ಕಣಿಯೂರು ರಕ್ಷಿತಾರಣ್ಯದಿಂದ ಮರಗಳ್ಳತನ ; ದೇವಸ್ಥಾನದ ಹೆಸರಲ್ಲಿ ಅಕ್ರಮ ಮರ ಕಡಿದು ಮಾರಾಟ, ಮ್ಯಾನೇಜರನದ್ದೇ ಕೃತ್ಯ, ಬಿಜೆಪಿ ಪುಢಾರಿಗಳ ಬೆಂಬಲ

26-08-22 11:30 am       Mangalore Correspondent   ಕ್ರೈಂ

ಉಪ್ಪಿನಂಗಡಿ ಬಳಿಯ ಕಣಿಯೂರು ಗ್ರಾಮದಲ್ಲಿ ಭಾರೀ ಬೆಲೆಬಾಳುವ ಮರಗಳನ್ನು ಅರಣ್ಯ ಪ್ರದೇಶದಿಂದ ಕಡಿದು ಮಾರುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಪುತ್ತೂರು, ಆಗಸ್ಟ್ 26: ಉಪ್ಪಿನಂಗಡಿ ಬಳಿಯ ಕಣಿಯೂರು ಗ್ರಾಮದಲ್ಲಿ ಭಾರೀ ಬೆಲೆಬಾಳುವ ಮರಗಳನ್ನು ಅರಣ್ಯ ಪ್ರದೇಶದಿಂದ ಕಡಿದು ಮಾರುತ್ತಿದ್ದಾಗ ಅರಣ್ಯಾಧಿಕಾರಿಗಳು ದಾಳಿ ನಡೆಸಿ ಮೂವರನ್ನು ಬಂಧಿಸಿದ್ದಾರೆ.

ಕಾಡಿನಲ್ಲೇ ಯಂತ್ರ ಬಳಸಿ ಬೃಹತ್ ಗಾತ್ರದ ಮರಗಳನ್ನು ಕಡಿಯುತ್ತಿದ್ದುದಲ್ಲದೆ, ಅದನ್ನು ದಿಮ್ಮಿಗಳಾಗಿಸಿ ಕೊಯ್ದು ಹೊರಗಡೆ ಸಾಗಿಸುತ್ತಿದ್ದರು. ಮಲೆಂಗಲ್ಲು ಉಮಾಮಹೇಶ್ವರಿ ದೇವಸ್ಥಾನದ ಮ್ಯಾನೇಜರ್ ಎಂದು ಹೇಳಿಕೊಂಡು ತಿರುಗುವ ದಿನೇಶ್ ಶೆಟ್ಟಿ ಮಲೆಂಗಲ್ಲು ಎಂಬ ವ್ಯಕ್ತಿಯೇ ಇದರ ಕಿಂಗ್ ಪಿನ್ ಆಗಿದ್ದು, ಆತನೇ ಹಲವಾರು ವರ್ಷಗಳಿಂದ ಕಣಿಯೂರು ಆಸುಪಾಸಿನ ರಕ್ಷಿತಾರಣ್ಯದಿಂದ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ ಎಂದು ಸ್ಥಳೀಯರು ಮಾಹಿತಿ ನೀಡಿದ್ದಾರೆ.

ವಾರದ ಹಿಂದೆ ಕಾಡಿನ ಮಧ್ಯೆ ನಾಲ್ಕು ಮಂದಿ ಕೂಲಿಯಾಳುಗಳನ್ನು ಬಳಸಿ ಮರಗಳನ್ನು ಕಡಿಯುತ್ತಿದ್ದಾಗ ಸ್ಥಳೀಯ ಯುವಕರೇ ಗಮನಿಸಿ ಅರಣ್ಯಾಧಿಕಾರಿಗಳ ಗಮನಕ್ಕೆ ತಂದಿದ್ದರು. ಆದರೆ ದಿನೇಶ್ ಶೆಟ್ಟಿ ಸ್ಥಳೀಯವಾಗಿ ಪ್ರಭಾವಿಯಾಗಿದ್ದು, ಬಿಜೆಪಿ ನಾಯಕರ ಮೂಲಕ ಅರಣ್ಯಾಧಿಕಾರಿಗಳಿಗೆ ಒತ್ತಡ ಹೇರಿದ್ದರು ಎನ್ನಲಾಗಿದೆ. ಅಲ್ಲದೆ, ದೇವಸ್ಥಾನದ ಕೆಲಸಕ್ಕಾಗಿ ಮರಗಳನ್ನು ಕಡಿಯಲಾಗುತ್ತಿದೆ ಎಂದು ಅರಣ್ಯಾಧಿಕಾರಿಗಳ ದಿಕ್ಕು ತಪ್ಪಿಸುವ ಯತ್ನ ಮಾಡಿದ್ದರು. ಆದರೆ, ದೇವಸ್ಥಾನದ ಅರ್ಚಕರು ಇಲ್ಲಿ ಯಾವುದೇ ಕೆಲಸ ಆಗುತ್ತಿಲ್ಲ, ದೇವಸ್ಥಾನಕ್ಕಾಗಿ ಮರಗಳನ್ನು ಕಡಿಯುತ್ತಿಲ್ಲ ಎಂದು ಹೇಳಿಕೆ ನೀಡಿದ್ದು ಆರೋಪಿಗೆ ಮುಳುವಾಗಿ ಪರಿಣಮಿಸಿತ್ತು. ಬಳಿಕ ಉಪ್ಪಿನಂಗಡಿ ವಲಯ ಅರಣ್ಯಾಧಿಕಾರಿ ಮಧುಸೂದನ್ ಮೇಲೆ ಹಲವು ಕಡೆಯಿಂದ ಒತ್ತಡ ಬಿದ್ದ ಕಾರಣ ಕೊನೆಗೆ ಮೂವರ ವಿರುದ್ಧ ಎಫ್ಐಆರ್ ದಾಖಲು ಮಾಡಿದ್ದಾರೆ.

ಮಲೆಂಗಲ್ಲು ನಿವಾಸಿಗಳಾದ ದಿನೇಶ್ ಶೆಟ್ಟಿ, ಉಮೇಶ್ ಗೌಡ, ಹೇಮಂತ್ ಎಂಬ ಮೂವರ ವಿರುದ್ಧ ಕೇಸು ದಾಖಲಿಸಿ ಬಂಧಿಸಿರುವುದಾಗಿ ತೋರಿಸಿದ್ದಾರೆ. ಮಲೆಂಗಲ್ಲು ಉಮಾಮಹೇಶ್ವರಿ ದೇವಸ್ಥಾನ ಕಾಡಿನ ಬದಿಯಲ್ಲೇ ಇದ್ದು, ಅದರ ಹಿಂಬದಿ ಇರುವ ರಕ್ಷಿತಾರಣ್ಯದಿಂದಲೇ ಹಲವಾರು ಮರಗಳನ್ನು ರಾತ್ರೋರಾತ್ರಿ ಕಡಿದು ಸಾಗಿಸಿದ್ದಾಗಿ ಸ್ಥಳೀಯರು ಹೆಡ್ ಲೈನ್ ಕರ್ನಾಟಕ ಗಮನಕ್ಕೆ ತಂದಿದ್ದಾರೆ. ಈ ಬಗ್ಗೆ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದರೂ, ಸೂಕ್ತ ಕ್ರಮ ಕೈಗೊಂಡಿಲ್ಲ. ದಿನೇಶ್ ಶೆಟ್ಟಿ ಎಂಬಾತ ದೇವಸ್ಥಾನದಲ್ಲಿ ಮ್ಯಾನೇಜರ್ ಎಂದು ಹೇಳಿಕೊಂಡು ಸ್ಥಳೀಯವಾಗಿ ಮರಗಳನ್ನು ಕಳ್ಳತನ ಮಾಡಿಯೇ ಪ್ರಭಾವಿಯಾಗಿ ಬೆಳೆದಿದ್ದಾನೆ. ಕಾಡಿನ ಮಧ್ಯೆ ಇರುವ ಬೆಲೆಬಾಳುವ ಬೀಟೆ, ಕಲ್ಬಾಜಿ, ಬೋವಿನ ಮರಗಳನ್ನು ಕಡಿದು ಮನೆಯಲ್ಲಿ ದಿಮ್ಮಿಗಳಾಗಿಸಿ ಬಚ್ಚಿಟ್ಟಿದ್ದಾನೆ ಎಂಬ ಬಗ್ಗೆಯೂ ಅರಣ್ಯಾಧಿಕಾರಿಗಳಿಗೆ ದೂರು ನೀಡಿದ್ದಾರೆ. ಆದರೆ ಮರ ಕಳ್ಳನಿಗೆ ಸ್ಥಳೀಯ ಬಿಜೆಪಿ ಪುಢಾರಿಗಳೇ ಬೆಂಬಲ ನಿಂತಿದ್ದಾರೆ ಎನ್ನುವ ದೂರನ್ನು ಸ್ಥಳೀಯರು ಹೇಳಿಕೊಂಡಿದ್ದಾರೆ.

ಪ್ರತಿ ಬಾರಿ ದೇವಸ್ಥಾನಕ್ಕೆಂದು ಹೇಳಿ ಮರಗಳನ್ನು ಕಡಿದು ಸಾಗಿಸುತ್ತಿದ್ದಾರೆ. ರಕ್ಷಿತಾರಣ್ಯದಲ್ಲಿರುವ ಮರಗಳಿಗೆ ರಕ್ಷಣೆ ಇಲ್ಲವಾಗಿದೆ. ಅರಣ್ಯಾಧಿಕಾರಿಗಳು ನಾಮ್ಕೇವಾಸ್ತೆ ಇದ್ದಾರೆಂದು ಸ್ಥಳೀಯರು ಆರೋಪಿಸಿದ್ದಾರೆ. ಕಾಡಿನಲ್ಲಿ ಪೊದೆಗಳಷ್ಟೇ ಉಳಿದುಕೊಂಡಿವೆ. ದೊಡ್ಡದಾಗಿ ಬೆಳೆದ ಮರಗಳನ್ನೆಲ್ಲ ಕಡಿದು ಸಾಗಿಸಲಾಗಿದೆ ಎನ್ನುವ ಮಾಹಿತಿ ಸ್ಥಳೀಯರದ್ದು.

Illegal cutting of trees and smuggling in Puttur, forest officials raid and arrest three persons who were involved in illegal business. The activities were done in the name of the temple with the back support of BJP Leaders.