ಬ್ರೇಕಿಂಗ್ ನ್ಯೂಸ್
27-01-25 04:40 pm Mangalore Correspondent ಕ್ರೈಂ
ಮಂಗಳೂರು, ಜ.27: ಕರ್ನಾಟಕದ ಇತಿಹಾಸದಲ್ಲಿ ಎರಡನೇ ಅತಿ ದೊಡ್ಡದು ಎನ್ನಲಾದ ಕೋಟೆಕಾರು ಬ್ಯಾಂಕ್ ದರೋಡೆ ಪ್ರಕರಣವನ್ನು ಮಂಗಳೂರು ಪೊಲೀಸರು ಕೆಲವೇ ಕೆಲವು ಸುಳಿವುಗಳನ್ನು ಹಿಡಿದು ಭೇದಿಸಿದ್ದಾರೆ. ವಿಶೇಷ ಅಂದ್ರೆ, ಇಂಥ ಪ್ರಕರಣಗಳಲ್ಲಿ ದರೋಡೆಯಾದ ಎಲ್ಲ ಚಿನ್ನಾಭರಣವೂ ರಿಕವರಿ ಆಗುವುದಿಲ್ಲ. ಕೋಟೆಕಾರು ದರೋಡೆಯಲ್ಲಿ ಕಳವಾಗಿದ್ದ 18.600 ಕೇಜಿ ಚಿನ್ನಾಭರಣ ಪೈಕಿ 18.300 ಕೇಜಿಯಷ್ಟು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದಕ್ಕಾಗಿ ಮಂಗಳೂರಿನ ನಾಲ್ಕೈದು ಠಾಣೆಗಳ ಅಪರಾಧ ಪತ್ತೆಯಲ್ಲಿ ಪಳಗಿದ ಪೊಲೀಸರನ್ನು ಬಳಸಿಕೊಳ್ಳಲಾಗಿದೆ. ಐವರು ಇನ್ಸ್ ಪೆಕ್ಟರ್, ಐವರು ಸಬ್ ಇನ್ಸ್ ಪೆಕ್ಟರ್, ಇಬ್ಬರು ಎಸಿಪಿಗಳು ಸೇರಿದಂತೆ 50ಕ್ಕೂ ಹೆಚ್ಚು ಪೊಲೀಸರು ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕೆಲಸ ಮಾಡಿದ್ದಾರೆ. ದಕ್ಷಿಣ ಉಪ ವಿಭಾಗದ ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಎಂಟು ಪೊಲೀಸ್ ತಂಡಗಳು ಕೆಲಸ ಮಾಡಿದ್ದವು. ವಶಪಡಿಸಿದ ಚಿನ್ನಾಭರಣವನ್ನು ಮಂಗಳೂರಿಗೆ ಎಸ್ಕಾರ್ಟ್ ಭದ್ರತೆಯಲ್ಲಿ ತರಲಾಗಿದ್ದು, ಕಮಿಷನರ್ ಕಚೇರಿಯಲ್ಲಿ ಮಾಧ್ಯಮದ ಮುಂದೆ ಪ್ರದರ್ಶನ ಮಾಡಲಾಗಿದೆ.
ಪ್ರಕರಣದ ಬಗ್ಗೆ ಮಾಹಿತಿ ನೀಡಿದ ಕಮಿಷನರ್ ಅನುಪಮ್ ಅಗರ್ವಾಲ್, ದೊಡ್ಡ ಸವಾಲನ್ನು ನಮ್ಮ ಪೊಲೀಸರು ಭೇದಿಸಿದ್ದಾರೆ. ಇದರ ಶ್ರೇಯ ಎಲ್ಲ ಪೊಲೀಸ್ ತಂಡಕ್ಕೂ ಹೋಗುತ್ತದೆ. ಹೆಚ್ಚಿನ ಬ್ಯಾಂಕ್ ಡಕಾಯಿತಿ ಪ್ರಕರಣಗಳಲ್ಲಿ ಇಷ್ಟು ಬೇಗ ಎಲ್ಲ ಚಿನ್ನಾಭರಣ ರಿಕವರಿ ಆಗುವುದಿಲ್ಲ. ಕರ್ನಾಟಕದ ಎರಡನೇ ಅತಿದೊಡ್ಡದು ಎನ್ನಲಾದ ಈ ಪ್ರಕರಣದಲ್ಲಿ ನಮ್ಮ ಪೊಲೀಸರು ಕಳವಾದ ಚಿನ್ನವನ್ನು ಪೂರ್ತಿಯಾಗಿ ವಶಕ್ಕೆ ಪಡೆದಿದ್ದಾರೆ ಎಂದರು.
ಆರು ತಿಂಗಳ ಹಿಂದೆಯೇ ದರೋಡೆಗೆ ಸ್ಕೆಚ್
ಕೋಟೆಕಾರು ಬ್ಯಾಂಕ್ ದರೋಡೆಗೆ ಆರು ತಿಂಗಳ ಹಿಂದೆಯೇ ಸ್ಕೆಚ್ ಆಗಿತ್ತು. ಶಶಿ ದೇವರ್ ಎನ್ನುವಾತ ಮುರುಗಂಡಿಗೆ ಬ್ಯಾಂಕ್ ಬಗ್ಗೆ ಮಾಹಿತಿ ಕೊಟ್ಟು ದರೋಡೆಗೆ ಸಂಚು ರೂಪಿಸಿದ್ದ. ಅದರಂತೆ, ಮುರುಗಂಡಿ ಮತ್ತು ಯೋಶುವಾ ರಾಜೇಂದ್ರನ್ ಕಳೆದ ಆಗಸ್ಟ್, ನವೆಂಬರ್ ತಿಂಗಳಲ್ಲಿ ಮಂಗಳೂರಿಗೆ ರೈಲಿನಲ್ಲಿ ಬಂದು ಕೆಸಿ ರೋಡ್ ನಲ್ಲಿ ಪರಿಶೀಲನೆ ನಡೆಸಿದ್ದರು. ಶುಕ್ರವಾರ ಮಧ್ಯಾಹ್ನ ಮುಸ್ಲಿಮರು ಪ್ರಾರ್ಥನೆಗೆ ಹೋಗುವ ಸಂದರ್ಭದಲ್ಲಿ ಯಾರೂ ಇಲ್ಲವೆಂದೇ ಅದೇ ಸಮಯವನ್ನು ಆಯ್ಕೆ ಮಾಡಿಕೊಂಡಿದ್ದರು. ಕೃತ್ಯದ ಬಳಿಕ ಮುರುಗಂಡಿ ಮತ್ತು ಯೋಶುವಾ ಕಾರಿನಲ್ಲಿ ತಲಪಾಡಿ ಗೇಟ್ ಮೂಲಕ ಕೇರಳಕ್ಕೆ ತೆರಳಿದ್ದರೆ, ಇತರ ಮೂವರು ಬಸ್ ಮತ್ತು ಆಟೋದಲ್ಲಿ ಸೆಂಟ್ರಲ್ ರೈಲು ನಿಲ್ದಾಣಕ್ಕೆ ಬಂದು ಎಸ್ಕೇಪ್ ಆಗಿದ್ದರು.
ಜ.17ರಂದು ದರೋಡೆ ನಡೆದಿದ್ದರೆ, ಮುರುಗಂಡಿ, ಯೋಶುವಾ ನೇತೃತ್ವದ ತಂಡವು ಜ.16ರಂದೇ ಮುಂಬೈನಿಂದ ಫಿಯೇಟ್ ಕಾರಿನಲ್ಲಿ ಹೊರಟಿತ್ತು. ಇವರು ಹೆದ್ದಾರಿಯಲ್ಲಿ ಬರುತ್ತಿದ್ದಾಗ ಕರ್ನಾಟಕದ ಶಿರೂರು ಟೋಲ್ ಗೇಟ್ ನಲ್ಲಿ ಮಹಾರಾಷ್ಟ್ರ ನೋಂದಣಿಯ ನಂಬರ್ ಪ್ಲೇಟ್ ಇತ್ತು. ಹೆಜಮಾಡಿಯಲ್ಲಿ ಬೆಂಗಳೂರು ನೋಂದಣಿಯ ನಕಲಿ ನಂಬರ್ ಪ್ಲೇಟ್ ಹಾಕ್ಕೊಂಡಿದ್ದರು. ಇವೆರಡೂ ನಕಲಿ ನಂಬರ್ ಪ್ಲೇಟ್ ಆಗಿತ್ತು. ಇದರಿಂದ ಮುಂಬೈ ತಂಡದ ಶಾಮೀಲಾತಿ ಬಗ್ಗೆ ನಮಗೆ ಮೊದಲಿಗೆ ಸಂಶಯ ಬಂದಿತ್ತು. ಅಲ್ಲದೆ, ಕೆಲವು ಆರೋಪಿಗಳು ಮುಂಬೈಗೆ ರೈಲಿನಲ್ಲಿ ತೆರಳಿದ್ದು ತಿಳಿಯುತ್ತಲೇ ನಮ್ಮ ಪೊಲೀಸ್ ತಂಡ ಮುಂಬೈಗೆ ತೆರಳಿತ್ತು ಎಂದು ಕಮಿಷನರ್ ಮಾಹಿತಿ ನೀಡಿದ್ದಾರೆ.
ದರೋಡೆ ಕೃತ್ಯದ ಬಳಿಕ ಮಂಗಳೂರಿನಿಂದ ಮುಂಬೈಗೆ ತೆರಳಿದ್ದ ಕಣ್ಣನ್ ಮಣಿ ಅಲ್ಲಿಂದ ಮತ್ತೆ ತಮಿಳುನಾಡಿಗೆ ಬರುತ್ತಿದ್ದ ರೈಲು ಹತ್ತಿದ್ದ. ಅಷ್ಟರಲ್ಲಿ ಕೇರಳದಲ್ಲಿ ಅದಾಗಲೇ ಬೀಡು ಬಿಟ್ಟಿದ್ದ ಮಂಗಳೂರಿನ ಸಿಸಿಬಿ ಪೊಲೀಸರ ತಂಡವು ತಿರುವಣ್ಣಾಮಲೈ ರೈಲು ನಿಲ್ದಾಣಕ್ಕೆ ಧಾವಿಸಿತ್ತು. ಅಲ್ಲಿನ ರೈಲಿನಿಂದ ಇಳಿಯುತ್ತಲೇ ಕಣ್ಣನ್ ಮಣಿಯನ್ನು ಮಂಗಳೂರು ಪೊಲೀಸರು ಅರೆಸ್ಟ್ ಮಾಡಿದ್ದರು. ಅಲ್ಲದೆ, ಆತನನ್ನು ವಶಕ್ಕೆ ಪಡೆದು ಟ್ರೀಟ್ಮೆಂಟ್ ನೀಡುತ್ತಲೇ ದರೋಡೆ ಕೃತ್ಯದಲ್ಲಿ ಭಾಗಿಯಾದವರ ಬಗ್ಗೆ ಬಾಯಿಬಿಟ್ಟಿದ್ದ. ಆಮೂಲಕ ಎರಡೇ ದಿನದಲ್ಲಿ ಪೊಲೀಸರಿಗೆ ದರೋಡೆ ತಂಡದ ಬಗ್ಗೆ ಸಂಪೂರ್ಣ ಮಾಹಿತಿ ಸಿಕ್ಕಿಬಿಟ್ಟಿತ್ತು.
ತಮಿಳುನಾಡಿನಲ್ಲೇ ಪೊಲೀಸ್ ಕಾರ್ಯಾಚರಣೆ
ಮರುದಿನವೇ ಪ್ರಮುಖ ಆರೋಪಿಗಳಾದ ಮುರುಗಂಡಿ ದೇವರ್ ಮತ್ತು ಯೋಶುವಾ ರಾಜೇಂದ್ರನ್ ಅವರನ್ನು ತಿರುನಲ್ವೇಲಿಯ ಸ್ಥಳೀಯ ಪೊಲೀಸರ ಸಹಾಯದಿಂದ ಮಹೇಶ್ ಪ್ರಸಾದ್ ಅವರಿದ್ದ ತಂಡವು ತಿರುನಲ್ವೇಲಿ ಜಿಲ್ಲೆಯ ಪದ್ಮನೇರಿ ಎಂಬಲ್ಲಿಂದ ವಶಕ್ಕೆ ಪಡೆದಿತ್ತು. ಆ ಸಂದರ್ಭದಲ್ಲಿ ಸಣ್ಣ ಚೀಲದಲ್ಲಿದ್ದ ಎರಡು ಕೇಜಿಯಷ್ಟೇ ಚಿನ್ನಾಭರಣ ಪತ್ತೆಯಾಗಿತ್ತು. ಆನಂತರ, ಮುರುಗಂಡಿಯನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ, ತನ್ನ ಮನೆಯಲ್ಲೇ ಚಿನ್ನಾಭರಣದ ಮೂಟೆಯನ್ನು ಅವಿತಿಟ್ಟಿದ್ದ ಬಗ್ಗೆ ಮಾಹಿತಿ ನೀಡಿದ್ದ. ಸಿಸಿಬಿ ಸೇರಿದಂತೆ ಮಂಗಳೂರು ಪೊಲೀಸರು ಕೇವಲ ಐದು ದಿನಗಳಲ್ಲಿ ತಮಿಳುನಾಡು, ಕೇರಳದಲ್ಲಿ 2800 ಕಿಮೀ ಉದ್ದಕ್ಕೆ ನಿದ್ದೆಯಿಲ್ಲದೆ ಕಾರಿನಲ್ಲೇ ಪ್ರಯಾಣಿಸಿದ್ದರು. ಇದೇ ವೇಳೆ, ಮಂಗಳೂರಿನಲ್ಲಿ ಹಲವಾರು ಅಧಿಕಾರಿಗಳು, ನುರಿತ ತಂತ್ರಜ್ಞರು ಆರೋಪಿಗಳ ಚಲನವಲನ ಬಗ್ಗೆ ತಿಳಿಯಲು ಟೆಕ್ನಿಕಲ್ ಸಾಕ್ಷ್ಯದ ಕಲೆಹಾಕಿದ್ದರು.
ಸೂತ್ರಧಾರ ಶಶಿ ದೇವರ್ ಯಾರು ?
ಅಂದಹಾಗೆ, ಸ್ಥಳೀಯರ ಕೈವಾಡದ ಬಗ್ಗೆ ಕೇಳಿದ ಪ್ರಶ್ನೆಗೆ, ಶಶಿ ದೇವರ್ ಎನ್ನುವಾತ ಎಲ್ಲಿಯ ವ್ಯಕ್ತಿಯೆಂದು ಇನ್ನೂ ತಿಳಿದಿಲ್ಲ. ಆತನ ಬಂಧನ ಬಳಿಕವೇ ಕೋಟೆಕಾರು ಬ್ಯಾಂಕನ್ನೇ ಯಾಕೆ ಆಯ್ಕೆ ಮಾಡಿಕೊಂಡಿದ್ದರು, ಇದರ ಬಗ್ಗೆ ಸುಳಿವು ಕೊಟ್ಟ ಸ್ಥಳೀಯರು ಯಾರು ಎನ್ನುವ ಮಾಹಿತಿ ಸಿಗಬೇಕಷ್ಟೇ ಎಂದು ಕಮಿಷನರ್ ತಿಳಿಸಿದ್ದಾರೆ. ಧಾರಾವಿ ಗ್ಯಾಂಗ್ ಸದಸ್ಯರೇ ಮಾಹಿತಿ ಕೊಟ್ಟಿದ್ದರೇ ಎನ್ನುವ ಪ್ರಶ್ನೆಗೆ, ಕಮಿಷನರ್ ಸ್ಪಷ್ಟ ಮಾಹಿತಿ ನೀಡಿಲ್ಲ. ನಮ್ಮ ಪೊಲೀಸರು ಸಿಸಿಟಿವಿ ಇನ್ನಿತರ ಸಾಕ್ಷ್ಯಗಳನ್ನು ಆಧರಿಸಿ ಪ್ರಕರಣ ಭೇದಿಸಿದ್ದಾರೆ ಎಂದರು. ಸದ್ಯದ ಮಾಹಿತಿ ಪ್ರಕಾರ, ಶಶಿ ದೇವರ್ ಮಂಗಳೂರು ಮೂಲದವನು ಎನ್ನಲಾಗುತ್ತಿದ್ದು, ಆತ ಮುಂಬೈ ಜೈಲಿನಲ್ಲಿದ್ದಾಗ ಮುರುಗಂಡಿ ಪರಿಚಯವಾಗಿತ್ತು. ಇಬ್ಬರೂ ಜೊತೆಗೂಡಿ ಬ್ಯಾಂಕ್ ದರೋಡೆಗೆ ಸಂಚು ರೂಪಿಸಿದ್ದರು.
ಐದೈದು ಇನ್ಸ್ ಪೆಕ್ಟರ್ - ಎಸ್ಐ, ಇಬ್ಬರು ಎಸಿಪಿ
ಪೊಲೀಸ್ ತಂಡದಲ್ಲಿ ಎಸಿಪಿಗಳಾದ ಧನ್ಯಾ ನಾಯಕ್, ಮನೋಜ್ ನಾಯ್ಕ್, ಸುರತ್ಕಲ್ ಇನ್ಸ್ ಪೆಕ್ಟರ್ ಮಹೇಶ್ ಪ್ರಸಾದ್, ಕೋಣಾಜೆ ಇನ್ಸ್ ಪೆಕ್ಟರ್ ರಾಜೇಂದ್ರನ್, ಕಂಕನಾಡಿ ನಗರ ಠಾಣೆಯ ಟಿ.ಡಿ. ನಾಗರಾಜ್, ಉಳ್ಳಾಲ ಇನ್ಸ್ ಪೆಕ್ಟರ್ ಬಾಲಕೃಷ್ಣ ಗೌಡ, ಸಿಸಿಬಿಯ ಮಹಮ್ಮದ್ ರಫೀಕ್, ಪಿಎಸ್ಐಗಳಾದ ಕಾವೂರು ಠಾಣೆಯ ಮಲ್ಲಿಕಾರ್ಜುನ, ಸಿಸಿಬಿಯ ಸುದೀಪ್, ಶರಣಪ್ಪ, ಸುರತ್ಕಲ್ ಠಾಣೆಯ ರಾಘವೇಂದ್ರ, ಉಳ್ಳಾಲದ ಸಂತೋಷ್ ಸೇರಿ ಮಂಗಳೂರು ನಗರ ವ್ಯಾಪ್ತಿಯ ಠಾಣೆಗಳಲ್ಲಿರುವ ಕ್ರೈಮ್ ಪೊಲೀಸ್ ತಂಡವನ್ನು ಕಾರ್ಯಾಚರಣೆಗೆ ಬಳಸಿಕೊಳ್ಳಲಾಗಿತ್ತು. ಎಸಿಪಿ ಧನ್ಯಾ ನಾಯಕ್ ನೇತೃತ್ವದಲ್ಲಿ ಪ್ರತ್ಯೇಕ ಸ್ಕ್ವಾಡ್ ತಂಡವೊಂದು ತಮಿಳುನಾಡಿಗೆ ತೆರಳಿ ಕಾರ್ಯಾಚರಣೆ ನಡೆಸಿತ್ತು. ಪೊಲೀಸರು ಒಗ್ಗೂಡಿ ಕೆಲಸ ಮಾಡಿದರೆ ಯಾವುದನ್ನೂ ಭೇದಿಸಬಹುದು ಎನ್ನುವುದಕ್ಕೆ ಈ ಪ್ರಕರಣವೇ ಸಾಕ್ಷಿ.
Kotekar bank robbery, Mangalore Police and CCB struggle day night, recover 18.3 kg gold, detailed crime report. The Mangaluru city police have been successful in recovering 18.314 kg gold ornaments stolen from Kotekar Vyavasaya Seva Sahakari Sangha Niyamitha branch at KC Road, within a short span of time, and have brought much relief to 1,600 society customers.
13-03-25 02:56 pm
HK News Desk
Karwar, Honnavar, Cow Slaughter, Crime; ಗರ್ಭ...
13-03-25 12:32 pm
Madikeri Earthquake: ಮಡಿಕೇರಿಯಲ್ಲಿ ಲಘು ಭೂಕಂಪನ...
13-03-25 11:57 am
Pramod Muthalik, Love Jihad: ವೇಶ್ಯಾವಾಟಿಕೆ, ಭಯ...
12-03-25 03:51 pm
Mangalore Chakravarti Sulibele, Prakash Raj:...
11-03-25 06:19 pm
13-03-25 03:49 pm
HK News Desk
Shiradi Ghat, Mangalore Bengalore, Mp Brijesh...
13-03-25 01:30 pm
ಪಾಕಿಸ್ತಾನದಲ್ಲಿ 500ಕ್ಕು ಹೆಚ್ಚು ಪ್ರಯಾಣಿಕರಿದ್ದ ರ...
12-03-25 11:41 am
ಅಮೆರಿಕದಲ್ಲಿ 20 ವರ್ಷದ ಭಾರತೀಯ ಮೂಲದ ಮೆಡಿಕಲ್ ವಿದ್...
10-03-25 10:17 pm
ಎಸ್ಸೆಸ್ಸೆಲ್ಸಿ ವಿದ್ಯಾರ್ಥಿನಿ ಜೊತೆಗೆ ಆಟೋ ಚಾಲಕನ ಸ...
10-03-25 11:45 am
13-03-25 09:20 pm
Mangalore Correspondent
PFI, Mangalore Crime, Police: ಪಿಎಫ್ಐ ಮುಖಂಡರಿಗ...
13-03-25 08:46 pm
Mangalore News, crime, Suicide: ಉತ್ತರ ಪ್ರದೇಶ...
13-03-25 10:08 am
Mangalore rain, Heat wave: ಮಂಗಳೂರು ನಗರಕ್ಕೆ ಸಿ...
12-03-25 11:10 pm
Diganth Missing case, Reunite with family: 17...
12-03-25 10:16 pm
13-03-25 06:44 pm
Mangalore Correspondent
Kothanur Police, Bangalore crime, Murder: ನಾಲ...
11-03-25 07:34 pm
Tanishq showroom, Bihar Robbery: ಬಿಹಾರದಲ್ಲಿ ಹ...
10-03-25 10:48 pm
Actress Ranya Rao, CBI, Gold case; ನಟಿ ರನ್ಯಾ...
09-03-25 05:06 pm
Bangalore Suicide, Bank Staff, Crime; ಹಿರಿಯ ಅ...
09-03-25 03:06 pm