ರೌಡಿಶೀಟರ್ ಫಾರೂಕ್ ಕೊಲೆ ; ಗುಂಡ್ಯದಲ್ಲಿ ಪೊಲೀಸ್ ಫೈರಿಂಗ್ ; ಆರೋಪಿ ಸೆರೆ !!

24-10-20 09:20 am       Mangalore Reporter   ಕ್ರೈಂ

ನಿನ್ನೆಯಷ್ಟೇ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಪರಾರಿಯಾಗುತ್ತಿದ್ದ ಪ್ರಮುಖ ಆರೋಪಿಗೆ ಬಂಟ್ವಾಳ ಪೊಲೀಸರು ಪುತ್ತೂರಿನ ಗುಂಡ್ಯ ಬಳಿ ಫೈರಿಂಗ್ ನಡೆಸಿದ್ದು ರೌಡಿಶೀಟರ್ ಖಲೀಲ್ ಎಂಬಾತನನ್ನು ಬಂಧಿಸಿದ್ದಾರೆ.

ಮಂಗಳೂರು, ಅಕ್ಟೋಬರ್ 24 : ಬಂಟ್ವಾಳ ತಾಲೂಕಿನ ಮೆಲ್ಕಾರ್ ಬಳಿ ನಿನ್ನೆಯಷ್ಟೇ ರೌಡಿಶೀಟರ್ ಒಬ್ಬನನ್ನು ಬರ್ಬರವಾಗಿ ಕೊಲೆಗೈದ ಪ್ರಕರಣದಲ್ಲಿ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದಾರೆ. ಪರಾರಿಯಾಗುತ್ತಿದ್ದ ಪ್ರಮುಖ ಆರೋಪಿಗೆ ಬಂಟ್ವಾಳ ಪೊಲೀಸರು ಪುತ್ತೂರಿನ ಗುಂಡ್ಯ ಬಳಿ ಫೈರಿಂಗ್ ನಡೆಸಿದ್ದು ರೌಡಿಶೀಟರ್ ಖಲೀಲ್ ಎಂಬಾತನನ್ನು ಬಂಧಿಸಿದ್ದಾರೆ. ಈ ವೇಳೆ, ಇಬ್ಬರು ಆರೋಪಿಗಳು ಪರಾರಿಯಾಗಿದ್ದಾರೆ. 

ಬಂಟ್ವಾಳ ತಾಲೂಕಿನ ನಂದಾವರ ನಿವಾಸಿ ಖಲೀಲ್ ಫೈರಿಂಗ್ ಒಳಗಾದ ರೌಡಿಶೀಟರ್. ಘಟನೆಯಲ್ಲಿ ಖಲೀಲ್ ಕಾಲಿಗೆ ಗಾಯವಾಗಿದ್ದು, ಆತನನ್ನು ಮಂಗಳೂರು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಆರೋಪಿ ಖಲೀಲ್ ಮತ್ತು ಇಬ್ಬರು ಆರೋಪಿಗಳು ಬೆಂಗಳೂರು ಕಡೆಗೆ ಪರಾರಿಯಾಗುತ್ತಿದ್ದ ಮಾಹಿತಿ ಆಧರಿಸಿ ಬಂಟ್ವಾಳ ಪೊಲೀಸರು ಬೆನ್ನಟ್ಟಿ ಹೋಗಿದ್ದರು. ಉಪ್ಪಿನಂಗಡಿ ಬಳಿಯ ಗುಂಡ್ಯ ಸಮೀಪ ಪೊಲೀಸರು ಅಡ್ಡಗಟ್ಟಿದ್ದರು. ಆದರೆ ಈ ವೇಳೆ ಆರೋಪಿ ಖಲೀಲ್ ಪೊಲೀಸರ ಮೇಲೆ ತಲವಾರು ದಾಳಿ ನಡೆಸಿದ್ದ. ಈ ವೇಳೆ ಬಂಟ್ವಾಳ ನಗರ ಠಾಣಾ ಎಸ್.ಐ. ಅವಿನಾಶ್, ಆತನ ಮೇಲೆ ಗುಂಡಿನ ದಾಳಿ ನಡೆಸಿದ್ದಾರೆ. 

ಬಂಟ್ವಾಳದ ಮೆಲ್ಕಾರ್ ಬಳಿ ಶುಕ್ರವಾರ ಸಂಜೆ ಉಮರ್ ಫಾರೂಕ್ ಯಾನೆ ಚೆನ್ನೆ ಫಾರೂಕ್ ಎಂಬ ಯುವಕ ಬೈಕ್ ನಲ್ಲಿ ಹೋಗುತ್ತಿದ್ದಾಗ ಅಡ್ಡಗಟ್ಟಿದ್ದ ದುಷ್ಕರ್ಮಿಗಳು ಮಾರಾಕಾಯುಧಗಳಿಂದ ದಾಳಿ ನಡೆಸಿ ಕೊಲೆ ಮಾಡಿದ್ದರು. ಫಾರೂಕ್ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟರ್ ಆಗಿದ್ದ. 

ಕೊಲೆ ಆರೋಪಿಗಳ ಪತ್ತೆಗೆ ಎಸ್.ಪಿ. ಲಕ್ಮೀಪ್ರಸಾದ್ ವಿಶೇಷ ತಂಡ ರಚನೆ ಮಾಡಿದ್ದರು. ಈ ಹಿನ್ನಲೆಯಲ್ಲಿ ಎಸ್.ಐ.ಅವಿನಾಶ್ ಹಾಗೂ ಬಂಟ್ವಾಳ ಗ್ರಾಮಾಂತರ ಎಸ್.ಐ ಪ್ರಸನ್ನ ಆರೋಪಿಗಳ ಪತ್ತೆಗೆ ಮುಂದಾಗಿದ್ದಾರೆ. ಘಟನೆಯಲ್ಲಿ ಎಸ್.ಐ ಪ್ರಸನ್ನ ಅವರಿಗೂ ಗಾಯವಾಗಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಖಲೀಲ್ ಜೊತೆಗಿದ್ದ
ಆರೋಪಿ ಹಫೀಜ್ ಹಾಗೂ ಇನ್ನೊಬ್ಬ ಆರೋಪಿ ಅಲ್ಲಿಂದ ತಪ್ಪಿಸಿಕೊಂಡಿದ್ದಾರೆ. ಉಪ್ಪಿನಂಗಡಿ ಪೊಲೀಸರು ಇವರ ಶೋಧ ಕಾರ್ಯ ಆರಂಭಿಸಿದ್ದಾರೆ.

ರೌಡಿ ಶೀಟರ್ ಖಲೀಲ್ ಈ ಹಿಂದೆಯೂ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. ಕೋಮು ಗಲಭೆ ಸಹಿತ ಆನೇಕ ಪ್ರಕರಣಗಳ ಪ್ರಮುಖ ಆರೋಪಿಯಾಗಿದ್ದು , ಕಲ್ಲಡ್ಕದಲ್ಲಿ ಉಂಟಾಗುತ್ತಿದ್ದ ಗಲಾಟೆಯಲ್ಲಿ ಈತನ ಹೆಸರಿತ್ತು.
ಈತನ ಮೇಲೆ ಬಂಟ್ವಾಳ ನಗರ ಠಾಣೆಯಲ್ಲಿ ರೌಡಿಶೀಟ್ ತೆರೆಯಲಾಗಿದ್ದು ಇತ್ತೀಚೆಗೆ ನಡೆದ ರತ್ನಾಕರ ಶೆಟ್ಟಿಯವರ ಮೇಲೆ ನಡೆದ ಹಲ್ಲೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಗಡಿಪಾರು ಆಗಿದ್ದ.

The Bantwal Inspector fired at the fleeing accused in Farooq murder case and succeeded in arresting one among them. Two others however, succeeded in evading arrest and running away.