ಫೇಸ್ಬುಕ್ಕಲ್ಲಿ ತಲಾಖ್ ತಲಾಖ್ ಎಂದ ಗಂಡನಿಗೆ ಸೌದಿಯಿಂದ್ಲೇ ಕೋಳ ತೊಡಿಸಿದ ಪತ್ನಿ !! 

09-08-20 05:27 pm       Udupi Reporter   ಕ್ರೈಂ

ಉಡುಪಿ ಜಿಲ್ಲೆಯ ಶಿರ್ವ ನಿವಾಸಿ ಶೇಕ್ ಮೊಹಮ್ಮದ್ ಸಲೀಂ (38) ಎಂಬಾತ ತನ್ನ ಪತ್ನಿಗೆ ಫೇಸ್ಬುಕ್ ತಲಾಖ್ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ.

ಉಡುಪಿ, ಆಗಸ್ಟ್ 9: ದೇಶದಲ್ಲಿ ಕೇಂದ್ರ ಸರಕಾರವೇನೋ ತ್ರಿವಳಿ ತಲಾಖ್ ಗೆ ನಿಷೇಧ ಹೇರಿದೆ. ಮುಸ್ಲಿಂ ಮಹಿಳೆಯರು ಇದರಿಂದ ಸಂತಸಗೊಂಡಿದ್ದೂ ಆಗಿದೆ. ಆದರೆ, ತ್ರಿವಳಿ ತಲಾಖ್ ನೀಡೋರು ಕಡಿಮೆಯಾಗಿದ್ದಾರೆ ಅಂದರೆ ಅದು ಭ್ರಮೆ ಮಾತ್ರ. ಹುಟ್ಟುಗುಣ ಸುಟ್ಟರೂ ಬಿಡದು ಎನ್ನುವಂತೆ ಕೆಲವರು ವರ್ತಿಸುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ, ಇಲ್ಲೊಬ್ಬ ಫೇಸ್ಬುಕ್ಕಲ್ಲೇ ತಲಾಖ್, ತಲಾಖ್ ಎಂದು ಕಂಬಿ ಎಣಿಸಿದ್ದು.. 

ಉಡುಪಿ ಜಿಲ್ಲೆಯ ಶಿರ್ವ ನಿವಾಸಿ ಶೇಕ್ ಮೊಹಮ್ಮದ್ ಸಲೀಂ (38) ಎಂಬಾತ ತನ್ನ ಪತ್ನಿಗೆ ಫೇಸ್ಬುಕ್ ತಲಾಖ್ ನೀಡಿ ಈಗ ಪೊಲೀಸರ ಅತಿಥಿಯಾಗಿದ್ದಾನೆ. ಶಿರ್ವ ಜಾಮಿಯಾ ಮಸೀದಿ ಸಮೀಪದ ನಿವಾಸಿಯಾಗಿರುವ ಮೊಹಮ್ಮದ್ ಸಲೀಂ, 2010ರ ಸೆ.23ರಂದು ವಿವಾಹವಾಗಿದ್ದ. ಅಷ್ಟೇ ಅಲ್ಲ, ಮದುವೆಯಾಗಿ ಪತ್ನಿಯ ಜೊತೆಗೇ ಸೌದಿಗೂ ತೆರಳಿದ್ದ. ದಾಂಪತ್ಯಕ್ಕೆ ಸಾಕ್ಷಿಯಾಗಿ ಪುತ್ರಿಯೂ ಜನಿಸಿದ್ದಳು. ಆದರೆ, ಈ ನಡುವೆ ಸಲೀಂಗೆ ಏನು ಗರ ಬಡಿಯಿತೋ ಗೊತ್ತಿಲ್ಲ. ಸೌದಿ ಅರೇಬಿಯಾದ ದಮ್ಮಾಮ್​ನಲ್ಲಿ ಪತ್ನಿ , ಮಗಳನ್ನು ಬಿಟ್ಟು 2019 ಅಕ್ಟೋಬರ್ 3ರಂದು ಎಸ್ಕೇಪ್ ಆಗಿ ಮುಂಬೈಗೆ ಬಂದಿದ್ದ. ಅಷ್ಟೇ ಅಲ್ಲ, ಮುಂಬೈಗೆ ಬರುವಾಗಲೇ ಇನ್ನೊಬ್ಬಳನ್ನು ಕಟ್ಟಿಕೊಂಡೇ ಆಗಮಿಸಿದ್ದ. 

ಪತ್ನಿ ಹಾಗೂ ಮಗಳಿಗೆ ಗೊತ್ತೇ ಆಗದ ರೀತಿ ಮತ್ತೊಬ್ಬ ಮಹಿಳೆಯೊಂದಿಗೆ ಮುಂಬೈನಲ್ಲಿ ನೆಲೆಸಿದ್ದ. ಅಷ್ಟೇ ಅಲ್ಲ, ಹಳೆಯ ಪತ್ನಿಗೆ ತನ್ನ ಫೇಸ್‌ಬುಕ್​ ಖಾತೆಯ ಮೆಸೆಂಜರ್ ಮೂಲಕ  ತ್ರಿವಳಿ ತಲಾಖಿನ ವಾಯ್ಸ್ ಮೆಸೇಜ್ ಕಳಿಸಿದ್ದಾನೆ. ಗಂಡನ ಕಿತಾಪತಿ ಕಂಡು ಆಘಾತಗೊಂಡ ಪತ್ನಿ ಸ್ವಪ್ನಾಝ್, ಭಾರತದಲ್ಲಿ ತ್ರಿವಳಿ ತಲಾಖ್ ನಿಷೇಧ ಇರುವುದನ್ನು ಮನಗಂಡು ಸೇಡು ತೀರಿಸಲು ನಿರ್ಧರಿಸಿದ್ದಾಳೆ. 

ಪತಿಯ ವಂಚನೆಯಿಂದ ದಿಕ್ಕೇ ತೋಚದಂತಾಗಿದ್ದ ಪತ್ನಿ ಸ್ವಪ್ನಾಝ್ ಧೈರ್ಯ ಮಾಡಿ, ಸೌದಿಯಿಂದಲೇ ಶಿರ್ವ ಠಾಣೆಗೆ ದೂರು ನೀಡಿದ್ದಾಳೆ. ದೂರನ್ನು ಗಂಭೀರವಾಗಿ ಪರಿಗಣಿಸಿದ ಶಿರ್ವ ಪೊಲೀಸರು, ಮೊಹಮ್ಮದ್ ಸಲೀಂ ವಿರುದ್ಧ ಎಫ್ಐಆರ್ ದಾಖಲಿಸಿದ್ದರು. ಆಗಸ್ಟ್ 7 ರಂದು ಶಿರ್ವಕ್ಕೆ ಬಂದಿದ್ದ ಮೊಹಮ್ಮದ್ ಸಲೀಂನನ್ನು ಪೊಲೀಸರ ಅರೆಸ್ಟ್ ಮಾಡಿದ್ದು ಕಂಬಿ ಹಿಂದೆ ನಿಲ್ಲಿಸಿದ್ದಾರೆ. ತಲಾಖ್ ತಲಾಖ್ ಎಂದು ಮುಸ್ಲಿಂ ಮಹಿಳೆಯರನ್ನು ಶೋಷಣೆ ಮಾಡುವ ಧೋರಣೆ ಇನ್ನು ನಡೆಯಲ್ಲ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ. ಪತ್ನಿ ಸಫ್ನಾಝ್ ಸೌದಿಯಲ್ಲಿದ್ದೇ ಈ ಕೆಲಸ ಮಾಡಿದ್ದು ನಿಜಕ್ಕೂ ಗಟ್ಟಿಗಿತ್ತಿಯ ಕೆಲಸವೇ ಸರಿ..