ಪಿಎಸ್ಐ ಅಕ್ರಮದ ಮಾದರಿಯಲ್ಲೇ ಕೆಪಿಟಿಸಿಎಲ್ ಹಗರಣ ; ಉತ್ತರಗಳಿದ್ದ ಬ್ಲೂಟೂತ್ ಪತ್ತೆ, ಕಾಲೇಜು ಉಪನ್ಯಾಸಕ ಸೇರಿ ಮತ್ತೆ ಮೂವರ ಬಂಧನ 

25-08-22 12:49 pm       HK News Desk   ಕ್ರೈಂ

ಕೆಪಿಟಿಸಿಎಲ್ ಕಿರಿಯ ಸಹಾಯಕ ಅಭಿಯಂತರ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಬೆಳಗಾವಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.‌

ಬೆಳಗಾವಿ, ಆಗಸ್ಟ್ 25: ಕೆಪಿಟಿಸಿಎಲ್ ಕಿರಿಯ ಸಹಾಯಕ ಅಭಿಯಂತರ ಪ್ರವೇಶ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಪ್ರಕರಣದಲ್ಲಿ ತನಿಖೆ ಚುರುಕುಗೊಳಿಸಿರುವ ಬೆಳಗಾವಿ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.‌

ಹುಕ್ಕೇರಿಯ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಹಾಗೂ ಪರೀಕ್ಷೆ ಬರೆದ ಅಭ್ಯರ್ಥಿಗಳ ಇಬ್ಬರು ಸಂಬಂಧಿಕರನ್ನು ಬಂಧನ ಮಾಡಲಾಗಿದೆ. ಗದಗದಿಂದ ಬಂದಿದ್ದ ಪ್ರಶ್ನೆಪತ್ರಿಕೆಗೆ ಸರ್ಕಾರಿ ಕಾಲೇಜಿನ ಅತಿಥಿ ಉಪನ್ಯಾಸಕ ಆದೇಶ ನಾಗನೂರಿ ಸ್ವತಃ ಉತ್ತರ ಬಿಡಿಸಿಕೊಟ್ಟಿದ್ದಾನೆ ಎನ್ನಲಾಗುತ್ತಿದೆ. ಈತ ಹುಕ್ಕೇರಿ ಸರ್ಕಾರಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕನಾಗಿ ಕೆಲಸ ಮಾಡುತ್ತಿದ್ದ. ಬೈಲಹೊಂಗಲ ತಾಲೂಕಿನ ನಾವಲಗಟ್ಟಿಯ ಮಡಿವಾಳಪ್ಪ ತೋರಣಗಟ್ಟಿ ಮತ್ತು ಹೊಸಕೋಟಿ ಗ್ರಾಮದ ಶಂಕರ ಉಣಕಲ್ ಎಂಬಿಬ್ಬರನ್ನೂ ಬಂಧಿಸಲಾಗಿದೆ. KPTCL ಪರೀಕ್ಷಾ ಅಕ್ರಮ ಪ್ರಕರಣದಲ್ಲಿ ಬಂಧಿತರ ಸಂಖ್ಯೆ 12ಕ್ಕೆ ಏರಿಕೆಯಾಗಿದೆ. 

ಬಂಧಿತ ಅತಿಥಿ ಉಪನ್ಯಾಸಕನ ಬಳಿಯಿಂದಲೇ ಅಭ್ಯರ್ಥಿಗಳ ಸಂಬಂಧಿಕರಾದ ಮಡಿವಾಳಪ್ಪ ತೋರಣಗಟ್ಟಿ ಮತ್ತು ಶಂಕರ ಉಣಕಲ್ ಬ್ಲೂಟೂಥ್ ಡಿವೈಸ್ ಪಡೆದಿದ್ದರು.‌ ಆದ್ರೆ ಡಿವೈಸ್‌ಗಳನ್ನು ಪರೀಕ್ಷಾ ಕೇಂದ್ರಕ್ಕೆ ತಲುಪಿಸಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ. ಬಂಧಿತರಿಂದ ಒಂದು ಕಾರು ಮತ್ತು ಉತ್ತರಗಳಿದ್ದ ಎರಡು ಡಿವೈಸ್‌ಗಳನ್ನು ಜಪ್ತಿ ಮಾಡಲಾಗಿದೆ. ಪ್ರಕರಣದ ಕಿಂಗ್‌ ಪಿನ್ ಸಂಜು ಭಂಡಾರಿ ಬಳಿಯಿಂದ ಡಿವೈಸ್ ಪಡೆದು ಅತಿಥಿ ಉಪನ್ಯಾಸಕನೇ ಪರೀಕ್ಷಾರ್ಥಿಗಳ ಸಂಬಂಧಿಕರಿಗೆ ನೀಡಿದ್ದ. ಆರು ಲಕ್ಷ ರೂಪಾಯಿಗೆ ಡೀಲ್ ಫೈನಲ್ ಮಾಡಿ ಬ್ಲ್ಯೂಟೂಥ್ ಡಿವೈಸ್ ಪಡೆದಿದ್ದರು ಎಂದು ತನಿಖೆಯಲ್ಲಿ ಪತ್ತೆಯಾಗಿದೆ. ಬೆಳಗಾವಿ ಎಸ್‌ಪಿ ಡಾ‌.ಸಂಜೀವ ಪಾಟೀಲ್ ನೇತೃತ್ವದಲ್ಲಿ ಪ್ರಕರಣದ ತನಿಖೆಗೆ ಮೂರು ವಿಶೇಷ ತಂಡಗಳನ್ನು ರಚಿಸಲಾಗಿದ್ದು ತನಿಖೆ ಮುಂದುವರಿದಿದೆ.

The police on Tuesday took three persons into their custody in connection with the alleged malpractice during the recruitment examination held to fill up the posts of junior assistants in KPTCL.