ಹತ್ರಾಸ್ ಕೊಲೆ ದೇಶಾದ್ಯಂತ ಆಕ್ರೋಶದ ಅಲೆ ; ಯುಪಿ ಸರ್ಕಾರದ ಮೇಲೆ ಒತ್ತಡ

01-10-20 01:19 pm       Headline Karnataka News Network   ಕ್ರೈಂ

ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನ  ಮಂತ್ರಿ ನರೇಂದ್ರ ಮೋದಿ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವಂತೆ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸೂಚನೆ ನೀಡಿದ್ದಾರೆ.

ಲಕ್ನೋ, ಅಕ್ಟೋಬರ್ 1 : ಉತ್ತರ ಪ್ರದೇಶದ ಹತ್ರಾಸ್‍ನಲ್ಲಿ ನಡೆದ 20 ವರ್ಷದ ದಲಿತ ಯುವತಿಯ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಬಗ್ಗೆ ದೇಶದೆಲ್ಲೆಡೆ ವ್ಯಾಪಕ ಆಕ್ರೋಶದ ಅಲೆ ಎದ್ದಿದೆ. 

ಸೆಪ್ಟೆಂಬರ್ 14ರಂದು ಹೊಲಕ್ಕೆ ಹೋಗಿದ್ದಾಗ ಕಾಮುಕರ ಅಟ್ಟಹಾಸದಿಂದ ಸಾಮೂಹಿಕ ಅತ್ಯಾಚಾರಕ್ಕೆ ಒಳಗಾಗಿದ್ದ 20 ವರ್ಷದ ಯುವತಿ ಎರಡು ವಾರಗಳಿಂದ ಜೀವನ್ಮರಣದ ನಡುವೆ ಹೋರಾಡಿ, ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾಳೆ. ಯುವತಿಯನ್ನು ನಾಲ್ಕು ಜನ ಮೇಲ್ಜಾತಿಯ ಯುವಕರು ಅತ್ಯಾಚಾರ ಮಾಡಿದ್ದಲ್ಲದೆ ಆಕೆಯ ನಾಲಿಗೆಯನ್ನು ಹಾಗು ಬೆನ್ನುಹುರಿಯನ್ನು ಸಹ ಕತ್ತರಿಸಿ ಅಟ್ಟಹಾಸ ಮೆರೆದಿದ್ದರು.

ಯುವತಿಯ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಸೆಪ್ಟೆಂಬರ್ 28 ರಂದು ಸಂತ್ರಸ್ತೆಯನ್ನು ದೆಹಲಿಯ ಸಫ್ದರ್ಜಂಗ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಸೆಪ್ಟೆಂಬರ್ 29 ರ ಬೆಳಗ್ಗೆ ಯುವತಿ ಮೃತಪಟ್ಟಿದ್ದಳು. 

ಇನ್ನು ಮೃತಪಟ್ಟ ಸಂತ್ರಸ್ತೆಯ ಕುಟುಂಬದವರು ಪೊಲೀಸರ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದು, ಶವದ ಅಂತ್ಯಕ್ರಿಯೆ ನಡೆಸಲು ಪೊಲೀಸರು ನಮಗೆ ಅವಕಾಶ ನೀಡಲಿಲ್ಲ. ನಮ್ಮ ವಿರೋಧವನ್ನು ಧಿಕ್ಕರಿಸಿ ರಾತ್ರೋರಾತ್ರಿ ಪೊಲೀಸರೇ ಅಂತ್ಯಕ್ರಿಯೆ ನೆರವೇರಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ಪ್ರಕರಣದ ಕುರಿತು ಆಕ್ರೋಶ ವ್ಯಕ್ತಪಡಿಸಿರುವ ಪ್ರಧಾನ  ಮಂತ್ರಿ ನರೇಂದ್ರ ಮೋದಿ ತಪ್ಪಿತಸ್ಥರಿಗೆ ಅತ್ಯಂತ ಕಠಿಣ ಶಿಕ್ಷೆಯನ್ನು ವಿಧಿಸುವಂತೆ  ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರಿಗೆ ಸೂಚನೆ ನೀಡಿದ್ದಾರೆ.

ಪ್ರಕರಣದ ತನಿಖೆಗಾಗಿ ಮೂರು ಸದಸ್ಯರ ವಿಶೇಷ ತನಿಖಾ ತಂಡ (ಎಸ್‍ಐಟಿ) ರಚಿಸಲಾಗಿದ್ದು , 7 ದಿನಗಳ ಒಳಗೆ ವರದಿ ನೀಡುವಂತೆ ಸೂಚಿಸಲಾಗಿದೆ. ಈ ಪ್ರಕರಣವನ್ನು ತ್ವರಿತ ನ್ಯಾಯಾಲಯದ ಮೂಲಕ ವಿಚಾರಣೆ ನಡೆಸಲಾಗುತ್ತದೆ. ಘಟನೆ ಸಂಬಂಧ ನಾಲ್ವರನ್ನು ಬಂಧಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಮುಖ್ಯಮಂತ್ರಿ ಯೋಗಿ ತಿಳಿಸಿದ್ದಾರೆ.

ಹತ್ರಾಸ್ ಘಟನೆಯನ್ನು ಪ್ರತಿಭಟಿಸಿ ಉತ್ತರ ಪ್ರದೇಶ, ನವದೆಹಲಿ ಸೇರಿದಂತೆ ದೇಶದ ವಿವಿಧೆಡೆ ವ್ಯಾಪಕ ಆಕ್ರೋಶ ಭುಗಿಲೆದ್ದಿದ್ದು , ಪ್ರತಿಭಟನೆಗಳು ನಡೆಯುತ್ತಿವೆ.