Kalaburagi theft: ಅಳಿಯ ಮನೆ ತೊಳಿಯ ; ಕಲಬುರಗಿಯಲ್ಲಿ ಅತ್ತೆ ಮನೆಗೆ ಕನ್ನ, ಲಕ್ಷ ಲಕ್ಷ ದೋಚಿ ತಗ್ಲಾಕೊಂಡ 

07-04-25 10:51 pm       HK News Desk   ಕ್ರೈಂ

ಅತ್ತೆ ಮನೆಗೆ ಕನ್ನ ಹಾಕಿದ ಅಳಿಯನೊಬ್ಬ ಪೊಲೀಸರ ಕೈಗೆ ತಗ್ಲಾಕೊಂಡಿರೋ ಘಟನೆ ಕಾಳಗಿಯಲ್ಲಿ ನಡೆದಿದೆ. ಮೀನಪ್ಪ ಅತ್ತೆ ಮನೆಯಲ್ಲೇ ಕಳ್ಳತನ ಮಾಡಿರೋ ಆರೋಪಿ.

ಕಲಬುರಗಿ, ಏ 07: ಅತ್ತೆ ಮನೆಗೆ ಕನ್ನ ಹಾಕಿದ ಅಳಿಯನೊಬ್ಬ ಪೊಲೀಸರ ಕೈಗೆ ತಗ್ಲಾಕೊಂಡಿರೋ ಘಟನೆ ಕಾಳಗಿಯಲ್ಲಿ ನಡೆದಿದೆ. ಮೀನಪ್ಪ ಅತ್ತೆ ಮನೆಯಲ್ಲೇ ಕಳ್ಳತನ ಮಾಡಿರೋ ಆರೋಪಿ.

ಅತ್ತೆ ಸಿದ್ದಮ್ಮ ಜಮೀನು ಖರೀದಿಸುವ ಸಲುವಾಗಿ 11 ಲಕ್ಷ ರೂ. ಮನೆಯ ಟ್ರಂಕ್​ನಲ್ಲಿ ಇಟ್ಟಿದ್ದಳು. ಅದೇ ಮನೆಯಲ್ಲಿ ಕುಟುಂಬ ಸಮೇತವಾಗಿ ಆಕೆಯ ಸೋದರಳಿಯ (ಸಹೋದರನ ಮಗ) ಮೀನಪ್ಪ ವಾಸವಿದ್ದ. ಹೀಗೆ ಮಾರ್ಚ್ 28ರಂದು ಮನೆಯ ಟ್ರಂಕ್​ನಲ್ಲಿ ಇಟ್ಟಿದ್ದ 11 ಲಕ್ಷ ರೂಪಾಯಿಯನ್ನು ಅಳಿಯ ಮೀನಪ್ಪ ಕಳ್ಳತನ ಮಾಡಿದ್ದಾನೆ. ಹೀಗೆ ಮನೆಯಲ್ಲಿ ಇಟ್ಟಿದ್ದ 11 ಲಕ್ಷ ರೂಪಾಯಿಯನ್ನು ಎಗರಿಸಿ ಕಳ್ಳತನದ ಕಥೆ ಕಟ್ಟಿದ್ದಾನೆ

ಆದ್ರೆ, ಹಣ ತಾನೆ ಕದ್ದಿದ್ದರೂ ಅಕ್ಕ ಪಕ್ಕದ ಮನೆಯವರ ಮೇಲೆ ಅನುಮಾನ ಬರುವಂತೆ ಅತ್ತೆ ಮುಂದೆ ಅಳಿಯ ಮೀನಪ್ಪ ಮಾತಾಡಿದ್ದಾನೆ. ಎಷ್ಟು ಹುಡುಕಿದರೂ ಹಣ ಕಳೆದುಕೊಂಡ ಸಿದ್ದಮ್ಮ ಕಾಳಗಿ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದಾರೆ. ಇದಾದ ಬಳಿಕ ಪೊಲೀಸರಿಗೆ ಹಣ ಕಳುವಾದ ದಿನ ಮಧ್ಯಾಹ್ನ ಸಿದ್ದಮ್ಮನ ಮನೆಗೆ ಮೀನಪ್ಪ ಹೋಗಿ ಬಂದಿದ್ದು ಗೊತ್ತಾಗಿದೆ. ಈ ವಿಚಾರ ತಿಳಿಯುತ್ತಿದ್ದಂತೆ ಪೊಲೀಸರು ವಿಚಾರಣೆ ತೀವ್ರಗೊಳಿಸಿದಾಗ ಮೀನಪ್ಪ ಸತ್ಯ ಬಾಯಿಬಿಟ್ಟಿದ್ದಾನೆ.

ಹೀಗೆ ಅತ್ತೆ ಮನೆಯಲ್ಲಿದ್ದ 11 ಲಕ್ಷ ರೂಪಾಯಿಯನ್ನು ಎಗರಿಸಿ ಅದನ್ನು ಸಹೋದರನ ಜೊತೆ ಸೇರಿ ಮೀನಪ್ಪ ಬೇರೆಡೆ ಶಿಫ್ಟ್​ ಮಾಡಿಸಿದ್ದು ಪೊಲೀಸರ ಮುಂದೆ ಬಾಯ್ಬಿಟ್ಟಿದ್ದಾನೆ. ಆರೋಪಿಯಿಂದ ಸತ್ಯ ಬಾಯಿಬಿಡಿಸಿ ಕಳ್ಳತನವಾದ 11 ಲಕ್ಷ ರೂ. ಪೈಕಿ 9 ಲಕ್ಷ 30 ಸಾವಿರ ರೂಪಾಯಿ ಜಪ್ತಿ‌ ಮಾಡಿದ್ದಾರೆ. ಉಳಿದ 1 ಲಕ್ಷ 70 ಸಾವಿರ ರೂಪಾಯಿ ಜೊತೆಗೆ ಪರಾರಿಯಾಗಿರೋ ಮೀನಪ್ಪನ ಸಹೋದರ ಅನೀಲ್​ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ. ಇನ್ನೂ, ಕಾಳಗಿ ಪೊಲೀಸರ ಕಾರ್ಯಕ್ಕೆ ಎಸ್ಪಿ ಅಡ್ಡೂರು ಶ್ರೀನಿವಾಸುಲು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Kalaburagi theft, son in law Steals Lakhs from mother in law house.