ಉಳ್ಳಾಲದಲ್ಲಿ ಮರಳು ದಂಧೆಕೋರರಿಂದ ಸಿಸಿಟಿವಿ ಧ್ವಂಸ ; ಎರಡು ದಿನದ ಬಳಿಕ ಕೇಸು, ನಾಲ್ವರ ಬಂಧನ ! 

12-09-22 10:37 pm       Mangalore Correspondent   ಕ್ರೈಂ

ಸೋಮೇಶ್ವರ ದೇವಸ್ಥಾನದ ರಥಬೀದಿಯ ಕಡಲ ಕಿನಾರೆಯಲ್ಲಿ ಮರಳು ಕಳ್ಳತನ ತಡೆಯಲು ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾವನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಉಳ್ಳಾಲ, ಸೆ.12 : ಸೋಮೇಶ್ವರ ದೇವಸ್ಥಾನದ ರಥಬೀದಿಯ ಕಡಲ ಕಿನಾರೆಯಲ್ಲಿ ಮರಳು ಕಳ್ಳತನ ತಡೆಯಲು ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮರಾವನ್ನು ಧ್ವಂಸಗೈದ ಪ್ರಕರಣಕ್ಕೆ ಸಂಬಂಧಿಸಿ ನಾಲ್ವರು ಆರೋಪಿಗಳನ್ನು ಉಳ್ಳಾಲ ಪೊಲೀಸರು ಬಂಧಿಸಿದ್ದಾರೆ. 

ಮಡ್ಯಾರು ಸಾಯಿನಗರ ನಿವಾಸಿ ಸೂರಜ್, ಕುರ್ನಾಡು ಮುಡಿಪು ಮದ್ಯನಡ್ಕ ನಿವಾಸಿ ಇಕ್ಬಾಲ್, ತಲಪಾಡಿ ನಿವಾಸಿ ಅಖಿಲ್ ಹಾಗೂ ಸೋಮೇಶ್ವರ ಮೂಡ ನಿವಾಸಿ ಪ್ರಜ್ವಲ್ ಎಂಬ ಆರೋಪಿಗಳನ್ನ ಉಳ್ಳಾಲ ಪೊಲೀಸರು ಬಂಧಿಸಿದ್ದು, ಸಿಸಿಟಿವಿ ಪುಡಿಗೈದ ಟಿಪ್ಪರನ್ನ ಜಪ್ತಿಗೊಳಿಸಿದ್ದಾರೆ. 

ಸಾರ್ವಜನಿಕ ಆಸ್ತಿಯಾದ ಸಿಸಿಟಿವಿಯನ್ನ ಮರಳು ಕಳ್ಳರು ಧ್ವಂಸಗೈದು ಅಟ್ಟಹಾಸ ಮೆರೆದ ಎರಡು ದಿವಸಗಳ ಬಳಿಕ ಉಳ್ಳಾಲ ವಲಯ ಕಂದಾಯ ನಿರೀಕ್ಷಕ ಮಂಜುನಾಥ್ ಉಳ್ಳಾಲ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಮಂಜುನಾಥ್ ಅವರ ದೂರು ದಾಖಲಿಸಿಕೊಂಡ ಉಳ್ಳಾಲ ಠಾಣೆ ಪೊಲೀಸರು ನಾಲ್ಕು ಮಂದಿ ಆರೋಪಿಗಳನ್ನು ತರಾತುರಿಯಲ್ಲಿ ಬಂಧಿಸಿದ್ದಾರೆ. 

ಶನಿವಾರ ನಸುಕಿನ ವೇಳೆ ಸೋಮೇಶ್ವರ ದೇವಸ್ಥಾನದ  ರಥಬೀದಿಯಲ್ಲಿ ಅಳವಡಿಸಲಾಗಿದ್ದ ಸಿಸಿಟಿವಿಯನ್ನು ಆರೋಪಿಗಳು ಟಿಪ್ಪರ್ ಲಾರಿಯನ್ನ ಹಿಮ್ಮುಖವಾಗಿ ಚಲಾಯಿಸಿ ಧ್ವಂಸಗೊಳಿಸಿದ್ದರು. ಇಷ್ಟೇ ಅಲ್ಲದೆ ಪಕ್ಕದ ಸೋಮೇಶ್ವರ ಮೂಡ ಲೇ ಔಟ್ ನಲ್ಲಿ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯು ಮರಳು ಕಳ್ಳತನ ತಡೆಯಲು ಹಾಕಿದ್ದ ತಂತಿ ತಡೆ ಬೇಲಿಯನ್ನೂ ಮರಳು ಕಳ್ಳರು ಧ್ವಂಸಗೈದಿದ್ದರು. ಕಳೆದ ಎರಡು ವರುಷಗಳಿಂದಲೂ ಈ ಭಾಗದಲ್ಲಿ ಮರಳು ಮಾಫಿಯಾ ಎಗ್ಗಿಲ್ಲದೆ ನಡೆಯುತ್ತಿದ್ದರೂ ಉಳ್ಳಾಲ ಪೊಲೀಸರು ಏನೂ ಗೊತ್ತಿಲ್ಲದ ರೀತಿಯಲ್ಲಿ ವರ್ತಿಸುತ್ತಿದ್ದರು. ಇದೀಗ ಸಿಸಿಟಿವಿ ಧ್ವಂಸ ಪ್ರಕರಣ ರಾಜ್ಯ ಮಟ್ಟದ ಸುದ್ದಿಯಾಗುತ್ತಿದ್ದಂತೆ ಎಚ್ಚೆತ್ತು ಅಂಗೈ ಹುಣ್ಣಿಗೆ ಮುಲಾಮು ಹಚ್ಚುವ ಕೆಲಸ ಮಾಡಿದ್ದಾರೆಂಬ ಆರೋಪ ಕೇಳಿಬಂದಿದೆ.

ಸೋಮೇಶ್ವರದಲ್ಲಿ ಮರಳು ಕಳ್ಳರ ಅಟ್ಟಹಾಸ ; ಕಡಲ ತೀರದಲ್ಲಿ ಮರಳು ಕಳ್ಳತನ ನಿಗಾಕ್ಕೆ ಹಾಕಿದ್ದ ಸಿಸಿಟಿವಿ, ತಂತಿ ಬೇಲಿ ಉಡೀಸ್ !

Illegal sand miners destroy cc camera and fence at ullal, four arrested and even the truck used for mining sand also has been seized by police in Mangalore.