Lucky Scheme, Shine Enterprises, Arrest, Mangalore: HK Big Impact ನ್ಯೂ ಶೈನ್ ಎಂಟರ್ಪ್ರೈಸಸ್ ಹೆಸರಿನಲ್ಲಿ ಮೋಸದ ಲಕ್ಕಿ ಸ್ಕೀಮ್ ; ಕಾರು, ಫ್ಲಾಟ್, ಸೈಟ್ ಆಸೆ ತೋರಿಸಿ 4 ಕೋಟಿಗೂ ಹೆಚ್ಚು ದೋಖಾ, ಸಾವಿರಾರು ಜನರಿಗೆ ವಂಚನೆ, ಇಬ್ಬರು ಕಂತ್ರಿಗಳ ಬಂಧನ, ಕೂಡಿಟ್ಟ ಆಸ್ತಿಯೂ ಮುಟ್ಟುಗೋಲು ! 

22-08-25 09:17 pm       Mangaluru Correspondent   ಕ್ರೈಂ

ಸುರತ್ಕಲ್ ಪೊಲೀಸರು ಮತ್ತೊಂದು ಲಕ್ಕಿ ಸ್ಕೀಮ್ ಹೆಸರಿನ ಮೋಸದ ಯೋಜನೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.‌ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಲಕ್ಕಿ ಸ್ಕೀಮ್ ಮಾಡುತ್ತಿದ್ದ ಕಾಟಿಪಳ್ಳ ನಿವಾಸಿ ಅಹಮ್ಮದ್ ಖುರೇಷಿ (34) ಮತ್ತು ಅದೇ ಪರಿಸರದ ನಜೀರ್ (39) ಎಂಬವರನ್ನು ಬಂಧಿಸಲಾಗಿದೆ. 

ಮಂಗಳೂರು, ಆ.22 : ಸುರತ್ಕಲ್ ಪೊಲೀಸರು ಮತ್ತೊಂದು ಲಕ್ಕಿ ಸ್ಕೀಮ್ ಹೆಸರಿನ ಮೋಸದ ಯೋಜನೆ ವಿರುದ್ಧ ಕಾರ್ಯಾಚರಣೆ ನಡೆಸಿದ್ದು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.‌ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಲಕ್ಕಿ ಸ್ಕೀಮ್ ಮಾಡುತ್ತಿದ್ದ ಕಾಟಿಪಳ್ಳ ನಿವಾಸಿ ಅಹಮ್ಮದ್ ಖುರೇಷಿ (34) ಮತ್ತು ಅದೇ ಪರಿಸರದ ನಜೀರ್ (39) ಎಂಬವರನ್ನು ಬಂಧಿಸಲಾಗಿದೆ. 

ನ್ಯೂ ಶೈನ್ ಎಂಟರ್ ಪ್ರೈಸಸ್ ಎಂಬ ಲಕ್ಕಿ ಸ್ಕೀಮ್ ಹೆಸರಿನಲ್ಲಿ 9 ತಿಂಗಳು 1000/- ಪಾವತಿಸಿ, ಕೊನೆಯ 2 ತಿಂಗಳು 1500/- ಹೀಗೆ ಒಟ್ಟು 11 ತಿಂಗಳ ಅವಧಿಗೆ ದುಡ್ಡನ್ನು ಸ್ವೀಕರಿಸಿ ಲಕ್ಕಿ ಸ್ಕೀಮ್ ನ ಹೆಸರಿನಲ್ಲಿ ಆಕರ್ಷಕ ಬಹುಮಾನ, ಬಂಪರ್ ಬಹುಮಾನಗಳಾದ ಕಾರು, ಬೈಕು, ಫ್ಲಾಟ್, ಸೈಟ್, ಚಿನ್ನದ ಉಂಗುರಗಳು ಮತ್ತು ನಗದುಗಳನ್ನು ನೀಡುವುದಾಗಿ ತಿಳಿಸಿ ಹಣ ಸಂಗ್ರಹ ಮಾಡಿದ್ದರು. ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಯಲ್ಲಿ ಮೂರು ಸಾವಿರಕ್ಕೂ ಹೆಚ್ಚು ಜನರಿಂದ ಸುಮಾರು 4 ಕೋಟಿ 20 ಲಕ್ಷಕ್ಕೂ ಮೀರಿ ಹಣ ಸಂಗ್ರಹಿಸಿದ್ದು ಲಕ್ಕಿ ಸ್ಕೀಮ್ ಕಂತು ಮುಗಿದ ನಂತರ ಡೆಪಾಸಿಟ್ ಮಾಡಿದ ಹಣ ಹಾಗೂ ಸರಿಯಾದ ಬಹುಮಾನಗಳನ್ನು ನೀಡದೇ ಮತ್ತು ಎಲ್ಲರಿಗೂ ಹಣವನ್ನು ನೀಡುತ್ತೇವೆ ಎಂದು ಆಶ್ವಾಸನೆ ನೀಡುತ್ತಾ ವಂಚನೆ ಎಸಗಿದ್ದರು. 

ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ಸರ್ಕಲ್ ಬಳಿ ಇರುವ ಆಯಿಷಾ ಕಟ್ಟಡದಲ್ಲಿರುವ ನ್ಯೂ ಶೈನ್ ಎಂಟರ್ ಪ್ರೈಸಸ್ ಕಚೇರಿಯನ್ನು ಏಕಾಏಕಿ ಬಂದ್ ಮಾಡಿ ಸಾರ್ವಜನಿಕರಿಗೆ ಆಸೆ ಹುಟ್ಟಿಸಿ ವಂಚಿಸಿದ್ದರು. ಇವರ ವಿರುದ್ಧ ಆ.16ರಂದು ಸೂರಿಂಜೆ ನಿವಾಸಿ ಶಿವಪ್ರಸಾದ್ ಎಂಬವರು ದೂರು ನೀಡಿದ್ದರು. ಇದೊಂದು ಅನಿಯಂತ್ರಿತ ಠೇವಣಿ ಯೋಜನೆ ಆಗಿದ್ದು ಸಂಬಂಧಪಟ್ಟ ಪ್ರಾಧಿಕಾರದಿಂದ ಯಾವುದೇ ಪೂರ್ವಾನುಮತಿ ಇಲ್ಲದೇ ಸಾರ್ವಜನಿಕರಿಂದ ನ್ಯೂ ಶೈನ್ ಎಂಟರ್ ಪ್ರೈಸಸ್ ಹೆಸರಿನಲ್ಲಿ ಸುಮಾರು 4 ಕೋಟಿ 20 ಲಕ್ಷಕ್ಕಿಂತ ಅಧಿಕ ಹಣ ಸಂಗ್ರಹಣೆ ಮಾಡಿ ವಂಚನೆಗೈದಿದ್ದಾರೆ. 

ಈ ಬಗ್ಗೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಅ.ಕ್ರ 107/2025 ಕಲಂ 316(2), 318(4) ಬಿ.ಎನ್.ಎಸ್ ಮತ್ತು ಕಲಂ 21 ಅನಿಯಂತ್ರಿತ ಠೇವಣಿ ನಿಷೇಧ ಕಾಯ್ದೆ (BUDS Act) ಪ್ರಕಾರ ಪ್ರಕರಣ ದಾಖಲಾಗಿದೆ. ಪ್ರಕರಣಕ್ಕೆ ಸಂಬಂಧಿಸಿ ಆರೋಪಿಗಳಾದ ಅಹಮ್ಮದ್ ಖುರೇಶಿ ಹಾಗೂ ನಜೀರ್ @ ನಾಸೀರ್ ಎಂಬವರನ್ನು ಆ.19ರಂದು ಬಂಧಿಸಿದ್ದು ಪ್ರಕರಣದ ತನಿಖೆಯ ಸಂಬಂಧ ಆ.25 ರ ವರೆಗೆ ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. 

ಆರೋಪಿ ಅಹಮ್ಮದ್ ಖುರೇಶಿ ಹೇಳಿಕೆಯಲ್ಲಿ ತಾನು ಈ ಹಿಂದೆ ವಫಾ ಎಂಟರ್ ಪ್ರೈಸಸ್ ಲಕ್ಕಿ ಸ್ಕೀಂ ನ ಅಬ್ದುಲ್ ವಹಾಬ್ ಮತ್ತು ಬಶೀರ್ ಎಂಬವರೊಂದಿಗೆ ಸೇರಿ ಲಕ್ಕಿ ಸ್ಕೀಮ್ ನಡೆಸಿದ್ದಾಗಿ ತಿಳಿಸಿದ್ದು ಅದರ ಬಗ್ಗೆಯೂ ತನಿಖೆ ನಡೆಸಲಾಗುತ್ತಿದೆ. ಆರೋಪಿ ಅಹಮ್ಮದ್ ಖುರೇಶಿ ಮೇಲೆ ಸುರತ್ಕಲ್ ಪೊಲೀಸ್ ಠಾಣೆಯಲ್ಲಿ ಎರಡು ಕೊಲೆಯತ್ನ ಮತ್ತು ಮಂಗಳೂರು ದಕ್ಷಿಣ ಪೊಲೀಸ್ ಠಾಣೆಯಲ್ಲಿ ಸರಕಾರಿ ನೌಕರನಿಗೆ ಕರ್ತವ್ಯಕ್ಕೆ ಅಡ್ಡಿಪಡಿಸಿದ ಬಗ್ಗೆ ಒಂದು ಪ್ರಕರಣ ದಾಖಲಾಗಿದೆ. ಆರೋಪಿ ನಝೀರ್ ಮೇಲೆ ಸುರತ್ಕಲ್ ಠಾಣೆಯಲ್ಲಿ ಒಂದು ಕೊಲೆಯತ್ನ ಪ್ರಕರಣ ದಾಖಲಾಗಿದೆ.

ಆರೋಪಿಗಳು ಕಾಟಿಪಳ್ಳದ ಆಯಿಷಾ ಕಾಂಪ್ಲೆಕ್ಸ್ ನ ಕಚೇರಿ, ಬಿ.ಎಂ.ಆರ್ ಕಾಂಪ್ಲೆಕ್ಸ್ ನ ಕಚೇರಿ ಹಾಗೂ ಶೈನ್ ಮಾರ್ಟ್ ಕಚೇರಿಯಲ್ಲಿ ಲಕ್ಕಿ ಸ್ಕೀಮ್ ಕೃತ್ಯಕ್ಕಾಗಿ ಉಪಯೋಗಿಸಿದ್ದ ಕಂಪ್ಯೂಟರ್ ಉಪಕರಣಗಳು, ಡ್ರಾ ಕಾಯಿನ್, ಲಕ್ಕಿ ಡ್ರಾ ಪೆಟ್ಟಿಗೆ, ರಿಜಿಸ್ಟರ್ ಗಳು, ಡಿವಿಆರ್ ಗಳನ್ನು ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಆರೋಪಿತರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳು, ಚಿನ್ನಾಭರಣಗಳ ಖರೀದಿ, ನಿವೇಶನ, ವಾಹನ ಖರೀದಿ, ಮನೆ, ಕಚೇರಿಯಲ್ಲಿದ್ದ ಕಂಪ್ಯೂಟರ್ ಉಪಕರಣಗಳನ್ನು ಹಾಗೂ ಇನ್ನಿತರ ದಾಖಲಾತಿಗಳನ್ನು ವಶಪಡಿಸಿಕೊಳ್ಳಲಾಗಿದೆ.

ಬಡ್ಸ್ ಕಾಯ್ದೆಯಂತೆ ಆರೋಪಿತರು ಲಕ್ಕಿ ಸ್ಕೀಮ್ ಹಣದಲ್ಲಿ ಖರೀದಿಸಿದ ಮನೆ, ನಿವೇಶನ, ಫ್ಲಾಟ್, ವಾಹನಗಳು, ಚಿನ್ನಾಭರಣಗಳು ಹಾಗೂ ಇನ್ನಿತರ ವಸ್ತುಗಳ ಜಪ್ತಿ ಮಾಡಲು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯವರಿಗೆ, ಉಪ ವಿಭಾಗ ದಂಡಾಧಿಕಾರಿಯವರಿಗೆ, ಕಂದಾಯ ಇಲಾಖೆಯವರಿಗೆ ಪತ್ರ ಬರೆಯಲಾಗಿದೆ. ಸದ್ರಿ ಲಕ್ಕಿ ಸ್ಕೀಮ್ ಗಳಿಗೆ ಸೇರಿದ ಸದಸ್ಯರು ಹಾಗೂ ಸದಸ್ಯರಿಂದ ಹಣ ಸಂಗ್ರಹಣೆ ಮಾಡಿದ ಏಜೆಂಟರು, ಸಂಬಂಧಿಸಿದ ದಾಖಲಾತಿಯೊಂದಿಗೆ ಠಾಣೆಗೆ ಬಂದು ಹೇಳಿಕೆಯನ್ನು ನೀಡುವಂತೆ ಸೂಚಿಸಲಾಗಿದೆ. 

ಪ್ರಕರಣದ ಪತ್ತೆಯ ಬಗ್ಗೆ ಸುರತ್ಕಲ್ ಠಾಣೆಯ ಪೊಲೀಸ್ ನಿರೀಕ್ಷಕ ಪ್ರಮೋದ್ ಕುಮಾರ್ ಪಿ ನೇತೃತ್ವದಲ್ಲಿ ಠಾಣಾ ಪೊಲೀಸ್ ಉಪ ನಿರೀಕ್ಷಕರಾದ ರಘು ನಾಯ್ಕ್, ರಾಘವೇಂದ್ರ ನಾಯ್ಕ್, ಜನಾರ್ಧನ ನಾಯ್ಕ್, ಶಶಿಧರ ಶೆಟ್ಟಿ, ಎಎಸ್.ಐಗಳಾದ ರಾಧಾಕೃಷ್ಣ, ಸುಕೇತ್ ಜಿ ಕೋಟ್ಯಾನ್ ಹಾಗೂ ಸಿಬ್ಬಂದಿಯವರಾದ ಅಣ್ಣಪ್ಪ, ಉಮೇಶ್, ನಾಗರಾಜ್, ಸತೀಶ್ ಸತ್ತಿಗೇರಿ, ಮಹೇಶ್ ಎನ್, ಶಫೀವುಲ್ಲಾ ಸನತಾಯಿ, ದೇವರಾಜ್, ಸುನೀಲ್ ಕುಸನಾಳ ಅವರು ಭಾಗವಹಿಸಿದ್ದರು. ಲಕ್ಕಿ ಸ್ಕೀಮ್ ಮೋಸದ ಬಗ್ಗೆ ಹೆಡ್ ಲೈನ್ ಕರ್ನಾಟಕ ಸಮಗ್ರ ವರದಿ ಪ್ರಸಾರ ಮಾಡಿತ್ತು. ಇದರ ಬೆನ್ನಲ್ಲೇ ಸುರತ್ಕಲ್ ಪರಿಸರದ ನ್ಯು ಇಂಡಿಯಾ ರಾಯಲ್ ಮತ್ತು ನ್ಯೂ ಶೈನ್ ಹೆಸರಿನ ಲಕ್ಕಿ ಸ್ಕೀಮ್ ವಿರುದ್ಧ ಪೊಲೀಸರು ಕ್ರಮ ಕೈಗೊಂಡಿದ್ದಾರೆ.

Also Read: ಸುರತ್ಕಲ್, ಕಾಟಿಪಳ್ಳದಲ್ಲಿ ಬಾಗಿಲು ಎಳ್ಕೊಂಡ ಲಕ್ಕಿ ಸ್ಕೀಮ್ಗಳು ; ಸಾವಿರಾರು ಜನರಿಗೆ ದುಬಾರಿ ಗಿಫ್ಟ್ ಹೆಸರಲ್ಲಿ ಭಾರೀ ಮೋಸ, ಫ್ಲಾಟ್ ಗೆಲ್ಲುವ ಆಮಿಷದಲ್ಲಿ ಹಣ ಕಟ್ಟಿದವರಿಗೆ ಚೊಂಬು, 'ಬುದ್ಧಿವಂತರನ್ನು' ನಂಬಿಸಿ ನೂರು ಕೋಟಿಗೂ ಹೆಚ್ಚು ಲೂಟಿ !

In a major crackdown, Suratkal Police have busted a massive scam operated under the name New Shine Enterprises, which promised luxurious prizes through a so-called "lucky scheme." Two key accused – Ahammad Qureshi (34) and Nazeer alias Naseer (39), both residents of Katipalla – have been arrested.