ಶಿಕ್ಷಣ ಸಚಿವ ಮಧು ಬಂಗಾರಪ್ಪ ಪಿಎ ಹೆಸರಲ್ಲಿ ವಸೂಲಿ ; ನೌಕರರಿಗೆ ವರ್ಗಾವಣೆ, ಸರ್ಕಾರಿ ಉದ್ಯೋಗ ತೆಗೆಸಿಕೊಡುತ್ತೇನೆಂದು ಹೇಳಿ ಮೋಸ, ಬೆಂಗಳೂರಿನ ವ್ಯಕ್ತಿ ಬಲೆಗೆ 

25-08-25 07:42 pm       HK News Desk   ಕ್ರೈಂ

ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಸರು ಹೇಳಿ ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಜಯನಗರ ಪೊಲೀಸರು ಬಂಧಿಸಿದ್ದಾರೆ. 

ಶಿವಮೊಗ್ಗ, ಆ.25 : ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಹೆಸರು ಹೇಳಿ ಸರ್ಕಾರಿ ನೌಕರರಿಗೆ ವರ್ಗಾವಣೆ ಮಾಡಿಸಿಕೊಡುವುದಾಗಿ ಹೇಳಿ ವಂಚಿಸುತ್ತಿದ್ದ ಆರೋಪಿಯನ್ನು ಶಿವಮೊಗ್ಗ ಜಯನಗರ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು ಸೆಂಟ್ರಲ್ ನಲ್ಲಿ ವಾಸವಿದ್ದ ಆರೋಪಿ ರಘುನಾಥ್ ಎಂಬಾತ ಬಂಧಿತ ವ್ಯಕ್ತಿ. ಕಳೆದ ಐದಾರು ತಿಂಗಳಿಂದ ರಘುನಾಥ್ ತಾನು ಸಚಿವ ಮಧು ಬಂಗಾರಪ್ಪ ಅವರ ಅಪ್ತ ಸಹಾಯಕ ಎಂದು ಹೇಳಿ ವಂಚನೆ ಎಸಗುತ್ತಿದ್ದ. ಶಿಕ್ಷಣ ಇಲಾಖೆಯ ನೌಕರರಿಗೆ ವರ್ಗಾವಣೆ ಹಾಗೂ ಸಾರ್ವಜನಿಕರಿಗೆ ಸರ್ಕಾರಿ ಕೆಲಸ ಕೊಡಿಸುವುದಾಗಿ ನಂಬಿಸಿ ಹಣ ವಸೂಲಿ ಮಾಡುತ್ತಿದ್ದ. 

ಕಾಂಗ್ರೆಸ್‌ನ ಎನ್.ಎಸ್.ಯು.ಐ. ಮುಖಂಡ ಎಂದು ಹೇಳಿಕೊಂಡು ತಿರಗಾಡುತ್ತಿದ್ದ.‌ ಆದರೆ ಪಕ್ಷದ ಮೂಲಗಳ ಪ್ರಕಾರ ಈತ ಕಾಂಗ್ರೆಸ್ ಕಾರ್ಯಕರ್ತ ಆಗಿಲ್ಲ ಎಂದು ತಿಳಿದುಬಂದಿದೆ. ‌ಶಿಕ್ಷಣ ಇಲಾಖೆಯ ಜಂಟಿ ನಿರ್ದೇಶಕಿ ಭಾರತಿಯವರಿಗೆ ಕರೆ ಮಾಡಿದ್ದ ಆರೋಪಿ, ನಿಮಗೆ ವರ್ಗಾವಣೆಯಾಗಿದ್ದು ಪ್ಲೇಸ್ ತೋರಿಸಿಲ್ಲ ಅಲ್ವೇ.. ಈ ಬಗ್ಗೆ ಸಚಿವರ ಜೊತೆ ಮಾತನಾಡಿ ನಾನು ನಿಮ್ಮ ಕೆಲಸ ಮಾಡಿ ಕೊಡುವುದಾಗಿ ಹೇಳಿದ್ದ. ಆದರೆ ಈತನ ಬಗ್ಗೆ ಅನುಮಾನಗೊಂಡು ಸಚಿವರ ಅಧಿಕೃತ ಕಾರ್ಯದರ್ಶಿ ಶ್ರೀಪತಿಯವರಿಗೆ ವಿಷಯ ತಿಳಿಸಿದ್ದರು. 

ಆರೋಪಿ ಮೊಬೈಲ್ ನಂಬರ್ ಟ್ರೂಕಾಲರ್ ನಲ್ಲಿ ಸಚಿವರ ಮನೆ ಆಪ್ತ ಸಹಾಯಕ ಎಂದು ತೋರಿಸಿತ್ತು.‌ ಸಚಿವರ ಪಿ.ಎ. ಅಲ್ಲ ಎಂಬುದು ಸ್ಪಷ್ಟವಾಗುತ್ತಿದ್ದಂತೆ, ಕಾಂಗ್ರೆಸ್ ಮುಖಂಡ ಗಿರೀಶ್ ಮೂಲಕ ಪೊಲೀಸರಿಗೆ ದೂರು ಕೊಡಿಸಲಾಗಿದೆ. ದೂರಿನ ಆಧಾರದ ಮೇಲೆ ರಘುನಾಥ್‌ನನ್ನು ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ್ದಾರೆ.

A man impersonating the personal assistant (PA) of Karnataka Education Minister Madhu Bangarappa has been arrested by the Jayanagar police in Shivamogga for allegedly duping government employees and the public by promising job appointments and transfers.