ಶಂಕಿತ ಬಾಂಗ್ಲಾ ವ್ಯಕ್ತಿಗೆ ಪಾಸ್ಪೋರ್ಟ್ ; ಸಹೋದ್ಯೋಗಿ ಬೀಟ್ ಸಿಬಂದಿ ಹೆಸರಲ್ಲೇ ಪೋರ್ಜರಿ, ವಿಟ್ಲ ಠಾಣೆಯ ಕಾನ್ಸ್ ಟೇಬಲ್ ಅರೆಸ್ಟ್, ನಕಲಿ ವಿಳಾಸಕ್ಕೆ ಕ್ಲಿಯರೆನ್ಸ್ ಕೊಟ್ಟಿದ್ದ ಪೊಲೀಸ್ !

23-12-25 01:41 pm       Mangalore Correspondent   ಕ್ರೈಂ

ಶಂಕಿತ ಬಾಂಗ್ಲಾ ಮೂಲದ ಪ್ರಜೆಯೊಬ್ಬನಿಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾಸ್ಪೋರ್ಟ್ ಮಾಡಿಸಿಕೊಡಲು ಸಹೋದ್ಯೋಗಿ ಬೀಟ್ ಸಿಬಂದಿ ಹೆಸರಲ್ಲಿ ಪೊಲೀಸ್ ಕ್ಲಿಯರೆನ್ಸ್ ಕೊಟ್ಟು ಪೋರ್ಜರಿ ಮಾಡಿದ್ದಲ್ಲದೆ, ಬೇರೆಯವರಿಗೆ ತಿಳಿಯಬಾರದೆಂದು ದಾಖಲೆಯನ್ನೇ ಅಳಿಸಿ ಹಾಕಿದ ಆರೋಪದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ನನ್ನು ಅರೆಸ್ಟ್ ಮಾಡಲಾಗಿದೆ.

ಮಂಗಳೂರು, ಡಿ.23 : ಶಂಕಿತ ಬಾಂಗ್ಲಾ ಮೂಲದ ಪ್ರಜೆಯೊಬ್ಬನಿಗೆ ವಿಟ್ಲ ಪೊಲೀಸ್ ಠಾಣೆಯಲ್ಲಿ ಪಾಸ್ಪೋರ್ಟ್ ಮಾಡಿಸಿಕೊಡಲು ಸಹೋದ್ಯೋಗಿ ಬೀಟ್ ಸಿಬಂದಿ ಹೆಸರಲ್ಲಿ ಪೊಲೀಸ್ ಕ್ಲಿಯರೆನ್ಸ್ ಕೊಟ್ಟು ಪೋರ್ಜರಿ ಮಾಡಿದ್ದಲ್ಲದೆ, ಬೇರೆಯವರಿಗೆ ತಿಳಿಯಬಾರದೆಂದು ದಾಖಲೆಯನ್ನೇ ಅಳಿಸಿ ಹಾಕಿದ ಆರೋಪದಲ್ಲಿ ಪೊಲೀಸ್ ಕಾನ್ಸ್ ಟೇಬಲ್ ನನ್ನು ಅರೆಸ್ಟ್ ಮಾಡಲಾಗಿದೆ.

ಶಕ್ತಿದಾಸ್ ಹೆಸರಿನ ಯುವಕನೊಬ್ಬ ಏಳೆಂಟು ವರ್ಷಗಳಿಂದ ವಿಟ್ಲದಲ್ಲಿ ನೆಲೆಸಿದ್ದು, ಹೊಟೇಲ್ ಮಾಲಕನೊಬ್ಬನ ಜೊತೆಗೆ ವಾಸವಿದ್ದಾನೆ. ಹೊಟೇಲ್ ಕೆಲಸ ಜೊತೆಗೆ ಮೇಸ್ತ್ರಿ ಕೆಲಸಕ್ಕೂ ಹೋಗುತ್ತಿದ್ದು, ಅಲ್ಲಿಯದ್ದೇ ಕೊಠಡಿಯಲ್ಲಿ ನೆಲೆಸಿದ್ದ. ಈ ನಡುವೆ, 2025ರ ಫೆಬ್ರವರಿ ತಿಂಗಳಲ್ಲಿ ಪಾಸ್ ಪೋರ್ಟ್ ಮಾಡಿಸಲೆಂದು ಅರ್ಜಿ ಸಲ್ಲಿಸಿದ್ದು, ವಿಟ್ಲ ಠಾಣೆಗೆ ಪೊಲೀಸ್ ವೆರಿಫಿಕೇಶನ್ ಮಾಡಲು ಬಂದಿತ್ತು. ದಾಖಲೆಯನ್ನು ಪರಿಶೀಲಿಸಿದಾಗ ಆತ ಕೊಟ್ಟಿದ್ದ ಆಧಾರ್ ಕಾರ್ಡ್ ಬಗ್ಗೆ ಶಂಕೆ ಉಂಟು ಮಾಡಿತ್ತು.

ಪಶ್ಚಿಮ ಬಂಗಾಳ ಎಂದು ಹೇಳಿದ್ದರೂ, ಆಧಾರ್ ಕಾರ್ಡ್ ಅಲ್ಲಿಯ ವಿಳಾಸವನ್ನು ತೋರಿಸುತ್ತಿರಲಿಲ್ಲ. ವಿಟ್ಲದಲ್ಲಿ ತಾತ್ಕಾಲಿಕ ವಿಳಾಸ ಇರುವುದರಿಂದ ಬೀಟ್ ಸಿಬಂದಿ ಸಾಬು ಮಿರ್ಜಿ ಪರಿಶೀಲಿಸಿ ಪಾಸ್ ಪೋರ್ಟ್ ಮಾಡಿಸುವುದಕ್ಕೆ ನಿರಾಕರಣೆ ಮಾಡಿದ್ದರು. ಆದರೆ ಅದೇ ವ್ಯಕ್ತಿ ಕಳೆದ ಜೂನ್ ತಿಂಗಳಲ್ಲಿ ಮರು ಅರ್ಜಿಯನ್ನು ಸಲ್ಲಿಸಿದ್ದು, ವಿಟ್ಲ ಠಾಣೆಯ ಸಿಬಂದಿ ಪ್ರದೀಪ್ ಎಂಬಾತ ಬೀಟ್ ಸಿಬಂದಿ ಸಾಬು ಮಿರ್ಜಿ ರಜೆಯಲ್ಲಿದ್ದ ವೇಳೆ ಅವರಿಗೆ ತಿಳಿಯದಂತೆ ಸಾಬು ಮಿರ್ಜಿ ಹೆಸರಿನಲ್ಲೇ ವರದಿ ತಯಾರಿಸಿ ಪೋರ್ಜರಿ ಸಹಿ ಮಾಡಿ ಪೊಲೀಸ್ ಕ್ಲಿಯರೆನ್ಸ್ ಮಾಡಿಕೊಟ್ಟಿದ್ದ. ಅಲ್ಲದೆ, ಪರಿಶೀಲನಾ ದಾಖಲೆಗಳನ್ನು ಠಾಣೆಯಲ್ಲಿ ಇರಿಸದೆ ಬೇರೆ ಯಾರಿಗೂ ತಿಳಿಯದಂತೆ ನಾಶಪಡಿಸಿದ್ದ.

ಈ ನಡುವೆ, ಪೊಲೀಸ್ ಕ್ಲಿಯರೆನ್ಸ್ ಆಗಿದ್ದರಿಂದ ಪಾಸ್ ಪೋರ್ಟ್ ಪ್ರತಿ ಶಕ್ತಿದಾಸ್ ಹೆಸರಿಗೆ ರವಾನೆಯಾಗಿತ್ತು. ಇತ್ತೀಚೆಗೆ ಈ ವಿಷಯ ಬೀಟ್ ಸಿಬಂದಿ ಸಾಬು ಮಿರ್ಜಿಗೆ ಗೊತ್ತಾಗಿ ಠಾಣೆಯಲ್ಲಿ ರಂಪ ಮಾಡಿದ್ದಾರೆ, ತನ್ನ ಹೆಸರಿನಲ್ಲಿ ಪಾಸ್ಪೋರ್ಟ್ ವೆರಿಫೈ ಮಾಡಿಸಿಕೊಟ್ಟು ಮುಂದೆ ತೊಂದರೆಯಾದರೆ ನನ್ನ ಕೊರಳಿಗೆ ಬರುತ್ತದಲ್ಲಾ, ನನ್ನ ಕೆಲಸ ತೆಗೆಸುತ್ತೀಯಾ ಎಂದು ಪ್ರದೀಪ್ ನನ್ನು ಜೋರು ಮಾಡಿ ಅದೇ ಠಾಣೆಯಲ್ಲಿ ಡಿ.19ರಂದು ದೂರು ಕೊಟ್ಟಿದ್ದಾರೆ. ಇದರಂತೆ, ಠಾಣೆಯಲ್ಲಿ ಚೆಕ್ ಮಾಡಿದಾಗ ಶಕ್ತಿದಾಸ್ ವಿಳಾಸದ ದಾಖಲೆಗಳನ್ನು ಇಟ್ಟುಕೊಂಡಿಲ್ಲ ಎನ್ನುವುದೂ ಪತ್ತೆಯಾಗಿದೆ. ಇದರಂತೆ, ವಿಟ್ಲ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದ್ದು ಆರೋಪಿ ಪೊಲೀಸ್ ಕಾನ್ಸ್ ಟೇಬಲ್ ಪ್ರದೀಪ್ ನನ್ನು ಬಂಧಿಸಲಾಗಿದೆ.

ಕೇಂದ್ರ ಸರಕಾರದಿಂದ ನೀಡಲ್ಪಡುವ ಅತೀ ಪ್ರಮುಖ ಗುರುತಿನ ಚೀಟಿಯಾಗಿರುವ ಪಾಸ್ ಪೋರ್ಟನ್ನು ನಕಲಿ ವ್ಯಕ್ತಿಗೆ ಮಾಡಿಕೊಟ್ಟು ನಂಬಿಕೆ ದ್ರೋಹ ಎಸಗಿದ್ದಕ್ಕಾಗಿ ಪೊಲೀಸ್ ಸಿಬಂದಿ ಪ್ರದೀಪ್ ವಿರುದ್ಧ ಪ್ರಕರಣ ದಾಖಲಿಸಿದ್ದರೆ, ಸುಳ್ಳು ದಾಖಲೆಗಳನ್ನು ನೀಡಿ ಪಾಸ್ ಪೋರ್ಟ್ ಪಡೆದಿರುವ ಶಕ್ತಿದಾಸ್ ವಿರುದ್ಧವೂ ಕೇಸು ದಾಖಲಿಸಿ ಇಬ್ಬರು ಆರೋಪಿಗಳನ್ನೂ ಬಂಧಿಸಲಾಗಿದೆ. ಶಕ್ತಿದಾಸ್ ಮೂಲತಃ ಎಲ್ಲಿಯವನು ಎಂದು ವಿಟ್ಲ ಠಾಣೆಯಲ್ಲಿ ಕೇಳಿದಾಗ, ಅದನ್ನು ಚೆಕ್ ಮಾಡುತ್ತಿದ್ದೇವೆ, ಸರಿಯಾದ ಮಾಹಿತಿ ಸಿಕ್ಕಿಲ್ಲ ಎಂದಿದ್ದಾರೆ.

A police constable from Vitla Police Station has been arrested for issuing illegal passport clearance to a suspected Bangladeshi-origin youth by forging the signature of a colleague and destroying official records to hide the offence.