ಸೋಮೇಶ್ವರದಲ್ಲಿ ಮರಳು ಕಳ್ಳರ ಅಟ್ಟಹಾಸ ; ಕಡಲ ತೀರದಲ್ಲಿ ಮರಳು ಕಳ್ಳತನ ನಿಗಾಕ್ಕೆ ಹಾಕಿದ್ದ ಸಿಸಿಟಿವಿ, ತಂತಿ ಬೇಲಿ ಉಡೀಸ್ !

11-09-22 12:29 pm       HK News Desk   ಕ್ರೈಂ

ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮರಳು ಕಳ್ಳತನ ತಡೆಯಲು ಹಾಕಿದ್ದ ಸಿಸಿಟಿವಿ ಮತ್ತು ತಂತಿ ತಡೆ ಬೇಲಿಯನ್ನೇ ಮರಳು ಕಳ್ಳರು‌ ಧ್ವಂಸಗೈದು ಅಟ್ಟಹಾಸ ಮೆರೆದಿದ್ದಾರೆ.

ಉಳ್ಳಾಲ, ಸೆ.11: ಸೋಮೇಶ್ವರ ಸಮುದ್ರ ತೀರದಿಂದ ನಿರಂತರವಾಗಿ ಮರಳು ಕಳ್ಳತನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಮರಳು ಕಳ್ಳತನ ತಡೆಯಲು ಹಾಕಿದ್ದ ಸಿಸಿಟಿವಿ ಮತ್ತು ತಂತಿ ತಡೆ ಬೇಲಿಯನ್ನೇ ಮರಳು ಕಳ್ಳರು‌ ಧ್ವಂಸಗೈದು ಅಟ್ಟಹಾಸ ಮೆರೆದಿದ್ದಾರೆ.

ಮರಳು ಕಳ್ಳತನ ತಡೆಯಲು ಸೋಮೇಶ್ವರ ಸಮುದ್ರ ತೀರ, ಕೋಟೆಪುರ, ತಲಪಾಡಿ ಇನ್ನಿತರ ಪ್ರದೇಶಗಳಲ್ಲಿ ಜಿಲ್ಲಾಡಳಿತವು ಇಂಟರ್ನೆಟ್ ಆಧಾರಿತ ಸಿಸಿಟಿವಿ ಗಳನ್ನ ಅಳವಡಿಸಿತ್ತು. ನಿನ್ನೆ ಸೆ.10 ರ ಮುಂಜಾನೆ ನಸುಕಿನ 1ರಿಂದ ಎರಡು ಗಂಟೆ ಸುಮಾರಿಗೆ ಸೋಮೇಶ್ವರ ದೇವಸ್ಥಾನದ ರಥ‌ ಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನ ಟಿಪ್ಪರ್ ಒಂದು ಹಿಮ್ಮುಖವಾಗಿ ಚಲಿಸಿ ಧ್ವಂಸ‌ ಮಾಡಿದೆ. ಮರಳು ಕಳ್ಳರು ಸಿಸಿ ಕ್ಯಾಮೆರಾವನ್ನ‌ ಟಿಪ್ಪರ್ ಮುಖೇನ ಪುಡಿಗೈದ ವೀಡಿಯೋ ಫೂಟೇಜ್ ದಾಖಲಾಗಿದೆ.

 

ತಿಂಗಳ ಹಿಂದಷ್ಟೆ ತಲಪಾಡಿಯಲ್ಲೂ‌ ಅಳವಡಿಸಿದ್ದ ಸಿಸಿಟಿವಿ ಕ್ಯಾಮೆರಾವನ್ನ‌ ಒಂದೇ ದಿವಸದಲ್ಲಿ ಪುಡಿಗೈಯಲಾಗಿತ್ತು. ಮರಳು ಕಳ್ಳತನ ತಡೆಗೆ ಭೂ ಮತ್ತು ಗಣಿ ವಿಜ್ಞಾನ ಇಲಾಖೆ ಅಧಿಕಾರಿಗಳು ಸೋಮೇಶ್ವರ ಸಮುದ್ರ ತೀರದುದ್ದಕ್ಕೂ ಹಾಕಿದ್ದ ತಂತಿ ಬೇಲಿಯನ್ನೂ ಮುರಿದು ಹಾಕಲಾಗಿದೆ. ಉಳ್ಳಾಲ ನಗರಸಭೆ ವ್ಯಾಪ್ತಿಗೆ ಬರುವ ಸೋಮೇಶ್ವರ ಮೂಡಾ ಲೇ ಔಟಲ್ಲಿ ಹಾಕಲಾಗಿದ್ದ ತಂತಿ ಬೇಲಿಯನ್ನೇ‌ ಮರಳು ಕಳ್ಳರು ಧ್ವಂಸಗೊಳಿಸಿದ್ದಾರೆ.

ಸರಕಾರಿ ಆಸ್ತಿ ನಷ್ಟಗೊಳಿಸಿದ ನಿಶಾಚರಿ ಮರಳು ಕಳ್ಳರ ವಿರುದ್ಧ ಈವರೆಗೂ ದೂರು ದಾಖಲಾಗಿಲ್ಲ. ನೂತನವಾಗಿ ಅಧಿಕಾರ ಸ್ವೀಕರಿಸಿರುವ ಉಳ್ಳಾಲ ತಹಶೀಲ್ದಾರ್ ಪುಟ್ಟರಾಜು ಡಿ.ಎ ಅವರು ಸಿಸಿಟಿವಿ ಕ್ಯಾಮೆರಾ ಮತ್ತು ತಂತಿ ತಡೆ ಬೇಲಿ ಧ್ವಂಸದ ಬಗ್ಗೆ ಕಂದಾಯ ನಿರೀಕ್ಷಕರಲ್ಲಿ ಪೊಲೀಸ್ ದೂರು ನೀಡಲು ಸೂಚಿಸಿರುವುದಾಗಿ ಹೇಳಿದ್ದಾರೆ.

Ullal Illegal sand extraction continues in Someshwar Beach, CC camera and fences destroyed by trucks in Mangalore in order to extract sand fearlessly.