪಿಕ್ ಅಪ್ ವಾಹನವನ್ನು ರಾತ್ರಿ ಗಸ್ತಿನಲ್ಲಿದ್ದ ಎಸ್.ಐ ಮಲ್ಲಿಕಾರ್ಜುನ್ ನೇತೃತ್ವದ ಸಾಗರ ತಂಡವು ಬೆನ್ನಟ್ಟಿ, ದೇರಳಕಟ್ಟೆಯಲ್ಲಿ ತಡೆದಿದೆ. ಈ ವೇಳೆ, ಪಿಕ್ ಅಪ್ ವಾಹನವನ್ನು ಅಲ್ಲೇ ನಿಲ್ಲಿಸಿ ಚಾಲಕ ಮತ್ತು ಮತ್ತೋರ್ವ ಆರೋಪಿ ಪರಾರಿಯಾಗಿದ್ದಾನೆ. ಪಿಕ್ ಅಪ್ ವಾಹನವನ್ನು ಪೊಲೀಸರು ಪರಿಶೀಲಿಸಿದಾಗ ಅದರಲ್ಲಿ ಒಂಬತ್ತು ಗೋವುಗಳನ್ನು ಅಮಾನುಷವಾಗಿ ತುಂಬಿಸಿದ್ದು ಬೆಳಕಿಗೆ ಬಂತು. ವಾಹನ ಮತ್ತು ಗೋವುಗಳನ್ನು ಕೊಣಾಜೆ ಪೊಲೀಸರು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ.

ವಿಟ್ಲ, ಪುತ್ತೂರು, ಬಂಟ್ವಾಳ ಕಡೆಗಳಿಂದ ಉಳ್ಳಾಲ ಕೋಡಿಯ ಕಸಾಯಿ ಖಾನೆಗೆ ನಿರಂತರ ಗೋವುಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದು ಪೊಲೀಸರು ಇದರ ವಿರುದ್ಧ ಇನ್ನಷ್ಟು ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.