ಒಂದೂವರೆ ವರ್ಷದಿಂದ ಶೌಚಾಲಯದಲ್ಲಿ ಬಂಧಿಯಾಗಿದ್ದ ಮಹಿಳೆಯ ರಕ್ಷಣೆ

15-10-20 09:47 am       Headline Karnataka News Network   ಕ್ರೈಂ

ಕಳೆದ ಒಂದೂವರೆ ವರ್ಷದಿಂದ ಟಾಯ್ಲೆಟ್ ನಲ್ಲಿ ಮಹಿಳೆಯೊಬ್ಬರನ್ನ ಆಕೆಯ ಪತಿಯೇ ಬಂಧಿಸಿಟ್ಟಿದ್ದ ಘಟನೆ ಹರಿಯಾಣದ ಪಾಣಿಪತ್​ ಜಿಲ್ಲೆಯ ರಿಶ್​ಪುರ್​ನಲ್ಲಿ ನಡೆದಿದೆ.

ಹರಿಯಾಣ,ಅಕ್ಟೋಬರ್. 15 :  35 ವರ್ಷದ ಮಹಿಳೆಯೊಬ್ಬರನ್ನ ಆಕೆಯ ಪತಿ ಕಳೆದ ಸುಮಾರು ಒಂದೂವರೆ ವರ್ಷದಿಂದ ಟಾಯ್ಲೆಟ್​​ನಲ್ಲಿ ಬಂಧಿಸಿದ್ದ ಅಮಾನವೀಯ ಘಟನೆ ಬೆಳಕಿಗೆ ಬಂದಿದೆ. ಹರಿಯಾಣದ ಪಾಣಿಪತ್​ ಜಿಲ್ಲೆಯ ರಿಶ್​ಪುರ್​ನಲ್ಲಿ ಈ ಘಟನೆ ನಡೆದಿದೆ.

ಮೂರು ಮಕ್ಕಳ ತಾಯಿಯಾದ ಮಹಿಳೆ ಗಬ್ಬುನಾರುವ ಟಾಯ್ಲೆಟ್​​ನಲ್ಲಿ ಶಕ್ತಿಹೀನರಾಗಿದ್ದ ಬಿದ್ದಿದ್ದರು. ಮಹಿಳೆಯನ್ನ ಬಂಧನದಲ್ಲಿಟ್ಟಿರುವ ಬಗ್ಗೆ ಮಾಹಿತಿ ಬಂದಿದ್ದ ಹಿನ್ನೆಲೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಧಿಕಾರಿ ರಜನಿ ಗುಪ್ತಾ, ಪೊಲೀಸರೊಂದಿಗೆ ಸ್ಥಳಕ್ಕೆ ತೆರಳಿ ಆಕೆಯನ್ನ ನಿನ್ನೆ ರಕ್ಷಣೆ ಮಾಡಿದ್ದಾರೆ. ಮೊದಲಿಗೆ ಮಹಿಳೆಯನ್ನ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಕೊಡಿಸಲಾಗಿದೆ. ಬಳಿಕ ಸೋದರ ಸಂಬಂಧಿಯ ಮನೆಗೆ ಕಳಿಸಲಾಗಿದೆ.

ಮಹಿಳೆ ದಯಾನೀಯ ಸ್ಥಿತಿಯಲ್ಲಿದ್ದರು, ಆಕೆಯನ್ನ ಕಳೆದ ಒಂದೂವರೆ ವರ್ಷದಿಂದ ಈ ಚಿಕ್ಕ ಟಾಯ್ಲೆಟ್​ನಲ್ಲೇ ಇರಿಸಲಾಗಿತ್ತು ಅಂತ ತನಿಖೆಯಿಂದ ತಿಳಿದುಬಂದಿದೆ. ಆಕೆ ಶಕ್ತಿಹೀನರಾಗಿದ್ರು. ನಡೆಯುವ ಸ್ಥಿತಿಯಲ್ಲಿ ಕೂಡ ಇರಲಿಲ್ಲ. ನಾವು ಊಟ ಕೊಟ್ಟಾಗ ಒಮ್ಮೆಲೆ 8 ಚಪಾತಿ ತಿಂದರು. ಬಂಧನದಲ್ಲಿದ್ದಾಗ ಮಹಿಳೆಗೆ ಸರಿಯಾಗಿ ಊಟ-ನೀರು ಕೂಡ ಕೊಟ್ಟಿಲ್ಲ ಎಂದು ರಜನಿ ಗುಪ್ತಾ ಹೇಳಿದ್ದಾರೆ.

ಮಹಿಳೆಗೆ 17 ವರ್ಷಗಳ ಹಿಂದೆ ನರೇಶ್​ ಕುಮಾರ್ ಎಂಬಾತನ ಜೊತೆ ವಿವಾಹವಾಗಿದ್ದು, ದಂಪತಿಗೆ 15 ವರ್ಷದ ಪುತ್ರಿ ಹಾಗೂ 13 ಮತ್ತು 11 ವರ್ಷದ ಇಬ್ಬರು ಪುತ್ರರಿದ್ದಾರೆ. ನರೇಶ್​ ತನ್ನ ಪತ್ನಿಗೆ ಮಾನಸಿಕ ಸಮಸ್ಯೆ ಇದೆ ಎಂದು ಹೇಳಿಕೊಂಡಿದ್ದಾನೆ. ಆದ್ರೆ ಮಹಿಳೆ ನಮ್ಮ ಎಲ್ಲಾ ಪ್ರಶ್ನೆಗಳಿಗೆ ಉತ್ತರಿಸಿದ್ರು, ಎಲ್ಲಾ ಕುಟುಂಬ ಸದಸ್ಯರನ್ನ ಗುರುತಿಸಿದ್ರು. ಮಹಿಳೆಗೆ ಮಾನಸಿಕ ಕಾಯಿಲೆಯ ಚಿಕಿತ್ಸೆ ಕೊಡಿಸಿರುವ ಯಾವುದೇ ದಾಖಲೆ ಒದಗಿಸುವಲ್ಲಿ ಪತಿ ವಿಫಲನಾಗಿದ್ದಾನೆ ಎಂದು ಗಪ್ತಾ ಹೇಳಿದ್ದಾರೆ.

ಈ ಸಂಬಂಧ ಐಪಿಸಿ ಸೆಕ್ಷನ್ 498ಎ ಹಾಗೂ 342 ಅಡಿ ಪ್ರಕರಣ ದಾಖಲಿಸಿ ಪತಿ ನರೇಶ್​ನನ್ನು ಪೊಲೀಸರು ಬಂಧಿಸಿದ್ದಾರೆ.

A woman who was allegedly locked inside a toilet for over a year by her husband was rescued by Women Protection&Child Marriage Prohibition Officer in Panipat.