ಮುಡಿಪು ; ಅಕ್ರಮ ಮಣ್ಣು ಸಾಗಾಟ ದಂಧೆಗೆ ದಿಢೀರ್ ದಾಳಿ ; 28 ಲಾರಿ ವಶಕ್ಕೆ

01-10-20 12:54 pm       Mangalore Correspondent   ಕ್ರೈಂ

ಮುಡಿಪು ಮತ್ತು ಬಾಳೆಪುಣಿಯಲ್ಲಿ ಅಕ್ರಮ ಮಣ್ಣು ಸಾಗಾಟ ದಂಧೆ ನಡೆಯುತ್ತಿರುವ ಬಗ್ಗೆ ಮಾಹಿತಿ ದೊರೆತ ಬೆನ್ನಲ್ಲಿ, ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿದೆ.

ಮಂಗಳೂರು, ಅಕ್ಟೋಬರ್ 1: ಮುಡಿಪು ಮತ್ತು ಬಾಳೆಪುಣಿಯಲ್ಲಿ ಅಕ್ರಮ ಮಣ್ಣು ಸಾಗಾಟ ದಂಧೆ ನಡೆಯುತ್ತಿರುವ ಬಗ್ಗೆ ನಿರಂತರ ದೂರುಗಳು ಬಂದ ಹಿನ್ನೆಲೆಯಲ್ಲಿ ಬುಧವಾರ ಮಂಗಳೂರು ಸಹಾಯಕ ಆಯುಕ್ತ ಮದನ್ ಮೋಹನ್ ನೇತೃತ್ವದ ತಂಡ ದಾಳಿ ನಡೆಸಿ 28 ಬೃಹತ್ ಲಾರಿ ಹಾಗೂ ಐದು ಜೆಸಿಬಿ ಯಂತ್ರಗಳನ್ನು ವಶಕ್ಕೆ ಪಡೆದಿದೆ. 

ಲಾಕ್‌ಡೌನ್ ಸಂದರ್ಭ ಮಾತ್ರವಲ್ಲದೆ ಅದರ ನಂತರವೂ ಮುಡಿಪು ಇನ್ಫೋಸಿಸ್ ಬಳಿಯಿಂದ ಹೊರರಾಜ್ಯಗಳಿಗೆ ಅಕ್ರಮ ಮಣ್ಣು ಸಾಗಾಟ ಮಾಡುತ್ತಿರುವ ಬಗ್ಗೆ ಜಿಲ್ಲಾಡಳಿತಕ್ಕೆ ನಿರಂತರ ದೂರುಗಳು ಬಂದಿದ್ದವು. ಕರೊನಾ ಸೋಂಕು ತಡೆಗೆ ಹೊರ ರಾಜ್ಯಗಳಿಂದ ಕರ್ನಾಟಕಕ್ಕೆ ಜನರ ಪ್ರವೇಶಕ್ಕೆ ತಡೆ ಹಾಗೂ ಕರ್ನಾಟಕದಿಂದ ಹೊರರಾಜ್ಯಗಳಿಗೆ ಹೋಗುವುದಕ್ಕೆ ನಿಷೇಧವಿದ್ದಾಗಲೂ ಮುಡಿಪುವಿನಿಂದ ಮಣ್ಣು ಸಾಗಾಟ ಅಡೆತಡೆಯಿಲ್ಲದೆ ನಡೆದಿತ್ತು. ಜೆಸಿಬಿ ಯಂತ್ರಗಳನ್ನು ಬಳಸಿ ಬೃಹತ್ ಲಾರಿಗಳಲ್ಲಿ ಮಣ್ಣು ಸಾಗಾಟ ಮಾಡಲಾಗುತ್ತಿದ್ದು, ಈ ಮಣ್ಣು ಸಿಮೆಂಟ್‌ಗೆ ಮಿಶ್ರಣ ಮಾಡಲು ಬಳಕೆಯಾಗುತ್ತಿತ್ತು ಎನ್ನಲಾಗಿದೆ. ಅಲ್ಲದೆ ಬಾಳೆಪುಣಿಯಲ್ಲಿ ಅಕ್ರಮವಾಗಿ ನಡೆಸಲಾಗುತ್ತಿದ್ದ ಕಪ್ಪು ಕಲ್ಲಿನ ಕ್ವಾರಿಗೂ ಅಧಿಕಾರಿಗಳು ದಾಳಿ ನಡೆಸಿ, ವಶಕ್ಕೆ ಪಡೆದ ಲಾರಿ ಮತ್ತು ಜೆಸಿಬಿ ಯಂತ್ರಗಳನ್ನು ಕೊಣಾಜೆ ಠಾಣೆಗೆ ಹಸ್ತಾಂತರಿಸಿದ್ದಾರೆ.